ಸಾಧ್ಯವಾದರೆ ಅನುಭವವನ್ನು ಬದುಕಿ, ಅದಕ್ಕೆ ಯಾವ ಹೆಸರೂ ಇಡಲು ಹೋಗಬೇಡಿ, ಏಕೆಂದರೆ ಹಾಗೆ ಮಾಡುವುದು ಆ ಅನುಭವವನ್ನು ತೆಳುವಾಗಿಸುತ್ತದೆ,~ ಓಶೋ ರಜನೀಶ್; ಕನ್ನಡಕ್ಕೆ ಚಿದಂಬರ ನರೇಂದ್ರ
ಅನ್ಯರಿಗೆ ಕಲಿಸಬಹುದಾದ ತಾವೋ
ಅನನ್ಯ ಹೇಗಾದೀತು?
ಹೆಸರನ್ನು ಕಟಕಟೆಯಲ್ಲಿ ನಿಲ್ಲಿಸಬಹುದಾದರೆ
ಆ ಹೆಸರು ಕಳ್ಳ ಹೆಸರಲ್ಲವೇ?
ಹೆಸರಿಲ್ಲದ್ದು ಮಾತ್ರ ಅನನ್ಯ
ಹೆಸರೇ ಸಂಕಟಗಳ ಮಹಾತಾಯಿ.
ಕಳಚಿದಾಗ ಕಂಗೊಳಿಸುವ ಅವ್ಯಕ್ತ
ಹೊದ್ದಾಗ ಮಾತ್ರ ದಾರಿ ತಪ್ಪಿಸುವ ವ್ಯಕ್ತ
ವ್ಯಕ್ತ, ಅವ್ಯಕ್ತ ಇಬ್ಬರೂ
ಕತ್ತಲೂರಿನ ವಾರಸದಾರರು
ಕತ್ತಲೆ, ಕಣ್ಣಿಗೆ ಪಟ್ಟಿ ಕಟ್ಟಿಕೊಂಡಾಗಲೇ
ತೆರೆದುಕೊಂಡ ಬೆಳಕಿನೂರಿನ ದಾರಿ.
~ ಲಾವೋತ್ಸೇ
ಒಂದು ಸಮಾಧಾನದ ಸಂಜೆ, ನೀವು ಸುಮ್ಮನೇ ಮನೆಯ ಅಂಗಳದಲ್ಲಿ ಕುಳಿತಿರುವಿರಿ. ಸೂರ್ಯ ಮರೆಯಾಗಿದ್ದಾನೆ, ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿಕೊಳ್ಳುತ್ತಿವೆ. ಸುಮ್ಮನೇ ಹಾಗೇ ಇರಿ. “ ಎಷ್ಟು ಸುಂದರ ಇದು” ಎಂದು ಉದ್ಗಾರ ಮಾಡಲು ಕೂಡ ಹೋಗಬೇಡಿ. ಏಕೆಂದರೆ, ಎಷ್ಟು ಸುಂದರ ಇದು ಎಂದು ನೀವು ಹೇಳಿದ ಕ್ಷಣದಲ್ಲಿಯೇ, ಅದರ ತನ್ನತನ ಮರೆಯಾಗಿದೆ. “ಎಷ್ಟು ಸುಂದರ ಇದು” ಎಂದು ಹೇಳುವ ಮೂಲಕ ನೀವು ನಿಮ್ಮ ಹಿನ್ನೆಲೆಯನ್ನು ಬಳಸುತ್ತಿರುವಿರಿ, ಮತ್ತು ನೀವು ಸುಂದರ ಎಂದುಕೊಂಡ ನಿಮ್ಮ ಎಲ್ಲ ಅನುಭವಗಳು ನಿಮ್ಮ ಸಧ್ಯಕ್ಕೆ ಬಣ್ಣ ತುಂಬುತ್ತಿವೆ.
