ಹಿಲ್ಸಾ : ಗುಲ್ಜಾರ್ ಬರೆದ ಕತೆ

ಅಡುಗೆಗೆ ತಯಾರಾಗಬೇಕಿದ್ದ ಹಿಲ್ಸಾ ಮೀನು ಇನ್ನೂ ತಪ್ಪಲೆಯ ತಳದಲ್ಲೇ ಬಿದ್ದುಕೊಂಡಿತ್ತು. ತುಸುವೇ ತೆರೆದುಕೊಂಡಿದ್ದ ಅದರ ಬಾಯಿ ಏನನ್ನೋ ಹೇಳಲು ಹವಣಿಸುತ್ತಿರುವಂತಿತ್ತು. ಅಗಾಲ ತೆರೆದುಕೊಂಡಿದ್ದ ಅದರ ಕಣ್ಣುಗಳನ್ನೆ ದಿಟ್ಟಿಸಿದ. ಎಷ್ಟು ಸುಂದರವಾಗಿವೆ ಅನಿಸಿತು. ಅದರ ಕಣ್ಣುಗಳಲ್ಲೇನೋ ಸೆಳೆತವಿತ್ತು… । ಹಿಂದಿ ಮೂಲ: ಗುಲ್ಜಾರ್; ಕನ್ನಡಕ್ಕೆ: ಚೇತನಾ ತೀರ್ಥಹಳ್ಳಿ

ತನ್ನ ಧೋತರದ ನೆರಿಗೆಗಳನ್ನು ತೀಡಿಕೊಳ್ಳುತ್ತ ಮನೆಯೆಲ್ಲ ಓಡಾಡಿದ ವಿಭೂತಿ, ಕೊನೆಗೆ ಅಡುಗೆ ಮನೆಯ ಬಾಗಿಲಿಗೆ ಬಂದು ನಿಂತ. “ನ್ಯೂಸ್ ಪೇಪರ್ ಇನ್ನೂ ಬಂದಿಲ್ವೇನು? ಬಹುಶಃ ಬಾಗ್‌ಬಜಾರ್ ರೋಡೂ ಬ್ಲಾಕ್ ಮಾಡಿದಾರೆ ಅನ್ಸುತ್ತೆ” ಚಡಪಡಿಸುತ್ತ ಕೇಳಿದ.

ಅದೇನಿದ್ದರೂ ಆ ಕ್ಷಣಕ್ಕಷ್ಟೇ. ತದೇಕಚಿತ್ತಳಾಗಿ ಮೀನು ತೊಳೆಯುತ್ತಿದ್ದ ಕಾಂಚನಳ ಸೌಂದರ್ಯದಲ್ಲಿ ಅವನ ಅಸಹನೆಯೆಲ್ಲ ಕರಗಿಹೋಯ್ತು. “ಇದರ ಕಣ್ಣು ಎಷ್ಟು ಸೊಗಸಾಗಿದೆ ನೋಡು. ಒಳ್ಳೆ ಮತ್ಸ್ಯಕನ್ನೆ ಹಾಗಿದೆ” ಅನ್ನುತ್ತ ಒಂದು ತಪ್ಪಲೆಯಲ್ಲಿ ನೀರು ತುಂಬಿ ಅದರಲ್ಲಿ ಮೀನನ್ನು ಅದ್ದಿ ತೊಳೆಯತೊಡಗಿದಳು ಕಾಂಚನಾ.

ವಿಭೂತಿಯ ತುಟಿಯಂಚಲ್ಲಿ ತುಂಟತನದ ಎಳೆಯೊಂದು ಸುಳಿದುಹೋಯ್ತು. “ನಿನ್ನನ್ನ ನೋಡ್ತಾ ಇದ್ರೆ ರಾಮು ನಿನಗೋಸ್ಕರ ಡಿಸೆಂಬರ್‌ನಲ್ಲಿ ಮಾವಿನಕಾಯಿ ಹುಡುಕ್ಕೊಂಡು ಅಲೀಬೇಕಾಗುತ್ತೆ ಅನ್ಸುತ್ತೆ” ಅಂದ.

“ಏನು ಹಾಗಂದ್ರೆ?”

