ಮೊದಲನೆಯ ಶೂನ್ಯಸಂಪಾದನೆಯನ್ನು ಹೊರತುಪಡಿಸಿ ಮಿಕ್ಕ ಎಲ್ಲ ಶೂನ್ಯಸಂಪಾದನೆಗಳಲ್ಲಿ ಮಾತ್ರ ಈ ವಚನ ಇದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಅಳಿಸಂಕುಲವೆ
ಮಾಮರವೆ
ಬೆಳುದಿಂಗಳೆ
ಕೋಗಿಲೆಯೆ
ನಿಮ್ಮನೆಲ್ಲರನೂ ಒಂದ ಬೇಡುವೆನು.
ಎನ್ನೊಡೆಯ ಚೆನ್ನಮಲ್ಲಿಕಾರ್ಜುನದೇವ ಕಂಡಡೆ ಕರೆದು ತೋರಿರೆ [೫೨]
[ಅಳಿಸಂಕುಲ=ದುಂಬಿಯ ಹಿಂಡು,]
ಅಳಿಸಂಕುಲ, ಬೆಳುದಿಂಗಳು, ಮಾವಿನಮರ, ಕೋಗಿಲೆ ನೀವು ಚೆನ್ನಮಲ್ಲಿಕಾರ್ಜುನನನ್ನು ಕಂಡರೆ ಕರೆದು ನನಗೆ ತೋರಿಸಿರಿ.
ಚೆನ್ನಮಲ್ಲಿಕಾರ್ಜುನ ನನ್ನ ಇಷ್ಟ ದೈವ. ಎಲ್ಲೆಲ್ಲೂ ಇದ್ದರೂ ನನಗೆ ಕಾಣುತ್ತಿಲ್ಲ. ಮನುಷ್ಯರಲ್ಲದ ದುಂಬಿ ಮಾವಿನ ಮರ, ಬೆಳುದಿಂಗಳು, ಕೋಗಿಲೆ ಕಂಡಿರಬಹುದೇ? ಅವನ್ನೇ ಬೇಡುತ್ತೇನೆ ಅನ್ನುವ ಶರಣಾಗತಿಯ ಸ್ಥಿತಿಯನ್ನು ಹೇಳುವಂತಿದೆ.
ಇಲ್ಲಿ ಬಳಕೆಯಾಗಿರುವ ಬೆಳುದಿಂಗಳು, ಕೋಗಿಲೆ ಮಾವಿನ ಮರ, ದುಂಬಿ ಹಿಂಡು ಇವೆಲ್ಲವೂ ಪ್ರಯಣಯ ಸಂಬಂಧಿಗಳೂ ಹೌದು. ಬೆಳುದಿಂಗಳು, ಕೋಗಿಲೆ ಇತ್ಯಾದಿಗಳು ಎಷ್ಟು ಲಕ್ಷ ಪ್ರೇಮಿಗಳ ಸಾಕ್ಷಿಯಾಗಿವೆಯೋ ಲೆಕ್ಕ ಇಟ್ಟವರಾರು. ನನ್ನ ಚೆನ್ನಮಲ್ಲಿಕಾರ್ಜುನ ನನಗೆ ಕಾಣದಿದ್ದರೂ ಹಾರುವ ಹಾಡು ಹಕ್ಕಿಗೆ, ಲೋಕವನ್ನೆಲ್ಲ ಬೆಳಗುವ ಬೆಳುದಿಂಗಳಿಗೆ, ಹೂವುಗಳಿರುವ ಎಡೆಯಲ್ಲಿರುವ ಕಂಡಿರಬೇಕಲ್ಲವೇ! ಅವೇ ಪುಣ್ಯವಂತರು. ನನಗಿಲ್ಲದ ಭಾಗ್ಯ ಅವಕ್ಕೆ ಇವೆ.
ಮೊದಲನೆಯ ಶೂನ್ಯಸಂಪಾದನೆಯನ್ನು ಹೊರತುಪಡಿಸಿ ಮಿಕ್ಕ ಎಲ್ಲ ಶೂನ್ಯಸಂಪಾದನೆಗಳಲ್ಲಿ ಮಾತ್ರ ಈ ವಚನ ಇದೆ. ಈ ವಚನ ತುಂಬ ಕಿರಿದಾಗಿ ಅರ್ಥ ನಿಬಿಡವಾಗಿ ಇರುವುದರಿಂದ, ಈ ವಚನದ ಭಾವವನ್ನು ಮತ್ತಷ್ಟು ವಿವರಗಳೊಡನೆ ವಿಸ್ತರಿಸುವ ಆಸೆಯಿಂದ ಮುಂದಿನ ವಚನ ಮೂಡಿದಂತಿದೆ. ಇವುಗಳಲ್ಲಿ ಯಾವುದು ಅಕ್ಕನದು ಎಂದು ಹೇಳುವ ಸ್ಥಿತಿಯಲ್ಲಿ ನಾವು ಯಾರೂ ಇಲ್ಲ.

