ಕನ್ನಡ ಮನಸ್ಸು ರೂಪಿಸಿಕೊಂಡಿರುವ ಅಕ್ಕನ ಯಾವ ಬಿಂಬವೂ ಸುಳ್ಳಲ್ಲ, ಅಸಮರ್ಥನೀಯವೂ ಅಲ್ಲ… । ಓ.ಎಲ್.ನಾಗಭೂಷಣ ಸ್ವಾಮಿ
(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ…)
ಹನ್ನೆರಡನೆಯ ಶತಮಾನದಲ್ಲಿ ಉಡುತಡಿಯಲ್ಲಿ ಹುಟ್ಟಿ ಶ್ರೀಶೈಲಕ್ಕೆ ಹೋಗಿ ಚನ್ನಮಲ್ಲಿಕಾರ್ಜುನನೊಡನೆ ಒಂದಾದ ಅಕ್ಕ ಮಹಾದೇವಿ ವಚನಗಳನ್ನು ಯಾವಾಗ ಬರೆದಳು? ಅಥವಾ ಹೇಳಿದಳು?
ಅಕ್ಕನ ಬಗ್ಗೆ ಯಾವ ಶಾಸನವೂ ಸಿಗದೆ ಇರುವಂತೆಯೇ ಅಕ್ಕನೇ ಸ್ವತಃ ಬರೆದ ಯಾವ ಹಸ್ತಪ್ರತಿಯೂ ಸಿಕ್ಕಿಲ್ಲ.. ಹಾಗೆ ವಚನಗಳ ಹಸ್ತಪ್ರತಿ ಸಿಗುವುದೇ ಹದಿನಾಲ್ಕನೆಯ ಶತಮಾನದ ಕೊನೆಯ ಹೊತ್ತಿಗೆ ಎಂದು ವಿದ್ವಾಂಸರು ಹೇಳುತ್ತಾರೆ. ಅಂದರೆ ಅಕ್ಕನ ವಚನಗಳು ನಮಗೆ ಬರಹ ರೂಪದಲ್ಲಿ ಸಿಗುವುದೇ ಸುಮಾರು ಎರಡು ಶತಮಾನ ಕಳೆದ ಮೇಲೆ.
ಅಕ್ಕನ ವಚನಗಳೆಲ್ಲ ಒಟ್ಟಿಗೆ ಸಿಗುವುದೂ ಇಲ್ಲ. ಸುಮಾರು ೬೧ ಸಂಕಲನಗಳಲ್ಲಿ ಚೆದುರಿವೆ. ಬಾಯಿ ಮಾತಿನಲ್ಲಿ ಪ್ರಚಾರದಲ್ಲಿದ್ದ ವಚನಗಳನ್ನು ಸಂಕಲನಕಾರರು ತಮ್ಮ ತಮ್ಮ ಸಂಕಲನದ ಉದ್ದೇಶಕ್ಕೆ ಹೊಂದುವ ಹಾಗೆ ಸಣ್ಣಪುಟ್ಟ ಬದಲಾವಣೆ ಮಾಡಿ ಬರೆದುಕೊಂಡಿರುವುದು ತೀರ ಸಾಧ್ಯ ಮಹಾದೇವಿಯ ಅಂಕಿತವನ್ನೇ ಬಳಸಿಕೊಂಡು ಬೇರೆಯವರೂ ವಚನಗಳನ್ನು ಸೇರಿಸಿರುವ ಉದಾಹರಣೆಗಳೂ ಇವೆ.
