ಬೆಳೆದ ಒಲವಿನ ಸಸಿ : ಅಕ್ಕ ಮಹಾದೇವಿ #56

ಕೂಟ, ಮಿಲನ, ಮಿಲನದ ಹೊತ್ತು, ಬಯಕೆ, ಕಳವಳ, ಆತಂಕ, ಕಲ್ಪಿತ ಸುಖ ಹೀಗೆ ಚೆನ್ನಮಲ್ಲಿಕಾರ್ಜುನ ಮತ್ತು ತನ್ನ ಸಂಬಂಧವನ್ನು ಬಗೆಬಗೆಯಾಗಿ ವರ್ಣಿಸುತ್ತ ಅಕ್ಕನ ವಚನಗಳು ನುಡಿ-ಭಾವ-ಬೇಸಾಯದ ಉದಾಹರಣೆಗಳೇ ಸರಿ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು
ಇರುಳು ನಾಲ್ಕು ಜಾವ [ಲಿಂಗದ] ವಿಕಳಾವಸ್ಥೆಯಲ್ಲಿಪ್ಪೆನು
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿಪ್ಪೆನು
ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಒಲುಮೆ ನಟ್ಟು ಹಸಿವು ತೃಷೆ ನಿದ್ರೆಯ
ತೊರೆದೆನಯ್ಯಾ [೪೦೮]

[ಜಾವ=ಮೂರು ಗಂಟೆಯ ಅವಧಿ; ವಿಕಳಾವಸ್ಥೆ=ಮತಿ ಹೀನ, ಮತಿ ಭ್ರಮಿತ ಸ್ಥಿತಿ;  ಒರಗು=ಅಂಗಾತ ಮಲಗು; ನಟ್ಟು=ನೆಲದಲ್ಲಿ ಗಿಡ ನಟ್ಟ ಹಾಗೆʼ]

ಹಗಲಿನ ಹನ್ನೆರಡು ಗಂಟೆ ನಿನ್ನ ಬಗ್ಗೆ ಕಳವಳ, ರಾತ್ರಿಯ ಹನ್ನೆರಡು ಗಂಟೆ ಬುಧ್ದಿ ಹೀನ ಭ್ರಮೆಯ ಸ್ಥಿತಿ; ಹಗಲೂ ಇರುಳೂ ನಿಮ್ಮ ಹಂಬಲದಲ್ಲಿ ಮೈ ಮರಗಿ ಒರಗಿದ್ದೇನೆ. ಚೆನ್ನಮಲ್ಲಿಕಾರ್ಜುನ ನಿಮ್ಮ ಒಲುಮೆಯ ಸಸಿಯನ್ನು ನಟ್ಟು ಅದು ಬೆಳೆದು ತಾನೇ ತಾನಾಗಿ ಹಸಿವು, ತೃಷ್ಟೆ, ನಿದ್ರೆ ಇಲ್ಲವಾಗಿದೆ.

ಬೇರೆಯ ವಚನಕಾರರು ಸುಮಾರು ಐವತ್ತು ವಚನಗಳಲ್ಲಿ ದೃಷ್ಟಿ/ನೋಟ ನಟ್ಟು, ಮನ ನಟ್ಟು, ಇತ್ಯಾದಿಯಾಗಿ ಮಾತಾಡಿರುವುದುಂಟು. ಅಲ್ಲೆಲ್ಲ ನೋಟವನ್ನು, ಮನಸ್ಸನ್ನು ʻಫಿಕ್ಸ್‌ʼ ಮಾಡಿ ಎಂಬ ಅರ್ಥ ಹೊಂದುತ್ತದೆ. ಅಕ್ಕನಲ್ಲಿ ಸಸಿ ಬೆಳೆದ ಹಾಗೆ ಒಲುಮೆ ಬೆಳೆದು ಅನ್ನುವ ಭಾವ ಇರುವಂತೆ ತೋರುತ್ತದೆ. ನಟ್ಟು ಅನ್ನುವ ಪದ ತನ್ನಷ್ಟಕ್ಕೇ ಗಮನ ಸೆಳೆಯದೆ ಇರಬಹುದು. ಆದರೂ ಇವತ್ತು ನಾವು ಬಳಸುವ ʻನಾಟಿಮಾಡುʼ ಅನ್ನುವ ಬೇಸಾಯ ಸಂಬಂಧೀ ಕ್ರಿಯಾಪದದ ಮೂಲ ರೂಪ ಇದು ಅನ್ನುವುದನ್ನು ನೆನೆದರೆ ಅಕ್ಕನ ವಚನಗಳು ಭಾವ ವ್ಯವಸಾಯದ ಫಲಿತಾಂಶವಾಗಿ ಕಾಣುತ್ತವೆ. ಅವು ನುಡಿಬೇಸಾಯಗಳೂ ಹೌದು.

