ಎಲ್ಲೆಲ್ಲೂ ದೇವರು ಇದ್ದಾನೆ ಅನ್ನುವವರು ಅವನನ್ನು ಕಂಡಿರಬಹುದೋ? ನಾನು ಮಾತ್ರ ಕಂಡಿಲ್ಲವೋ? ನನ್ನಲ್ಲೇ ಕೊರತೆ ಇದೆಯೋ? ನನ್ನನ್ನು ನಾನು ಅರ್ಪಿಸಿಕೊಂಡದ್ದರಲ್ಲಿ ಕೊರತೆಯಾಯಿತೋ ಅನ್ನುವ ಸಂಶಯಗಳೆಲ್ಲ ʻಎನಗೇಕೆ ಮುಖದೋರೆ?ʼ ಅನ್ನುವ ಪ್ರಶ್ನೆಯಲ್ಲಿದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ವನವೆಲ್ಲಾ ನೀನೆ
ವನದೊಳಗಣ ದೇವತರುವೆಲ್ಲಾ ನೀನೆ
ತರುವಿನೊಳಗಾಡುವ ಖಗಮೃಗವೆಲ್ಲಾ ನೀನೆ.
ಚೆನ್ನಮಲ್ಲಿಕಾರ್ಜುನಾ
ಸರ್ವಭರಿತನಾಗಿ ಎನಗೇಕೆ ಮುಖದೋರೆ [೩೬೫]
[ದೇವತರು=ದೈವಿಕವಾದ ಮರ; ಖಗ=ಖ ಎಂದರೆ ಆಕಾಶ. ಆಕಾಶದಲ್ಲಿ ಚಲಿಸುವುದು ಹಕ್ಕಿ, ಮೃಗ=ಮೃತ್ ಅಂದರೆ ಮಣ್ಣು, ನೆಲವ ಮೇಲೆ ಚಲಿಸುಸವಂಥವು ಪ್ರಾಣಿಗಳು]
ನೀನು ಕಾಡಿನಲ್ಲೆಲ್ಲಾ ಇದ್ದೀಯ, ಕಾಡಿನೊಳಗಿನ ದೈವಿಕ ಮರಗಳೆಲ್ಲವೂ ನೀನೇ. ಮರಗಳ ನಡುವೆ ಸುಳಿದಾಡುವ ಪಕ್ಷಿ ಪ್ರಾಣಿಗಳೂ ನೀನೇ. ಚನ್ನಮಲ್ಲಿಕಾರ್ಜುನಾ, ಕಣ್ಣಿಗೆ ಕಾಣುವ ಎಲ್ಲದರಲ್ಲೂ ನೀನು ತುಂಬಿದ್ದೀಯೆ. ನನಗೆ ಮಾತ್ರ ಯಾಕೆ ಮುಖ ತೋರುತ್ತಿಲ್ಲ.
ಸಾವಿಲ್ಲದ, ರೂಹಿಲ್ಲದ ಚೆನ್ನಮಲ್ಲಿಕಾರ್ಜುನ ಅನ್ನುವ ಮಾತಿನ ವ್ಯಂಗ್ಯ ಇಲ್ಲಿ ಸ್ಪಷ್ಟವಾಗುವಂತಿದೆ. ಎಲ್ಲ ರೂಪುಗಳೂ ಅವನೇ ಆಗಿರುವಾಗ, ಎಲ್ಲದರೊಳಗೂ ಅವನೇ ಇರುವಾಗ ಅವನದ್ದೇ ಅನ್ನುವ ಖಚಿತವಾದ ರೂಪು ಇರಲು ಸಾಧ್ಯವಿಲ್ಲ, ಹೆಸರೂ ನಾನುಕೊಟ್ಟದ್ದೇ!. ಇದು ಮರ, ಇದು ಹಕ್ಕಿ, ಇದು ಪ್ರಾಣಿ, ಎಂದು ಗೊತ್ತಾಗುವ ಹಾಗೆ ಇವನು ಚೆನ್ನಮಲ್ಲಿಕಾರ್ಜುನ ಅಂತ ನನ್ನೆದುರಿಗೆ ಯಾಕೆ ನೀನು ತೋರ್ಪಡಿಸಿಕೊಳ್ಳುವುದಿಲ್ಲ ಅನ್ನುವ ಪ್ರಶ್ನೆಯ ನೋವು ಮನಸನ್ನು ಮುಟ್ಟುತ್ತದೆ. ಚೆನ್ನಮಲ್ಲಿಕಾರ್ಜುನ ಎಲ್ಲೆಲ್ಲೂ ಇರುವವನು ಹೆಸರು, ರೂಪ ಇರುವ ಎಲ್ಲವು ಅವನೇ ಆದರೂ ಅವನದ್ದೇ ಅಂತ ನಾನು ಗುರುತು ಹಿಡಿಯಬಹುದಾದ ಲಕ್ಷಣ ಪತ್ತೆಯಾಗುತ್ತಿಲ್ಲ. ಅವನು ʻಇಷ್ಟʼ ದೈವ, ಇಷ್ಟದೊಳಗೆ ಮಾತ್ರ ಇರುವ ಜೀವ.
ಸರಿ. ಎಲ್ಲೆಲ್ಲೂ ದೇವರು ಇದ್ದಾನೆ ಅನ್ನುವವರು ಅವನನ್ನು ಕಂಡಿರಬಹುದೋ? ನಾನು ಮಾತ್ರ ಕಂಡಿಲ್ಲವೋ? ನನ್ನಲ್ಲೇ ಕೊರತೆ ಇದೆಯೋ? ನನ್ನನ್ನು ನಾನು ಅರ್ಪಿಸಿಕೊಂಡದ್ದರಲ್ಲಿ ಕೊರತೆಯಾಯಿತೋ ಅನ್ನುವ ಸಂಶಯಗಳೆಲ್ಲ ʻಎನಗೇಕೆ ಮುಖದೋರೆ?ʼ ಅನ್ನುವ ಪ್ರಶ್ನೆಯಲ್ಲಿದೆ. ನನಗೆ ಕಾಣುತ್ತಿಲ್ಲ, ಮಿಕ್ಕವರಿಗೆ ಕಾಣುತ್ತಿರಬಹುದೋ? ಈ ವಿಚಾರ ಮುಂದಿನ ವಚನದಲ್ಲೂ ಮುಂದುವರೆಯುತ್ತದೆ.

