ಈ ವಚನವೂ ಹಿಂದಿನ ವಚನದಂತೆಯೇ ಅನಿಸಿದರೂ ಕೆಲವು ಮುಖ್ಯ ವ್ಯತ್ಯಾಸಗಳಿವೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಕೇಳವ್ವಾ ಕೇಳವ್ವಾ ಕೆಳದಿ ನಾನೊಂದು ಕನಸುವ ಕಂಡೆ
ಗಿರಿಯಮೇಲೊಬ್ಬ ಗೊರವ ಕುಳ್ಳಿರ್ದುದ ಕಂಡೆ
ಚಿಕ್ಕ ಚಿಕ್ಕ [ಕೆಂ]ಜಡೆಗಳ ಸುಲಿಪಲ್ಲ ಗೊರವನು
ಬಂದೆನ್ನ ನೆರೆದ ನೋಡವ್ವಾ
ಆತನನಪ್ಪಿಕೊಂಡು ತಳವೆಳಗಾದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ಣು ಮುಚ್ಚಿ ತೆರೆದು ತಳವೆಳಗಾದೆನು [೧೮೩]
[ಕನಸುವ= ಕನಸನ್ನು; ಕೆಂಜಡೆ= ಕೆಂಪು ಜಡೆ; ಸುಲಿಪಲ್ಲ= ಸ್ವಚ್ಛವಾದ ಹಲ್ಲಿನ; ನೆರೆದ= ಕೂಡಿದ; ತಳವೆಳಗು= ತಳ+ಬೆಳಕು=ತಳದಿಂದ, ಅಂತರಂಗದಾಳದಿಂದ, ಮೂಡಿದ ಬೆಳಕು]. ಈ ವಚನದಲ್ಲಿರುವ “ಬಂದೆನ್ನ ನೆರೆದ ನೋಡವ್ವಾ” ಎಂಬ ಸಾಲೊಂದನ್ನು ಬಿಟ್ಟು, ಕೆಳದಿಗಲ್ಲ ತಾಯಿಗೆ ಹೇಳಿದಂತೆ ಇರುವ ಇನ್ನೊಂದು ವಚನವೂ ಇದೆ. ಅದು ಅಕ್ಕ ಕೇಳಕ್ಕಾ ನಾನೊಂದು ಕನಸು ಕಂಡೆ ಎಂದು ಆರಂಭವಾಗುತ್ತದೆ (ಸಂ.೫,ವ.೧೧)
ಗೆಳತಿಯರಿಗೆ ಹೇಳಿಕೊಳ್ಳುತ್ತಿರುವ ಈ ವಚನದಲ್ಲಿ ಕನಸಿನ ವರ್ಣನೆ ಇದೆ ಬೆಟ್ಟದ ಮೇಲೊಬ್ಬ ಗೊರವ ಕೂತಿದ್ದಾನೆ. ಪುಟ್ಟ ಪುಟ್ಟ ಕೆಂಪು ಜಡೆಗಳಿವೆ, ಸ್ವಚ್ಛವಾಗಿರುವ ಹಲ್ಲು ಇವೆ, ಅವನು ಬಂದು ನನ್ನನ್ನು ಕೂಡಿದ. ಅವನನ್ನು ಅಪ್ಪಿ ʻಒಳತಳʼದಿಂದ ಬೆಳಕು ಮೂಡಿದ ಹಾಗೆ ಬೆರಗುಗೊಂಡೆ.
