ತಾನು ಒಪ್ಪಿದ ʻಇಷ್ಟʼ ದೈವದ ಸಂಬಂಧದ ಇನ್ನೊಂದು ಮಜಲು ಈ ವಚನದಲ್ಲಿದೆ... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಎನ್ನ ಮನವ ಮಾರುಗೊಂಡನವ್ವಾ
ಎನ್ನ ತನುವ ಸೂರೆಗೊಂಡನವ್ವಾ
ಎನ್ನ ಸುಖವನೊಪ್ಪುಗೊಂಡನವ್ವಾ
ಎನ್ನ ಇರವನಿಂಬುಗೊಂಡನವ್ವಾ
ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು [೧೦೫]
[ಮಾರುಗೊಳ್=ವಿನಿಮಯ. ಮಾರು=ಕೊಳ್ಳು; ಸೂರೆ=ಲೂಟಿ; ಒಪ್ಪು=ಸ್ವೀಕರಿಸು, ಇಂಬು=ಸ್ಥಳ]
ನನ್ನ ಮನಸನ್ನು ಅವನ ಮನಸಿನೊಡನೆ, ನನ್ನ ಮೈಯನ್ನು ಅವನ ಮೈಯೊಡನೆ ವಿನಿಮಯ ಮಾಡಿಕೊಂಡ. ನನ್ನ ಸುಖವನ್ನು ಒಪ್ಪಿಕೊಂಡ. ನನ್ನ ಇರುವಿಕೆಗೆ ಅವಕಾಶಮಾಡಿಕೊಟ್ಟ. ನಾನು ಚೆನ್ನಮಲ್ಲಿಕಾರ್ಜುನನ ಒಲುಮೆಯವಳು.
ಈ ವಚನದಲ್ಲಿ ಬಳಕೆಯಾಗಿರುವ ಕ್ರಿಯಾಪದಗಳನ್ನು ಗಮನಿಸಿ.ಮನಸನ್ನು ಮಾರುಗೊಂಡ, ವಿನಿಮಯ ಮಾಡಿಕೊಂಡʼ ದೇಹವನ್ನು ಲೂಟಿ ಮಾಡಿದ; ತಾನು ಒಪಿದ ʻಇಷ್ಟʼ ದೈವದ ಸಂಬಂಧದ ಇನ್ನೊಂದು ಮಜಲು ಈ ವಚನದಲ್ಲಿದೆ. ಕೊಟ್ಟದ್ದೂ ಇದೆ, ಪಡೆದದ್ದೂ ಇದೆ. ಆದರೆ ಅವನು ಚೆನ್ನಮಲ್ಲಿಕಾರ್ಜುನ. ಆದ್ದರಿಂದಲೇ ನನ್ನ ಇರುವಿಕೆಗೆ ಇಂಬುಕೊಟ್ಟ. ನಾನು ಅವನ ಒಲುಮೆಯವಳು.
ಇಷ್ಟದೈವದ ಕಲ್ಪನೆಯ ಸೊಗಸಿಗೆ ಈ ಮಾತು ಉದಾಹರಣೆಯಂತಿದೆ. ದೈನಿಕದಲ್ಲಿ ಪ್ರೀತಿ ಎಂಬ ಅನುಭವದೊಡನೆ ಒಡೆತನದ, ಹಕ್ಕುದಾರಿಕೆಯ ಭಾವವೂ ಬೆರೆತಿರುತ್ತದೆ. ಚೆನ್ನಮಲ್ಲಿಕಾರ್ಜುನ ನನ್ನನ್ನು ಸೂರೆಗೊಂಡರೂ, ನನ್ನ ಸುಖ ಒಪ್ಪಿದರೂ ನನ್ನ ಇರುವಿಕೆಗೆ ಇಂಬುಕೊಟ್ಟ ಅನ್ನುವುದು ಪ್ರೀತಿಗೆ ಅಗತ್ಯವಾಗಿ ಬೇಕಾದ ಸ್ವಾತಂತ್ರ್ಯವನ್ನು ಸೂಚಿಸುವಂತಿದೆ. ಅದು ಕೇವಲ ಕಲ್ಪಿತವೋ, ಭಾವಿತವೋ, ಎಂದಾದರೂ ನಿಜವಾದೀತೋ ಅನ್ನುವ ಉತ್ತರವಿರದ ಪ್ರಶ್ನೆ ಅಕ್ಕನ ವಚನಗಳಲ್ಲಿದೆ.

