ಕಳೆದ ಆರು ತಿಂಗಳಿಂದ ಎರಡು ದಿನಗಳಿಗೊಮ್ಮೆ ಪ್ರಕಟವಾಗುತ್ತಿದ್ದ ಅಕ್ಕ ಮಹಾದೇವಿಯ ವಚನಗಳು ಮತ್ತು ವ್ಯಾಖ್ಯಾನಗಳ ಸರಣಿ ಮೊನ್ನೆಗೆ ಅಂತ್ಯಗೊಂಡಿದೆ. ಅಕ್ಕನ 75 ವಚನಗಳಿಗೆ ಈ ನಿಟ್ಟಿನಲ್ಲಿ ವಿಶೇಷ ಅಧ್ಯಯನ ನಡೆಸಿರುವ ಮತ್ತು ಅಪಾರ ಜ್ಞಾನವುಳ್ಳ ಓ.ಎಲ್.ನಾಗಭೂಷಣ ಸ್ವಾಮಿಯವರು ವ್ಯಾಖ್ಯಾನ ಬರೆದಿದ್ದು, ಅದನ್ನು ಅರಳಿಮರದ ಓದುಗರೆಲ್ಲರೂ ಬಹುವಾಗಿ ಮೆಚ್ಚಿಕೊಂಡಿದ್ದೀರಿ. ಮುಂದಿನ ನಾಲ್ಕು ಕಂತುಗಳಲ್ಲಿ ಈ ವಿಶಿಷ್ಟ ವಚನ ಸಂವಾದದ ಸಮಾರೋಪ ಬರಹ ಪ್ರಕಟವಾಗಲಿದೆ. ಈ ಲೇಖನ ಮಾಲೆಯನ್ನು ನೀಡಿದ ಓ.ಎಲ್.ಎನ್ ಅವರಿಗೂ ಓದಿ, ಹಂಚಿ, ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಓದುಗರಿಗೂ ಹೃತ್ಪೂರ್ವಕ ಧನ್ಯವಾದಗಳು । ಅರಳಿ ಬಳಗ
ಅವಳ ಹತ್ತಾರು ವಚನಗಳನ್ನು ಸಂಗೀತವಾಗಿ, ಸಿನಿಮಾ ಹಾಡಾಗಿ ಅಥವಾ ಪಠ್ಯಪುಸ್ತಕದ ಭಾಗವಾಗಿ ಕೇಳಿ, ಓದಿ, ಅವಳ ಬಗ್ಗೆ ಭಾಷಣ ಕೇಳಿ, ಇಷ್ಟಪಟ್ಟು ಮಹದೇವಿ ಅಕ್ಕನ ಸ್ಟಾಂಪ್ ಸೈಜಿನ ಫೋಟೋವನ್ನು ಎಲ್ಲೋ ಮನಸಿನ ಮೂಲೆಯಲ್ಲಿಟ್ಟುಕೊಂಡು ʻಓಹೋ ಅಕ್ಕ ಗೊತ್ತು ಅನ್ನುತ್ತಾ,ʼ ಓಡಾಡುವವರೇ ಹೆಚ್ಚು ಮಂದಿ.
ಶಿವನ ಗಣದಲ್ಲಿ ಒಬ್ಬಾತನ ಬಗ್ಗೆ ಮೋಹ ಹುಟ್ಟಿದ್ದರಿಂದ ಶಾಪ ಪಡೆದು ಭೂಮಿಗೆ ಬಂದ ರುದ್ರಕನ್ಯೆ ಕಾಮವನ್ನು ಗೆದ್ದು, ಸಂಸಾರದ ಕೋಟಲೆ ಅನುಭವಿಸಿ ಶ್ರೀಶೈಲದಲ್ಲಿ ಮುಕ್ತಳಾದಳು ಅನ್ನುವುದು ಪುರಾಣದ ದೃಷ್ಟಿಗೆ ಕಾಣುವ ಅಕ್ಕನ ಬಿಂಬ ಹದಿಮೂರನೆಯ ಶತಮಾನದ ಹೊತ್ತಿಗೆ ವಚನಕಾರರ ಪ್ರಮುಖರೆಲ್ಲರೂ ಪೌರಾಣಿಕ ವ್ಯಕ್ತಿಗಳಾಗಿ ಬದಲಾಗುತಿದ್ದರು. ಪಾಲ್ಕುರಿಕೆಯ ಸೋಮನಾಥ, ಮತ್ತು ಹರಿಹರ ಇಂಥ ಬಿಂಬದ ಬೆಳವಣಿಗೆಗೆ ಕಾರಣರಾದ ಮುಖ್ಯ ಬರಹಗಾರರು.
