ನಾವು ಇಂದು ಚಾರಿತ್ರಿಕ ಸತ್ಯ ಅಥವ ವೈಚಾರಿಕ ಸತ್ಯಗಳನ್ನು, ಧರ್ಮವು ಸ್ಥಾಪಿಸಿರುವ ಪರಿಕಲ್ಪನೆಗಳಿಗೆ ಹೊಂದುವ ಮಾತುಗಳನ್ನು ಮಾತ್ರ ʻಸತ್ಯʼವೆಂದು ನಂಬುವ ಮನಸ್ಥಿತಿಯಲ್ಲಿದ್ದೇವೆ. ಅವೆರಡನ್ನೂ ಮೀರಿದ ಭಾವಸತ್ಯವೂ ಇದೆ. ಅಕ್ಕಮಹಾದೇವಿ ಭಾವಸತ್ಯಕ್ಕೆ ಸಲ್ಲುವವಳು. ನನ್ನ ಈ ನಂಬಿಕೆಗೆ ಬಲ ಕೊಡುವಂತ ವಚನಗಳನ್ನು ಆಯ್ದುಕೊಂಡಿದ್ದೇನೆ ~ ಓಎಲ್.ನಾಗಭೂಷಣ ಸ್ವಾಮಿ
(ಹಿಂದಿನ ಸಂಚಿಕೆಯಿಂದ ಮುಂದುವರಿದಿದೆ…)
ಈ ವಚನಗಳು ನನಗೆ ಇಷ್ಟ ಅನ್ನುವುದು ಮೊದಲ ಮತ್ತು ಮುಖ್ಯ ಕಾರಣ.
ಅದಲ್ಲದೆ ಬುದ್ಧಿಯು ವಿಶ್ಲೇಷಣೆ ಮಾಡಿ ಹೇಳುವ ಕಾರಣವೂ ಇದೆ: ಅಕ್ಕ ಈ ವಚನಗಳನ್ನು ತಾನೇ ಬರೆದಳೇ, ಅವಳು ಹಾಗೆ ಅಲೆದಾಡುತ್ತ ಬದುಕಿದಾಗ ಹೇಳಿರಬಹುದಾದ ಮಾತು ಯಾರು ಬರೆದುಕೊಂಡರು, ಅಥವಾ ಅವಳು ಅಲೆದಾಡಲೇ ಇಲ್ಲವೇ, ಇದ್ದ ಊರಲ್ಲೆ ಎಲ್ಲ ಥರದ ತೊಡಕು ಎದುರಿಸುತ್ತ ಕೊನೆಗೆ ಶ್ರೀಶೈಲಕ್ಕೆ ಹೋದಳೋ ಅಥವಾ ಇದ್ದಲ್ಲೇ ಚೆನ್ನಮಲ್ಲಿಕಾರ್ಜುನನನ್ನು ಕೂಡಿದ ಅನುಭವ ಪಡೆದು ಇಲ್ಲವಾದಳೋ—ಯಾರಿಗೆ ಗೊತ್ತು?