“ಇದು ಬೇಸಿಗೆ ತಾನೆ? ಈ ಕಾಲದಲ್ಲಿ ನೀನು ಮೀನು ತಿನ್ನೋ ಹಾಗಿಲ್ಲ. R ಅಕ್ಷರ ಇಲ್ಲದಿರೋ ತಿಂಗಳಲ್ಲಿ ಮೀನು ತಿನ್ನೋ ಹಾಗಿಲ್ಲ.”

ಕಾಂಚನಾಳ ಹುಬ್ಬು ಪ್ರಶ್ನಾರ್ಥಕವಾಗಿ ಮೇಲೆದ್ದಿತು.

“ಈಗ, ಮೇ, ಜೂ, ಜುಲೈ. ಆಗಸ್ಟ್… ಈ ಯಾವ ತಿಂಗಳಲ್ಲೂ R ಇಲ್ಲ. ಸೆಪ್ಟೆಂಬರ್‌ನಿಂದ ಏಪ್ರಿಲ್‌ ತನಕ ಎಲ್ಲ ತಿಂಗಳಲ್ಲೂ R ಇದೆ”

ಕಾಂಚನಾ ಮನಸಿನಲ್ಲೆ ಎಲ್ಲ ತಿಂಗಳ ಹೆಸರನ್ನೂ ಹೇಳಿಕೊಂಡಳು. ಗಂಡ ಹೇಳ್ತಿರೋದು ಸರಿ ಇದೆ ಅನಿಸಿತು. “ಆದೇನೋ ಸರಿ. ಆದ್ರೆ, ಈ ತಿಂಗಳಲ್ಲಿ ಮೀನು ಯಾಕೆ ತಿನ್ನೋಹಾಗಿಲ್ಲ?” ಮತ್ತೂ ಕೇಳಿದಳು.

ಟಿಪಿಕಲ್ ಬಂಗಾಳಿ ಗಂಡನ ಹಾಗೆ ವಿಭೂತಿ ನಶ್ಯದ ಚಿಟಿಕೆ ಮೂಗಿಗೇರಿಸುತ್ತ, ಮತ್ತೊಮ್ಮೆ ತನ್ನ ಧೋತರದ ನೆರಿಗೆ ತೀಡಿಕೊಂಡು ಅಡುಗೆ ಕಟ್ಟೆಯ ಮೇಲೆ ಜಿಗಿದು ಕುಳಿತ. “ಆ ಎಲ್ಲ ತಿಂಗಳಲ್ಲಿ ಮೀನುಗಳು ಗರ್ಭ ಧರಿಸ್ತವೆ. ಮೊಟ್ಟೆ ಇಡ್ತವೆ. ಹೇಗೆ ಹೆಂಡ್ತಿ ಬಸಿರಾದಾಗ ಗಂಡ…”

“ಥೂ!” ನಾಚುತ್ತಾ ಕಾಂಚನ ಮಾತು ತುಂಡರಿಸಿದಳು. “ಇಷ್ಟು ವಯಸಾದ್ರೂ ನಿನ್ನ ಹುಡುಗಾಟ ಬಿಡೋದಿಲ್ವಲ್ಲ! ಹೋಗು ಹೋಗು, ಮೊದ್ಲು ಹೊರಡು ಇಲ್ಲಿಂದ” ಅನ್ನುತ್ತಾ ಹೆಚ್ಚೂಕಮ್ಮಿ ಅವನನ್ನು ಅಡುಗೆಮನೆಯಿಂದ ಹೊರಗೆ ತಳ್ಳಿಯೇಬಿಟ್ಟಳು.

ವಿಭೂತಿ ನಗುತ್ತಾ ವರಾಂಡಾಕ್ಕೆ ಬಂದು ಟಿವಿ ಬಟನ್ ಅದುಮತೊಡಗಿದ. ವಾರ್ತೆಯಲ್ಲಿ ದಂಗೆಯ ಸಮಾಚಾರ ಬಿತ್ತರವಾಗುತ್ತಿತ್ತು. ದಂಗೆಕೋರರ ಹಾವಳಿ ನಿಯಂತ್ರಣ ಮೀರಿತ್ತು. ಮಾರುಕಟ್ಟೆ ಪೂರ್ತಿ ಬಂದ್ ಮಾಡಲಾಗಿತ್ತು. ಸ್ಥಳೀಯ ಆಡಳಿತ ಊರಿನ ಪ್ರಮುಖ ಏರಿಯಾಗಳಲ್ಲಿ ಕರ್ಫ್ಯೂ ಹೇರಿತ್ತು.

