ಸಾಕ್ಷಿ ಸತ್ತಿತ್ತು : ಅಕ್ಕ ಮಹಾದೇವಿ #75

ಪ್ರಮುಖ ವಚನಕಾರರು ಸಾವನ್ನು ಕೊನೆಯೆಂದಲ್ಲ ಅನಂತದ ಸ್ಥಿತಿಯೆಂದು ಕಂಡರು ಅನ್ನಿಸುತ್ತದೆ. ಅನಾದಿ-ಅನಂತ ಅನ್ನುವ ಮಾತು ವಚನಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ ~ ಓ.ಎಲ್.ನಾಗಭೂಷಣ ಸ್ವಾಮಿ । ವಚನ ಸಂವಾದ : ಅಕ್ಕ ಮಹಾದೇವಿ : ಭಾಗ 6ಲಜ್ಜೆಯಳಿದು-ನಾನು ನೀನಾಗಿ

ಸಾಕ್ಷಿ ಸತ್ತಿತ್ತು
ಪತ್ರ ಬೆಂದಿತ್ತು
ಲೆಕ್ಕ ತುಂಬಿತ್ತು
ಜೀವ ಜೀವಿತದ ಆಸೆ ನಿಂದುದು
ಭಾಷೆ ಹೋಯಿತ್ತು
ದೇಶವೆಲ್ಲರಿಯೆ ಎನ್ನ ದೇವ ಚೆನ್ನಮಲ್ಲಿಕಾರ್ಜುನನ ನಂಬಿ ಹಂಬಲ ಮರೆದೆನಾಗಿ [೩೯೬]

ಯಾವ ಸಾಕ್ಷಿಯೂ ಇರದ, ಲಾಭ ನಷ್ಟದ ಲೆಕ್ಕಾಚಾರವಿರದ, ದಾಖಲೆ ಇರದ, ಅಸೆಯೂ ಇರದ, ಇವನ್ನೆಲ್ಲ ಹೇಳುವ ಭಾಷೆಯೂ ಇರದ, ಚೆನ್ನಮಲ್ಲಿಕಾರ್ಜುನನ ನಂಬಿಕೆ ಮಾತ್ರ ಇರುವ, ಬೇರೆ ಯಾವ ಹಂಬಲವೂ ಇರದ ಸ್ಥಿತಿಯನ್ನು ಸೊನ್ನೆಯ ಸ್ಥಿತಿಯೆನ್ನಬೇಕೋ ಪೂರ್ಣತೆಯ ತೃಪ್ತಿಯ ಸ್ಥಿತಿ ಅನ್ನಬೇಕೋ ಅದು ಅವರವವರಿಗೆ ಬಿಟ್ಟದ್ದು.

ʻನಂಬಿ ಹಂಬಲ ಮರೆದೆʼ ಚೆನ್ನಮಲ್ಲಿಕಾರ್ಜುನನ್ನು ಕಾಣಬೇಕೆಂಬ ಹಂಬಲವೂ ಇಲ್ಲ, ಕೂಡಬೇಕೆಂಬ ಹಂಬಲವೂ ಇಲ್ಲ, ನಂಬಿಕೆ ಮಾತ್ರ ಇದೆ. ಹಂಬಲವೂ ಇಲ್ಲವಾದಾಗ ನಿರಾಸೆಯೂ ಇರದು. ಅಂಥ ಸ್ಥಿತಿಯನ್ನು ತಲುಪಿದವರಿಗೆ ಮಾತ್ರ ಅದು ಹೇಗಿರುತ್ತದೆಂದು ಗೊತ್ತಿರಬಹುದು. ನಮಗೆ ಆದ ಅನುಭವಕ್ಕೆ ನಮ್ಮನ್ನು ಬಿಟ್ಟರೆ ಬೇರೆ ಯಾರೂ ಸಾಕ್ಷಿಯಾಗಿರಲು ಸಾಧ್ಯವಿಲ್ಲ. ಸಾಕ್ಷಿಯಾಗಿರುವ ನಾನೂ ಇಲ್ಲವಾದರೆ! ಮರದ ಕೊಂಬೆಯ ಮೇಲೆ ಕುಳಿತ ಎರಡು ಹಕ್ಕಿಗಳಲ್ಲಿ ಒಂದು ʻಸಾಕ್ಷಿʼಯಾಗಿ ಇರುತ್ತದೆ ಅನ್ನುವ ಸುಪ್ರಸಿದ್ಧ ಮಾತು ನೆನಪಾಗುತ್ತದೆ. ಈ ವಚನ ಹೇಳುತ್ತಿರುವುದು ʻಸಾಕ್ಷಿʼಯೂ ಇಲ್ಲವಾದ ಸ್ಥಿತಿ.

