ಎಲ್ಲರಿಗೆ ಹಂಗುಗಿತ್ತಿಯಾದೆ : ಅಕ್ಕ ಮಹಾದೇವಿ #47

ಬಯಸಿದ ಗಂಡನ ಜೊತೆ ಇರುವುದಕ್ಕೆ ಎಷ್ಟೆಲ್ಲ ಅಂಜಿಕೆ, ನಾಚಿಕೆ, ಎಲ್ಲರ ಹಂಗುಗಿತ್ತಿ ಅನ್ನುವ ಮಾತು ಈ ವಚನಕ್ಕೆ ಕಾರಣವಾಗಿರುವ ಮನಸ್ಥಿತಿಯನ್ನು ಬಹಳ ತೀವ್ರವಾಗಿ ಹೇಳುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ಒಮ್ಮೆ ಕಾಮನ ಕಾಲ ಹಿಡಿವೆ,
ಮತ್ತೊಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ
ಸುಡಲೀ ವಿರಹವ
ನಾನಾರಿಗೆ ಧೃತಿಗೆಡುವೆ
ಚೆನ್ನಮಲ್ಲಿಕಾರ್ಜುನ ಕಾರಣ
ಎಲ್ಲರಿಗೆ ಹಂಗುಗಿತ್ತಿಯಾದೆನವ್ವಾ [೧೨೯]

ಈ ವಿರಹ ಸುಟ್ಟು ಹೋಗಲಿ. ಕಾಮನ ಕಾಲಿಗೆ ಬೀಳುವುದು ಒಮ್ಮೆ, ಚಂದ್ರನಿಗೆ ಸೆರಗೊಡ್ಡಿ ಬೇಡುವುದು ಇನ್ನೊಮ್ಮೆ. ಯಾರು ಯಾರನ್ನು ಕಂಡು ಧೃತಿಗೆಡಲಿ. ಎಲ್ಲರ ದಾಕ್ಷಿಣ್ಯಕ್ಕೆ ಗುರಿಯಾದೆ, ಅವ್ವಾ.

ಬಯಕೆಗೆ ಕಾರಣವಾದ ದೇವನಿಗೆ, ಬಯಕೆಯನ್ನು ಕೆರಳಿಸುವ ಬೆಳುದಿಂಗಳನ್ನು ಹರಡುವ ಚಂದ್ರನಿಗೆ ನನ್ನ ಕೋರಿಕೆ ಸಲ್ಲಿಸುತ್ತಿದ್ದೇನೆ.  ಆ ಬಯಕೆ-ದೇವನಿಗೆ ಹೆದರಲೋ, ಆಸೆ ಕೆರಳಿಸುವ ಈ ಚಂದ್ರನಿಗೆ ಹೆದರಲೋ! ಮನಸ್ಸನ್ನು ಚೆನ್ನಮಲ್ಲಿಕಾರ್ಜುನನಿಗೆ ಕೊಟ್ಟ ಕಾರಣ ಲೋಕದ ಎಲ್ಲರ ದಾಕ್ಷಿಣ್ಯಕ್ಕೆ ನಾನು ಗುರಿಯಾಗಬೇಕಾಯಿತು. ಈ ಸ್ಥಿತಿಗೆ ಕಾರಣವಾದ ವಿರಹ ಸುಟ್ಟು ಬೂದಿಯಾಗಲಿ.

