ದೇವರ ಮುಂದೆ ನಾಚಲು ಎಡೆಯುಂಟೆ : ಅಕ್ಕ ಮಹಾದೇವಿ #71

 ಎಲ್ಲೆಲ್ಲೂ ಅವನ ನೋಟವೇ ಇರುವಾಗ ನಾಚಿಕೆಯನ್ನು ಮುಚ್ಚಿ ಮರೆಮಾಡುವ ಜಾಗ ಯಾವುದಿದೆ? ದೇವರ ಮುಂದೆ ನಾಚಿಕೆಯೇಕೆ... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ನಾಣಮರೆಯ ನೂಲು ಸಡಿಲಲು
ನಾಚುವರು ನೋಡಾ ಗಂಡು ಹೆಣ್ಣೆಂಬ ಜಾತಿಗಳು.
ಪ್ರಾಣದೊಡೆಯ ಜಗದೊಳಗೆ ಮುಳುಗಲು ತೆರಹಿಲ್ಲದಿರಲು
ದೇವರ ಮುಂದೆ ನಾಚಲೆಡೆಯುಂಟೆ ?
ಚೆನ್ನಮಲ್ಲಿಕಾರ್ಜುನ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು ಮುಚ್ಚಿ ಮರಸುವ
ಠಾವಾವುದು ಹೇಳಯ್ಯಾ ? [೨೫೨]

[ನಾಣು=ನಾಚಿಕೆ; ತೆರಹಿಲ್ಲ=ತೆರಪು, ಖಾಲಿಜಾಗ, ಠಾವು=ಸ್ಥಳ]

ನಾಚಿಕೆಯ ಅಂಗವನ್ನು ಮರೆಮಾಡಿರುವ ನೂಲು ಸಡಿಲವಾದರೆ ಗಂಡಸರೂ ಹೆಂಗಸರೂ ನಾಚುತ್ತಾರೆ. ಚೆನ್ನಮಲ್ಲಿಕಾರ್ಜುನನೇ ಇಡೀ ಜಗತ್ತು ಆಗಿರುವಾಗ ಮುಳುಗಿ ಮರೆಯಾಗಲು ಸ್ಥಳವೆಲ್ಲಿದೆ. ಎಲ್ಲೆಲ್ಲೂ ಅವನ ನೋಟವೇ ಇರುವಾಗ ನಾಚಿಕೆಯನ್ನು ಮುಚ್ಚಿ ಮರೆಮಾಡುವ ಜಾಗ ಯಾವುದಿದೆ? ದೇವರ ಮುಂದೆ ನಾಚಿಕೆಯೇಕೆ.

ಅಕ್ಕಮಹಾದೇವಿಗಿಂತ ಸ್ವಲ್ಪ ಮೊದಲು, ೧೦೬೭ರಲ್ಲಿ ಇಂಗ್ಲೆಂಡಿನ ಕಾವೆಂಟ್ರಿಯ ಧಣಿಯ ಹೆಂಡತಿಯಾಗಿದ್ದ  ಗೋದಿವಾ ಎಂಬಾಕೆ ತನ್ನ ಗಂಡ ಊರ ಜನದ ಮೇಲೆ ಹೊರಿಸಿದ್ದ ಅತಿಯಾದ ತೆರಿಗೆಯನ್ನು ವಿರೋಧಿಸಿ,ಅದನ್ನು ತೆಗೆಯಲು ಗಂಡ ವಿಧಿಸಿದ ಶರತ್ತಿನಂತೆ ಬತ್ತಲೆಯಾಗಿ ಊರಲ್ಲಿ ಸುತ್ತಿಬಂದ ಚಾರಿತ್ರಿಕ ಘಟನೆ ಇದೆ  ಪ್ರತಿವರ್ಷ ಜುಲೈ ತಿಂಗಳಲ್ಲಿ ಆ ಊರಲ್ಲಿ ಆಕೆಯ ಬತ್ತಲೆ ಮೆರವಣಿಗೆಯ ಆಚರಣೆ, ಮೆರವಣಿಗೆ ನಡೆಯುತ್ತದೆ ಈಗಲೂ. ಅಕ್ಕಮಹಾದೇವಿಯ ನಂತರ ೧೩೨೦ರಲ್ಲಿ ಹುಟ್ಟಿದ  ಕಾಶ್ಮೀರದ ಲಲ್ಲಾದೇವಿ ಅಥವಾ ಲಾಲ್‌ ದೆಡ್ ಮದುವೆಯಾದ ಗಂಡನನ್ನು ತೊರೆದು ನಗ್ನಳಾಗಿ ಸಾಧನೆಯಲ್ಲಿ ತೊಡಗಿ, ಅನುಭಾವಿಯಾಗಿ, ತನ್ನ ವಾಕ್‌ಗಳಿಂದ ಪ್ರಸಿದ್ಧಳಾಗಿದ್ದಾಳೆ. ಅಕ್ಕಮಹಾಧೇವಿಗಿಂತ ಹಳಬಳಾದ,  ರಾಬಿಯಾ ಬಸ್ರೀ ಎಂದೇ ಪ್ರಸಿದ್ಧಳಾದ ೭೬೧-೮೦೧ರವರೆಗೆ ಬದುಕಿದ್ದ ಸೂಫೀ ಸಂತಳು ಒಬ್ಬಂಟಿಯಾಗಿ ಸಂಚರಿಸುತ್ತಾ ಅಕ್ಕಮಹಾದೇವಿಯಂಥದೇ ಮನೋಭಾವದ ನುಡಿಗಳನ್ನು ಆಡಿದ್ದಾಳೆ. ಆಕೆಯ ಕೆಲವು ರಚನೆಗಳನ್ನು ಕುವೆಂಪು ಭಾಷಾಭಾರತಿಯ ʻನಿರಹಂʼ ಎಂಬ ಸಂಕಲನದಲ್ಲಿ ನೋಡಿ. ನಾಚಿಕೆಯನ್ನೂ ತೊರೆಯುವ ಆತ್ಯಂತಿಕ ಸ್ಥಿತಿಯಾಗಿ ಬೆತ್ತಲೆಯಾಗುವುದು ಜೈನ ಧರ್ಮದಲ್ಲೂ ಇದೆ. ಸಾರ್ವಜನಿಕವಾಗಿ ಬತ್ತಲಾಗುವುದು ಅಪಾರ ಧೈರ್ಯವನ್ನು, ಸಮಾಜವು ಒಪ್ಪಿರುವ ನೀತಿ ನಿಯಮಗಳನ್ನು ಮೀರುವ ಕೆಲಸವೂ ಹೌದು. ನನಗೆ ಈ ಮನುಷ್ಯ ಸಮಾಜವಲ್ಲ, ದೇವರು ಮುಖ್ಯವೆಂದು ದೇಹದ ಮೂಲಕವೇ ಸಾರಿ ಹೇಳುವ ಕಾರ್ಯವಾಗುತ್ತದೆ.

ಬತ್ತಲಾಗುವುದು, ಮನೆ ತೊರೆದು ಲೋಕ ಸಂಚಾರ ಮಾಡುತ್ತ ಅನುಭಾವದ ಸಾಧನೆಯಲ್ಲಿ ತೊಡಗುವುದು-ಇಂಥ ಕ್ರಿಯೆಗೆ ದೇಶ, ಭಾಷೆ, ಧರ್ಮ, ಜಾತಿಗಳ ಹಂಗಿಲ್ಲ, ಅಂಥ ಧೈರ್ಯವನ್ನು ತೋರುವವರು ಬಹಳವಿಲ್ಲ,  ಅಲ್ಲವೇ?

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.