ಕದಳಿ : ಅಕ್ಕ ಮಹಾದೇವಿ #74

ಈ ವಚನ  ಎರಡು ಕಾರಣಗಳಿಗೆ ಗಮನ ಸೆಳೆಯುತ್ತದೆ. ಇದರಲ್ಲಿ ಕದಳಿ ಅನ್ನುವುದು ನಮ್ಮ ದೇಹ, ಮನಸುಗಳೊಳಗೇ ಇರುವ ಬನದ ರೂಪಕವಾಗಿದೆ. ಅಷ್ಟೇ ಅಲ್ಲ, ಅದು ಈ ಲೋಕ ಅಥವಾ ಭವವೆಂಬ ದಾಟಲಾಗದ ಕಾಡು ಕೂಡ ಆಗಿ ಈ ವಚನ ನುಡಿದ ಮನಸಿಗೆ ಕಂಡಿದೆ… ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ಕದಳಿ ಎಂಬುದು ತನು  ಕದಳಿ ಎಂಬುದು ಮನ
ಕದಳಿ ಎಂಬುದು ವಿಷಯಂಗಳು
ಕದಳಿ ಎಂಬುದು ಭವಘೋರಾರಣ್ಯ
ಈ ಕದಳಿ ಎಂಬುದ ಗೆದ್ದು ತವೆ ಬದುಕಿ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು
ಭವ ಗೆದ್ದು ಬಂದ ಮಗಳೆ ಎಂದು
ಕರುಣದಿ ತೆಗೆದು ಬಿಗಿಯಪ್ಪಿದಡೆ ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ
ಅಡಗಿದೆನು [143]

[ಕದಳಿ= ಕದಳ, ಇದಕ್ಕೆ ಗುಂಪು ಮತ್ತು ಬಾಳೆಯ ಗಿಡಗಳು ಒತ್ತಾಗಿ ಬೆಳೆದ ಬನ ಅನ್ನುವ ಅರ್ಥಗಳಿವೆ; ವಿಷಯಂಗಳು: ನಮ್ಮ ಐದೂ ಇಂದ್ರಿಯಗಳಿಗೆ ಬಯಕೆಯನ್ನು ಹುಟ್ಟಿಸುವಂಥ ಸಂಗತಿ, ವ್ಯಕ್ತಿ, ವಿಚಾರ ಇತ್ಯಾದಿ]

ದೇಹವೇ ಬಾಳೆಯ ಬನ, ಮನಸ್ಸೂ ಬಾಳೆಯ ಬನ,  ಕದಳಿ ಅನ್ನುವುದು ಈ ಲೋಕವೆನ್ನುವ ಘೋರವಾದ ಕಾಡು. ಇದನ್ನು ಗೆದ್ದುಬಂದೆಯಲ್ಲಾ ಮಗಳೇ ಎಂದು ಚೆನ್ನಮಲ್ಲಿಕಾರ್ಜುನ ಕರುಣದಿಂದ ಬಿಗಿದಪ್ಪಿದ. ನಾನು ಅವನ ಹೃದಯ ಕಮಲದಲ್ಲಿ ಅಡಗಿದೆ.

ಈ ವಚನ  ಎರಡು ಕಾರಣಗಳಿಗೆ ಗಮನ ಸೆಳೆಯುತ್ತದೆ. ಇದರಲ್ಲಿ ಕದಳಿ ಅನ್ನುವುದು ನಮ್ಮ ದೇಹ, ಮನಸುಗಳೊಳಗೇ ಇರುವ ಬನದ ರೂಪಕವಾಗಿದೆ. ಅಷ್ಟೇ ಅಲ್ಲ, ಅದು ಈ ಲೋಕ ಅಥವಾ ಭವವೆಂಬ ದಾಟಲಾಗದ ಕಾಡು ಕೂಡ ಆಗಿ ಈ ವಚನ ನುಡಿದ ಮನಸಿಗೆ ಕಂಡಿದೆ. ಚೆನ್ನಮಲ್ಲಿಕಾರ್ಜುನ ಆ ದಟ್ಟ ಕಾಡಿನೊಳಗೇ ಕಾಣುತ್ತಾನೆ. ಕದಳಿಯು ದೇಹ ಮನಸುಗಳು ಎಂದು ಆಗಲೇ ಹೇಳಿರುವುದರಿಂದ ಚೆನ್ನಮಲ್ಲಿಕಾರ್ಜುನ ಒಳಗೂ ಇದ್ದಾನೆ, ಹೊರಗೂ ಇದ್ದಾನೆ. ಮನಸಿನ ಒಳಗಿನ ಹೋರಾಟ, ಲೋಕದೊಡನೆ ಹೋರಾಟ ಮಾಡಿ ಚೆನ್ನಮಲ್ಲಿಕಾರ್ಜುನ ಎಲ್ಲೆಲ್ಲೂ ಇದ್ದಾನೆ ಅನ್ನುವ ಅರಿವಿನ ಅನುಭವ ಪಡೆದದ್ದೇ ಅಕ್ಕನಿಗೆ ಆದ ಐಕ್ಯದ ಅನುಭವ ಇದ್ದೀತು.

