ಸಾಮರ್ಥ್ಯ (Strength): ಓಶೋ 365 #Day 166

ಜನ ಸುರಕ್ಷಿತ ಜಾಗಗಳಿಗೆ, ರಕ್ಷಣೆಗೆ, ಅಂಟಿಕೊಂಡು ಬಿಡುತ್ತಾರೆ. ಆದರೆ ಅವು ಅವರಿಗೆ ಸಾಮರ್ಥ್ಯ ನೀಡುವುದಿಲ್ಲ. ಅವರು ಸಾಮರ್ಥ್ಯವನ್ನು ಗಳಿಸುವುದು ಕಾಠಿಣ್ಯವನ್ನ, ಕಷ್ಟಗಳನ್ನ ಎದುರಿಸಿದಾಗ ಮಾತ್ರ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

    ಇಷ್ಟು ಬೇಗ
    ನಿನ್ನ ಒಂಟಿತನವನ್ನು
    ಶರಣಾಗಿಸಿ
    ಕೈ ಕಟ್ಟಿ ಕುಳಿತುಕೊಳ್ಳಬೇಡ.
    ಇನ್ನೂ ಸ್ವಲ್ಪ ಆಳವಾಗಿ
    ಇಳಿಯಲು ಬಿಡು
    ಇನ್ನೂ ಕೊಂಚ ಹೆಪ್ಪುಗಟ್ಟು
    ಪಕ್ವ ವಾಗು.
    ಎದೆ ಕಳೆದುಕೊಂಡ
    ಯಾವುದೋ ನೆನಪು
    ಕಣ್ಣುಗಳನ್ನ ಮೃದುವಾಗಿಸಲಿ
    ದನಿಯನ್ನ ಕೋಮಲಗೊಳಿಸಲಿ

    ಆಗ
    ದೇವರ ಅವಶ್ಯಕತೆ
    ಸ್ಪಷ್ಟವಾಗಿ ಕಾಣಿಸುತ್ತಿದೆ.

    • ಹಾಫಿಜ್

    ಹಿಂದಿನ ಕಾಲದಲ್ಲಿ ಜನ ಶಾಂತಿಯನ್ನು ಬಯಸಿ ಆಶ್ರಮಗಳಿಗೆ, ಹಿಮಾಲಯಕ್ಕೆ, ದೂರ ಬೆಟ್ಟದ ಗುಹೆಗಳಿಗೆ ಹೋಗುತ್ತಿದ್ದರು. ಆದರೆ ಅಲ್ಲಿ ಅವರಿಗೆ ಸಿಗುವಂಥ ಶಾಂತಿ ಬಹಳ ಸೋವಿಯಾದದ್ದು. ಏಕೆಂದರೆ ಈ ಜನ ಆ ಜಾಗಗಳನ್ನು ಬಿಟ್ಚು ಮತ್ತೆ ತಮ್ಮ ಜಗತ್ತಿಗೆ ವಾಪಸ್ ಆಗುತ್ತಿದ್ದಂತೆಯೇ ತಲ್ಲಣಿಸಿ ಹೋಗುತ್ತಿದ್ದರು. ಅಷ್ಟು ದುರ್ಬಲವಾಗಿರುತ್ತಿತ್ತು ಅವರ ಶಾಂತಿ, ಅವರು ಜಗತ್ತನ್ನು ಕಂಡು ಭಯಭೀತರಾಗಿಬಿಡುತ್ತಿದ್ದರು. ಅದ್ದರಿಂದ ಅವರ ಈ ಏಕಾಂತ ಅವರ ಬೆಳವಣಿಗೆಯಾಗಿರದೆ ಅವರ ಪಾರಾಗುವಿಕೆ ಆಗಿರುತ್ತಿತ್ತು.

    ಒಂಟಿಯಾಗಿರುವುದನ್ನ ಕಲಿಯಿರಿ ಆದರೆ ಯಾವತ್ತೂ ಈ ಒಂಟಿತನಕ್ಕೆ ಅಂಟಿಕೊಳ್ಳಬೇಡಿ. ಯಾವತ್ತೂ ಇನ್ನೊಬ್ಬರಿಗೆ ರಿಲೇಟ್ ಆಗುವಂಥ ಸಾಮರ್ಥ್ಯವನ್ನು ಬೆಳೆಸಿಕೊಳ್ಳಿ. ಧ್ಯಾನ ಮಾಡುವುದನ್ನ ಕಲಿಯಿರಿ ಆದರೆ, ಪ್ರೇಮಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುವಷ್ಟು ಕರ್ಮಠರಾಗಬೇಡಿ. ಮೌನವಾಗಿರಿ, ಪ್ರಶಾಂತವಾಗಿರಿ ಆದರೆ, ಮಾರುಕಟ್ಟೆಯಲ್ಲಿ ತಲೆ ಎತ್ತಲಾಗದಷ್ಚು ಈ ಪ್ರಶಾಂತತೆಯ ಬಗ್ಗೆ ಗೀಳು ಬೆಳೆಸಿಕೊಳ್ಳಬೇಡಿ.

    ನೀವು ಒಂಟಿಯಾಗಿರುವಾಗ ಮೌನದಿಂದಿರುವುದು ಬಹಳ ಸುಲಭ. ಜನರ ಜೊತೆ ವ್ಯವಹರಿಸುವಾಗ ಮೌನ ಬಹಳ ಕಠಿಣ, ಆದರೆ ಈ ತೊಂದರೆಯನ್ನು ಎದುರಿಸಬೇಕು. ಜನ ಸುತ್ತ ಇರುವಾಗ ಮೌನದಿಂದಿರುವುದು ನಿಮಗೆ ಸಾಧ್ಯವಾಗಬಹುದಾದರೆ ಅದು ನಿಮ್ಮ ಸಾಧನೆ ; ಈಗ ನಿಮ್ಮನ್ನು ಯಾವುದೂ ಕಾಡುವುದಿಲ್ಲ.

    Unknown's avatar

    About ಅರಳಿ ಮರ

    ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

    Leave a Reply

    This site uses Akismet to reduce spam. Learn how your comment data is processed.