ಹದಿನೈದನೆಯ ಶತಮಾನದಲ್ಲಿ ಚಾಮರನ ʻಪ್ರಭುಲಿಂಗಲೀಲೆʼ ಅಲ್ಲಮನು ತೋರಿದ ದಾರಿಯಲ್ಲಿ ನಡೆದು ಬೆಳೆದ ಶರಣರ ಚಿತ್ರಗಳನ್ನು ರೂಪಿಸಿತು. ಅದರಲ್ಲಿ ಅಕ್ಕನ ಚಿತ್ರವೂ ಒಂದು. ಇದರಿಂದ ಅಕ್ಕನ ಚಾರಿತ್ರಿಕ ಅನಿಸುವಂಥ ರೂಪ ಮೂಡಲು ಸಾಧ್ಯವಾಯಿತು.
ಅನೇಕ ಸಾಧಕರು ಅಲ್ಲಮನೊಡನೆ ನಡೆಸಿದ ಸಂವಾದವನ್ನು ಮುಂದಿನ ನೂರೈವತ್ತು ವರ್ಷಗಳಲ್ಲಿ ನಾಲ್ಕು ಶೂನ್ಯ ಸಂಪಾದನೆಗಳು ನಿರೂಪಿಸಿದವು. ಗೂಳೂರು ಸಿದ್ಧವೀರಣ್ಣೊಡೆಯನ ʻಶೂನ್ಯಸಂಪಾದನೆʼಯಲ್ಲಿ ಅಲ್ಲಮ-ಅಕ್ಕ ಸಂವಾದ ತುಂಬ ನಾಟಕೀಯವಾಗಿದೆ. ಕನ್ನಡದ ದೊಡ್ಡ ಜೀವಗಳ ಮಾತುಕತೆಯ ಕಲ್ಪಿತ ದಾಖಲೆಯಂತೆ ಅಳಿಸಲಾಗದ ನೆನಪಾಗಿ ಉಳಿದಿದೆ.
ಹಳಕಟ್ಟಿ, ಬಿ.ಆರ್.ಹಿರೇಮಠ, ಎಲ್. ಬಸವರಾಜು, ಎಸ್.ಶಿವಣ್ಣ, ಸಾಶಿ ಮರುಳಯ್ಯ ಅಕ್ಕನ ವಚನಗಳನ್ನು ತುಂಬ ಶ್ರಮಪಟ್ಟು, ನಮ್ಮ ಕಾಲಕ್ಕೆ ಒಗ್ಗುವ ಹಾಗೆ ಸಂಪಾದಿಸಿದರು. ಅಕ್ಕನ ಬೇರೆಯದೇ ಬಿಂಬ ರೂಪುಗೊಂಡಿತು. ಸಾಧಕಿ, ಅನುಭಾವಿ, ಕವಿ ಅಕ್ಕ ಎಂಬ ಬಿಂಬಗಳು ಬೆಳೆದವು.
