ಎಲ್ಲಕಿಂತಲು ಮಿಗಿಲಾದ ಒಲುಮೆಗೆ ʻನಾನುʼ ಪೂರ್ತಿಯಾಗಿ ಶರಣಾಗದೆ ಸತ್ಯ ಸಿಗದು ಅನ್ನುವುದು ಈ ವಚನ ನಮಗೆ ನೀಡುತ್ತಿರುವ ನುಡಿ ಕಾಣ್ಕೆ… । ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವಾ.
ಮೋಹಿಸಿ ಮುದ್ದಿಸಿ ಮರುಳಾದೆನವ್ವಾ.
ತೆರೆಯದೆ ತೊರೆಯದೆ ನಲಿದು ನಂಬಿದೆ ನಾನು.
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆನ್ನನೊಲ್ಲದಡೆ ಆನೇವೆನವ್ವಾ [೧೬೧]
[ತೆರೆಯದೆ=ಓಪನ್ ಅಪ್ ಆಗದೆ, ತೊರೆಯದೆ=ಬಿಡದೆ; ಆನೇವೆನವ್ವಾ=ನಾನು ಸಹಿಸಲಾರೆ, ಅವ್ವಾ]
ಕಾಮಿತ, ಕಲ್ಪಿತ, ಭಾವಿತ, ಭ್ರಮಿತವಲ್ಲದ ಸತ್ಯದ ಹುಡುಕಾಟದ ರೂಪಕ ಈ ವಚನದಲ್ಲಿದೆ. ನಾನು ಬಯಸಿ, ಆ ಬಯಕೆಯಿಂದ ಕಲ್ಪನೆ ಹುಟ್ಟಿ, ಕುಂದಿ ಹೋದೆ. ಅವನನ್ನು ಮೋಹಿಸಿ, ಮುದ್ದು ಮಾಡಿ ಹುಚ್ಚು ಹಿಡಿಸಿಕೊಂಡೆ. ನಾನುತನವನ್ನ ತೊರೆಯದೆ, ನನಗೆ ಬೇಕೆಂದು ಹಂಬಲಿಸಿ ನಾನಾಗಿ ಒಲಿದು ನಲಿದೆ. ಚೆನ್ನಮಲ್ಲಿಕಾರ್ಜುನ ನನ್ನನ್ನು ಒಲ್ಲೆ ಅಂದರೆ ಸಹಿಸಲಾರೆ ಅವ್ವಾ.
ಈ ವಚನದಲ್ಲಿ ಮೂರು ಸಂಗತಿಗಳು ಗಮನ ಸೆಳೆದವು. ಸತ್ಯವು ನಾವು ಬಯಸಿದ ರೂಪವನ್ನು ತಾಳಬಹುದು. ಅಥವಾ ನಮ್ಮ ಮನಸ್ಸು ಭಾವಿಸಿದ ರೀತಿಯಲ್ಲೂ ಕಣ್ಣೆದುರು ಬಂದೀತು. ಅಥವಾ ಇದೇ ಸತ್ಯ ಅನ್ನುವ ಭ್ರಮೆಯೂ ಮೂಡಬಹುದು.ಇಂಥ ವಿವೇಚನೆ ಇರದಿದ್ದರೆ ಸತ್ಯದ ಬಗ್ಗೆ ಮೋಹ ಹುಟ್ಟಿ ಮರುಳಾಗುವ ಅಪಾಯ ಎದುರಾದೀತು. ಎರಡನೆಯದಾಗಿ ಹೀಗೆ ಆಗುವುದಕ್ಕೆ ನಾನತ್ವ ಕಾರಣ. ನನ್ನ ಬಯಕೆ, ನನ್ನ ಕಲ್ಪನೆ ನನ್ನ ಮೋಹ ಇವುಗಳ ಕಾರಣದಿಂದ ನನ್ನನ್ನು ನಾನು ತೆರೆದುಕೊಳ್ಳದೆ, ನನ್ನೊಳಗೆ ನಾನು ಮಗ್ನವಾಗಿರುತ್ತೇನೆ. ಇಂಥ ಮಗ್ನತೆಯೂ ನಲಿವನ್ನು ಕೊಡಬಹುದು. ಮೂರನೆಯದು, ಈ ನಲಿವಿಗೆ ಕಾರಣವಾಗುವ ನಾನು ಅನ್ನುವುದರ ಮೋಹವನ್ನು ತೊರೆಯದೆ ಇದ್ದರೆ ಸತ್ಯ ಅರಿವಾಗದು. ತೆರೆಯದೆ ಮತ್ತು ತೊರೆಯದೆ ಅನ್ನುವ ಎರಡು ಕ್ರಿಯಾಪದಗಳು ಓಪನ್ ಅಪ್ ಆಗುವ ಮತ್ತು ನನ್ನ ಬಗ್ಗೆ ನಾನಂದುಕೊಂಡಿದ್ದೆಲ್ಲವನ್ನೂ, ಆ ಅನಿಸಿಕೆ ನಲಿವನ್ನೂ ತೊರೆಯದೆ, ಬಿಟ್ಟು ಹಾಕದೆ ಇದ್ದರೆ ಪ್ರೀತಿ ನನ್ನನ್ನು ಒಪ್ಪದು ಅನ್ನುವ ತಿಳಿವು.
ಎಲ್ಲಕಿಂತಲು ಮಿಗಿಲಾದ ಒಲುಮೆಗೆ ʻನಾನುʼ ಪೂರ್ತಿಯಾಗಿ ಶರಣಾಗದೆ ಸತ್ಯ ಸಿಗದು ಅನ್ನುವುದು ಈ ವಚನ ನಮಗೆ ನೀಡುತ್ತಿರುವ ನುಡಿ ಕಾಣ್ಕೆ.

