ತೆಕ್ಕೆ ಸಡಲಿದ ಜಕ್ಕವಕ್ಕಿ : ಅಕ್ಕ ಮಹಾದೇವಿ #46

ಈ ವಚನವು ತನ್ನನ್ನು ಒಪ್ಪಿ, ಅಪ್ಪಿದ ಜೊತೆಗಾರನಿಂದ ದೂರವಾಗಿರುವ ಕೊರಗನ್ನು ಹೇಳಿಕೊಳ್ಳುತ್ತದೆ. ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ಬಂದಹನೆಂದು ಬಟ್ಟೆಯ ನೋಡಿ
ಬಾರದಿದ್ದಡೆ ಕರಗಿ ಕೊರಗಿದೆನವ್ವಾ
ತಡವಾದಡೆ ಬಡವಾದೆ ತಾಯೆ
ಚೆನ್ನಮಲ್ಲಿಕಾರ್ಜುನನ ಒಂದಿರುಳಗಲಿದಡೆ ತಕ್ಕೆ ಸಡಲಿದ
ಜಕ್ಕವಕ್ಕಿಯಂತಾದೆನವ್ವಾ [೨೯೧]

[ಬಟ್ಟೆ=ದಾರಿ; ತೆಕ್ಕೆ=ಅಪ್ಪುಗೆ; ಜಕ್ಕವಕ್ಕಿ=ಚಕ್ರವಾಕ, ಎಣೆವಕ್ಕಿ; ಈ ಹಕ್ಕಿಗಳು ಜೋಡಿಯಾಗಿ ಸದಾ ಒಟ್ಟಿಗೆ ಇರುತ್ತವೆಂಬ ನಂಬಿಕೆ ಇದೆ]

ಬರುತ್ತಾನೆಂದು ದಾರಿಯ ನೋಡಿ ಅವನು ಬರದಿದ್ದರೆ ಕರಗಿ ಕೊರಗಿದೆ, ಅವನು ಬರುವುದು ತಡವಾದರೆ ಬಡವಾದೆ. ಒಂದೇ ಒಂದು ರಾತ್ರಿ ಚೆನ್ನಮಲ್ಲಿಕಾರ್ಜುನ ನನ್ನನ್ನು ಅಗಲಿದ್ದರೆ ಅಪ್ಪುಗೆ ಸಡಿಲಿದ ಚಕ್ರವಾಕದಂತೆ ಆದೆ ಅವ್ವಾ.

ಚಕ್ರವಾಕ ಪಕ್ಷಿಯು ಯಾವಾಗಲೂ ಜೊತೆಯಾಗಿರುತ್ತವೆ, ರಾತ್ರಿಯ ಹೊತ್ತು ಬೇರೆಯಾಗಿರುತ್ತವೆ, ಮಳೆಯ ನೀರನ್ನು ಮಾತ್ರ ಕುಡಿಯುತ್ತವೆ ಅನ್ನುವ ಐತಿಹ್ಯಗಳಿವೆ. ಚಕ್ರವಾಕವನ್ನು ಹಲವು ಸಂಸ್ಕೃತ ಪಠ್ಯಗಳು ʻಮಿಥುನೇಚರʼ ಕೂಡಿ ಚಲಿಸುವ ಹಕ್ಕಿಗಳು ಎಂದೂ ವರ್ಣಿಸುತ್ತವೆ.  ಇಲ್ಲಿ ಸದಾ ಜೊತೆಯಲ್ಲಿರುವ ಚೆನ್ನಮಲ್ಲಿಕಾರ್ಜುನ ಬರುವುದು ತಡವಾದರೆ,ಅಥವಾ  ಬರದೆ ಇದ್ದರೆ ನಾನು ಅಪ್ಪುಗೆ ಸಡಲಿದ ಚಕ್ರವಾಕದಂತಾದೆ ಅನ್ನುತ್ತ ಈ ವಚನವು ತನ್ನನ್ನು ಒಪ್ಪಿ, ಅಪ್ಪಿದ ಜೊತೆಗಾರನಿಂದ ದೂರವಾಗಿರುವ ಕೊರಗನ್ನು ಹೇಳಿಕೊಳ್ಳುತ್ತದೆ.

ಇಂಥದೇ ಭಾವವನ್ನು ಹೇಳುವ ಬಸವವಚನವೊಂದಿದೆ. ಅದು ಗಿಳಿಯನ್ನು ಪಂಜರದಲ್ಲಿ ಕೂಡಿ, ದೀಪಕ್ಕೆ ಎಣ್ಣೆಯನ್ನು ಹಾಕಿ, ಹೊಸ ಬತ್ತಿಯನ್ನು ಇರಿಸಿ ಅವನು ಬರಲೆಂದು ಹಂಬಲಿಸುತ್ತಿದ್ದೆ; ತರಗೆಲೆ ಗಿರಿಕ್ಕೆಂದರೂ ಕಿವಿ ನಿಮಿರುತಿತ್ತು. ನನ್ನ ಬಿಟ್ಟು ಹೋದನೆಂದು ಮನ ದಿಗಿಲುಗೊಂಡಿತ್ತು ಎಂದು ಇದೇ ಭಾವವನ್ನು ಹೆಚ್ಚು ನಾಟಕೀಯವಾಗಿ ಹೇಳುತ್ತದೆ. ಅಲ್ಲಿಯೂ ಹೆಣ್ಣಿನ ಕಾತರ, ಕಾಯುವಿಕೆ ಇದೆ, ಈ ವಚನದಲ್ಲಿ ಇರುವಂತೆಯೇ. ನೋಡಿ, ಗಿಳಿಯ ಹಂಜರವಿಕ್ಕಿ.(ಸಂಪುಟ ೧. ೩೭೫). ಈ ಹಕ್ಕಿಗಳ ವಿಚಾರ ಬೇರೊಂದು ನೆನಪನ್ನು ತಂದಿತು.

