ವಚನಗಳಲ್ಲಿ ಅಪರೂಪವಾಗಿರುವ ಅನುಭವವೆಂದರೆ ಇಷ್ಟದೈವದೊಡನೆ ಒಂದಾದ ಸ್ಥಿತಿಯ ವರ್ಣನೆ. ಅಕ್ಕನಲ್ಲಿ ಮಾತ್ರ ಈ ಅನುಭವಕ್ಕೆ ಮಾತು ಕೊಡುವ ಪ್ರಯತ್ನ ಕಾಣುತ್ತದೆ…~ ಓ.ಎಲ್.ನಾಗಭೂಷಣ ಸ್ವಾಮಿ। । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6, ಲಜ್ಜೆಯಳಿದು-ನಾನು ನೀನಾಗಿ
ಲೋಕವ ಹಿಡಿದು ಲೋಕದ ಸಂಗದಂತಿಪ್ಪೆ
ಆಕಾರವಿಡಿದು ಸಾಕಾರಸಹಿತ ನಡೆವೆ
ಹೊರಗೆ ಬಳಸಿ ಒಳಗೆ ಮರೆದಿಪ್ಪೆ
ಬೆಂದನುಲಿಯಂತೆ ಹುರಿಗುಂದದಿಪ್ಪೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಾ
ಹತ್ತರೊಳಗೆ ಹನ್ನೊಂದಾಗಿ
ನೀರತಾವರೆಯಂತಿಪ್ಪೆ [೩೬೨]
[ಬೆಂದ ನುಲಿ=ಸುಟ್ಟು ಹೋದ ಹಗ್ಗ]
ಲೋಕವನ್ನು ಹಿಡಿದು ಲೋಕದ ಸಂಗದಲ್ಲಿ ಹೇಗಿರಬೇಕೋ ಹಾಗಿರುವೆ. ಆಕಾರವನ್ನು ಹಿಡಿದು ಆಕಾರದೊಡನೆ ನಡೆದಾಡುವೆ. ಹೊರಗೆ ನಾನು ನಾನಾಗಿ ಇರುವ ಹಾಗೆ ಕಂಡರೂ ನನ್ನೊಳಗೆ ಏನೂ ಇಲ್ಲವಾಗಿದೆ. ನಾನು ಸುಟ್ಟ ಹಗ್ಗದ ಹಾಗೆ ಆಕಾರವನ್ನು ಉಳಿಸಿಕೊಂಡಿರುವೆ. ಮುಟ್ಟಿದರೆ ಹಗ್ಗದ ಆಕಾರ ಇರುವುದೇ ಇಲ್ಲ, ಬರೀ ಬೂದಿಯ ರಾಶಿ. ನೀರಿನಲ್ಲಿರುವ ತಾವರೆಯ ಹಾಗಿದ್ದೇನೆ.
ಭಾಷೆಯನ್ನು ಬಳಸಿ ಹೇಳುವಾಗ ವ್ಯತ್ಯಾಸಗಳು ಅನಿವಾರ್ಯ. ಒಳಗೆ, ಹೊರಗೆ, ಆಕಾರ, ನಿರಾಕಾರ ಇವೆಲ್ಲ ಬೇರೆ ಬೇರೆ ಅಂತಲೇ ವ್ಯವಹರಿಸಬೇಕು. ನಾನು ಹಾಗೆ ಲೋಕದ ಕಣ್ಣಿಗೆ ಹೆಣ್ಣಾಗಿ ಕಂಡರೂ ಹೆಣ್ಣಲ್ಲ. ಹಗ್ಗದ ಹಾಗೆ ಕಂಡರೂ ಹಗ್ಗವಲ್ಲ, ಬರಿಯ ಬೂದಿ. ತಾವರೆಯು ನೀರಿನಲ್ಲಿದ್ದರೂ ಅದಕ್ಕೆ ಸಂಬಂಧಪಟ್ಟದ್ದು ಅಲ್ಲವೇ ಅಲ್ಲ ಅನ್ನುವ ಹಾಗಿರುತ್ತದೆ. ನಾನು ಕಂಡರೂ ನಾನತ್ವ ಇಲ್ಲ ಎಂದು ಈ ವಚನ ಹೇಳುತ್ತಿರುವಂತೆ ತೋರುತ್ತದೆ.
ನಮ್ಮ ಬದುಕಿನ ಅವಧಿಯಲ್ಲಿ ನಮ್ಮ ಸಹಸ್ರಾರು ಬಿಂಬಗಳು ಬೇರೆ ಮನಸುಗಳಲ್ಲಿ ಮೂಡಿ ಉಳಿದುಕೊಂಡಿರುತ್ತವೆ. ಅವೆಲ್ಲ ಬಿಂಬಗಳೇ ಹೊರತು ನಮ್ಮ ನಿಜವಲ್ಲ. ಹಾಗೆ ನಮ್ಮ ಬಗ್ಗೆ ನಾವು ತಿಳಿದಿರುವುದು ಕೂಡ ಕಲ್ಪಿತ ಬಿಂಬವೇ ಇದ್ದೀತು. ನೀವು ನನ್ನ ಬಗ್ಗೆ ಏನಂದುಕೊಂಡಿದ್ದೀರೋ ಅದು ನಾನಲ್ಲ, ನಿಮಗೆ ಕಂಡದ್ದು ನಿಮ್ಮ ನಿಜ. ನಾನಿರುವುದು ಹೀಗೆ ಅಂದುಕಕೊಂಡಿದ್ದೇನೆ ಲೋಕದವಳಂತೆ, ಹತ್ತು ಜನ ಇರುವಂತೆ ನಾನೂ ಇದ್ದೇನೆ ಎಂದು ಕಂಡರೂ ನಾನು ಅದಲ್ಲ ಎಂದು ಈ ವಚನ ಹೇಳುತ್ತಿರುವ ಹಾಗೆ ಅನಿಸುತ್ತದೆ.