“ಬಹುಶಃ ಇದಕ್ಕೇ ಇವತ್ತು ಮಾರ್ಕೆಟ್ಟಿಗೆ ಫ್ರೆಶ್ ಮೀನು ಬಂದಿಲ್ಲ ಅನಿಸುತ್ತೆ. ಈ ರಾಮು ಇಲ್ಲೇ ಎಲ್ಲೋ ಘಾಟ್‌ನಿಂದ ಅಗ್ಗದ ಹಿಲ್ಸಾ ಮೀನು ಕೊಂಡು ತಂದಿದಾನೆ” ವಿಭೂತಿ ತನ್ನಷ್ಟಕ್ಕೆ ಗೊಣಗಿಕೊಳ್ತಾ ಮತ್ತೆ ಅಡುಗೆಮನೆಯತ್ತ ನಡೆದ. ಅಲ್ಲಿ ಕಾಂಚನಾ ಇರಲಿಲ್ಲ. ಅಲ್ಲೇ ಹಿತ್ತಲ ಕಡೆಯಿಂದ ನೀರು ಸುರಿಯುವ ಸದ್ದು ಕೇಳಿಸುತ್ತಿತ್ತು. ಸ್ನಾನಕ್ಕೆ ಹೋಗಿರ್ಬೇಕು ಅಂದುಕೊಳ್ತಾ ಅತ್ತ ನಡೆದ. ಹ್ಯಾಂಡ್ ಪಂಪಿನ ಸುತ್ತ ಹಗ್ಗದ ಮೇಲೆ ಸೀರೆ ಹರಡಿ ಖಾಸಗಿ ಜಾಗ ಸೃಷ್ಟಿಸಿಕೊಂಡು ಕಾಂಚನಾ ಸ್ನಾನ ಮಾಡ್ತಿದ್ದಳು.

“ಏನೇ ಕೇಳಿಸ್ತಾ?”

“ಏನಾಯ್ತು?” ನೀರು ಸುರಿದುಕೊಳ್ತಲೇ ಉತ್ತರಿಸಿದಳು.

“ನಮ್ಮ ರಾಮು… ನಿಂಗೊತ್ತಾ? ಅವ್ನು ಬೆಳಗಾಗೆದ್ದು ಘಾಟ್ ಹತ್ರ ಹೋಗಿದ್ದ ಅನ್ಸತ್ತೆ” ವಿಭೂತಿ ಸನ್ನಿವೇಶಕ್ಕಷ್ಟು ಬಣ್ಣ ಕಟ್ಟುತ್ತ ಹೇಳಿದ.

“ಥೂ!” ಕಾಂಚನಾ ನೀರೆರಚುತ್ತಾ ಗದರಿದಳು. ಹೋಗು ಇಲ್ಲಿಂದ! ಚೂರೂ ನಾಚ್ಕೆ ಇಲ್ಲ… ಸದ್ಯ, ನಿಂಗೆ ವಾರದಲ್ಲಿ ಆರು ದಿನ ಆಫೀಸ್ ಇರೋದು ನನ್ ಪುಣ್ಯ!”

ವಿಭೂತಿ ನಗುತ್ತಾ ಹರವಿದ ಸೀರೆಯಿಂದ ತನ್ನ ಮುಖ ಒರೆಸಿಕೊಂಡ. “ನಾನೇನು ಮಾಡ್ಲಿ? ನ್ಯೂಸ್ ಪೇಪರ್ ಬೇರೆ ಬಂದಿಲ್ಲ. ಸುಮ್ನೆ ಕೂತ್ಕೊಂಡು ಏನ್ ಮಾಡ್ಲಿ? ಮೀನಿಗೆ ಮಸಾಲೆ ಹಚ್ಚಿಡ್ಲಾ?”

“ಏನೂ ಬೇಕಾಗಿಲ್ಲ! ನನ್ ಅಡುಗೆ ಮನೆಗೆ ಕಾಲಿಡಕೂಡ್ದು ನೀನು!”

