ದೇವರೊಡನೆ ಒಂದಾಗುವುದು ನಿಜವೋ, ಮಾಟವೋ ಅನ್ನುವ ಅಸಹನೀಯ ಹಿಂಸೆ ಕಾಡುವ ಸ್ಥಿತಿ, ನಿಜದ ಕೂಟ ಸಾದ್ಯವಿಲ್ಲವೆಂಬ ಅಸಹಾಯಕ ತೊಳಲಾಟ ಇಲ್ಲಿ ಕಾಣುತ್ತದೆ... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಕಾಣುತ್ತ ಕಾಣುತ್ತ ಕಣ್ಣ ಮುಚ್ಚಿದೆ
ಕೇಳುತ್ತ ಕೇಳುತ್ತ ಮೈಮರದೊರಗಿದೆ
ಹಾಸಿದ ಹಾಸಿಗೆಯ ಬೀಸಾಡಿ ಕಳೆದೆ
ಚೆನ್ನಮಲ್ಲಿಕಾರ್ಜುನದೇವರದೇವನ ಕೂಡುವ ಕೂಟವ
ನಾನೇನೆಂದರಿಯದೆ ಮರೆದೆ ಕಾಣವ್ವಾ [೧೫೬]
ನೋಡು ನೋಡುತ್ತ ಕಣ್ಣು ಮುಚ್ಚಿದೆ, ಕೇಳುತ್ತ ಕೇಳುತ್ತ ಮೈಮರೆತು ಒರಗಿದೆ. ಹಾಸಿದ ಹಾಸಿಗೆ ಅಸ್ತವ್ಯಸ್ತ. ಚೆನ್ನಮಲ್ಲಿಕಾರ್ಜುನನ ಇರುಳೆಲ್ಲ ಕೂಡಿದರೂ ಅವನನ್ನು ನಿಜವಾಗಿ ಕೂಡುವ ಬಗೆ ತಿಳಿಯದೆ ಮರವೆಗೆ ಒಳಗಾದೆ.
ಈ ವಚನವೂ ಹಗಲಿನ ಕೂಟಕ್ಕೆ [೪೦೬] ಥರದ್ದೇ ವಚನ. ಅಥವಾ ಅದರ ಇನ್ನೊಂದು ಮಗ್ಗುಲು. ಈ ಎರಡೂ ವಚನ ಬಯಕೆ-ಕನಸು-ವಾಸ್ತವಗಳ ನಡುವೆ ಜೀಕಾಡುವ ಮನುಷ್ಯ ಮನಸಿನ ಸ್ಥಿತಿಯನ್ನು ಚಿತ್ರಿಸುತ್ತವೆ. ಕೀಟ್ಸ್ ಕವಿಯ ಓಡ್ ಟು ನೈಟಿಂಗೇಲ್ ಕವಿತೆಯಲ್ಲಿ ಹಕ್ಕಿಯ ಹಾಡು ಕೇಳುತ್ತ ಸಕಲ ಇಂದ್ರಿಯಾನುಭವಗಳನ್ನು ಕನಸುವ, ಮತ್ತೆ ಎಚ್ಚರಗೊಳ್ಳುವ ಚಿತ್ರ ನೆನಪಾಗುತ್ತದೆ. ಅಲ್ಲಿ ಹಕ್ಕಿಯ ಹಾಡು, ಇಲ್ಲಿ ಚೆನ್ನಮಲ್ಲಿಕಾರ್ಜುನ ಎಂಬುದು ದೊಡ್ಡ ವ್ಯತ್ಯಾಸ.
ಚಂದ್ರನಲ್ಲಿರುವ ಗಂಡು ಜಿಂಕೆಯನ್ನು ಕೂಡಲಾಗದ ಹೆಣ್ಣು ಜಿಂಕೆಯ ಚಿತ್ರ ʻಧರೆಯ ಮೇಗಣ ಹುಲ್ಲೆʼ ವಚನದಲ್ಲಿ ಬಂದಿತ್ತು. ಕಣ್ಬೇಟ ಸಾಧ್ಯವಾಗದ ಲೋಕ ಇದು ಅನ್ನುವ ಕೊರತೆ ಆ ವಚನದಲ್ಲಿತ್ತು. ಇಲ್ಲಿ ಕನಸಿನ ಕೂಟದ ಪ್ರಸ್ತಾಪವಿದೆ. ಇದೂ ಕೂಡ ಕಲ್ಪಿತವೇ ಹೊರತು ವಾಸ್ತವವಲ್ಲ. ಕನಸಿನಲ್ಲಿ ಇರುಳೆಲ್ಲಾ ಕೂಡಿದೆ, ಹಾಸಿಗೆ ಅಸ್ತವ್ಯಸ್ತವಾಗಿತ್ತು, ಅದು ಕನಸಿನ ಕೂಟ. ನಿಜದಲ್ಲಿ ಸಾಧ್ಯವೇ? ಇದು ಒಂದು ಬಗೆಯ ಮರೆವು, ಮೈಮರೆವು, ಮನಮರೆವು ಅನ್ನಿಸಿದೆ.
ವಚನಗಳಲ್ಲಿ ಮಾಟ-ಕೂಟ ಎಂಬ ಮಾತು ಅನೇಕ ಬಾರಿ ಎದುರಾಗುತ್ತದೆ. ದೇವರೊಡನೆ ಒಂದಾಗುವುದು ನಿಜವೋ, ಮಾಟವೋ ಅನ್ನುವ ಅಸಹನೀಯ ಹಿಂಸೆ ಕಾಡುವ ಸ್ಥಿತಿ, ನಿಜದ ಕೂಟ ಸಾದ್ಯವಿಲ್ಲವೆಂಬ ಅಸಹಾಯಕ ತೊಳಲಾಟ ಇಲ್ಲಿ ಕಾಣುತ್ತದೆ.