ಗಮನವಿಟ್ಟು ಓದುವಾಗ ಕೆಲವು ವಚನಗಳು ಅಕ್ಕನ ಮಾತಿನ ತಿದ್ದುಪಡಿ, ಇನ್ನು ಕೆಲವು ಅವಳದು ಇರಲಾರವು ಎಂದು ಬಲವಾಗಿ ಅನಿಸಿದರೂ ಅದನ್ನು ಸಾಬೀತು ಮಾಡುವ ಪುರಾವೆಗಳು ಸಿಗುವುದಿಲ್ಲ. ಅಂಥ ಪರಿಷ್ಕಾರಗೊಂಡ ವಚನಗಳನ್ನು ಕನ್ನಡ ಮನಸ್ಸು ಅಕ್ಕನನ್ನು ಗ್ರಹಿಸಿದ ಬಗೆ ಎಂದೇ ತಿಳಿಯಬೇಕು. ಈ ಸಂವಾದದಲ್ಲಿ ನಾನು ಬಳಸಿರುವ ವಚನಗಳಿಗೂ ಅಕ್ಕನ ಮಿಕ್ಕ ವಚನಗಳಿಗೂ ಇರುವ ವ್ಯತ್ಯಾಸ ಓದುಗರಿಗೆ ಹೊಳೆಯುತ್ತದೆ. ಸುದೀರ್ಘವಾಗಿರುವ ರಚನೆಗಳು, ಸಂಸ್ಕೃತ ಪದ, ಶ್ಲೋಕಗಳಿಂದ ತುಂಬಿರುವ ಮತ್ತು ,, ಯಾವುದೋ ಅಚರಣೆಯನ್ನೋ ತತ್ವವನ್ನೋ ವಿವರಿಸುವ, ಸೃಷ್ಟಿಯ ಕಥೆಯನ್ನು ಹೇಳುವ ವಚನಗಳನ್ನು . ಯೋಗ ಶಾಸ್ತ್ರದ ಬಗೆಬಗೆಯ ಅಂಗಗಳ ವರ್ಣನೆ ಮಾಡುವ ವಚನಗಳನ್ನು ಈ ಸಂವಾದಲ್ಲಿ ಸೇರಿಸಿಕೊಂಡಿಲ್ಲ.
ಸಂವಾದಕ್ಕೆ ಆಯ್ದುಕೊಂಡಿರುವ ವಚನಗಳ ಭಾಷೆಗೂ ಉಳಿದ ವಚನಗಳ ಭಾಷೆಗೂ ʻಇವು ಬೇರೆ ಬೇರೆ ಮನೋಧರ್ಮದವರು ಬರೆದ ರಚನೆಗಳುʼ ಎಂದು ಅನಿಸುವಷ್ಟು ವ್ಯತ್ಯಾಸಗಳು ಕಾಣುತ್ತವೆ. ಇಲ್ಲಿನ ವಚನಗಳು ಹೆಣ್ಣಿನ ಭಾವನೆ, ಅನುಭವ, ವಿಚಾರಗಳನ್ನು ಆಪ್ತವಾಗಿ ಹೇಳುತ್ತವೆ. ಯೋಗಾಂಗ ತ್ರಿವಿಧಿಯ ನಿಗದಿತ ಛಂದಸ್ಸು, ಆರಂಭ ಮತ್ತು ಮುಕ್ತಾಯದ ರೀತಿ ನೋಡಿದರೆ ಅದು ಅಕ್ಕನದಿರಲಿ ಹನ್ನೆರಡನೆಯ ಶತಮಾನದ ಶರಣರ ರಚನೆ ಅಂತ ಕೂಡ ಅನಿಸುವುದಿಲ್ಲ. ʻಆಹಾರವ ಕಿರಿದು ಮಾಡಿರಣ್ಣʼ ಥರದ ವಚನಗಳ ಭಾಷೆಯಲ್ಲಿರುವ ಉದೇಶದ ಧ್ವನಿ ಹೊಂದಿರುವಂತ ರಚನೆಗಳು ಆಚರಣೆಗಳನ್ನು ಪ್ರತಿಪಾದನೆ ಮಾಡುವ ವಚನಗಳು ಕೂಡ ಬೇರೆಯದೇ ವರ್ಗಕ್ಕೆ ಸೇರುತ್ತವ.
ಒಬ್ಬರೇ ಎರಡು ಮೂರು ಭಿನ್ನ ಶೈಲಿಗಳಲ್ಲಿ ಬರೆಯುವುದಿಲ್ಲವೇ ಎಂಬ ಪ್ರಶ್ನೆಗೆ ನಿಗದಿಯಾದ ಉತ್ತರವಿಲ್ಲ. ಬೊಮ್ಮನ ಹಳ್ಳಿಯ ಕಿಂದರಿ ಜೋಗಿ, ಮಲೆಗಳಲ್ಲಿ ಮದುಮಗಳು, ರಾಮಾಯಣ ದರ್ಶನಂ ಬರೆದ ಕುವೆಂಪು ಭಾಷೆ ಎಲ್ಲೆಡೆಯೂ ಒಂದೇ ಥರ ಇದೆಯೇ? ಅಕ್ಕ ಯಾಕೆ ಬೇರೆ ಬೇರೆ ಥರ ವಚನ ರಚಿಸಿರಬಾರದು?