ಪಾಪ ವಿಭೂತಿ. ಹೊತ್ತೇ ಹೋಗದೆ ಮನೆ ತುಂಬಾ ಅಡ್ಡಾಡುತ್ತ ಕಾಲ ತಳ್ಳತೊಡಗಿದ. ಟೀವಿಯಲ್ಲೂ ಅಂಥದ್ದೇನೂ ಬರುತ್ತಾ ಇರಲಿಲ್ಲ. ಚಿತ್ರಗೀತೆ, ಆಮೇಲೆ ವಾರ್ತೆಗಳು, ಮತ್ತೊಮ್ಮೆ ಚಿತ್ರಗೀತೆ. ಕಪ್ಪು ಬಿಳುಪಿನ ಟೀವಿಯಲ್ಲಿ ಚಿತ್ರಗೀತೆ ನೋಡುವುದು ಅವನಿಗೆ ಅಷ್ಟು ಖುಷಿ ಕೊಡುತ್ತಿರಲಿಲ್ಲ. ಬಣ್ಣದ ಟೀವಿಗಳೇ ಎಲ್ಲ ಕಡೆ ತುಂಬಿಕೊಳ್ತಿದ್ದ ಕಾಲದಲ್ಲಿ ಕಪ್ಪು ಬಿಳುಪಿನ ಟೀವಿ! ಬಟ್ಟೆಗೂ ಮೈಬಣ್ಣಕ್ಕೂ ವ್ಯತ್ಯಾಸವೇ ಇಲ್ಲದಂತೆ ತೋರುವ ಬೂದುಬಣ್ಣದ ಶೇಡ್‌ಗಳನ್ನು ಎಷ್ಟು ಅಂತ ನೋಡೋದು? ನಾಯಕಿಯ ಬ್ಲೌಸ್ ಎಲ್ಲಿ ಕೊನೆಯಾಗುತ್ತೆ, ಚರ್ಮ ಎಲ್ಲಿಂದ ಶುರುವಾಗುತ್ತೆ ಅಂತ ಗೊತ್ತಾಗೋದಾದ್ರೂ ಹೇಗೆ?

ಮನೆಯ ಯಾವುದೋ ಮೂಲೆಯಿಂದ ರಾಮುವಿನ ಧ್ವನಿ ಕೇಳಿಬರತೊಡಗಿತು. ಅವನು ಯಾವಾಗ ಮನೆಯಲ್ಲಿರ್ತಾನೋ, ಯಾವಾಗ ಹೋಗ್ತಾನೋ ದೇವರಿಗೇ ಗೊತ್ತು. ಅವನು ಆ ಕಾಲೊನಿಯ ಎಲ್ಲ ಮನೆಗಳಿಗೂ ಕೆಲಸ ಮಾಡಿಕೊಡ್ತಿದ್ದ ಅನಿಸುತ್ತೆ. ಈ ಹೊತ್ತು ಹಿತ್ತಿಲಲ್ಲಿ ನಿಂತು “ಬಹೂಮಾ, ಮೀನಿಗೆ ಮಸಾಲೆ ಹಚ್ಚಿಡ್ಲೇನು?” ಅಂತ ಕಾಂಚನಾಗೆ ಕೇಳಿಸುವಂತೆ ಕೂಗಿ ಮಾತಾಡ್ತಿದ್ದ.

“ತುಂತುನಿ ಮನೆ ಗ್ರೈಂಡರ್ ಇಂದ ಮಸಾಲೆ ಅರೆಸ್ಕೊಂಡು ಬಾ. ಅಷ್ಟೊತ್ತಿಗೆ ಬಾಕಿ ಕೆಲಸ ಮುಗಿಸಿರ್ತೀನಿ” ಕಾಂಚನಾ ಉತ್ತರಿಸಿದ್ದು ಕೇಳಿಸಿತು.

