ನಿನಗೇ ಇಂಬು ಮಾಡಿದ್ದು : ಅಕ್ಕ ಮಹಾದೇವಿ #67

ಈ ವಚನವನ್ನು ತಾನೊಲ್ಲದ ಗಂಡಿನ ಪಾಲಾಗಬೇಕಾಗಿ ಬಂದಾಗ ಮನಸು ನುಡಿದಿರಬಹುದು... ~ ಓ.ಎಲ್.ನಾಗಭೂಷಣ ಸ್ವಾಮಿ। । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ಎನ್ನ ತುಂಬಿದ ಜವ್ವನ
ತುಳುಕುವ ಮೋಹನವ
ನಿನಗೆ ಇಂಬು ಮಾಡಿಕೊಂಡಿರ್ದೆನಲ್ಲಾ ಎಲೆಯಯ್ಯಾ
ಎನ್ನ ಲಂಬಿಸುವ ಲಾವಣ್ಯದ ರೂಪುರೇಖೆಗಳ
ನಿನ್ನ ಕಣ್ಣಿಂಗೆ ಕೈವಿಡಿದಂತೆ ಮಾಡಿರ್ದೆನಲ್ಲಯ್ಯ.
ನಿನ್ನ ಮುಂದಿರಟ್ಟಲನ್ಯರು ಕೊಂಡೊಯಿವಾಗಲೆಂತು ಸೈರಿಸಿದೆ ಹೇಳಾ
ಚೆನ್ನಮಲ್ಲಿಕಾರ್ಜುನಾ [೯೭]

[ಜವ್ವನ=ಯೌವನ; ಮೋಹನ=ಮೋಹ; ಲಾವಣ್ಯ=ಚೆಲುವು, ಲವಣದ ಭಾವ ಲಾವಣ್ಯ; ಮುಂದಿಟ್ಟಿರಲನ್ಯರು-ಮುಂದಿಟ್ಟಿರಲು ಅನ್ಯರು]

ನನ್ನ ತುಂಬು ಯೌವನ, ನನ್ನೊಳಗೆ ತುಳುಕುವ ಮೋಹ, ನನ್ನ ಲಾವಣ್ಯದ ರುಚಿಯ ರೂಪುರೇಖೆ ಎಲ್ಲವನ್ನೂ ನಿನ್ನ ನೋಟದ ಕೈಗೆ ಸಿಗಲಿ ಎಂದು ಇರಿಸಿದ್ದೆ. ಅದನ್ನು ಬೇರೆಯವರು ಒಯ್ಯುವಾಗ ಹೇಗೆ ಸಹಿಸಿದೆ ನೀನು

ಈ ವಚನ ನುಡಿಯುತ್ತಿರುವ ವ್ಯಕ್ತಿ ತನ್ನ ಚೆಲುವಿನ ವಿವರಗಳನ್ನು ನೋಟ, ಸ್ಪರ್ಶ, ರುಚಿಯ ಅನುಭವಗಳೊಡನೆ ಮೇಳೈಸಿ ನುಡಿಯುತ್ತಿರುವುದನ್ನು ಗಮನಿಸಬಹುದು. ಚೆಲುವನ್ನೆಲ್ಲ ಚನ್ನಮಲ್ಲನ ಕೈಗೆ ಎಟುಕುವ ಹಾಗೆ ಇರಿಸಿದ್ದೆ, ಅದನ್ನು ಬೇರೆಯವರು ಕೊಂಡು ಒಯ್ಯುತ್ತಿದ್ದಾರೆ, ನೀನು ಹೇಗೆ ಸಹಿಸಿಕೊಂಡಿದ್ದೀಯೆ ಎಂಬ ಪ್ರಶ್ನೆ ಇಲ್ಲಿದೆ.

ಈ ವಚನವನ್ನು ತಾನೊಲ್ಲದ ಗಂಡಿನ ಪಾಲಾಗಬೇಕಾಗಿ ಬಂದಾಗ ಮನಸು ನುಡಿದಿರಬಹುದು. ಅಕ್ಕನನ್ನು ಕುರಿತ ಒಂದು ಕಥನದಲ್ಲಿ ಆಕೆ ಇಷ್ಟವಿಲ್ಲದಿದ್ದರೂ ಕೌಶಿಕನೊಡನೆ ಮದುವೆಗೆ ಒಪ್ಪುವ ಪ್ರಸಂಗ ಬರುತ್ತದೆ. ಆ ಸಂದರ್ಭದಲ್ಲಿ ಅಕ್ಕ ಹೇಳಿರಬಹುದಾದ ವಚನ ಎಂಬ ವ್ಯಾಖ್ಯಾನಗಳೂ ಇವೆ.
ಆದರೂ ಎದೆಯಲ್ಲಿ ಕಬ್ಬಿಣದ ಮುಳ್ಳಿರುವ ಲೋಕದ ಗಂಡರನ್ನು ಒಲ್ಲೆ, ತನ್ನದೆಂದು ಏನಿದೆಯೋ ಅದೆಲ್ಲ ಚೆನ್ನಮಲ್ಲಿಕಾರ್ಜುನನಿಗೆ ಒಪ್ಪಿತ ಎಂದು ಒಪ್ಪಿಸಿಕೊಳ್ಳುವ ದನಿ ಮುಂದಿನ ವಚನಗಳಿಗೆ ಮುನ್ನುಡಿಯೂ ಆಗಬಲ್ಲುದು.

ವಚನಗಳಲ್ಲಿ ಐಕ್ಯಸ್ಥಳ ಎಂದು ಹೇಳುವ ಗುಂಪಿನ ವಚನಗಳು ಹೆಚ್ಚಾಗಿಲ್ಲ. ಕನ್ನಡದ ಉಳಿದ ವಚನಕಾರರಂತಲ್ಲದೆ ಅಕ್ಕಮಹಾದೇವಿ ಮಾತ್ರ ತಾನು ಇಷ್ಟದೈವದೊಡನೆ ಒಂದಾದ ಬಗೆಯನ್ನು ರೂಪಕಗಳ ಮೂಲಕ ಚಿತ್ರಿಸುವುದನ್ನು ಮುಂದೆ ನೋಡೋಣ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.