ಇಡೀ ಲೋಕದ ಎಲ್ಲ ಜನರೂ ಅವನೆದುರು ಹೆಣ್ಣುಗಳು ಮಾತ್ರ ಅನ್ನುತ್ತದೆ ಈ ವಚನ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಹೆಣ್ಣು ಹೆಣ್ಣಾದಡೆ
ಗಂಡಿನ ಸೂತಕ.
ಗಂಡು ಗಂಡಾದಡೆ
ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದಡೆ
ತನುವಿನ ಸೂತಕಕ್ಕೆ ತೆರಹುಂಟೆ
ಅಯ್ಯಾ
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲ ಹೆಣ್ಣು ನೋಡಾ [ಅಯ್ಯಾ] [೪೨೯]
[ಗರುವ=ಶ್ರೇಷ್ಠ, ಗೌರವಕ್ಕೆ ಅರ್ಹ, ಸಮರ್ಥ]
ಹೆಣ್ಣು ʻಹೆಣ್ಣುʼಮಾತ್ರವಾದರೆ ಗಂಡು ಮುಟ್ಟಿಸಿಕೊಳ್ಳಬಾರದ ಸೂತಕ, ಗಂಡು ಕೇವಲ ʻಗಂಡುʼ ಮಾತ್ರವಾದರೆ ಹೆಣ್ಣು ಅವನ ಮಟ್ಟಿಗೆ ಸೂತಕ. ಈ ಸೂತಕ ಇರುವುದು ಮನಸಿನಲ್ಲಿ. ಮನಸಿನಲ್ಲಿರುವ ಸೂತಕ ಹಿಂಗಿ ಹೋದರೆ ಮೈಯ ಸೂತಕಕ್ಕೆ ಜಾಗ ಇರುವುದಿಲ್ಲ. ಮೊದಲಿಲ್ಲದ, ಅಂದರೆ ಮೊದಲಿಗೇ ಇಲ್ಲವೇ ಇಲ್ಲದ ಸೂತಕಕ್ಕೆ ಇಡೀ ಲೋಕ ಮರುಳಾಗಿದೆ. ಹಾಗೆ ಗಂಡು ಹೆಣ್ಣು ಬೇರೆ ಅನ್ನುವುದನ್ನು ಒಪ್ಪಬೇಕಾದರೆ- ನನ್ನ ದೇವ ಚೆನ್ನಮಲ್ಲಿಕಾರ್ಜುನ ಮಾತ್ರ ಗಂಡು, ಇಡೀ ಲೋಕ ಹೆಣ್ಣು.
ಗಂಡು ಹೆಣ್ಣುಗಳ ಮೈಯಲ್ಲಿರುವುದು ನಿಸರ್ಗ ಸಹಜ ವ್ಯತ್ಯಾಸ. ಅದನ್ನು ಹೆಚ್ಚು, ಕಡಿಮೆ, ಮೇಲು ಕೀಳು ಎಂದೆಲ್ಲ ಗುಣವಾಗಿ ಬೆಳೆಸಿದ್ದು ಮನುಷ್ಯ ಬುದ್ಧಿ, ಮನುಷ್ಯರು ಕಟ್ಟಿಕೊಂಡ ಸಮಾಜ. ಗಂಡು ಹೆಣ್ಣು ಬೇರೆ ಬೇರೆ ಅಂತಾದಮೇಲೆ ಪರಸ್ಪರ ಮುಟ್ಟುವುದಕ್ಕೆ, ಮಾತಾಡುವುದಕ್ಕೆ, ಕೂಡಿ ಆಡುವುದಕ್ಕೆ ವಿಧಿನಿಷೇಧಗಳು ಹುಟ್ಟಿಕೊಂಡವು. ಈ ʻಬಾರದುʼಗಳ ಪಟ್ಟಿ ಮನಸಿನ ಸೃಷ್ಟಿ. ಅದನ್ನು ಅಕ್ಕನ ವಚನ ʻಮನದ ಸೂತಕʼ ಅನ್ನುತ್ತದೆ. ಗಂಡು ಹೆಣ್ಣುಗಳು ಬೇರೆ ಬೇರೆ, ಹೆಚ್ಚು ಕಡಿಮೆ ಅನ್ನುವ ಮನಸೂತಕ ಇಲ್ಲವಾದಮೇಲೆ ಬದುಕಿನಲ್ಲೂ ಹೆಚ್ಚಿನ ನಿರಾಳ ದೊರೆಯುತ್ತದೆ. ಧಾರ್ಮಿಕ ಅನುಭಾವ ದೃಷ್ಟಿಯಿಂದ ನೋಡಿದರೆ ಚೆನ್ನಮಲ್ಲಿಕಾರ್ಜುನ ಮಾತ್ರ ಗರುವ, ಶ್ರೇಷ್ಠ, ಗಂಡು. ಇಡೀ ಲೋಕದ ಎಲ್ಲ ಜನರೂ ಅವನೆದುರು ಹೆಣ್ಣುಗಳು ಮಾತ್ರ.
ʻಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದಡೆ ಗಂಡೆಂಬರು, ನಡುವೆ ಸುಳಿವಾತ್ಮನು ಗಂಡೂ ಅಲ್ಲ ಹೆಣ್ಣೂ ಅಲ್ಲʼ ಅನ್ನುವ ಜೇಡರ ದಾಸಿಮಯ್ಯ ವಚನ ನೋಡಿ. [೭.೮೪೫] ಇಂಥ ತಿಳಿವಳಿಕೆಗೆ ಕನ್ನಡದಲ್ಲಿ ಕೊರತೆ ಇಲ್ಲ, ಇರುವ ತಿಳಿವಳಿಕೆಯನ್ನು ಮನಸೊಪ್ಪುವ ಹಾಗೆ ಮುಂದಿನ ತಲೆಮಾರಿಗೆ ದಾಟಿಸಲಾಗದ ಸೋಲು ನಮ್ಮ ಭಾಷೆಯದು ಅನಿಸುತ್ತದೆ.