ತುಂತುನಿ ನೆರೆಮನೆಯ ಕೊನೆ ಮಗಳು. ರಾಮು ಹೆಜ್ಜೆ ಸಪ್ಪಳ ಮಾಡುತ್ತಾ ನಡೆದು ಹೋಗಿದ್ದು, ಗೇಟು ತೆರೆದಿದ್ದು, ಮುಚ್ಚಿದ್ದು ಎಲ್ಲವೂ ಕೇಳಿಸಿತು. ತನ್ನ ಹೆಂದತಿ ಸ್ನಾನ ಮಾಡ್ತಿರುವಾಗ ರಾಮು ಅವಳನ್ನ ಮಾತಾಡಿಸಿದ್ದು ವಿಭುತಿಗೆ ಇಷ್ಟವಾಗಲಿಲ್ಲ. ಬೋರು ಹೊಡೆಸುತ್ತಿದ್ದ ಟೀವಿ ಆಫ್ ಮಾಡಿ ಆರಾಮಕುರ್ಚಿಯಲ್ಲಿ ಒರಗಿ ಕುಳಿತ.

ಗಂಟೆ ಸದ್ದು ಕೇಳಿಸಿದಾಗ, ಕಾಂಚನಾ ಸ್ನಾನ ಮುಗಿಸಿ, ಮಡಿಯುಟ್ಟು ಪೂಜೆ ಮಾಡ್ತಿದ್ದಾಳೆ ಅನ್ನುವ ಸೂಚನೆ ಸಿಕ್ಕಿತು. ಅವಳು ಬೌಲ್ ಹಿಡ್ಕೊಂಡು ಬರ್ತಾಳೆ, ಅವನು ಕೈಯೊಡ್ತಾನೆ, ಹೋಗು ಕೈ ತೊಳೆದ್ಕೊಂಡು ಬಾ ಅಂತಾಳೆ. ಅವನು ತಲೆ ಎತ್ತಿ ಬಾಯಿ ಕಳೀತಾನೆ. ಅವಳು ಪ್ರಸಾದವನ್ನ ನೇರವಾಗಿ ಬಾಯಿಗೆ ಹಾಕ್ತಾಳೆ… ಇದು ಪ್ರತಿದಿನದ ರೂಢಿ.

ಇವತ್ತೂ ಹಾಗೇ ಆಗುವುದರಲ್ಲಿತ್ತು. ಕಾಂಚನಾ ಕೋಣೆಗೆ ಬಂದವಳೇ ಜೋರಾಗಿ, “ನೀನಿನ್ನೂ ಸ್ನಾನ ಮಾಡಿಲ್ವಾ?” ಅಂತ ಕೂಗಿದಳು.

“ಉಹು!” ಅವನು ತಲೆ ಆಡಿಸ್ತಾ ಬಾಯಿ ಕಳೆದ. ಕಾಂಚನಾ ಪ್ರಸಾದ ಹಾಕಲು ಬಾಗಿದಳು. ಇನ್ನೂ ಹನಿ ತೊಟ್ಟಿಕ್ಕುತ್ತಿದ್ದ ಒದ್ದೆಗೂದಲು ಅವನ ಮುಖ ಸವರಿತು. ಅದರೊಡನೆ ಆಡುತ್ತಾ ಅವಳ ಕೆನ್ನೆ ಚಿವುಟಿದ.

“ಥೂ! ಏನು ಗಂಡಸ್ರೋ… ಯಾವ್ದಕ್ಕೂ ಹೊತ್ತು ಗೊತ್ತು ಇಲ್ಲ ಇವ್ರಿಗೆ. ಈ ಹೊತ್ತಲ್ಲಿ…”

“ನೀನು ಇಷ್ಟು ಸುಂದರವಾಗಿ ಕಾಣಿಸ್ತಿರುವಾಗ ಮುಹೂರ್ತ ಕಾಯ್ತಾ ಕೂರೋಕಾಗುತ್ತಾ?”

“ಸುಳ್ಳ!” ಅಂದವಳೇ ಎದ್ದು ಓಡಿದಳು.

ಅವಳ ಮುಖ ಕೆಂಪಾಗಿದ್ದು ಎದ್ದು ತೋರುತ್ತಿತ್ತು. ಅವಳ ಧ್ವನಿ ನಾಚಿ ನಡುಗಿದ್ದು ಗೊತ್ತಾಗಿ ಮುಗುಳ್ನಕ್ಕ.