ಈಗ ಸಿಕ್ಕಿರುವ ಅಕ್ಕನ ೪೩೪ ವಚನ, ಯೋಗಾಂಗ ತ್ರಿವಿಧಿ, ಮಂತ್ರಗೋಪ್ಯ, ತತ್ವಪದ, ಕೊರವಂಜಿ ಪದಗಳನ್ನು ಇಟ್ಟುಕೊಂಡು ಅಕ್ಕನ ಚರಿತ್ರೆಯನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ವಚನಗಳನ್ನು ಬೇರೆ ಬೇರೆ ಕವಿಗಳ ಕೃತಿ, ಬಗೆಬಗೆಯ ಸಂಕಲನ, ಹೀಗೆ ಸುಮಾರು ೬೫ ಕೃತಿಗಳಲ್ಲಿ ಚೆದುರಿ ಹೋಗಿವೆ. ಅವನ್ನು ಆಯ್ದು ಈಗ ಪುಸ್ತಕಗಳಲ್ಲಿ ಕಾಣುವ ಹಾಗೆ ಜೋಡಿಸಿಕೊಂಡಿದ್ದೇವೆ
ಅಕ್ಕ ಬದುಕಿದ್ದ ಕಾಲದ್ದೇ ಆದ ವಚನಗಳ ಹಸ್ತಪ್ರತಿ ಯಾವುದೂ ಸಿಕ್ಕಿಲ್ಲ. ಹದಿಮೂರನೆಯ ಶತಮಾನದ ಮಧ್ಯಭಾಗದಿಂದ ಹಿಡಿದು ಹದಿನೇಳನೆಯ ಶತಮಾನದವರೆಗೆ ಬೇರೆ ಬೇರೆ ಉದ್ದೇಶಕ್ಕೆ ಸಂಕಲನಗೊಂಡ ಬಗೆಬಗೆಯ ಹಸ್ತಪ್ರತಿಗಳು ದೊರೆತಿವೆ. ಅಕ್ಕನ ವಚನಗಳು ಸಿಗುವವರೆಗೆ ಸುಮಾರು ಮೂರು ಶತಮಾನ ಕಾಲ ಅಕ್ಕನ ವಚನಗಳು ಹೇಗೆ ಚಲಾವಣೆಯಲ್ಲಿದ್ದವು—ಗೊತ್ತಿಲ್ಲ. ಆಡು ನುಡಿಯ ಪಠ್ಯವೊಂದು ಹೇಗೆ ಜನಸಮುದಾಯದಲ್ಲಿ ವ್ಯಾಪಕವಾಗಿ ಹರಡಿ ಹೇಗೆ ಗಟ್ಟಿಯಾದ ರೂಪವೊಂದನ್ನು ಪಡೆಯುತ್ತದೆ ಅನ್ನುವ ಬಗ್ಗೆ ನಮ್ಮ ವಿದ್ವಾಂಸರು ಯಾರೂ ಚರ್ಚಿಸಿಲ್ಲ.
ವಚನಗಳಲ್ಲಿಯೂ ಎರಡು ಬಗೆಯವು ಇವೆ: ಎಂಟರಿಂದ ಹತ್ತು ಸಾಲು ಮೀರದ, ವಾಸ್ತವ ಚಿತ್ರ, ಅದು ಮೂಡಿಸಿದ ಭಾವ, ಹೊಳೆದ ವಿಚಾರಗಳನ್ನು ಹೇಳುವ, ಭಾವವೇ ಮುಖ್ಯವಾಗಿರುವ ಆಪ್ತ ರಚನೆಗಳು ಒಂದು ಬಗೆ; ಪಾರಿಭಾಷಿಕ ಪದಗಳು ಹೇರಳವಾಗಿ ಬಳಕೆಯಾಗಿರುವ ಹತ್ತು ಸಾಲುಗಳಿಗಿಂತ ಹೆಚ್ಚಾಗಿ ಹಲವು ಪುಟಗಳಷ್ಟು ದೀರ್ಘವಾದ ತತ್ವಚಿಂತನೆ, ಧರ್ಮದ ವಿಚಾರ, ಆಚರಣೆ, ಯೋಗದ ಸಂಗತಿ, ಪರಮತ ಖಂಡನೆಯಂಥ ರಚನೆಗಳು ಇನ್ನೊಂದು ಬಗೆ. ಓದುಗರಿಗೆ ಗೊತ್ತಿರುವ ಅಕ್ಕನ ವಚನಗಳಿಗೂ ಇವಕ್ಕೂ ಭಾಷೆ, ಭಾವ, ರಚನೆಗಳಲ್ಲಿ ಸಂಬಂಧವೇ ಇಲ್ಲ ಅನ್ನಿಸಬಹುದು. ಇಂದು ಯಾವುದನ್ನು ಸಾಮಾಜಿಕ ಎಂದು ಗುರುತಿಸುತ್ತೇವೋ ಅಂಥ ಆಸಕ್ತಿಯನ್ನು ಎದ್ದುಕಾಣುವ ಹಾಗೆ ತೋರಿಸುವ ಅಕ್ಕನ ವಚನಗಳು ಇಲ್ಲ.