ಹಿಂದಿನದನ್ನು ಯಾಕೆ ನೆನಪಿಸಿಕೊಳ್ಳಬೇಕು? ವರ್ತಮಾನ ವಿಶಾಲವಾದದ್ದು ಮತ್ತು ಭೂತಕಾಲ ಕಿರಿದಾದದ್ದು. ಯಾಕೆ ಗೋಡೆಯೊಳಗಿನ ರಂಧ್ರದ ಮೂಲಕ ಜಗತ್ತನ್ನ ನೋಡಬೇಕು, ನೀವು ಹೊರಗೆ ಬಂದು ಇಡೀ ಆಕಾಶವನ್ನೇ ನೇರವಾಗಿ ನೋಡುವುದು ಸಾಧ್ಯವಿರುವಾಗ.
ಹಾಗಾಗಿ ಸಾಧ್ಯವಾದಷ್ಟು ಪದಗಳ ಬಳಕೆಯನ್ನು ಕೈಬಿಡಿ, ಪದಗಳನ್ನು ಬಳಕೆ ಮಾಡಲೇ ಬೇಕಾಗಿ ಬಂದರೆ, ಅವುಗಳನ್ನು ಬಹಳ ಸೂಕ್ಷ್ಮವಾಗಿ ಆಯ್ಕೆ ಮಾಡಿ. ಏಕೆಂದರೆ ಪ್ರತಿಯೊಂದು ಪದಕ್ಕೂ ತನ್ನದೇ ಆದ ದನಿ ಇದೆ. ಈ ಎಲ್ಲವೂ ಕಾವ್ಯಾತ್ಮಕವಾಗಿರಲಿ.
ಸುಲ್ತಾನನ ಆಸ್ಥಾನದ ಮೂವರು ವಿದ್ವಾಂಸರು ನಸ್ರುದ್ದೀನ್ ಧರ್ಮದ್ರೋಹಿ ಎಂದು ಆರೋಪಿಸಿದ್ದರಿಂದ ಅವನನ್ನು ಸುಲ್ತಾನನ ಎದುರು ವಿಚಾರಣೆಗಾಗಿ ಕರೆಸಲಾಗಿತ್ತು.
ತನ್ನ ಪರವಾಗಿ ತಾನೇ ವಾದ ಮಾಡುತ್ತ ನಸ್ರುದ್ದೀನ್ ಆ ಮೂವರು ವಿದ್ವಾಂಸರಿಗೆ ಒಂದು ಪ್ರಶ್ನೆ ಕೇಳಿದ.
“ ರೊಟ್ಟಿ ಎಂದರೇನು “
“ ರೊಟ್ಟಿ ಆಹಾರ“ ಮೊದಲ ವಿದ್ವಾಂಸ ಉತ್ತರಿಸಿದ.
“ ರೂಟ್ಟಿ, ಹಿಟ್ಟಿನಲ್ಲಿ ನೀರು ಸೇರಿಸಿ ತಟ್ಟಿ ಒಲೆಯ ಮೇಲಿನ ಬೆಂಕಿಯಲ್ಲಿ ಕಾಯಿಸಿದ ವಸ್ತು. “
ಎರಡನೇ ವಿದ್ವಾಂಸ ಉತ್ತರಿಸಿದ.
“ ರೊಟ್ಟಿ, ಭಗವಂತನ ಪ್ರಸಾದ “ ಮೂರನೇ ವಿದ್ವಾಂಸನ ಉತ್ತರ.
“ ನೋಡಿ ಸುಲ್ತಾನರೇ, ನಾವು ದಿನಾ ತಿನ್ನುವ ಸಾಮಾನ್ಯ ರೊಟ್ಟಿಯ ಬಗ್ಗೆ ಈ ಮೂವರು ವಿದ್ವಾಂಸರಲ್ಲಿ ಮೂರು ಅಭಿಪ್ರಾಯಗಳಿವೆ ಆದರೆ ನನ್ನನ್ನು ಧರ್ಮದ್ರೋಹಿ ಎಂದು ಒಮ್ಮತದಿಂದ ಈ ಮೂವರೂ ತೀರ್ಮಾನಿಸಿದ್ದಾರೆ, ಇಂಥವರನ್ನು ನೀವು ನಂಬುತ್ತೀರಾ? “
ನಸ್ರುದ್ದೀನ್, ತನ್ನ ವಾದ ಮುಗಿಸಿದ.

