ಒಂದೇ ಕ್ಷಣದಲ್ಲಿ ಹಲವು ದಿಕ್ಕುಗಳಿಂದ ಹಲವು ಭಾವಗಳು ನುಗ್ಗಿ ಬರುತ್ತವೆ ಅನ್ನುವ ವಾಸ್ತವಕ್ಕೆ ಈ ವಚನ ಒಂದು ಉದಾಹರಣೆ । ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 5, ನಾನತ್ವ ನೀಗಿಕೊಳ್ಳುವ ಕಷ್ಟ
ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು
ಕೆಳದಿ
ಒಚ್ಚೊತ್ತಗಲಿದಡೆ ಕಾಣದಿರಲಾರೆ.
ಎನ್ನ ದೇವ ಚೆನ್ನಮಲ್ಲಿಕಾರ್ಜುನನಗಲಿಯಗಲದ ಸುಖವೆಂದಪ್ಪುದೊ [೧೭೭]
[ಒಪ್ಪಚ್ಚಿ=ಸ್ವಲ್ಪ;ಲೇಸು=ಒಳ್ಳಯದು; ಕೆಳದಿ=ಗೆಳತಿ; ಒಚ್ಚೊತ್ತು-ದಿನದ ಒಂದು ಭಾಗ, ಸ್ವಲ್ಪ ಹೊತ್ತು.]
ಕೂಡಿಯೇ ಇರುವ ಸುಖಕ್ಕಿಂತ ಒಂದು ಹೊತ್ತು ಅಗಲಿ ಮತ್ತೆ ಕೂಡುವ ಸುಖ ಒಳ್ಳೆಯದು ಗೆಳತಿ. ಸ್ವಲ್ಪ ಹೊತ್ತು ಅಗಲಿದರೂ ಅವನನ್ನು ಕಾಣದೆ ಇರಲಾರೆ. ನನ್ನ ದೇವ ಚೆನ್ನಮಲ್ಲಿಕಾರ್ಜುನ ಅಗಲಿದರೂ ಅಗಲದೆ ಇರುವ ಸುಖ ಎಂದಿಗೆ ಸಾಧ್ಯವಾಗುವುದೋ…
ಕೂಡುವುದು ಅನ್ನುವ ಮಾತಿಗೆ ಅರ್ಥ ಬರುವುದೇ ಅಗಲಿಕೆ ಇದ್ದಾಗ, ಅಗಲಿಕೆ ಇರುವುದರಿಂದ. ಅಗಲದೆಯೇ ಇದ್ದರೆ ಕೂಡುವುದಾದರೂ ಹೇಗೆ? ಆದರೂ ದಿನದಲ್ಲಿ ʻಒಂದುಹೊತ್ತುʼ/ಒಂದು ಗಳಿಗೆ ಕಾಣದಿದ್ದರೂ ಅವನನ್ನು ಕಾಣದೆ ಇರಲು ಆಗುವುದಿಲ್ಲ ಗೆಳತಿ. ಅಗಲಿಕೆ ಉಂಟಾದರೂ ಅಗಲಿಕೆ ಆಗಿಲ್ಲ ಅನ್ನುವಂತೆ ಇರುವ ಸುಖ ಯಾವತ್ತು ಸಿಕ್ಕೀತು. ಅಂದರೆ ಅಗಲಿಕೆ ಸಹಜ ಅನ್ನುವುದನ್ನು ಒಪ್ಪಿ ಕಳವಳಪಡದೆ ಇರುವ ಸುಖ ಯಾವಾಗ ನನ್ನ ಪಾಲಿಗೆ ಬಂದೀತು ಅನ್ನುವ ಪ್ರಶ್ನೆಯ ಹಿಂದೆಯೇ ತನ್ನ ಅತಿಭಾವುಕತೆಯ ಅರಿವೂ ಈ ವಚನ ನುಡಿಯುತ್ತಿರುವ ಮನಸಿಗೆ ಉಂಟಾಗಿದೆ ಅನಿಸುತ್ತದೆ.
ನಾವು ಎಷ್ಟೇ ಸ್ಪಷ್ಟತೆ ಖಚಿತತೆ ಬಯಸಿದರೂ ಭಾವಗಳ ಚಲನೆ ಸದಾ ಅಸ್ಪಷ್ಟ, ಗೋಜಲು, ಒಂದೇ ಭಾವ ಒಂದೇ ಕ್ಷಣದಲ್ಲಿ ಹಲವು ದಿಕ್ಕಿಗೆ ಚಾಚಿಕೊಳ್ಳುತ್ತದೆ, ಒಂದೇ ಕ್ಷಣದಲ್ಲಿ ಹಲವು ದಿಕ್ಕುಗಳಿಂದ ಹಲವು ಭಾವಗಳು ನುಗ್ಗಿ ಬರುತ್ತವೆ ಅನ್ನುವ ವಾಸ್ತವಕ್ಕೆ ಈ ವಚನ ಒಂದು ಉದಾಹರಣೆ. ಇರುವುದಲ್ಲದೆ ಇನ್ನೇನನ್ನೋ ಬಯಸುತ್ತಾ ಅದು ಸರಿಯೋ ಅಲ್ಲವೋ ಮತ್ತೇನೋ ಬೇಕೊ ಅನ್ನುವ ಸಂದಿಗ್ಧ ಎಲ್ಲ ಭಾವಗಳ ವಿಚಾರದಲ್ಲೂ ನಿಜವೇ ಹೌದು. ಆಧ್ಯಾತ್ಮಿಕ ಯಾನ ಕೂಡ ಬಹಳ ಜನ ಕಲ್ಪಿಸಿಕೊಳ್ಳುವ ಹಾಗೆ ಸರಳ ರೇಖೆಯಲ್ಲಿ ಒಂದೇ ದಿಕ್ಕಿನಲ್ಲಿ ಸಾಗುವುದೂ ಅಲ್ಲ. ಆಧ್ಯಾತ್ಮಿಕ ಅನುಭವವೂ ಮನುಷ್ಯಾನುಭವ ಅನ್ನುವುದಕ್ಕೆ ಅಕ್ಕನ ವಚನಗಳೇ ದೊಡ್ಡ ನಿದರ್ಶನ.