ಕಾಂಚನಾ ಹೋದ ಮೇಲೆ ವಿಭೂತಿ ಮತ್ತೆ ಖಾಲಿಯಾದ. ಮಾಡಲೇನೂ ಕೆಲಸವಿಲ್ಲದೆ ಕಿಟಕಿಗೆ ಆತುಕೊಂಡು ನೆರೆಹೊರೆಯ ವಿದ್ಯಮಾನಗಳನ್ನ ನೋಡುತ್ತ ನಿಂತ.

ಕೊಕ್ಕಿನಲ್ಲಿ ತುಣುಕು ಮಾಂಸ ಕಚ್ಚಿಕೊಂಡಿದ್ದ ಕಾಗೆಯೊಂದು ಹಾರಿಬಂದು ಅವನ ಮನೆಯನ್ನು ಪಕ್ಕದ ಮನೆಯಿಂದ ಬೇರ್ಪಡಿಸಿದ್ದ ಕಾಂಪೌಂಡಿನ ಮೇಲೆ ಕುಳಿತಿತು. ಮತ್ತೊಂದು ಕಾಗೆ ಹಾರಿ ಬಂದು ಅದೇ ಕಾಂಪೌಂಡಿನ ಮೇಲೆ ಸ್ವಲ್ಪ ದೂರದಲ್ಲಿ ಕುಳಿತಿತು. ಆಮೇಲೆ ಮೆಲ್ಲನೆ ಒಂದೊಂದೇ ಹೆಜ್ಜೆ ಇಡುತ್ತಾ, ಕತ್ತು ಕೊಂಕಿಸುತ್ತಾ, ಮಾಂಸ ಕಚ್ಚಿಕೊಂಡಿದ್ದ ಕಾಗೆಯ ಬಳಿ ಸಾಗಲಾರಂಭಿಸಿತು. ಅದನ್ನು ಗಮನಿಸುತ್ತಲೇ ಮಾಂಸ ಕಚ್ಚಿಕೊಂಡಿದ್ದ ಕಾಗೆ ರೆಕ್ಕೆ ಬೀಸಿ ಹಾರಿಹೋಯಿತು. ಮತ್ತೊಂದು ಕಾಗೆ ಅದನ್ನು ಹಿಂಬಾಲಿಸಿತು. ವಿಭೂತಿ ಕಿಟಕಿ ಬಿಟ್ಟು ಹೊರ ಬಂದ. ಅವನ ಕಾಲುಗಳು ತಂತಾನೆ ಅವನನ್ನು ಅಡುಗೆ ಮನೆಯ ಬಾಗಿಲಿಗೆ ತಂದು ನಿಲ್ಲಿಸಿದ್ದವು.

ಅಡುಗೆಗೆ ತಯಾರಾಗಬೇಕಿದ್ದ ಹಿಲ್ಸಾ ಮೀನು ಇನ್ನೂ ತಪ್ಪಲೆಯ ತಳದಲ್ಲೇ ಬಿದ್ದುಕೊಂಡಿತ್ತು. ತುಸುವೇ ತೆರೆದುಕೊಂಡಿದ್ದ ಅದರ ಬಾಯಿ ಏನನ್ನೋ ಹೇಳಲು ಹವಣಿಸುತ್ತಿರುವಂತಿತ್ತು. ಅಗಾಲ ತೆರೆದುಕೊಂಡಿದ್ದ ಅದರ ಕಣ್ಣುಗಳನ್ನೆ ದಿಟ್ಟಿಸಿದ. ಎಷ್ಟು ಸುಂದರವಾಗಿವೆ ಅನಿಸಿತು. ಅದರ ಕಣ್ಣುಗಳಲ್ಲೇನೋ ಸೆಳೆತವಿತ್ತು.

