ನಾನಿಲ್ಲ ನೀನೇ: ಅಕ್ಕ ಮಹಾದೇವಿ #66

ಈ ವಚನದ ಪ್ರತಿ ಕ್ರಿಯಾಪದವು ʻಆಗಲಿʼ ಎಂಬ ಹಾರೈಕೆಯೊಡನೆ ಬೆರೆತಿರುವುದನ್ನು ಗಮನಿಸಬಹುದು... ~ ಓ.ಎಲ್.ನಾಗಭೂಷಣ ಸ್ವಾಮಿ। ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ನಚ್ಚುಗೆ ಮನ ನಿಮ್ಮಲ್ಲಿ 
ಮಚ್ಚುಗೆ ಮನ ನಿಮ್ಮಲ್ಲಿ
ಸಲುಗುಗೆ ಮನ ನಿಮ್ಮಲ್ಲಿ
ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ
ಬಳಲುಗೆ ಮನ ನಿಮ್ಮಲ್ಲಿ
ಕರಗುಗೆ ಮನ ನಿಮ್ಮಲ್ಲಿ
ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪಂಚೇಂದ್ರಿಯಂಗಳು ಕಬ್ಬುನ ಉಂಡ ನೀರಿನಂತೆ
ನಿಮ್ಮಲ್ಲಿ ಬೆರಸುಗೆ ಚೆನ್ನಮಲ್ಲಿಕಾರ್ಜುನಯ್ಯಾ [೨೪೭]

[ʻಗೆʼ ಎಂಬುದು ನಮ್ಮ ಕಾಲದ ಕನ್ನಡದ ʻಲಿʼ ಎಂಬಂತೆ ಅರ್ಥವನ್ನು ಕೊಡುತ್ತದೆ. ನಚ್ಚಲಿ,ಮೆಚ್ಚಲಿ, ಸಲಹಲಿ, ಸೋಲಲಿ, ಅಳಲಿ, ಬಳಲಿ, ಕರಗಲಿ, ಕೊರಗಲಿ, ಬೆರೆಸಲಿ ಎಂಬ ಕ್ರಿಯಾಪದಗಳ ಸರಣಿ ಇಲ್ಲಿದೆ.]

ನನ್ನ ಮನಸ್ಸು ನಿಮ್ಮನ್ನು ನಂಬಲಿ, ನಿಮ್ಮನ್ನು ಮೆಚ್ಚಲಿ, ನಿಮ್ಮಲ್ಲಿ ಬೆಳೆಯಲಿ, ನಿಮ್ಮಲ್ಲಿ ಸೋಲಲಿ, ನಿಮ್ಮಲ್ಲಿ ದುಃಖಪಡಲಿ, ನಿಮ್ಮಲ್ಲಿ ಬಳಲಿ, ನಿಮ್ಮಲ್ಲಿ ಕರಗಲಿ, ನಿಮ್ಮಲ್ಲಿ ಕೊರಗಲಿ, ಬಿಸಿಯಾದ ಕಬ್ಬಿಣ ಉಂಡ ನೀರು ಇಲ್ಲವಾಗಿ ಅಡಗಿ ಹೋಗುವ ಹಾಗೆ ನನ್ನ ಎಲ್ಲ ಇಂದ್ರಿಯಗಳು ನಿಮ್ಮೊಳಗೆ ಬೆರೆತು ಒಂದಾಗಬೇಕು ಚೆನ್ನಮಲ್ಲಿಕಾರ್ಜುನಾ.

ಈ ವಚನದ ಪ್ರತಿ ಸಾಲೂ ಕ್ರಿಯಾಪದದಿಂದ ಆರಂಭವಾಗಿದೆ. ನಾನು ಮಾಡುವ ಕ್ರಿಯೆಗಳಿಂದಷ್ಟೇ ನಾನಿರುವುದು ಸಾಬೀತಾಗುತ್ತದೆ. ನಾನು ಮಾಡುವ ಕ್ರಿಯೆಗಳೆಲ್ಲ ನಿಮ್ಮಲ್ಲೇ ಅಡಗಿ ಹೋಗಲಿ. ತಣ್ಣನೆಯ ನೀರಿಗೆ ಬಿಸಿಯಾದ ಕಬ್ಬಿಣವನ್ನು ಅದ್ದಿದರೆ ಕಬ್ಬಿಣ ನೀರನ್ನು ಕುಡಿದು ಹಾಕುತ್ತದೆ, ನೀರು ಇರುವುದೇ ಇಲ್ಲ. ಉರಿ ಉಂಡ ಕರ್ಪುರ, ಕಡಲಲ್ಲಿ ಮುಳುಗಿದ ಉಪ್ಪಿನ ಬೊಂಬೆ ಇಂಥ ರೂಪಕಗಳ ಸಾಲಿಗೇ ಸೇರುವ ಇನ್ನೊಂದು ರೂಪಕವನ್ನು ಈ ವಚನ ಬಳಸುತ್ತ ನಾನು ಇರದೆ ನೀನು ಮಾತ್ರ ಇರುವಂತಾಗಲಿ ಎಂದು ಕೋರುತ್ತಿದೆ. 

ಈ ವಚನದ ಪ್ರತಿ ಕ್ರಿಯಾಪದವು ʻಆಗಲಿʼ ಎಂಬ ಹಾರೈಕೆಯೊಡನೆ ಬೆರೆತಿರುವುದನ್ನು ಗಮನಿಸಬಹುದು. ನಾನಿನ್ನೂ ನಿನ್ನೊಡನೆ ಕೂಡಿಲ್ಲ, ಕೂಡಿದರೆ ಹೀಗೆ ಕೂಡುವಂತಾಗಲಿ, ನಾನು ಅನ್ನುವುದೇ ಇಲ್ಲವಾಗಲಿ, ನನ್ನ ಭಾವಗಳೂ ನಿಮ್ಮವೇ ಆಗಲಿ ಅನ್ನುವ ಹಾರೈಕೆಯ ತೀವ್ರತೆ ಇಲ್ಲಿದೆ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.