ಅರಿವು ರಹಿತ ಪ್ರೇಮ (Un enlightened Love) : ಓಶೋ 365 #Day 171

ಪ್ರೇಮ ಯಾವತ್ತೂ ಸ್ವಾತಂತ್ರ್ಯವೇ ಆಗಿರಬೇಕಿಲ್ಲ. ಅದು ಹಾಗಿರಬೇಕು, ಅದು ಆದರ್ಶ. ಯಾವತ್ತೂ ನಿಮ್ಮ ನೆನಪಿನಲ್ಲಿರಲಿ, ನೀವು ಇನ್ನೊಬ್ಬರನ್ನು ಪೂರ್ಣ ಅರಿವಿನಲ್ಲಿ ಪ್ರೇಮಿಸುತ್ತಿರುವಾಗ ಮಾತ್ರ ಅದು ಅನುಗ್ರಹ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ

ರೂಮಿ
ತನ್ನ ಅಂತಃಕರಣದ ಭಾವಪರವಶತೆಯಲ್ಲಿ
ಮೈಮರೆತುಬಿಟ್ಚಾಗಲೆಲ್ಲ
ಸ್ಪಷ್ಟತೆಯನ್ನು ಕಳೆದುಕೊಂಡುಬಿಡುತ್ತಾನೆ.
ಆ ಸ್ಥಿತಿಗೆ ಶರಣಾಗಿ
ಎಲ್ಲವನ್ನೂ ಮರೆತುಬಿಡುತ್ತಾನೆ.

ಆದರೆ ನಾನು ಹಾಗಲ್ಲ,
ಅರಿವು ನನ್ನ ಕೈ ಬಿಡಿದು ನಡೆಸುತ್ತದೆ,
ನಾನೂ ಅದೇ ಆನಂದ ಅನುಭವಿಸುತ್ತೇನಾದರೂ
ಪ್ರೇಮದ ಭಾವೋನ್ಮಾದ
ನನ್ನ ಯಾವತ್ತೂ ಮೈ ಮರೆಸಿಲ್ಲ.

~ ಶಮ್ಸ್

ಪ್ರೇಮ, ಹಲವಾರು ರೀತಿಯಲ್ಲಿ ವಿನಾಶಕಾರಿಯಾದದ್ದು, ಏಕೆಂದರೆ ಪ್ರೇಮ ಅವಶ್ಯಕವಾಗಿ enlightened ಅಲ್ಲ. ತಂದೆ-ತಾಯಿ ತಮ್ಮ ಮಗುವನ್ನು ಪ್ರೀತಿಸುವ ರೀತಿಯಿಂದಾಗಿಯೇ ಇಡೀ ಜಗತ್ತು ಇಂದು ಕಷ್ಟದಲ್ಲಿದೆ. ಈ ಬಗ್ಗೆ ಮನಶಾಸ್ತ್ರಜ್ಞರನ್ನ, ಮನೋವಿಜ್ಞಾನಿಗಳನ್ನ ಕೇಳಿನೋಡಿ. ಅವರ ಪ್ರಕಾರ ಪ್ರತಿಯೊಂದು ಮನೋಸಮಸ್ಯೆಯ ಮೂಲ ತಂದೆ-ತಾಯಿ ಮತ್ತು ಮಗುವಿನ ಸಂಬಂಧದ ರೀತಿಯಲ್ಲಿದೆ. ಮೆಂಟಲ್ ಹಾಸ್ಪಿಟಲ್ ನಲ್ಲಿಯ ಬಹುತೇಕರು ಸಮಸ್ಯೆ ಅನುಭವಿಸುತ್ತಿರುವುದು ಪ್ರೇಮದ ಕಾರಣವಾಗಿಯೇ. ತಂದೆ ಪ್ರೀತಿಸುತ್ತಾನೆ, ಪುರೋಹಿತ ಪ್ರೀತಿಸುತ್ತಾನೆ, ರಾಜಕಾರಣಿ ಪ್ರೀತಿಸುತ್ತಾನೆ, ಆದರೆ ಇಂಥ ಪ್ರೀತಿ ಅವಶ್ಯಕವಾಗಿ enlightened ಅಲ್ಲ.