ಕಾಮಾತುರವಿದ್ದಾಗ ಲಜ್ಜೆಯೂ ಇರದು, ಭಯವೂ ಇರದು ಅನ್ನುವ ಮಾತಿದೆ. ಲೋಕದಲ್ಲಿ ಇರುವವರೆಗೆ ಲಜ್ಜೆ, ಭಯ ತಪ್ಪಿದ್ದಲ್ಲ. ಎಲ್ಲರ ಹಂಗು ಬಿಟ್ಟು ಬದುಕಲೂ ಆಗದು. ಮನಸ್ಸು  ಒಪ್ಪಿದ್ದಕ್ಕೆ ಪೂರಾ ಶರಣಾಗಿ ಬದುಕುವುದೂ ದುಸ್ತರ. ಅಕ್ಕಮಹಾದೇವಿಯ ಇನ್ನೊಂದು ವಚನದಲ್ಲಿ ʻಹಾದರವಾಡುವೆನು ಶಿವನ ಕೂಡೆʼ ಎಂಬ ಮಾತು ಬರುತ್ತದೆ. [ಅತ್ತೆ ಮಾಯೆ, ಮಾವ ಸಂಸಾರಿ, ೫. ೧೭] ಲೋಕದಲ್ಲಿರುತ್ತ ಮುದುವೆಯಾದ ಗಂಡನಿದ್ದೂ ಚೆನ್ನಮಲ್ಲಿಕಾರ್ಜುನ ಮನದ ಗಂಡನಾಗಿ, ಲೋಕದ ಗಂಡ ಎದೆಯಲ್ಲಿ ಕಬ್ಬಿಣದ ಮುಳ್ಳಿರುವವನಾಗಿ ಇರುವಾಗ ಬಯಸಿದ ಗಂಡನ ಜೊತೆ ಇರುವುದಕ್ಕೆ ಎಷ್ಟೆಲ್ಲ ಅಂಜಿಕೆ, ನಾಚಿಕೆ, ಎಲ್ಲರ ಹಂಗುಗಿತ್ತಿ ಅನ್ನುವ ಮಾತು ಈ ವಚನಕ್ಕೆ ಕಾರಣವಾಗಿರುವ ಮನಸ್ಥಿತಿಯನ್ನು ಬಹಳ ತೀವ್ರವಾಗಿ ಹೇಳುತ್ತದೆ. ಸಮಾಜವು ಕಲ್ಪಿಸಿಕೊಂಡ ನೈತಿಕತೆ ಅನ್ನುವುದು ಎಷ್ಟು ಟೊಳ್ಳು ಅನಿಸುವ ಹಾಗೆ ಮಾಡುತ್ತದೆ. ಪ್ರೀತಿಯೇ ಆಗಲಿ ಭಕ್ತಿಯೇ ಆಗಲಿ ಸಮಾಜ ಒಪ್ಪುವ ರೀತಿಯಲ್ಲೇ ಇರಬೇಕು ಅನ್ನುವುದು ಸರಿಯೇ? ನಿಜವಾದ ಪ್ರೇಮಿ ನಿಜವಾದ ಭಕ್ತರನ್ನು ಸಹಿಸಿಕೊಳ್ಳುವ ಸ್ಥೈರ್ಯ ಸಮಾಜಕ್ಕೆ ಇದೆಯೇ? ಅಂಥ ಸ್ವಾತಂತ್ರ್ಯ ಬೇಕಲ್ಲವೇ ಎಂದು ಈ ವಚನ ಕೇಳುವಂತಿದೆ.

ಹಂಗುಗಿತ್ತಿ ಅನ್ನುವ ಮಾತು ಗಮನ ಸೆಳೆಯುತ್ತದೆ. ನಾನುತನ ಇರುವುದು ಲೋಕವ್ಯವಹಾರದಲ್ಲಿ ಮಾತ್ರ. ಲೋಕದ ಮನುಷ್ಯಳಾಗಿ ಇರುವತನಕ ನಾನತ್ವಕ್ಕೆ ಊನ ಆಗದ ಹಾಗೆ ಹಂಗಿನ ಬದುಕು ಅನಿವಾರ್ಯವಾದೀತು. ನಾನತ್ವ ಇಲ್ಲವಾದಾಗ ಲಜ್ಜೆ, ಹಂಗು ಎರಡೂ ಬೇಡವಾದಾವು. ಅಕ್ಕನನ್ನು ಕಾಯದ ಲಜ್ಜೆಯು ಕಲ್ಪಿತ, ಜೀವದ ಲಜ್ಜೆಯು ಮೋಹ,ಮನದ ಲಜ್ಜೆ ನೆನಪು, ಭಾವದ ಕೂಟ ಬತ್ತಲೆ, ತವಕದ ಸ್ನೇಹ ವ್ಯವಹಾರಕ್ಕೆ ಸಲ್ಲದು ಎಂದು ಬಸವವಚನವೊಂದು ಹೇಳುತ್ತದೆ.(೧.೧೧೪೫) ಈ ವಚನವನ್ನು ಶೂನ್ಯಸಂಪಾದನೆಯು ಅಕ್ಕನನ್ನು ಹೊಗಳುವ ವಚನವಾಗಿ ಬಳಸಿಕೊಂಡಿದೆ. ದೇಹ, ಜೀವದ ಲಜ್ಜೆಗಳನ್ನು ತೊರೆದು ನಾನತ್ವವೆಂಬ ವೇಷವಿರದೆ ಬತ್ತಲೆಯಾಗಿ ಚನ್ನಮಲ್ಲಿಕಾರ್ಜುನನನ್ನು ಕೂಡುವ ತವಕವನ್ನು ಅಕ್ಕ ಹೇಳುವ ಪರಿ ಅಪರೂಪವೇ ಸರಿ.  

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.