ಶ್ರೀಶೈಲದ ಬಳಿ ಕದಳೀ ವನ ಇದ್ದದ್ದು, ಈಗಲೂ ಇರುವುದು ಚಾರಿತ್ರಿಕ ಮತ್ತು ವಾಸ್ತವ ಸತ್ಯ. ಅಕ್ಕ ಅಲ್ಲಿ ಐಕ್ಯಳಾದಳೆಂದು ನಂಬಿಕೆ. ಶ್ರೀಶೈಲದ ಕದಳಿಯಲ್ಲಿ ಅಕ್ಕ ಐಕ್ಯಳಾದಳು ಅನ್ನುವುದು ನಿಜವಿರಬಹುದು ಅಥವಾ ಅಕ್ಕನ ಆಧ್ಯಾತ್ಮಿಕ ಯಾತ್ರೆಗೆ ಕಲ್ಪಿಸಿಕೊಂಡ ವಾಸ್ತವ ಸಂಕೇತವೂ ಇರಬಹುದು.

ಕದಳಿಯ ಬನವ ನಿನ್ನಲ್ಲಿ ನೀನು ತಿಳಿದು ನೋಡು ಅನ್ನುವ ಮಾತನ್ನು ಅಲ್ಲಮ ಹೇಳಿದಂತೆ (ಸಂಪುಟ ೨.೨೨೯) ಒಂದು ವಚನವಿದೆ. ಅಲ್ಲಮನದೇ ಇನ್ನೊಂದು ವಚನವು ದೇಹವು ಕದಳಿಯನ್ನು ಹೊಕ್ಕು , ಪ್ರಾಣ ಅಥವ ಉಸಿರಿನೊಡನೆ ಎಲ್ಲ ಇಂದ್ರಿಯಗಳೆನ್ನುವ ಕೋಣೆಗಳಲ್ಲಿ ತಿರುಗಾಡುತ್ತ ಬಂದರೆ, ಮೇರು ಮಂದಿರ ಅಂದರೆ ನೆತ್ತಿ ಅಥವಾ ಬುದ್ಧಿಪೂರ್ವಕ ತಿಳಿವಳಿಕೆಯ ಜ್ಞಾನ ಅನ್ನುವ ತ್ರಿಕೋಣೆಯಲ್ಲಿ ಬೆಳಕಾಗಿ ಅಲ್ಲಿ ಗುಹೇಶ್ವರನ ರೂಪ ಕಂಡಿತು ಎಂದು ಇನ್ನೊಂದು ವಚನ (ಸಂ೨. ೧೧೦೭) ಹೇಳುತ್ತದೆ. ಕದಳಿಯನ್ನು ಕನ್ನಡ ಮನಸ್ಸು ಹಾಗೆ ವಾಸ್ತವ ಸ್ಥಳ, ರೂಪಕ, ಆಧ್ಯಾತ್ಮಿಕ ಸಾಧನೆಯ ಪ್ರಮುಖ ಸ್ಥಾನ ಎಂದೆಲ್ಲ ಕಂಡಿದೆ.  .   ದೇಹ ಮನಸುಗಳೇ ಕದಳಿ ಅಂದರೆ ಅಕ್ಕ ತನ್ನಲ್ಲಿ ತಾನಾದಳೋ; ಕದಳಿ ಅನ್ನುವ ವಿಷಯಗಳನ್ನು ದಾಟಿದಳೋ, ಭವವೆಂಬ ಕಾಡು ಕದಳಿ ಅನ್ನುವುದಾದರೆ ಅಕ್ಕ ಎಲ್ಲರ ಹಾಗೆ ಲೋಕ ವ್ಯಾಪಾರ ಮುಗಿಸಿದಳೋ…ಒಟ್ಟಾರೆ ಬೆರಗು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

Leave a reply to ಮಂಜುಳಾ ಪ್ರತ್ಯುತ್ತರವನ್ನು ರದ್ದುಮಾಡಿ

This site uses Akismet to reduce spam. Learn how your comment data is processed.