*

ವಚನ ಸಾಕ್ಷಿ—ನುಡಿದ ಮಾತು ಮುಗಿದ ತಕ್ಷಣ ಇಲ್ಲವಾಗುವುದು. ಬರೆದಿಟ್ಟರೆ ಸುಟ್ಟು ಬೂದಿಯಾದೀತು, ಮಣ್ಣಾಗಿ ಕೊಳೆತೀತು. ಓದುವವರಿಲ್ಲದಿದ್ದರೆ ಬರೆದದ್ದೂ ವ್ಯರ್ಥ.

ನಮ್ಮ ಕಾಲದ ಲೆಕ್ಕ ನಮ್ಮ ಜೊತೆಗೇ ತುಂಬಿ ಮುಗಿಯುವುದು. ಮುಂದಿನದು ನಮಗಂತೂ ತಿಳಿಯದು. ನಾವು ನಮಗೆ ಆದ, ಆಯಿತೆಂದು ಅಂದುಕೊಂಡ ಅನುಭವ ಬಗ್ಗೆ ಮಾತು ಆಡಬಹುದು, ಅದು ಕೇಳಿದವರಿಗೆ ಬರಿಯ ಮಾಹಿತಿ ಮಾತ್ರವೇ ಹೊರತು ನಮಗಾದ ಅನುಭವವೇ ಅಲ್ಲ.

ʻಭಾಷೆಯು ಲೋಕ ವ್ಯವಹಾರದ ಉಪಕರಣವೇ ಹೊರತು ಸತ್ಯವನ್ನು ತೋರುವ ಕಿಟಕಿಯಲ್ಲʼ ಅನ್ನುವ ಮಾತು ನೆನಪಾಗುತ್ತಿದೆ. ನಿಜವಾಗಿ, ಪೂರ್ಣವಾಗಿ ಬದುಕಿದರೆ ಅಂದರೆ ಬದುಕಿನ ಅನುಭವ ಪೂರ್ಣವಾದರೆ ಅದೇ ಪೂರ್ಣಾಯುಷ್ಯ. ಅಪೂರ್ಣವಾಗಿ ಉಳಿದದ್ದು ಮಾತ್ರ ರಿಪೀಟ್‌ ಆಗುತ್ತದೆ. ಪೂರ್ತಿಯಾದ ಅನುಭವ ಆಗಿ ಮುಗಿಯುತ್ತದೆ ಅನ್ನುವ ಮಾತು ನಿಜ. ಹಾಗೆ ಪೂರ್ಣತೆಯನ್ನೋ ಐಕ್ಯವನ್ನೋ ಸಾಧಿಸಿದ್ದಕ್ಕೆ ಸಾಕ್ಷಿಯಾಗಿ ಯಾರೂ ಇರಲು ಸಾಧ್ಯವಿಲ್ಲ, ಆಡಿದ ಮಾತು ಕೂಡಾ!

ಭಾಷೆ ಕೂಡ ಇರದು. ಆಡುವ ಮಾತು, ಅಂದರೆ ವಾಣಿಯೂ ನಿರ್-ವಾಣಿಯಾಗುತ್ತದೆ.  ಅಂಥ ಸ್ಥಿತಿಯನ್ನು ಈ ವಚನ ಹೇಳುತ್ತಿದೆ.

