ಪ್ರೇಮ ದಿವ್ಯವಾದದ್ದು. ಈ ಭೂಮಿಯ ಮೇಲೆ ದೈವಿಕವಾದದ್ದು ಏನಾದರೂ ಇದೆ ಎಂದರೆ ಅದು ಪ್ರೇಮ. ಮತ್ತು ಪ್ರೇಮ ಎಲ್ಲವನ್ನೂ ದೈವಿಕವಾಗಿಸುತ್ತದೆ. ಪ್ರೇಮ, ಬದುಕಿನ ನಿಜವಾದ ರಸವಿದ್ಯೆ, ಏಕೆಂದರೆ ಸಾಮಾನ್ಯ ಲೋಹವನ್ನೂ ಪ್ರೇಮ ಬಂಗಾರವಾಗಿಸುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ನಮ್ಮ ಆರ್ದ್ರ ಪ್ರೇಮದೊಳಗಿರುವ
ಕೆಲ ಅಪರೂಪದ ಕ್ಷಣಗಳನ್ನು ಕಂಡು,
ಸ್ವರ್ಗಕ್ಕೂ ಹೊಟ್ಟೆಕಿಚ್ಚಾಗುತ್ತದಂತೆ.
ಭೂಮಿಯ ಮೇಲೆ ನಾವು ಮಾಡುವ
ಪ್ರೇಮದ ರೀತಿ ಅಷ್ಟು ಅನನ್ಯ.
ಮನುಷ್ಯನ ನೋವನ್ನು ಅರಿಯುವ ಎದೆಗಳಿಗಾಗಿ
ತಮ್ಮ ಬದುಕನ್ನೇ ಮಾರಲು ಸಿದ್ಧರಾಗಿರುವ
ಕೆಲ ದೇವರುಗಳಿದ್ದಾರಂತೆ
ಸ್ವರ್ಗದಲ್ಲಿ.
ಅವರಿಗೆ ಚೆನ್ನಾಗಿ ಗೊತ್ತು
ನಮ್ಮ ನೋವುಗಳು ಒಂದು ದಿನ
ನಮ್ಮನ್ನು ಕರೆದೊಯ್ಯುತ್ತವೆ ಅವರಿಗಿಂತಲೂ
ಹೆಚ್ಚು ಎತ್ತರಕ್ಕೆ.
- ಹಾಫಿಜ್ .
ಜಗತ್ತಿನ ಪ್ರತಿಯೊಂದು ಭಾಷೆಯಲ್ಲಿಯೂ ಕಪ್ಪೆಗೆ ಮುತ್ತಿಟ್ಟಾಗ ಅದು ರಾಜಕುಮಾರನಾಗುವ ಹಲವಾರು ಪುರಾತನ ಕತೆಗಳಿವೆ. ಕಪ್ಪೆಗೆ ಶಾಪ ಇತ್ತು ; ಅದು ತನ್ನ ಶಾಪ ವಿಮೋಚನೆಯ ದಾರಿ ಕಾಯುತ್ತಿತ್ತು, ಆ ಒಂದು ದೈವಿಕ ಮುತ್ತಿಗಾಗಿ ಕಾಯುತ್ತಿತ್ತು. ತನ್ನನ್ನು ಸಂಪೂರ್ಣವಾಗಿ ಬದಲಾಯಿಸಬಲ್ಲ ಪ್ರೇಮಕ್ಕಾಗಿ ಕಾಯುತ್ತಿತ್ತು.
ಪ್ರೇಮ, ಪರಿವರ್ತನೆಗೆ ಕಾರಣವಾಗುತ್ತದೆ ಎನ್ನುವುದೇ ಈ ಎಲ್ಲ ಕತೆಗಳ ತಿರುಳು. ಈ ಕತೆಗಳು ತುಂಬ ಸುಂದರ, ಸೂಚನೀಯ ಮತ್ತು ಸಾಂಕೇತಿಕ. ಪ್ರೇಮ ಮಾತ್ರ ಪ್ರಾಣಿಯನ್ನು ಮನುಷ್ಯನಾಗಿ ಪರಿವರ್ತಿಸಬಲ್ಲದು ; ಇಲ್ಲವಾದರೆ ಮನುಷ್ಯ ಮತ್ತು ಪ್ರಾಣಿಯ ನಡುವೆ ಯಾವ ವಿಭಿನ್ನತೆಯೂ ಇಲ್ಲ. ಅವುಗಳ ನಡುವೆ ಸಾಧ್ಯವಾಗಬಹುದಾದ ಒಂದೇ ವ್ಯತ್ಯಾಸವೆಂದರೆ, ಅದು ಪ್ರೇಮ. ನೀವು ಹೆಚ್ಚು ಪ್ರೇಮದ ಮೂಲಕ ಬದುಕಿದಾಗ, ಪ್ರೇಮವಾಗಿ ಬದುಕಿದಾಗ, ಹೆಚ್ಚು ಹೆಚ್ಚು ಮನುಷ್ಯತ್ವ ನಿಮ್ಮನ್ನು ತುಂಬಿಕೊಳ್ಳುವುದು. ಆತ್ಯಂತಿಕವಾದ ಮತ್ತು ಮನುಷ್ಯ ಜಾತಿಯ ಅತ್ಯುಚ್ಚ ಸ್ಥಿತಿಯನ್ನ ಮನುಷ್ಯ ತಲುಪುವುದು ಮನುಷ್ಯ ತಾನೇ ಸ್ವತಃ ಪ್ರೇಮವಾದಾಗ. ಆಗ ಪ್ರಾಣಿ ಮಾತ್ರ ಅಲ್ಲ ಮನುಷ್ಯನೂ ಪರಿವರ್ತನೆಗೆ ಒಳಪಡುತ್ತಾನೆ. ಆಗ ಅವನು ದೈವಿಕನಾಗುತ್ತಾನೆ, ದೈವ ವಾಗುತ್ತಾನೆ. ಇಡೀ ಮಾನವ ಜನಾಂಗದ ಬೆಳವಣಿಗೆಯೆಂದರೆ ಅದು ಪ್ರೇಮದ ಬೆಳವಣಿಗೆ. ಪ್ರೇಮದ ಹೊರತಾಗಿ ನಾವು ಪ್ರಾಣಿಗಳು. ಪ್ರೇಮ ನಮ್ಮನ್ನು ಕೂಡಿಕೊಂಡಾಗ ಮಾತ್ರ ನಾವು ಮನುಷ್ಯರು. ಯಾವಾಗ ಪ್ರೇಮ ನಿಮ್ಮ ಸಹಜ ಅಸ್ತಿತ್ವವಾಗುತ್ತದೆಯೋ ಆಗ ನಿಮ್ಮ ಬದುಕು, ಬದುಕಿನ ರುಚಿ ಎಲ್ಲವೂ ದೈವಿಕ.