ಹಾಗಿರಲಾರದು ಅನಿಸಲು ನಮಗೆ ಸಿಕ್ಕಿರುವ ವಚನಗಳು ಬೇರೆ ಬೇರೆ ಕಾಲದವು ಇರಬಹುದು ಅನ್ನುವ ಸೂಚನೆ, ಭಾಷೆ, ಧೋರಣೆ, ಪದಗಳ ಅಯ್ಕೆ ಒಂದು ಕಾರಣ. , ಅವು ಹೇಳುವ ವಿಷಯ ಮತಧರ್ಮದ ಪರಿಪಾಲನೆಯ ಆಸಕ್ತಿ ಇರುವ ಪರಿಮಿತ ವಲಯದ ಓದುಗ/ಕೇಳುಗರನ್ನು ಉದ್ದೇಶಿಸಿದ್ದು ಅನಿಸುತ್ತದೆ. ಇತರ ಶರಣರು ಬರೆದಿರುವ ಅಂಥವೇ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ವ್ಯಕ್ತಿಯ ಅನುಭವವನ್ನು ಆಧರಿಸಿ ರೂಪುತಳೆದ ವಿಚಾರಗಳು ಹೇಗೆ ಶತಮಾನಗಳ ಅವಧಿಯಲ್ಲಿ ಸಾಂಸ್ಥಿಕ ಧರ್ಮದ ಪ್ರತಿಪಾದನೆಯಾಗಿ ಬಳಕೆಯಾದವು ಅನ್ನುವ ರೋಚಕ ಇತಿಹಾಸವನ್ನು ಕಂಡುಕೊಳ್ಳಬಹದು ಅನಿಸುತ್ತದೆ. ಅದು ವಿದ್ವತ್ತಿನ ಕೆಲಸ.
ಮನುಷ್ಯಾನುಭವಗಳನ್ನು ಹೇಳುವ ವಚನಗಳು ನಮ್ಮ ಕಾಲಕ್ಕೆ ಹೇಗೆ ಮುಖ್ಯವಾದ ಸಂಗತಿಗಳನ್ನು ಪಿಸುನುಡಿಯುತ್ತವೆ ಅನ್ನುವುದನ್ನು ಸಾಧ್ಯವಾದಷ್ಟೂ ಹೆಚ್ಚು ಓದುಗರೊಡನೆ ಹಂಚಿಕೊಳ್ಳುವ ಉದ್ದೇಶದಿಂದ ಈ ಎಪ್ಪತ್ತೈದು ವಚನಗಳನ್ನು ಮಾತ್ರ ಆರಿಸಿಕೊಂಡಿದ್ದೇನೆ.
ಅಕ್ಕನ ಈ ವಚನಗಳಲ್ಲಿ ಅವಳು ಮದುವೆ ಆಗಿದ್ದಳೆಂಬುದಕ್ಕೂ ಇಲ್ಲವೆಂಬುದಕ್ಕೂ ಸಮರ್ಥನೆ ಇದೆ. ಅವಳು ಕಲ್ಯಾಣಕ್ಕೆ ಹೋಗಿದ್ದಳೆಂದೂ ವಾದಿಸಲು ಸಾಧ್ಯವಿದೆ, ಹೋಗಿರಲಿಲ್ಲವೆನ್ನುವುದಕ್ಕೂ ಸಾಧ್ಯವಿದೆ. ಆರು ಸ್ಥಲಗಳ ಪರಿಕಲ್ಪನೆಯನ್ನು ಸ್ಥೂಲವಾಗಿ ಅನುಸರಿಸುತ್ತಾ ಆಯ್ದ ವಚನಗಳನ್ನು ನಾನು ಜೋಡಿಸಿಕೊಂಡಿರುವ ಕ್ರಮದಲ್ಲಿ ಅಕ್ಕನ ಬದುಕಿನ ಚಿತ್ರ ಮೂಡುತ್ತದೆ ಅಷ್ಟೆ. ಇವೇ ವಚನಗಳನ್ನೇ ಬಳಸಿಕೊಂಡು ಬೇರೆಯ ಛಾಯೆ ಇರುವ ಅಕ್ಕನ ಬಿಂಬ ಮೂಡುವ ಹಾಗೆ ಜೋಡಣೆ ಮಾಡುವುದೂ ಸಾಧ್ಯವಿದೆ.
ಕನ್ನಡ ಮನಸ್ಸು ರೂಪಿಸಿಕೊಂಡಿರುವ ಅಕ್ಕನ ಯಾವ ಬಿಂಬವೂ ಸುಳ್ಳಲ್ಲ, ಅಸಮರ್ಥನೀಯವೂ ಅಲ್ಲ. ನನ್ನ ಮನಸಿನಲ್ಲಿ ಮೂಡಿದ ಅಕ್ಕನ ಬಿಂಬವನ್ನು ಕನಿಷ್ಠ ವಿವರಣೆ, ವ್ಯಾಖ್ಯಾನಗಳೊಡನೆ ಮೂಡಿಸಲು ಒದಗಿ ಬರುವಂಥ ರಚನೆಗಳನ್ನು ಆಯ್ದುಕೊಂಡಿದ್ದೇನೆ, ಅಷ್ಟೇ.