ಅಕ್ಕನ ಬಗ್ಗೆ ಶಾನಗಳಿಲ್ಲ, ಆಕೆಯ ಗುರು ಯಾರು ತಿಳಿದಿಲ್ಲ, ಅಕ್ಕನ ಅಪ್ಪ ಅಮ್ಮನ ಹೆಸರೂ ಕಲ್ಪಿತ; ಅಕ್ಕ ಬದುಕಿದ್ದ ಉಡುತಡಿಯ ಹತ್ತಿರದ ಬಳ್ಳಿಗಾವೆ ಹನ್ನೆರಡನೆಯ ಶತಮಾನದಲ್ಲಿ ದೊಡ್ಡ ಪಟ್ಟಣ. ಬಿಜ್ಜಳನ ಅಧಿಕಾರಿಯಾಗಿ, ಮಂತ್ರಿಗೆ ಇರುವಂಥ ಸ್ಥಾನಮಾನ ಪಡೆದಿದ್ದ ಉದ್ಧಟ ಕಸಪಯ್ಯನೇ. ಕೌಶಿಕನೆಂಬ ಪಾತ್ರವಾಗಿ ಕಾವ್ಯದಲ್ಲಿ ಕಾಣಿಸಿಕೊಳ್ಳುವನು; ಅವನಿಂದ ತನಗಾದ ಅನ್ಯಾಯದ ಬಗ್ಗೆ ದೂರು ಕೊಡಲು ಮಹಾದೇವಿ ಕಲ್ಬುರ್ಗಿಯ ಹಾದಿ ಹಿಡಿದಿರಬಹುದು; ಅಲ್ಲಮ ತೋರಿದ ದಾರಿಯಲ್ಲಿ ಶ್ರಿಶೈಲಕ್ಕೆ ಹೋಗಿರಬಹು—ಇದು ಎಂ. ಚಿದಾನಂದ ಮೂರ್ತಿ ಮೂಡಿಸಿದ ಬಿಂಬ. ಅಕ್ಕ ʻಬೆಳಕಿನ ಬಾಣʼದ ಹಾಗೆ ಶ್ರೀಶೈಲಕ್ಕೆ ಹೋದಳು, ಶರಣ ಚಳವಳಿಯ ಹಂಗಿರದ ಅನುಭಾವಿ ಎಂಬ ಚಿತ್ರವನ್ನು ಜಿಎಸ್ ಶಿವರುದ್ರಪ್ಪ ರೂಪಿಸಿದರು.
ಎಪ್ಪತ್ತರದ ದಶಕದ ಚಳವಳಿಗಳ ಕಾಲದಲ್ಲಿ ಸಿ. ವೀರಣ್ಣನವರು ʻಕಾಯಕಜೀವಿಗಳ ಚಳವಳಿʼಯನ್ನು ಚಿತ್ರಿಸುತ್ತಾ ವಚನಗಳನ್ನು ದೊಡ್ಡ ಚಳವಳಿಯೊಂದರ ಉಪ ಉತ್ಪನ್ನಗಳಾಗಿ ಕಂಡರು. ಅಕ್ಕನ ವಚನ ಪ್ರತಿಭಟನೆಯ ದನಿಯಾಗಿ ಕೇಳಿಸಿತು.
ವಿಜಯಾ ದಬ್ಬೆ ಅವರ ಬರಹದಿಂದ ಅಕ್ಕನನ್ನು ಹೆಣ್ಣು ನೋಟದಿಂದ ಕಾಣುವ ಬಗೆ ಆರಂಭವಾಯಿತು. ಅಕ್ಕ ಪ್ರತಿಭಟನೆಯ ಸಂಕೇತವಾಗಿ ಕಂಡಳು. ಸ್ತ್ರೀವಾದ ಬೆಳೆದಂತೆ ಹೆಣ್ಣಿನ ಮನಸು, ಭಾಷೆ, ಭಾವ ಪ್ರತಿಭಟನೆಗಳ ಸಾರ ರೂಪವಾಗಿ ಅಕ್ಕ ಹೊಳೆದಳು.
