ನೀವು ಕಾಣಿರೆ : ಅಕ್ಕ ಮಹಾದೇವಿ #60

ಹಿಂದಿನ ಎರಡು ವಚನಗಳೊಡನೆ ಇದನ್ನೂ ಸೇರಿಸಿಕೊಂಡು ಒಂದು ಗುಂಪಾಗಿ ನೋಡಬಹುದು… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ

ಚಿಲಿಮಿಲಿ ಎಂದು ಓದುವ ಗಿಳಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಸರವೆತ್ತಿ ಪಾಡುವ ಕೋಗಿಲೆಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಎರಗಿ ಬಂದಾಡುವ ತುಂಬಿಗಳಿರಾ
ನೀವು ಕಾಣಿರೆ ನೀವು ಕಾಣಿರೆ
ಕೊಳನ ತಡಿಯೊಳಾಡುವ ಹಂಸೆಗಳಿರಾ
ನೀವು ಕಾಣಿರೆ ನೀವು ಕಾಣಿರೆ.
ಗಿರಿ ಗಹ್ವರದೊಳಗಾಡುವ ನವಿಲುಗಳಿರಾ
ನೀವು ಕಾಣಿರೆ
ನೀವು ಕಾಣಿರೆ. ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ಹೇಳಿರೆ [೨೧೧]

ಹಿಂದಿನ ಎರಡು ವಚನಗಳೊಡನೆ ಇದನ್ನೂ ಸೇರಿಸಿಕೊಂಡು ಒಂದು ಗುಂಪಾಗಿ ನೋಡಬಹುದು. ಹಾಗೆಯೇ ʻಹಸಿವೆ ನೀನು ನಿಲ್ಲು ನಿಲ್ಲುʼ [೫.೪೧೫]ರ ಮುಂದುವರಿಕೆಯೆಂದೂ ನೋಡಬಹುದು. ಅವಸರದ ಓಲೆ ತೆಗೆದುಕೊಂಡು ಹೋಗುತಿದ್ದೇನೆ, ಯಾರಿಗೆ ಅದನ್ನು ತಲುಪಿಸಬೇಕೊ ಅವನ ಮುಖವೇ ಕಾಣದು ಅನ್ನುವ ಭಾವ ಈ ಮೂರರಲ್ಲೂ ಇವೆ.  ವನವೆಲ್ಲ ನೀವೇ, ಎಂದು ಆರಂಭವಾಗುವ ವಚನ, ಅಳಿಸಂಕುಲವೆ ಎಂದು ಆರಂಭವಾಗುವ ವಚನ ಇವೆರಡೂ ಅಕ್ಕಮಹಾದೇವಿಯ ಮಾತಿನ ಧಾಟಿಗೆ ಹೊಂದುವಂತೆ ಕಾಣುತ್ತದೆ. ಜನಪ್ರಿಯವಾಗಿರುವ ಚಿಲಿಮಿಲಿ ಎಂದೋದುವ ಗಿಳಿಗಳಿರಾ ವಚನವು ಮೊದಲಿನ ಎರಡು ವಚನಗಳ ವಿಸ್ತಾರವಾದ ರೂಪವೆಂಬಂತೆ ಕಾಣುತ್ತದೆ. ರಚನೆಯ ದೃಷ್ಟಿಯಿಂ ಹಸಿವೆ ನೀನು ನಿಲ್ಲು ನಿಲ್ಲು ಥರದಲ್ಲೇ ಹೆಚ್ಚು ನಾಟಕೀಯವೂ ಆಗಿದೆ.ವಚನಗಳು ಕಾಲಕ್ರಮದಲ್ಲಿ ವಿಸ್ತಾರವಾದ ಬಗೆಗೆ ಅಕ್ಕನಲ್ಲೂ ಇಂಥ ಉದಾಹರಣೆ ಸಿಗುತ್ತವೆ.

ಈ ಮೂರೂ ವಚನಗಳಲ್ಲಿ ಚೆನ್ನಮಲ್ಲಿಕಾರ್ಜುನ ಎಲ್ಲೆಲ್ಲೂ ಇದ್ದಾನೆ, ಗಿಡ, ಮರ, ಪಕ್ಷಿ, ಪ್ರಾಣಿ ಎಲ್ಲವೂ ಅವನೇ. ನನಗೆ ಮಾತ್ರ ಕಾಣುತ್ತಿಲ್ಲ. ಮನುಷ್ಯಳೆಂಬ ಕಾರಣಕ್ಕೆ ಹೀಗಾಗಿರಬಹುದು, ಹಕ್ಕಿ, ಪಕ್ಷಿಗಳು ನೋಡಿದ್ದರೂ ನೋಡಿರಬಹುದಲ್ಲವೇ ಅನ್ನುವ ತವಕವೂ ಮನಸ್ಸನ್ನು ಮುಟ್ಟುತ್ತದೆ. ಸುದೀರ್ಘವಾದ ಚಿಲಿಮಿಲಿ ಎಂದೋದುವ ಗಿಳಿಗಳಿರಾ ಎಂಬ ವಚನದಲ್ಲಿ ನೀವು ಕಾಣಿರೆ ಎಂಬ ಮಾತನ್ನು ಓದುವ ಧಾಟಿಯಿಂದ ಅದು ಪ್ರಶ್ನೆಯಂತೆ, ನಾನು ಕಂಡಿದ್ದೇನೆ ನೀವು ಕಂಡಿಲ್ಲವೇ ಎಂಬ ಬೆರಗಿನಿಂತೆ, ನಾನು ಕಂಡಿದ್ದೇನೆ ನೀವೂ ಕಾಣಿರಿ ಎಂದು ಹೇಳುತ್ತಿರುವಂತೆ ಬೇರೆ ಬೇರೆ ಅರ್ಥಗಳನ್ನು ಹೊಮ್ಮಿಸಬಹುದು. ಅಲ್ಲದೆ ಗಿಳಿ ಸುಮ್ಮನೆ ಓದುತ್ತವೆ,  ಕೋಗಿಲೆ ಹಾಡುತ್ತವೆ, ಹಂಸೆ ಆಡುತ್ತವೆ, ಅವಕ್ಕೆ ಸೀರಿಯಸ್‌ನೆಸ್‌ ಇಲ್ಲ ಅನ್ನುತ್ತಿದೆಯೋ ಅಥವಾ ಅವೆಲ್ಲ ಹಾಗೆ ಸಹಜವಾಗಿರುವುದರಿಂದಲೇ ಚೆನ್ನಮಲ್ಲಿಕಾರ್ಜುನನ ಕಂಡಿವೆ ಅನಿಸುತ್ತಿದೆಯೋ.

ವನವೆಲ್ಲ ನೀವೇ, ಅಳಿಸಂಕುಲವೇ, ಚಿಲಿಮಿಲಿ ಎಂದೋದುವ ಎಂಬ ಈ ಮೂರು ವಚನಗಳ ಸರಣಿಯನ್ನು ಹೀಗೆ ಹಲವು ರೀತಿಯಲ್ಲಿ ವಿವರಿಸಬಹುದು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.