ಪ್ರೇಮ enlightened ಆಗಿದ್ದಾಗ ಅದು ಅಂತಃಕರಣ. ಆಗ ಅದರ ಕ್ವಾಲಿಟಿ ಸಂಪೂರ್ಣವಾಗಿ ವಿಭಿನ್ನವಾದದ್ದು. ಆಗ ಅದು ನಿಮಗೆ ಸ್ವಾತಂತ್ರ್ಯವನ್ನು ಕರುಣಿಸುತ್ತದೆ. ಆಗ ಅದರ ಮೂಲ ಕೆಲಸವೇ ನಿಮಗೆ ಸ್ವಾತಂತ್ರ್ಯವನ್ನು ಸಾಧ್ಯಮಾಡುವುದಾಗಿರುತ್ತದೆ. ಆಗ ಅದು ಕೇವಲ ಸ್ವಾತಂತ್ರ್ಯದ ಬಗ್ಗೆ ಮಾತನಾಡುವುದಿಲ್ಲ, ನಿಮ್ಮನ್ನು ಮುಕ್ತರನ್ನಾಗಿಸಲು ಸ್ವಾತಂತ್ರ್ಯದ ಹಾದಿಯಲ್ಲಿರುವ ಎಲ್ಲ ಅಡೆತಡೆಗಳನ್ನು ತಾನೇ ಮುಂದೆ ನಿಂತು ನಿವಾರಿಸುತ್ತದೆ.

ಆದ್ದರಿಂದ ಪ್ರೇಮ ಇದೆ, ಆದರೆ ಅದು ಜಾಗೃತ ಸ್ಥಿತಿಯಲ್ಲಿ ಇಲ್ಲದಿರುವಾಗ ಸಾಕಷ್ಟು ಹಾನಿಗೆ ಕಾರಣವಾಗುತ್ತದೆ. ಪ್ರೀತಿಯೊಂದೇ ಸಾಕಾಗುವುದಿಲ್ಲ, ಹಾಗೇನಾದರೂ ಸಾಕಾಗಿದ್ದರೆ ಈ ಜಗತ್ತು ಈಗಾಗಲೇ ಸ್ವರ್ಗವಾಗಿ ಬಿಡುತ್ತಿತ್ತು. ನೀವು ನಿಮ್ಮ ಸಂಗಾತಿಯನ್ನು ಪ್ರೀತಿಸುತ್ತೀರ ಮತ್ತು ನಿಮ್ಮ ಸಂಗಾತಿ ನಿಮ್ಮನ್ನು ಪ್ರೀತಿಸುತ್ತಾರೆ ಆದರೆ, ಕೊನೆಗೆ ಏನಾಯ್ತು? ವಿನಾಶದ ಹೊರತು ಬೇರೇನೂ ಇಲ್ಲ. ನಿಮ್ಮ ಪ್ರೇಮ ಸರಿ, ಆದರೆ ನೀವು ಸರಿ ಅಲ್ಲ. ನಿಮ್ಮ ಅಪ್ರಜ್ಞೆಯ ಆಳದಲ್ಲಿರುವ ಏನೋ ಒಂದು ನಿಮಗೆ ಅರಿವಿಲ್ಲದಂತೆ ಮತ್ತಿನ್ನೇನನ್ನೋ ಸೃಷ್ಟಿ ಮಾಡುತ್ತಿದೆ.

ಪ್ರೇಮವನ್ನು ನಿರಾಕರಿಸಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಪ್ರೇಮಕ್ಕಿಂತ ಮೊದಲು ಅರಿವು ಸಾಧ್ಯವಾಗಬೇಕು. ಪ್ರೇಮ ಅರಿವನ್ನು ನೆರಳಿನಂತೆ ಹಿಂಬಾಲಿಸಬೇಕು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.