ಲಿಂಗಾಯತ, ವೀರಶೈವ ಸಮುದಾಯದ ಹೆಣ್ಣು ಮಕ್ಕಳು ಅಕ್ಕನ ಬಳಗಗಳನ್ನು ರಾಜ್ಯಾದ್ಯಂತ ಕಟ್ಟಿಕೊಂಡಿದ್ದಾರೆ. ಅವರ ಕಣ್ಣಿಗೆ ಅಕ್ಕ ಮತಧರ್ಮದ ಉನ್ನತ ಆದರ್ಶವಾಗಿ, ಪೂಜೆಗೆ ಅರ್ಹವಾದ ವ್ಯಕ್ತಿಯಾಗಿ ಕಾಣುತ್ತಿದ್ದಾಳೆ
ಬಸವರಾಜ ಕಟ್ಟೀಮನಿಯವರ ʻಗಿರಿಯ ನವಿಲುʼ, ತಿಪ್ಪೇರುದದ್ರಸ್ವಾಮಿಯವರ ʻಕದಳಿಯ ಕರ್ಪುರʼ, ಮಾತೆ ಮಹಾದೇವಿಯವರ ʻಹೆಪ್ಪಿಟ್ಟ ಹಾಲು,ʼ ಎಚ್. ಎಸ್. ಅನುಪಮಾ ಅವರ ʻಬೆಳಗಿನೊಳಗುʼ ಇಂಥ ಗಮನಸೆಳೆಯುವ ಕಾದಂಬರಿಗಳು ಅಕ್ಕನ ರೊಮಾಂಟಿಕ್, ಆಧ್ಯಾತ್ಮಿಕ, ಆನುಭಾವಿಕ ಮತ್ತು ಚಾರಿತಿಕ ಬಿಂಬಗಳನ್ನು ರೂಪಿಸಿದವು.
ದಶಕದಲ್ಲಿ ಸಂಶಿ ಭೂಸನೂರ ಮಠ ಅವರು ೧೯೮೦ರಲ್ಲಿ ಬರೆದ ʻಭವ್ಯ ಮಾನವʼ ಮಹಾಕಾವ್ಯದಲ್ಲಿ ಅಕ್ಕನನ್ನು ಮನುಷ್ಯ ಸಾಧಿಸಬಹುದಾದ ಅತಿ ಉನ್ನತ ಸ್ಥತಿಯ ಆದರ್ಶವೆಂದು ಚಿತ್ರಿಸುತ್ತ ಇಡೀ ವಚನ ಸಾಹಿತ್ಯವನ್ನೇ ಹೊಸ ಓದಿಗೆ ಒಳಪಡಿಸಿದರು.
ಜಾನಪದದಲ್ಲಿ ಅಕ್ಕನ ಕುರಿತ ಸಣ್ಣಾಟ ಇರುವ ಹಾಗೆಯೇ ಅಕ್ಕನ ವ್ಯಕ್ತಿತ್ವವನ್ನು ವಸ್ತುವಾಗಿಸಿಕೊಂಡ ನೂರಾರು ಕವಿತೆಗಳು ಬಂದಿವೆ. ವಚನಗಳ ಅಕ್ಕ- ಯಶೊಧರ ಚರಿತೆಯ ಅಮೃತಮತಿ ಇಬ್ಬರೂ ಅಸಂಖ್ಯ ಕವಿತೆಗಳಿಗೆ ಕಾರಣರಾಗಿದ್ದಾರೆ..
ಸುಮಾರು ಒಂಬೈನೂರು ವರ್ಷಗಳ ಕಾಲ ಮಹದೇವಿ ಅಕ್ಕನ ಎಷ್ಟೊಂದು ಬಿಂಬಗಳು ಮೂಡಿವೆವೆ! ಎಷ್ಟು ಓದುಗರಿದ್ದಾರೋ ಕೇಳುಗರಿದ್ದಾರೋ ಅಷ್ಟು!
[ಮುಂದುವರೆಯುವುದು]