ಇದು ಹನ್ನೆರಡನೆಯ ಶತಮಾನದ ಅಕ್ಕಮಹಾದೇವಿಯದೇ ಕಥೆ ಎಂದು ಓದಲು ಹೊರಟಾಗ ಆಕೆಯ ವ್ಯಕ್ತಿತ್ವದ ಸುತ್ತಲೂ ಹಬ್ಬಿ ಹರಡಿರುವ ಬೇರೆ ಬೇರೆ ಕಥೆಗಳೆಲ್ಲದರ ಪರಿಣಾಮಕ್ಕೆ ಒಳಗಾಗಿರುತ್ತೇವೆ. ಆಕೆಯನ್ನು ವೀರ ವಿರಾಗಿಣಿಯೆಂದೋ, ಗಿರಿಯ ನವಿಲು ಎಂದೋ, ಕದಳಿಯ ಕರ್ಪುರವೆಂದೋ ಭಾವಿಸಿ ಆ ಬಗೆಯ ಬಿಂಬಕ್ಕೆ ಹೊಂದದ ವಚನಗಳಿಂದ ಕಿರಿಕಿರಿ ಅನುಭವಿಸುತ್ತೇವೆ. ಅಥವಾ ಅವಳದೆಂದು ಹೇಳಲಾಗುವ ಅನೇಕ ವಚನಗಳಲ್ಲಿ ವ್ಯಕ್ತವಾಗುವ ಮತೀಯ ಧಾರ್ಮಿಕ ಪರಿಭಾಷೆಗಳ ಲೋಕದಲ್ಲಿ ಕಳೆದು ಹೋಗಿ, ಆಯಾ ಪರಿಭಾಷೆಗಳಿಗೆ ಹೊಂದುವಂಥ ಅರ್ಥಗಳನ್ನೇ ನಿಜವೆಂದು ಒಪ್ಪಲು ಹಂಬಲಿಸುತ್ತೇವೆ.
ಯಾವ ಬಗೆಯ ಓದೂ ತಪ್ಪಲ್ಲ, ಸರಿಯೂ ಅಲ್ಲ. ಓದುಗರು ಒಬ್ಬೊಬ್ಬರೂ ಅವರದೇ ಅನುಭವ, ಆಲೋಚನೆ, ಚಿಂತನೆ, ತತ್ವಗಳಿಂದ ರೂಪುಗೊಂಡಿರುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವನ್ನೆಲ್ಲ ತೊರೆದು ಓದುವುದು ಬಹಳ ಕಷ್ಟ. ಹಾಗಾಗಿಯೇ ಎಷ್ಟು ಓದುಗರು ಇರುತ್ತಾರೋ ಅಷ್ಟು ಅರ್ಥಗಳು ರೂಪುಗೊಳ್ಳುತ್ತಲೇ ಇರುತ್ತವೆ. ಅಕ್ಕನವಚನಗಳಂಥ ರಚನೆಗಳು ಹಲವು ಶತಮಾನಗಳ ಅನೇಕ ಬಗೆಗಳಲ್ಲಿ ಪ್ರಸರಣ ಹೊಂದುತ್ತ ಸಾವಿರಾರು ರೂಪಗಳಲ್ಲಿ ಅಕ್ಕ ಕನ್ನಡ ಮನಸ್ಸನ್ನು ಆವರಿಸಿಕೊಂಡಿದ್ದಾಳೆ.
ನಾವು ಇಂದು ಚಾರಿತ್ರಿಕ ಸತ್ಯ ಅಥವ ವೈಚಾರಿಕ ಸತ್ಯಗಳನ್ನು, ಧರ್ಮವು ಸ್ಥಾಪಿಸಿರುವ ಪರಿಕಲ್ಪನೆಗಳಿಗೆ ಹೊಂದುವ ಮಾತುಗಳನ್ನು ಮಾತ್ರ ʻಸತ್ಯʼವೆಂದು ನಂಬುವ ಮನಸ್ಥಿತಿಯಲ್ಲಿದ್ದೇವೆ. ಅವೆರಡನ್ನೂ ಮೀರಿದ ಭಾವಸತ್ಯವೂ ಇದೆ. ಅಕ್ಕಮಹಾದೇವಿ ಭಾವಸತ್ಯಕ್ಕೆ ಸಲ್ಲುವವಳು. ನನ್ನ ಈ ನಂಬಿಕೆಗೆ ಬಲ ಕೊಡುವಂತ ವಚನಗಳನ್ನು ಆಯ್ದುಕೊಂಡಿದ್ದೇನೆ.
[ಮುಂದುವರೆಯುತ್ತದೆ]

