ಸಾವನ್ನು ಕೂಡ ಆಗಲೇಬೇಕಾದ ಅನುಭವವೆಂದು ತಿಳಿಯುವ ಹದ ವಚನಕಾರರಲ್ಲಿದೆ. ʻನಾನುʼ ಇಲ್ಲವಾಗಿ ಆದರು ʻಇರುವʼ ಸ್ಥಿತಿಯೇ ಮುಕ್ತಿ ಇರಬಹುದೇನೋ... ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6, ಲಜ್ಜೆಯಳಿದು-ನಾನು ನೀನಾಗಿ
ಕಟ್ಟಿದ ಕೆರೆಗೆ ಕೋಡಿ ಮಾಣದು
ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯಾ
ಅರುಹಿರಿಯರೆಲ್ಲ ವೃಥಾ ಕೆಟ್ಟು ಹೋದರಿನ್ನೆಂತಯ್ಯಾ
ಚೆನ್ನಮಲ್ಲಿಕಾರ್ಜುನದೇವರಿಗೋತು ಮುಟ್ಟಿದವರೆಲ್ಲಾ ನಿಶ್ಚಿಂತರಾದರು [೧೪೦]
ಕೆರೆಯನ್ನು ಕಟ್ಟಿದರೆ ಅದಕ್ಕೆ ಕೋಡಿ ಇಲ್ಲದೆ ಇರಲು ಸಾಧ್ಯವಿಲ್ಲ. ಹುಟ್ಟಿದ ಪ್ರಾಣಿಗೆ ಸಾವಿಲ್ಲದೆ ಇರಲು ಸಾಧ್ಯವಿಲ್ಲ. ಇನ್ನೇನು ಮಾಡುವುದು. ದೊಡ್ಡವರೆಂದುಕೊಂಡವರೆಲ್ಲಾ ಸಾವಿನ ಭಯದಲ್ಲಿ ವ್ಯರ್ಥವಾಗಿ ಕೆಟ್ಟು ಹೋದರು. ಚೆನ್ನಮಲ್ಲಿಕಾರ್ಜುನನನ್ನು ಮೆಚ್ಚಿ, ಒಲಿದು, ಮುಟ್ಟಿದವರೆಲ್ಲ ಚಿಂತೆ ಇಲ್ಲದವರಾದರು.
ಹುಟ್ಟು ಮತ್ತು ಸಾವು ಪರಸ್ಪರ ವಿರುದ್ಧವೆಂದು ತಿಳಿದಾಗ ಒಂದು ಪ್ರಿಯ ಇನ್ನೊಂದು ಅಪ್ರಿಯವಾಗುತ್ತದೆ ಬದುಕು ಸಾವು ವಿರುದ್ಧವೆಂದಾಗ ಒಂದು ಅಪೇಕ್ಷಣೀಯ ಇನ್ನೊಂದು ಭಯಂಕರವಾಗುತ್ತದೆ. ಸಾವಿನ ಬಗ್ಗೆ ಏನನ್ನು ಹೇಳುವುದೂ ಬರಿಯ ಊಹೆಯೇ ಆಗುವುದು. ಆದರೂ ಸಾವನ್ನು ಕುರಿತು ಭಯಪಡದೆ ಇರಲು ಸಾಧ್ಯವೆಂದು ಅನುಭಾವಿಗಳು, ಸಂತರು ತೋರಿಸಿಕೊಟ್ಟಿದ್ದಾರೆ. ಲಿಯೊ ಟಾಲ್ಸ್‌ಟಾಯ್‌ನ ಮೂರು ಸಾವು ಎಂಬ ಕಥೆಯನ್ನು ನೋಡಿ ಅದರಲ್ಲಿ ಸಾವಿನ ಮೂರು ಬಗೆಗಳನ್ನು ಚಿತ್ರಿಸುತ್ತಾ ಸಾವು ಸಂತೋಷವನ್ನು ಕೊಡುವ ಚಿತ್ರವೂ ಒಂದು ಬರುತ್ತದೆ. ವಚನಕಾರರೂ ಮರಣವೇ ಮಹಾನವಮಿ ಅಂದವರೇ ಆಗಿದ್ದಾರೆ. ಹುಟ್ಟಿನ ಅನುಭವ ಎಲ್ಲರಿಗೂ ಮರೆತು ಹೋಗುತ್ತದೆ, ನನ್ನ ಸಾವಿನ ಅನುಭವ ಹೇಳಲು ನಾನೇ ಇರುವುದಿಲ್ಲ. ಎರಡು ಸತ್ಯಗಳೂ ಭಾಷೆಯಾಚೆಗೇ ಉಳಿಯುತ್ತವೆ. ಸಾವನ್ನು ಕೂಡ ಆಗಲೇಬೇಕಾದ ಅನುಭವವೆಂದು ತಿಳಿಯುವ ಹದ ವಚನಕಾರರಲ್ಲಿದೆ. ʻನಾನುʼ ಇಲ್ಲವಾಗಿ ಆದರು ʻಇರುವʼ ಸ್ಥಿತಿಯೇ ಮುಕ್ತಿ ಇರಬಹುದೇನೋ.