ʻಆಕಾಶದ ನಡುವೆ ಎರಡು ಹದ್ದು,ಒಂದನ್ನೊಂದು ಘಟ್ಟಿಸುತ್ತ ಮೇಲೆ ಕೆಳಗೆ ಸುತ್ತಿ ಅಡುತ್ತ ಪ್ರೀತಿಯ ತೀವ್ರ ಭಾವದಲ್ಲಿ ಚಲನೆ ನಿಶ್ಚಲವಾಗಿ ಗಾಳಿಯಲ್ಲಿ ಒಂದಾದವು—ಆಕಾಶದಲ್ಲಿ. ಒಂದಾಗಿದ್ದಷ್ಟೂ ಹೊತ್ತು, ಮಿಲನವು ಪೂರ್ಣಗೊಳ್ಳುವ ಕ್ಷಣದಲ್ಲೂ. ಒಂದೊಂದೂ ಪಕ್ಷಿ ತನ್ನದೇ ರೆಕ್ಕೆಯ ಬಲದ ಮೇಲೆ ಗಾಳಿಯಲ್ಲಿತ್ತು. ಇದು ಪ್ರೀತಿಯ ಅಚ್ಚರಿ.ʼ ತಾನು ಸ್ವತಂತ್ರವಾಗಿದ್ದೂ ಇನ್ನೊಂದು ಸ್ವತಂತ್ರ ಜೀವದೊಡನೆ ಒಂದಾಗುವ ಕ್ಷಣದಲ್ಲಿ, ನಾನತ್ವ ಇಲ್ಲವಾಯಿತು ಅನಿಸಿದಾಗಲೂ ಅನುಭವಿಸುವ ನಾನು  ಇರುವ ಸ್ಥಿತಿಯನ್ನು ಹೀಗೆ ಡಿ.ಎಚ್.‌ ಲಾರೆನ್ಸ್‌ ತನ್ನ ಆರನ್ಸ್‌ ರಾಡ್‌ ಕಾದಂಬರಿಯಲ್ಲಿ ಒಂದೆಡೆ ವರ್ಣಿಸಿದ್ದಾನೆ. ಮಿಲನ ವಿರಹ ಎರಡೂ ನಾನತ್ವವನ್ನು ಕಳಕೊಳ್ಳುವ ಮತ್ತು ಉಳಿಸಿಕೊಳ್ಳುವ ಬಯಕೆ ಮತ್ತು ಹಟಗಳ ರೂಪಕ,  ಕೊನೆಯಿರದ ಟೆನ್ಶ್‌ನ್‌ನ ಸೂಚಕ. ಹಾಗಾಗಿಯೇ ಶೃಂಗಾರವನ್ನು ಮನುಷ್ಯರ  ಸ್ಥಾಯೀ ಭಾವಗಳಲ್ಲಿ ಒಂದು ಎಂದು ಕಾವ್ಯಮೀಮಾಂಸೆ ವಿವರಿಸಿದೆ ಅನಿಸುತ್ತದೆ.

ಈ ವಚನದಲ್ಲೂ ಮಿಲನದ ಅಪೇಕ್ಷೆ, ನಿರೀಕ್ಷೆ, ವಿರಹ ತಾಳಲಾಗದ ಟೆನ್ಷನ್‌ ಎಲ್ಲವೂ ರೂಪುಗೊಂಡಿದೆ. ವಿರಹ ಮನುಷ್ಯರದಾದರೂ ಅಷ್ಟೇ, ಇಷ್ಟಪಟ್ಟ ದೇವರದಾದರೂ ಅಷ್ಟೇ ಅನಿಸುತ್ತದೆ.

ಭಕ್ತಿಯ ಬಗ್ಗೆ, ಶರಣಾಗತಿಯ ಬಗ್ಗೆ, ಪ್ರೀತಿಯ ಬಗ್ಗೆ ಮಾತಾಡುವಾಗ ಕೂಡ ತಾತ್ವಿಕ ಪರಿಭಾಷೆ ತೊರೆದರೆ ಆಗ ಅಕ್ಕನ ಹಾಗೆ, ಲಾರೆನ್ಸ್‌ನ ಹಾಗೆ ಭಾವ ವ್ಯಕ್ತವಾಗುತ್ತದೆ, ಅಲ್ಲವೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.