ನೀರಿನ ಉಪಮೆಯಿಂದ ಹುಟ್ಟುವುದು ಶುರುವಾಗಿ ಚೆನ್ನಮಲ್ಲಿಕಾರ್ಜುನನನ್ನು ಮುಟ್ಟಿ ಸುಟ್ಟು ಹೋದ ವೈರುಧ್ಯದವರೆಗೆ ಈ ವಚನ ಬೆಳೆಯುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6, ಲಜ್ಜೆಯಳಿದು-ನಾನು ನೀನಾಗಿ
ಮುತ್ತು ನೀರಲಾಯಿತ್ತು
ವಾರಿಕಲ್ಲು ನೀರಲಾಯಿತ್ತು
ಉಪ್ಪು ನೀರಲಾಯಿತ್ತು
ಉಪ್ಪು ಕರಗಿತ್ತು
ವಾರಿಕಲ್ಲು ಕರಗಿತ್ತು
ಮುತ್ತು ಕರಗಿದುದನಾರೂ ಕಂಡವರಿಲ್ಲ
[ಈ ಸಂಸಾರಿಮಾನವರು ಲಿಂಗವಮುಟ್ಟಿ ಭವಭಾರಿಗಳಾದರು]
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ [೩೪೧]
[ವಾರಿಕಲ್ಲು=ಆಲಿಕಲ್ಲು; ಕರಿಗೊಂಡೆ=ಸುಟ್ಟು ಹೋದೆ]
ಮುತ್ತು ಹುಟ್ಟುವುದು ನೀರಿನಲ್ಲಿ, ಆಲಿಕಲ್ಲು ಹುಟ್ಟುವುದು ನೀರಿನಿಂದ, ಉಪ್ಪು ಆಗುವುದೂ ನೀರಿನಲ್ಲೇ. ಉಪ್ಪು, ಆಲಿಕಲ್ಲು ನೀರಿನಲ್ಲಿ ಕರಗುತ್ತವೆ. ಮುತ್ತು ಕರಗಿದ್ದನ್ನು ಯಾರೂ ಕಂಡವರಿಲ್ಲ. ನಾನು ನಿಮ್ಮನ್ನು ಮುಟ್ಟಿ ಸುಟ್ಟು ಭಸ್ಮವಾದೆ.
ಸಂಸ್ಕೃತದ ʻಮುಕ್ತ/ಕʼ ಕನ್ನಡದಲ್ಲಿ ಮುತ್ತು ಆಗುತ್ತದೆ. ಇಲ್ಲಿ ಅಕ್ಕಮಹಾದೇವಿಯ ವಚನ ನಾನು ಎಂಬುದು ಇಲ್ಲವಾದ ಸ್ಥಿತಿಯನ್ನು ಹೇಳುತ್ತಿದೆ. ನೀರಿನ ಉಪಮೆಯಿಂದ ಹುಟ್ಟುವುದು ಶುರುವಾಗಿ ಚೆನ್ನಮಲ್ಲಿಕಾರ್ಜುನನನ್ನು ಮುಟ್ಟಿ ಸುಟ್ಟು ಹೋದ ವೈರುಧ್ಯದವರೆಗೆ ಈ ವಚನ ಬೆಳೆಯುತ್ತದೆ. ʻನಾನುʼ ಎಂಬುದು ಇಲ್ಲವಾಗಿ ಇರುವುದು ಅಪೇಕ್ಷಣೀಯ ಅನ್ನುವ ವಿಚಾರವನ್ನು ಈ ವಚನ ಹೇಳುವಂತಿದೆ.
ಅಲ್ಲಮನ ವಚನವೊಂದರಲ್ಲಿ [೨.೬೬೮] ʻಗುಹೇಶ್ವರನೈದಾನೆ ಇಲ್ಲದಂತೆʼ ಎಂಬ ಮಾತು ಬರುತ್ತದೆ. ಯಹೂದಿ ತತ್ವಜ್ಞಾನಿ ಸಿಮಿಯೊನ್ ವೇಲ್ [೧೯೦೯-೧೯೪೩] ದೇವರು ತನ್ನ ಸೃಷ್ಟಿಯಲ್ಲಿ ಇಲ್ಲವಾಗಿ ಮಾತ್ರ ಇರಬಲ್ಲ [““God can only be present in creation under the form of absence.”] ಅನ್ನುತ್ತಾಳೆ. ಮುಕ್ತಿ ಅನ್ನುವುದನ್ನು ಅಕ್ಕ ಮತ್ತು ಅಲ್ಲಮ ಇಬ್ಬರೂ ಇದೇ ರೀತಿಯಲ್ಲೇ ವಿವರಿಸುತ್ತಿದ್ದಾರೆ ಅನ್ನಿಸುತ್ತದೆ. ನೀರಿನಲ್ಲಿ ಕರಗುವ ಆಲಿಕಲ್ಲು, ಉಪ್ಪು, ಮತ್ತು ಸುಟ್ಟ ಬೂದಿ ಎರಡೂ ಇಲ್ಲವಾಗಿ ಇರುವ, ʻನಾನಿಲ್ಲವಾಗಿʼ ಅದಾಗಿ ಇರುವ ಸ್ಥಿತಿಯ ಚಿತ್ರಣ ಎಂದು ತೋರುತ್ತದೆ.