[ಮುಂದುವರೆಯುವುದು]
ಮುಂದಿನ ವಿವರಗಳು ಹೆಚ್ಚಿನ ಓದನ್ನು ಬಯಸುವವರಿಗಾಗಿ:
ಅಕ್ಕನ ವಚನಗಳು
೧೯೨೬ ಶ್ರೀ ಮಹದೇವಿಯಕ್ಕನ ವಚನಗಳು ಫ ಗು ಹಳಕಟ್ಟಿ,ಶಿವಾನುಭವ ಗ್ರಂಥಮಾಲೆ,ಬಿಜಾಪುರ
೧೯೬೬ ಮಹದೇವಿಯಕ್ಕನ ವಚನಗಳು, ಸಂಪಾದಕರು-ಡಾ.ಎಲ್.ಬಸವರಾಜು ಸಪ್ನಾ ಬುಕ್ ಹೌಸ್,ಬೆಂಗಳೂರು
೧೯೬೮ ಸಿ, ಹಿರೇಮಠ್,ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ., ಎರಡನೆಯ ಮು. ೧೯೭೩
೧೯೬೬ ಶಿವಶರಣೆಯರ ವಚನ ಸಂಪುಟ, (ಸಮಗ್ರ ವಚನಸಂಪುಟ ಭಾಗ ೫) ಸಂಪಾದಕರು-ವೀರಣ್ಣ ರಾಜೂರ, ಕನ್ನಡ ಪುಸ್ತಕ ಪ್ರಾಧಿಕಾರದ ಪ್ರಕಟಣೆ, ಎರಡನೆಯ ಪರಿಷ್ಕೃತ ಮುದ್ರಣ ೨೦೦೧
ದಿನಾಂಕ ನಮೂದಿಸಿಲ್ಲ)ವಮಹದೇವಿಯಕ್ಕಳ ವಚನ, ಸಂಪಾದಕರು-ಸಾಶಿ ಮರುಳಯ್ಯ ಮತ್ತು ಎಸ್. ಶಿವಣ್ಣ, ಬೆಂಗಳೂರು. ೨೦೧೨ರ ಆವೃತ್ತಿಯಲಿ ಸಾಶಿ ಮರುಳಯ್ಯನವರ ಹೆಸರು ಮಾತ್ರ ಇದೆ.
ಅಕ್ಕನ ಬಗ್ಗೆ ಮುಖ್ಯ ಲೇಖನಗಳನ್ನು ನೋಡಲು :
೧೯೯೧: ವಚನ ಸಾಹಿತ್ಯದ ಪ್ರಾಚೀನ ಆಕರ ಕೋಶ-ಸಂ. ಎಂ.ಎಂ. ಕಲಬುರ್ಗಿ, ವಿಜಯಶ್ರೀ ಹಿರೇಮಠ. ವೀರಶೈವ ಅಧ್ಯಯನ ಸಂಸ್ಥ, ಗದಗ. ವಚನಗಳು ಯಾವ ಯಾವ ಕಾಲದ ಹಸ್ತಪ್ರತಿಗಳಲ್ಲಿ ದೊರೆಯುತ್ತವ ಅನ್ನುವ ಮಾಹಿತಿಗೆ.
೨೦೧೧ ಅಕ್ಕಮಹಾದೇವಿ,ಸಂಪಾದಕರು-ವಿಜಯಶ್ರೀ ಸಬರದ, ಗುಲ್ಬರ್ಗಾ ವಿಶ್ವವಿದ್ಯಾಲಯ,
೨೦೧೫ ಅಕ್ಕಮಹಾದೇವಿ ಸಮಗ್ರ ಸಾಹಿತ್ಯ ಸಂಪುಟ-ಸಂಪಾದಕರು ಲೀಲಾವತಿ ಆರ್.ಪ್ರಸಾದ್, ಸ್ನೇಹ ಬುಕ್ ಹೌಸ್, ಬೆಂಗಳೂರು, (ಈ ಪುಸ್ತಕದಲ್ಲಿಆಧುನಿಕ ಪೂರ್ವ ಕಾಲದಲ್ಲಿ ಅಕ್ಕಮಹಾದೇವಿಯನ್ನು ಕುರಿತು ದೊರೆಯುವ ಆಕರಗಳೆಲ್ಲವೂ ಸಿಗುತ್ತವೆ)