*

ಬುದ್ಧಿ ಒಂದು ಪ್ರಶ್ನೆಯನ್ನು ಕೇಳುತ್ತಿದೆ: ಸಾಕ್ಷಿಗಳು ಯಾವುದೂ ಯಾರೂ ಇಲ್ಲವಾದ ಸ್ಥಿತಿಯನ್ನು, ಜೀವಿತದ ಆಸೆಯೂ ಹೋದ, ಭಾಷೆಯೂ ಸತ್ತ, ಹಂಬಲ ಮರೆತ ಸ್ಥಿತಿಯನ್ನು  ತಲುಪಿದೆನೆಂದು ಅಂಥ ಸ್ಥಿತಿಗೆ ತಲುಪಿದ ವ್ಯಕ್ತಿಯೇ, ಈ ಸಂದರ್ಭದಲ್ಲಿ ಸ್ವತಃ ಅಕ್ಕನೇ, ಹೇಳುವುದಕ್ಕೆ ಹೇಗೆ ಸಾಧ್ಯ? ಸತ್ತವರು ತಾವು ಸತ್ತಿದ್ದೇವೆಂದು ಹೇಳಿದ ಹಾಗೆ ಆಗುತ್ತದಲ್ಲವೇ?

ಹಾಗಾದರೆ ಅಕ್ಕನ ವಚನಗಳನ್ನು ನಿಕಟವಾಗಿ ಬಲ್ಲ, ಅಕ್ಕನ ಮನಸನ್ನು ಅರಿತ ಅರಿತ, ಆನಂತರದ ಕಾಲದ ಮನಸ್ಸು ಅಕ್ಕನ ಐಕ್ಯ ಸ್ಥಿತಿಯನ್ನು ಹೀಗೆ ವರ್ಣಿಸಿರಬಹುದೇ? ಉತ್ತರ  ಹೇಳಲು ಆಗದು, ಬಾರದು.

ಸಾಕ್ಷಿ ಇಲ್ಲದೆ ಅನುಭವಿಸಿದವರ, ಜೀವಿತದ ಆಸೆ ಪೂರೈಸಿದವರವನ್ನು ಕಂಡವರು ಕೇಳಿದವರು ಮಾತ್ರ ಬಗ್ಗೆ ತಮತಮಗೆ ಬೇಕಾದಂಥ ಬಿಂಬವನ್ನೋ ಚಿತ್ರವನ್ನೋ ನುಡಿ ಚಿತ್ರವನ್ನೋ ರಚಿಸಿಕೊಂಡು ಬೆಳೆಸುತ್ತಾರೆ.  ʻಶರಣ ಸಮೂಹವು | ಈಕೆ | ಪರಿಯನೋಡುತ ಬೆರಗು ವಡುತಲಿ। ಈಕೆ ಸ್ಥಿರವ ಹೊಕ್ಕಳು] ʼ  ಎಂದು ಜಾನಪದ ಗೀತೆಯೊಂದು ಹೇಳುತ್ತದೆ.

*

ಅಕ್ಕನ ಮಾತಿನಲ್ಲೇ ಹೇಳುವುದಾದರೆ ಅವಳು ನೆನೆವ ಮತ್ತು  ನುಡಿವ ʻಪರಿಕರ ಹೊಸತುʼ: ಅಂದರೆ ನೆನೆವ, ನುಡಿವ ಬಗೆ (ಪರಿ)- ತೀರ (ಕರ)- ಹೊಸತು. 

ತೀರ  ಹೊಸ ಪರಿಯಲ್ಲಿ  ನೆನೆದಳು, ಹೊಸ ಪರಿಯಲ್ಲಿ ನುಡಿದಳು, ಹಾಗಾಗಿ ಕನ್ನಡದ ಮನಸಿಗೆ ʻಹೊಕ್ಕು,ʼ ʻಸ್ಥಿರʼವಾದಳು.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.