ಒಪ್ಪಿತವಾದ ನೈತಿಕ ಚೌಕಟ್ಟನ್ನು ಹೀಗೆ ಅನುಭವ ಸತ್ಯವಾಗಿ ಗ್ರಹಿಸುವುದೇ, ಅದನ್ನು ಮುಕ್ತವಾಗಿ ಹೇಳುವ ಅವಕಾಶವಿದ್ದುದೇ ವಚನಗಳು ಸಾಧಿಸಿದ ʻಕ್ರಾಂತಿʼ ಅನಿಸುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ತಾನು ದಂಡುಮಂಡಲಕ್ಕೆ ಹೋದಹೆನೆಂದಡೆ
ನಾನು ಸುಮ್ಮನಿಹೆನಲ್ಲದೆ
ತಾನೆನ್ನ ಕೈಯೊಳಗಿದ್ದು ತಾನೆನ್ನ ಮನದೊಳಗಿದ್ದು
ಎನ್ನ ಕೂಡದಿದ್ದಡೆ ನಾನೆಂತು ಸೈರಿಸುವೆನವ್ವಾ
ನೆನಹೆಂಬ ಕುಂಟಿಣಿ ಚೆನ್ನಮಲ್ಲಿಕಾರ್ಜುನನ ನೆರಹದಿದ್ದಡೆ ನಾನೇವೆ ಸಖಿಯೆ [೨೩೫]
[ಸುಮ್ಮನಿಹೆನಲ್ಲದೆ=ಸುಮ್ಮನಿರುವೆನಲ್ಲದೆ; ನೆನಹು=ನೆನಪು ಮತ್ತು ಧ್ಯಾನ ಎಂಬ ಎರಡು ಅರ್ಥಗಳಿವೆ; ಕುಂಟಿಣಿ=ವಿಟ ಮತ್ತು ವೇಶ್ಯೆಯರ ಸಂಬಂಧವನ್ನು ಏರ್ಪಡಿಸುವವಳು; ನೆರಹು=ಕೂಡು, ಕೂಡಿಸು; ಏವೆ=ಸಹಿಸಲಾರೆ ]
ದಂಡಿನ ಭಾಗವಾಗಿ ಯುದ್ದಕ್ಕೆ ಹೋದರೆ ಸಹಿಸುತ್ತೇನೆ, ಸುಮ್ಮನಿರುತ್ತೇನೆ. ನನ್ನ ಕೈಯೊಳಗಿದ್ದರೂ ನನ್ನ ಮನಸಿನಲ್ಲಿದ್ದರೂ ಆದರೂ ನನ್ನ ಕೂಡದಿದ್ದರೆ ಸಹಿಸಲಾರೆ ಗೆಳತೀ. ಸೇನೆಯ ಜೊತೆಗೆ ಯುದ್ಧಕ್ಕೆ ಹೋದರೆ ಸಹಿಸಬಲ್ಲೆ; ಅವನನ್ನು ಕೂಡಲಾಗದು ಅನ್ನುವುದನ್ನು ಒಪ್ಪುವೆ. ನೆನಪು ಅಥವಾ ಧ್ಯಾನವೊಂದೇ ಮನಸಿನೊಳಗಿರುವ ಚೆನ್ನಮಲ್ಲಿಕಾರ್ಜುನನನೊಡನೆ ಸಂಬಂಧ ಕಲ್ಪಿಸಬಲ್ಲುದು. ಮನಸಿನೊಳಗೇ ಇರುವ ಕೈಯಳತೆಯಲ್ಲೇ ಇರುವ ಪ್ರಿಯನೊಡನೆ ಕೂಡುವಂತೆ ಮಾಡಲು ನೆನಪು ಅಥವಾ ಧ್ಯಾನವೆಂಬ ಕುಂಟಿಣಿಯ ಸಹಕಾರ ಬೇಕು. ಆ ಕುಂಟಿಣಿಯೂ ಸಹಾಯ ಮಾಡದಿದ್ದರೆ ಹೇಗೆ ಸಹಿಸಲಿ?
ಒಳಗಣ ಗಂಡ, ಹೊರಗಣ ಮಿಂಡ [೨.೧೩೨], ಅತ್ಮ ಸಂಗಾತ, ಕನಸಿನಲ್ಲಿ ಕಾಣುವ ಕೆಂಜೆಡೆಗಳ ಸುಲಿಪಲ್ಲ ಗೊರವ ಮತ್ತೆ ಇಲ್ಲಿ ಬರುವ ದಂಡಿಗೆ ಹೋಗುವ ಅಥವಾ ಹತ್ತಿರವಿದ್ದರೂ ಕೂಡದ ಗಂಡು, ಅವನೊಡನೆ ಸಂಬಂಧ ಕಲ್ಪಿಸಲು ಒದಗಬೇಕಾದ ಕುಂಟಿಣಿ ಇಂಥ ರೂಪಕಗಳನ್ನು ಮತ್ತೆ ಮತ್ತೆ ಎದುರಾಗುತ್ತವೆ. ಈ ವಚನಗಳಲ್ಲಿ ಬರುವ ಚನ್ನಮಲ್ಲಿಕಾರ್ಜುನನು ಆತ್ಮಸಂಗಾತಿಯಷ್ಟೇ. ಅವನ ಸಂಬಂಧಕ್ಕೆ ಲೌಕಿಕ ನೀತಿ ಒಪ್ಪುವಂಥ ಗಂಡ-ಹೆಂಡತಿ ಅನ್ನುವ ಹಣೆಪಟ್ಟಿಗಳು ಬೇಕಾಗಿಲ್ಲ ಅನಿಸುತ್ತವೆ. ಒಪ್ಪಿತವಾದ ನೈತಿಕ ಚೌಕಟ್ಟನ್ನು ಹೀಗೆ ಅನುಭವ ಸತ್ಯವಾಗಿ ಗ್ರಹಿಸುವುದೇ, ಅದನ್ನು ಮುಕ್ತವಾಗಿ ಹೇಳುವ ಅವಕಾಶವಿದ್ದುದೇ ವಚನಗಳು ಸಾಧಿಸಿದ ʻಕ್ರಾಂತಿʼ ಅನಿಸುತ್ತದೆ. ಒಲುಮೆ ಒಚ್ಚತವಾಗಿ ಬದುಕುವುದು ಮುಖ್ಯ ಅನ್ನುವುದು ಬಹಳಷ್ಟು ಸಾರಿ ನಾವು ಅರಗಿಸಿಕೊಳ್ಳಲಾಗದ ಸತ್ಯವೇನೊ.