ಕಾಂಚನಾ ಮೀನು ಹೆಚ್ಚುವ ಚಾಕು ಹಿಡಿದು ಬಂದಳು. ಅದನ್ನು ಬೆರಳುಗಳ ಸಂದಿನಲ್ಲಿ ಸಿಕ್ಕಿಸಿಕೊಳ್ಳುತ್ತಾ ತಪ್ಪಲೆಯಿಂದ ಮೀನು ಹೊರತೆಗೆದಳು. ಬಟ್ಟೆಯಲ್ಲಿ ಒರೆಸಿ, ಸಳ್ಳನೆ ಚಾಕುವಿನುದ್ದ ತೂರಿಸಿ, ಅದನ್ನು ನೀಟಾಗಿ  ಮೂರು ಭಾಗ ಮಾಡಿದಳು. ಮೊದಲು ಅದರ ತಲೆಯ ಭಾಗವನ್ನು, ಆಮೇಲೆ ಅದರ ಬಾಲದ ತುದಿಯನ್ನು ಶುಚಿಗೊಳಿಸಿದಳು. ಆಮೇಲೆ ನಡುಭಾಗವನ್ನು ಸೀಳಿದಳು. ಬಾಣಲೆಯಲ್ಲಿದ್ದ ಮಸಾಲೆ ಕೊತಕೊತ ಕುದಿಯುತ್ತಿತ್ತು.

“ನೀನು ಹೇಳಿದ್ದು ಸರಿ, ಈ ಮೀನಿನ ಹೊಟ್ಟೇಲಿ ಮೊಟ್ಟೆ ಇದೆ. ಇಲ್ನೋಡು, ಹೇಗೆ ಡುಬ್ಬ ಆಗಿದೆ!”  

“ಅದೃಷ್ಟ ನಿಂದು” ಧೋತರದ ತುದಿಯಿಂದ ಕನ್ನಡಕ ಒರೆಸುತ್ತಾ ವಿಭೂತಿ ನಕ್ಕ. “ಅದನ್ನ ಸಪರೇಟಾಗಿ ಫ್ರೈ ಮಾಡು. ಹಿಲ್ಸಾದ ಮೊಟ್ಟೆ ರುಚಿ ಅದ್ಭುತವಾಗಿರುತ್ತೆ”

ಅದೇ ಹೊತ್ತಿಗೆ ಡೋರ್ ಬೆಲ್ ಕೇಳಿಸಿತು. ಜೊತೆಗೇ ಥೊಪ್ಪೆಂದು ನ್ಯೂಸ್ ಪೇಪರ್ ಬಂದು ಬಿದ್ದ ಸದ್ದು. ಪೇಪರಿನ  ಹುಡುಗ ಸೈಕಲ್ ತಳ್ಳುತ್ತಾ “ಬಾಬೂ ಪೇಪರ್!” ಅಂತ ಕೂಗಿದ.

ವಿಭೂತಿ ಹೊರಗೆ ಬಂದು ನ್ಯೂಸ್ ಪೇಪರ್ ಕೈಗೆತ್ತಿಕೊಂಡ. ಮೊದಲ ಪುಟದಲ್ಲಿ ದಪ್ಪನೆಯ ದೊಡ್ಡ ಅಕ್ಷರಗಳಲ್ಲಿ ದಂಗೆಯ ಶಿರೋನಾಮೆ ರಾಚುತ್ತಿತ್ತು, ಜೊತೆಗೆ ಕೆಲವರ ಫೋಟೋಗಳೂ. ಅದರಲ್ಲೊಂದು ಫೋಟೋ ಒಬ್ಬ ಯುವತಿಯದ್ದು, ಅದೂ ಗರ್ಭಿಣಿಯದ್ದು. ತುಂಬು ಗರ್ಭಿಣಿಯಾಗಿದ್ದ ಅವಳ ಮೇಲೆ ಗ್ಯಾಂಗ್ ರೇಪ್ ಎಸಗಲಾಗಿತ್ತು, ಅವಳು ರಕ್ತದ ಮಡುವಲ್ಲಿ ಸತ್ತು ಬಿದ್ದಿದ್ದಳು. ಫೋಟೋದಲ್ಲಿ ಅವಳ ಬಾಯಿ ತುಸುವೇ ತೆರೆದುಕೊಂಡಿತ್ತು, ಏನನ್ನೋ ಹೇಳಲು ಹವಣಿಸುತ್ತಿರುವಂತೆ. ಅವಳ ಕಣ್ಣುಗಳು ಅಗಾಲ ತೆರೆದುಕೊಂಡಿದ್ದವು.

ಅವಳ ಕಣ್ಣುಗಳು ಬಾಣಲೆಯಲ್ಲಿ ಬೇಯುತ್ತಿದ್ದ ಹಿಲ್ಸಾದ ಕಣ್ಣುಗಳಂತೆಯೇ ಇದ್ದವು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.