ಹಲವಾರು ಸಂಗತಿಗಳಲ್ಲಿ ಭಾಗಿಯಾಗುವುದು ಒಳ್ಳೆಯದು. ಒಂದೇ ಒಂದು ಸಂಗತಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ವ್ಯಕ್ತಿ ಆ ಒಂದು ಸಂಗತಿಗೇ ಫಿಕ್ಸ್ ಆಗುತ್ತಾನೆ, ಮತ್ತು ಬದಲಾವಣೆ ಅಸಾಧ್ಯವಾಗುತ್ತ ಹೋಗುತ್ತದೆ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಜನ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಚೇಂಜ್ ಆಗುತ್ತ ಹೋಗುವುದು ಒಳ್ಳೆಯದು; ಅದು ಅವರನ್ನು ಹರಿಯುವ ಸ್ಥಿತಿಯಲ್ಲಿ ಇಡುತ್ತದೆ. ಉತ್ತಮ ಜಗತ್ತಿನಲ್ಲಿ ಎಲ್ಲವೂ ಹಿಂದಿನದಕ್ಕಿಂತ ಹೆಚ್ಚು ಚಲನಶೀಲ, ಮತ್ತು ಜನ ನಿರಂತರವಾಗಿ ಚಲನಶೀಲರಾಗಿ ಯಾವುದೂ ಜಡವಾಗದಂತೆ ಬದಲಾಗುತ್ತ ಇರಬೇಕು – ಜಡವಾಗುವುದು, ಫಿಕ್ಸ್ ಆಗುವುದು ಒಂದು ಕಾಯಿಲೆ.
ಪ್ರತೀ ಹೊಸ ಕೆಲಸ, ಪ್ರತೀ ಹೊಸ ಪ್ರೊಜೆಕ್ಟ್, ನಿಮ್ಮ ಇರುವಿಕೆಗೆ, ಅಸ್ತಿತ್ವಕ್ಕೆ ಹೊಸ ಕ್ವಾಲಿಟಿಯನ್ನು ತಂದುಕೊಡುತ್ತದೆ – ಅದು ನಿಮ್ಮನ್ನು ಶ್ರೀಮಂತರನ್ನಾಗಿಸುತ್ತದೆ.
ಕಪ್ಪೆಗಳ ಗುಂಪೊಂದು ಕಾಡಿನ ಮೂಲಕ ಪ್ರಯಾಣ ಮಾಡುತ್ತಿತ್ತು. ಅಕಸ್ಮಾತ್ ಆಗಿ ಎರಡು ಕಪ್ಪೆಗಳು ಕಾಲುಜಾರಿ ಒಂದು ಆಳ ತೆಗ್ಗಿನಲ್ಲಿ ಬಿದ್ದವು.
ಬಾಕಿ ಎಲ್ಲ ಕಪ್ಪೆಗಳು ತೆಗ್ಗಿನ ಸುತ್ತ ಸೇರಿಕೊಂಡವು. ತೆಗ್ಗು ತುಂಬ ಆಳವಾಗಿರುವುದರಿಂದ ಜಾರಿ ಬಿದ್ದ ಎರಡೂ ಕಪ್ಪೆಗಳು ಬದುಕುಳಿಯುವುದು ಸಾಧ್ಯವೇ ಇಲ್ಲ ಎಂದು ಬಾಕಿ ಕಪ್ಪೆಗಳು ತೀರ್ಮಾನ ಮಾಡಿದವು ಮತ್ತು ತಮ್ಮ ಈ ಅನಿಸಿಕೆಯನ್ನು ತೆಗ್ಗಿನಲ್ಲಿ ಬಿದ್ದ ಕಪ್ಪೆಗಳಿಗೆ ಕೂಗಿ ಹೇಳಿದವು.
ಆದರೆ ತೆಗ್ಗಿನಲ್ಲಿ ಬಿದ್ದ ಕಪ್ಪೆಗಳು ಮೇಲೆ ಇದ್ದ ಕಪ್ಪೆಗಳ ಮಾತನ್ನು ನಿರ್ಲಕ್ಷಿಸಿ ತಮ್ಮಿಂದ ಸಾಧ್ಯವಾದಷ್ಟು ಜಿಗಿಯುತ್ತ ತೆಗ್ಗಿನಿಂದ ಹೊರಬರುವ ಪ್ರಯತ್ನ ಮುಂದುವರೆಸಿದವು.
ಪ್ರತೀಬಾರಿ ಆ ಎರಡು ಕಪ್ಪೆಗಳು ಜಿಗಿದಾಗ ಮೇಲಿನ ಕಪ್ಪೆಗಳು ಕೂಗಿ ಹೇಳುತ್ತಿದ್ದವು “ ಸುಮ್ಮನೇ ಆಯಾಸ ಮಾಡಿಕೊಳ್ಳಬೇಡಿ ನೀವು ಹೊರ ಬರುವುದು ಸಾಧ್ಯವೇ ಇಲ್ಲ. “
ಕೊನೆಗೊಮ್ಮೆ ತೆಗ್ಗಿನಲ್ಲಿ ಬಿದ್ದ ಒಂದು ಕಪ್ಪೆ ಮೇಲಿನ ಕಪ್ಪೆಗಳ ಮಾತಿಗೆ ಮನ್ನಣೆ ನೀಡಿ ತನ್ನ ಪ್ರಯತ್ನ ನಿಲ್ಲಿಸಿತು ಮತ್ತು ಕೆಲ ಸಮಯದಲ್ಲಿಯೇ ಸತ್ತು ಹೋಯಿತು.
ಆದರೆ ಇನ್ನೊಂದು ಕಪ್ಪೆ ತನ್ನಿಂದ ಸಾಧ್ಯವಾದಷ್ಟು ಜಿಗಿಯುತ್ತ ಪ್ರಯತ್ನ ಮುಂದುವರೆಸಿತು ಕೊನೆಗೊಮ್ಮೆ ತನ್ನ ಶಕ್ತಿ ಮೀರಿ ಹಾರಿ ತೆಗ್ಗಿನಿಂದ ಹೊರ ಬಂದಿತು.
ಹೊರಬಂದ ಕಪ್ಪೆಯನ್ನು ಉಳಿದ ಕಪ್ಪೆಗಳು ಪ್ರಶ್ನೆ ಮಾಡಿದವು, “ ನೀನು ಬದುಕುವುದು ಸಾಧ್ಯವೇ ಇಲ್ಲವೆಂದು ನಾವು ಕೂಗಿದ್ದು ನಿನಗೆ ಕೇಳಿಸಲಿಲ್ಲವಾ?”
“ ಓ ಹೌದಾ ? ನೀವು ಹಾಗಾ ಕೂಗಿದ್ದು? ನನಗೆ ಸ್ವಲ್ಪ ಕಿವುಡು, ನೀವು ನನಗೆ ಹುರುಪು ತುಂಬುತ್ತಿದ್ದೀರೇನೋ ಎಂದುಕೊಂಡೆ “ ತೆಗ್ಗನಿಂದ ಪಾರಾದ ಕಪ್ಪೆ ಉತ್ತರಿಸಿತು.