ಸ್ನೇಹ, ಪ್ರೀತಿ, ಪ್ರಣಯ, ಭಕ್ತಿ, ಅನುಭಾವ, ದ್ವೇಷ, ಸಿಟ್ಟು ಇಂಥ ಯಾವುದೇ ಭಾವವಾಗಲೀ ಅವನ್ನು ಎಚ್ಚರದಿಂದ ನಮ್ಮ ಮನಸ್ಸು ನಾಟಿ ಮಾಡಿ ಬೆಳೆಸುತ್ತವೆ, ಕೊಯ್ಲು ಮಾಡಿ, ಬಡಿದು ಒಕ್ಕಣೆ ಮಾಡಿ, ಭಾವಧಾನ್ಯಗಳ ಸುಗ್ಗಿ ನಮ್ಮ ವ್ಯಕ್ತಿತ್ವವಾಗಿ ರೂಪುಗೊಳ್ಳುತ್ತವೆ. ಇಲ್ಲಿ ವಿವರಿಸುತ್ತಾ ನಾನು ಬೇಸಾಯದ ಕಸುಬುಗಳನ್ನು ಹೋಲಿಕೆಗಾಗಿ ಬಳಸಿದ ಹಾಗೆ ಕವಿ ಮನಸ್ಸು ಒಂದು ಭಾವದ ಸುತ್ತಮುತ್ತ ಸುಳಿಯುತ್ತ ಮನಸಿನ ಜಮೀನಿನಲ್ಲಿ ಒಂದೇ ಥರದ ಬೆಳೆ ಬೆಳೆಯುವ ಹಾಗೆ ನುಡಿ ಬೇಸಾಯದಲ್ಲಿ ತೊಡಗಿ ಪರಸ್ಪರ ಸಂಬಂಧವಿರುವ ರೂಪಕ, ಉಪಮೆಗಳ ನಾಟಿ ಮಾಡುತ್ತದೆ ಅನಿಸುತ್ತದೆ. ಕೂಟ, ಮಿಲನ, ಮಿಲನದ ಹೊತ್ತು, ಬಯಕೆ, ಕಳವಳ, ಆತಂಕ, ಕಲ್ಪಿತ ಸುಖ ಹೀಗೆ ಚೆನ್ನಮಲ್ಲಿಕಾರ್ಜುನ ಮತ್ತು ತನ್ನ ಸಂಬಂಧವನ್ನು ಬಗೆಬಗೆಯಾಗಿ ವರ್ಣಿಸುತ್ತ ಅಕ್ಕನ ವಚನಗಳು ನುಡಿ-ಭಾವ-ಬೇಸಾಯದ ಉದಾಹರಣೆಗಳೇ ಸರಿ.

ಅಕ್ಕಮಹದೇವಿಯ ʻದೃಷ್ಟಿವರಿದು ಮನ ನೆಲೆಗೊಂಡುದಿದೇನೊʼ ಎಂದು ಆರಂಭವಾಗುವ ವಚನವನ್ನೂ ಮುಂದಿನ ಸಂಚಿಕೆಯಲ್ಲಿ ನೋಡೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.