ಎಚ್ಚರದಲ್ಲಿ ಬಯಸಿ ಕನಸಲ್ಲಿ ಕಂಡದ್ದು : ಅಕ್ಕ ಮಹಾದೇವಿ #52

ಎಲ್ಲ ಕಟ್ಟಳೆ, ನಿಯಮ, ನೀತಿಗಳನ್ನು ಮೀರಿದ ಶಕ್ತಿ, ಸೆಳತ ಅನ್ನುವುದನ್ನು ಈ ವಚನ ಹೇಳುವಂತಿದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ
ಇರುಳಿನ ಕೂಟದಲ್ಲಿ ಇಂಬರಿದು ಹತ್ತಿದೆ
ಕನಸಿನಲಿ ಮನಸಂಗವಾಗಿ ಮೈಮರೆದಿರ್ದೆ
ಮನಸ್ಸಿನಲ್ಲಿ ಮೈಮರೆದು ಒರಗಿದೆ
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ದೆರೆದೆ [೪೦೬]

[ಹೋರು=ಹೋರಾಡು, ಜಗಳವಾಡು; ಬೆಂಡಾಗು=ದಣಿದು ಹೋಗು; ಇರುಳಿನ=ರಾತ್ರಿಯ; ಇಂಬಱಿದು=ಅವಕಾಶ ನೋಡಿಕೊಂಡು, ಇಂಗಿತವನ್ನು ತಿಳಿದು]

ಹಗಲು ಹೊತ್ತಿನಲ್ಲೇ ಅವನನ್ನು ಕೂಡಲು ಬಯಸಿ, ಹೋರಾಡಿ, ದಣಿದು ಹೋದೆ. ರಾತ್ರಿಯ ಕೂಟದಲ್ಲಿ ಅವಕಾಶ ನೋಡಿಕೊಂಡು ನಾನೇ ಮುಂದುವರೆದೆ. ಕನಸಿನಲ್ಲಿ ಮನಸಿನ ಸಂಗವಾಯಿತು. ಮನಸಿನಲ್ಲೇ ಮೈ ಮರೆದು ಮಲಗಿದೆ. ಚೆನ್ನಮಲ್ಲಿಕಾರ್ಜುನ ಕಂಡ. ಕಣ್ಣು ತೆರೆದೆ.

ಎಲ್ಲ ಜೀವಿಗಳ ಅನುಭವಕ್ಕೆ ಬಂದಿರಬಹುದಾದ ಬಯಕೆಯ ತವಕ, ತಲ್ಲಣಗಳ ಮೂಲಕ ಚೆನ್ನಮಲ್ಲಿಕಾರ್ಜುನನನ್ನು ಕುರಿತ ಹಂಬಲವನ್ನು ವ್ಯಕ್ತಪಡಿಸುವ ರೀತಿ ಮನಸಿನಲ್ಲಿ ಉಳಿಯುತ್ತದೆ. ದೇವರನ್ನು ಕಾಣುವ ಹಂಬಲವೆನ್ನುವ ತಾತ್ಪರ್ಯದ ಅರ್ಥವನ್ನು ಮಾತ್ರ ಮುಖ್ಯವೆಂದುಕೊಂಡರೆ ಅದರಿಂದ  ಈ ವಚನದಲ್ಲಿರುವ ಮನುಷ್ಯಾನುಭವದ ಸೂಕ್ಷ್ಮಗಳು ಮರೆಯಾಗುತ್ತವೆ. ಹಂಬಲ, ತವಕಗಳು—ಒಲವಿನ ಜೀವವನ್ನು ಕುರಿತೇ ಆಗಿರಲಿ, ದೇವರನ್ನು ಕುರಿತೇ ಆಗಿರಲಿ—ಎಲ್ಲ ಕಟ್ಟಳೆ, ನಿಯಮ, ನೀತಿಗಳನ್ನು ಮೀರಿದ ಶಕ್ತಿ, ಸೆಳತ ಅನ್ನುವುದನ್ನು ಈ ವಚನ ಹೇಳುವಂತಿದೆ. ಹಗಲ ಕೂಟ ನಿಷಿದ್ಧವೆಂಬ ಮಾತಿದೆ. ಹೆಣ್ಣು ತನ್ನ ಬಯಕೆ ವ್ಯಕ್ತಪಡಿಸದೆ ಅಡಗಿಸಿಕೊಂಡಿದ್ದರೆ ಮಾತ್ರವೇ ಮೆಚ್ಚುಗೆಗೆ ಪಾತ್ರಳು ಅನ್ನುವ ಧೋರಣೆಯೂ ಇದೆ. ಈ ವಚನ  ಗಂಡು ಹೆಣ್ಣು ಅನ್ನುವ ಸಾಮಾಜಿಕ ನೀತಿ ಕಟ್ಟಳೆಗಳಿಗೆ ಒಳಪಡದ ಪ್ರಬಲ ಪ್ರವೃತ್ತಿಯನ್ನು ಸೂಚಿಸುವಂತೆ ತೋರಿದೆ. ಪ್ರವೃತ್ತಿಯನ್ನು ವ್ಯಕ್ತಪಡಿಸಲು ಧರ್ಮವೂ ಸಾಧನವೇ ಅನ್ನುವುದು ಚರ್ಚೆಗೆ ದಾರಿ ಮಾಡುವ ಸಂಗತಿ. ʻಮನಸಂಗʼ, ʻಮೈಮರೆದುʼ ಎಂಬ ಪದಗಳು ಒಳಗಿನ ಪ್ರಬಲ ಪ್ರವೃತ್ತಿಯನ್ನು ಮುಕ್ತವಾಗಿ ವ್ಯಕ್ತಪಡಿಸಲಾಗದ ವಾಸ್ತವದ ಕಟ್ಟಳೆಯನ್ನು ಕುರಿತು ಹೇಳುತ್ತಿವೆ ಅನಿಸಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.