ನೀವು ಭಾಗವಹಿಸಿದಾಗ ಮಾತ್ರ ನಿಮಗೆ ಗೊತ್ತಾಗುವ ಕೆಲವು ಸಂಗತಿಗಳಿವೆ… ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಹೊರಗಿನಿಂದ ನಿಮಗೆ ಗೊತ್ತಾಗುವುದು ಕೇವಲ ಮೇಲು ಮೇಲಿನ ವಿಷಯ ಮಾತ್ರ. ಒಳಗಿನ ಮನುಷ್ಯನಿಗೆ ಏನಾಗುತ್ತಿದೆ? ಯಾರೋ ಒಬ್ಬರು ಅಳುತ್ತಿದ್ದಾರೆ ಮತ್ತು ಅವರು ಕಣ್ಣೀರು ಧಾರಾಕಾರವಾಗಿ ಹರಿಯುತ್ತಿದೆ. ಇದನ್ನ ಹೊರಗಿನಿಂದ ನೀವು ನೋಡಿದಾಗ ನಿಮಗೆ ಕೇವಲ ಮೇಲು ಮೇಲಿನ ವಿಷಯ ಗೊತ್ತಾಗುತ್ತದೆ. ಆದರೆ ಆ ವ್ಯಕ್ತಿಯ ಹೃದಯದಲ್ಲಿ ಏನಾಗುತ್ತಿದೆ? ಯಾಕೆ ಅಳುತ್ತಿದ್ದಾನೆ ಆ ವ್ಯಕ್ತಿ? ಈ ಅಳುವನ್ನು ಅರ್ಥೈಸುವುದು ಕಷ್ಟ, ಏಕೆಂದರೆ ಅವನು ದುಃಖದಲ್ಲಿ ಅಳುತ್ತಿರಬಹುದು, ಕಷ್ಟದಲ್ಲಿ ಅಳುತ್ತಿರಬಹುದು, ಸಂಕಟದಲ್ಲಿ ಅಳುತ್ತಿರಬಹುದು, ಕೋಪದಲ್ಲಿ ಅಳುತ್ತಿರಬಹುದು, ಖುಶಿಯಲ್ಲಿ ಅಳುತ್ತಿರಬಹುದು, ಕೃತಜ್ಞತೆಯಲ್ಲಿ ಅಳುತ್ತಿರಬಹುದು.
ಎಲ್ಲ ಕಣ್ಣೀರೂ ಒಂದೇ ಥರ. ಕಣ್ಣೀರನ್ನು ರಾಸಾಯನಿಕವಾಗಿ ವಿಶ್ಲೇಷಣೆ ಮಾಡಿ, ಇದು ದುಃಖದ ಕಣ್ಣೀರು, ಇದು ಖುಶಿಯ ಕಣ್ಣೀರು, ಇದು ಕೃತಜ್ಞತೆಯ ಕಣ್ಣೀರು ಎಂದು ಹೆಸರಿಸುವುದು ಸಾಧ್ಯವಿಲ್ಲ. ಏಕೆಂದರೆ ರಾಸಾಯನಿಕವಾಗಿ ಎಲ್ಲ ಕಣ್ಣೀರೂ ಒಂದೇ, ಮತ್ತು ಕಣ್ಣಿನಿಂದ ಅವು ಹರಿಯುವ ರೀತಿಯೂ ಒಂದೇ. ಆದ್ದರಿಂದ ಒಳಗಿನ ವಿಷಯದ ಬಗ್ಗೆ ಹೊರಗಿನಿಂದ ನೋಡಿ ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಸಂಗತಿಗಳನ್ನು observe ಮಾಡಬಹುದೇ ಹೊರತು ವ್ಯಕ್ತಿಗಳನ್ನು observe ಮಾಡುವುದು ಸಾಧ್ಯವಿಲ್ಲ. ಆ ಕಣ್ಣೀರನ್ನು ನಿಮ್ಮ ಒಳಗೆ ನೀವು ಅನುಭವಿಸಿದಾಗ ಮಾತ್ರ ನೀವು ಅದನ್ನು ಅರ್ಥಮಾಡಿಕೊಳ್ಳಬಹುದು. ಇಲ್ಲವಾದರೆ ಅದರ ಬಗ್ಗೆ ನಿಮಗೆ ಗೊತ್ತೇ ಆಗುವುದಿಲ್ಲ. ನೋಡುವುದರಿಂದ, ಗಮನಿಸುವುದರಿಂದ ಬಹಳಷ್ಟನ್ನು ಕಲಿಯಬಹುದು, ಆದ್ದರಿಂದ ನೋಡುವುದು, ಗಮನಿಸುವುದು ಒಳ್ಳೆಯದು, ಬಹಳ ಒಳ್ಳೆಯದು. ಆದರೆ ನಿಮ್ಮ ಭಾಗವಹಿಸುವಿಕೆಯ ಮೂಲಕ ನೀವು ಕಲಿತಿರುವುದಕ್ಕೆ ಹೋಲಿಸಿದರೆ ಇದು ಏನೇನೂ ಅಲ್ಲ.
ನಸ್ರುುದ್ದೀನ್ ನ ಹೆಂಡತಿ ಚಿಂತಾಕ್ರಾಂತಳಾಗಿರುವುದನ್ನ ಗಮನಿಸಿದ ನೆರೆ ಮನೆಯ ಹೆಂಗಸು ವಿಚಾರಿಸಿದಳು,
“ ಯಾಕೆ ಇಷ್ಟು ಬೇಸರದಲ್ಲಿದ್ದೀ ? ಏನು ವಿಷಯ ? “
“ ನಸ್ರುದ್ದೀನ್ ಜೊತೆ ಜಗಳ ಆಗಿದೆ, ಒಂದು ತಿಂಗಳು ನನ್ನ ಜೊತೆ ಮಾತನಾಡುವುದಿಲ್ಲ ಎಂದು ಹೇಳಿ ಅವ ಮನೆ ಬಿಟ್ಟು ಹೋಗಿದ್ದಾನೆ “
ನಸ್ರುದ್ದೀನ್ ನ ಹೆಂಡತಿ ತನ್ನ ದುಃಖದ ಕಾರಣ ವಿವರಿಸಿದಳು.
“ ಜಗಳ ಗಂಟ ಗಂಡನ ಕಾಟ ತಪ್ಪಿತು ಅಂತ ಖುಶಿಯಾಗಿರು “
ನೆರೆಮನೆಯ ಹೆಂಗಸು ಸಮಾಧಾನ ಮಾಡಿದಳು.
“ ನಸ್ರುದ್ದೀನ್ ಹೇಳಿದ ಒಂದು ತಿಂಗಳ ವಾಯಿದೆ ನಾಳೆ ಮುಗಿಯುತ್ತಿದೆ “
ನಸ್ರುದ್ದೀನ್ ನ ಹೆಂಡತಿ ತನ್ನ ಚಿಂತೆಯ ಕಾರಣ ಬಿಡಿಸಿ ಹೇಳಿದಳು .