ಈ ವಚನವೂ ಹಿಂದಿನ ವಚನದಂತೆಯೇ ಅನಿಸಿದರೂ ಕೆಲವು ಮುಖ್ಯ ವ್ಯತ್ಯಾಸಗಳಿವೆ. ಇಂದು ಕೂಡ ಕಾಣುವ ಮೈಲಾರಲಿಂಗನ ಭಕ್ತರಾದ ಗೊರವರ ಚಿತ್ರ ಮನಸಿಗೆ ಬಂದರೆ ಚೆನ್ನಮಲ್ಲಿಕಾರ್ಜುನ ಎಷ್ಟು ವರ್ಣರಂಜಿತ ಅನ್ನುವುದು ಹೊಳೆಯುತ್ತದೆ. ಕೆಂಪು ಜಡೆ, ಅಚ್ಚ ಬಿಳಿಯ ಹಲ್ಲು ಕೂಡ ತನ್ನನ್ನು ಸೆಳೆದ ಸಂಗಾತಿಯ ಕುರುಹುಗಳಾಗುತ್ತವೆ. ಅವನು ನನ್ನನ್ನು ನೆರೆದ ಎಂದು ಸರಳವಾಗಿ, ಮುಜುಗರವಿಲ್ಲದೆ ಹೇಳಿ, ಆ ಕೂಟದಿಂದ ಇಡೀ ತನ್ನ ವ್ಯಕ್ತಿತ್ವದಲ್ಲೇ ಬೆಳಕು ಮೂಡಿದಂತೆ ಬೆರಗಾಯಿತು ಅನ್ನುವ ಮಾತು ಬರುತ್ತದೆ. ಅಂತರಂಗದ ಪ್ರಿಯನ ಕೂಟವನ್ನು ಗೆಳತಿಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುವ ಪ್ರಯತ್ನದಂತೆ ತೋರುತ್ತದೆ. ಇಂಥ ಮನುಷ್ಯ ಸಹಜವಾದ, ನಾನತ್ವವಿರದ ಕೂಟವನ್ನು, ತೀವ್ರ ಪ್ರೀತಿಯ ಭಾವದ ಮಿಲನವನ್ನು ಒಂದು ತತ್ವ ಮಾಡಿಕೊಂಡು ಶರಣಸತಿ-ಲಿಂಗ ಪತಿ ಅನ್ನುವ ಪರಿಭಾಷೆ ಮೂಡಿದೆ ಅನ್ನಿಸುತ್ತದೆ. ಅನುಭವಕ್ಕೆ ಮೀರಿದ್ದು ಕೂಡ ಮೈಯ ಅನುಭವದ ಮಿತಿಯಲ್ಲೇ ಅರಿವಿಗೆ ಒದಗಬೇಕು, ಅಲ್ಲವೇ?
ಈ ವಚನದ ತಳವೆಳಗು ಎಂಬ ಪದವನ್ನು ಉಚ್ಚಾರಣೆಯ ಹೋಲಿಕೆಯ ಕಾರಣಕ್ಕೆ ತಳಮಳವೆಂದು ವಿವರಿಸುವುದನ್ನು ಕೇಳಿದ್ದೇನೆ. ಬೆಳಕು ಎಂಬ ಪದವಿರುವಾಗ ಮತ್ತು ಇಡೀ ವಚನದ ಮಿಕ್ಕ ವಿವರಗಳ ಹಿನ್ನೆಲೆಯಲ್ಲಿ ಅದು ತಳ ಮತ್ತು ಬೆಳಕು ಎಂಬ ಎರಡು ಪದಗಳು ಕೂಡಿ ಆಗಿರುವ ರೂಪಕವಾಗಿ ತೋರುತ್ತದೆ. ಕನಸುವ ಎಂಬ ಬಳಕೆ ನೋಡಿದರೆ ವಚನದ ಈ ಆವೃತ್ತಿ ಹಳೆಯದು ಅನಿಸುತ್ತದೆ. ಕನಸನ್ನು ಕುರಿತ ಉಲ್ಲೇಖಗಳಿರುವ ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ [೧೦೬] ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು [೧೧೦] ಮರೆದೊರಗಿ, ಕನಸ ಕಂಡು ಹೇಳುವಲ್ಲಿ [೩೩೨] ವಚನಗಳನ್ನುಮುಂದೆ ಪ್ರತ್ಯೇಕವಾಗಿ ನೋಡೋಣ.

