ಕಾಫಿ ಗಿಡಗಳು ಮೊದಲ ಸಲ ಚಿಗುರೊಡೆದಿದ್ದು ಯಾವಾಗಲೋ ಗೊತ್ತಿಲ್ಲ. ಆದರೆ, ಮೊದಲ ಸಲ ಕಣ್ಣಿಗೆ ಬಿದ್ದಿದ್ದು, ಪಾನೀಯವಾಗಿ ಬದಲಾಗಿದ್ದು ಮಾತ್ರ ಒಂಭತ್ತನೇ ಶತಮಾನದಲ್ಲಿ. ಹೇಗೆ ಗೊತ್ತಾ? ಇಲ್ಲಿದೆ ನೋಡಿ…
ಕ್ರಿ.ಶ. ಸುಮಾರು ೮೫೦ ರ ಸುಮಾರಿಗೆ ಇಥಿಯೋಪಿಯಾದ (ಅಬಿಸೀನಿಯಾ) ಕಾಫಾ ಗುಡ್ಡಗಾಡು ಪ್ರದೇಶದಲ್ಲಿ ಈ ಕಥೆ ನಡೆಯಿತು. ಅಲ್ಲಿ ಖಲೀದಿ ಎಂಬ ಹೆಸರಿನ ಒಬ್ಬ ಕುರಿಗಾಹಿಯೊಬ್ಬನಿದ್ದ. ದಿನಾ ಬೆಳಗ್ಗೆ ಮೇಕೆಗಳನ್ನು ಬೆಟ್ಟದ ಮೇಲೆ ಕರೆದೊಯ್ದರೆ, ಅವನು ಹಿಂತಿರುಗುತ್ತಿದ್ದುದು ಸೂರ್ಯಾಸ್ತವಾದ ಮೇಲೇ.
ಒಂದು ದಿನ, ಖಲೀದಿ ಒಂದು ವಿಚಿತ್ರ ದೃಶ್ಯ ಕಂಡ. ಸಾಮಾನ್ಯವಾಗಿ ಸಾಯಂಕಾಲದ ವೇಳೆಗೆ ಸುಸ್ತಾಗಿ ಮಲಗುತ್ತಿದ್ದ ಮೇಕೆಗಳು ಅಂದು ವಿಚಿತ್ರವಾಗಿ ವರ್ತಿಸುತ್ತಿದ್ದವು. ಅವು ಕುಣಿಯುತ್ತಾ, ಓಡುತ್ತಾ ಚಟುವಟಿಕೆಯಿಂದ ಇದ್ದವು. ಕೆಳಗೆ ಇಳಿದ ಮೇಲೆ ಆ ರಾತ್ರಿ ಅವು ಸ್ವಲ್ಪ ಹೊತ್ತೂ ಮಲಗಲಿಲ್ಲ.
ಇದಕ್ಕೆ ಕಾರಣವೇನಿರಬಹುದೆಂದು ಖಲೀದಿ ಆಶ್ಚರ್ಯದಿಂದ ಹುಡುಕಿದಾಗ, ಒಂದು ಅಪರಿಚಿತ ಗಿಡದ ಪೊದೆಯಲ್ಲಿ ಕೆಂಪು ಬಣ್ಣದ ಹಣ್ಣುಗಳು ಬಿಟ್ಟಿದ್ದನ್ನು ನೋಡಿದ. ಮೇಕೆಗಳಿಗೆ ಅವನ್ನು ತಿನ್ನಿಸಿದಾಗ ಅವು ಹಿಂದಿನ ದಿನದಂತೆಯೇ ಕುಣಿದಾಡತೊಡಗಿದವು. ಕುತೂಹಲಗೊಂಡ ಖಲೀದಿ ತಾನೂ ಆ ಕೆಂಪು ಹಣ್ಣುಗಳನ್ನು ತಿಂದ. ಕೆಲವೇ ಕ್ಷಣಗಳಲ್ಲಿ, ಆಯಾಸವೆಲ್ಲಾ ಮಾಯವಾಗಿ, ಅವನಲ್ಲೂ ಅದೇ ಉತ್ಸಾಹ ಮತ್ತು ಶಕ್ತಿ ತುಂಬಿ ತುಳುಕಿತು.
ತನ್ನ ಈ ಹೊಸ ಅನ್ವೇಷಣೆಯ ಬಗ್ಗೆ ಆಶ್ಚರ್ಯಚಕಿತನಾದ ಖಲೀದಿ, ಆ ಹಣ್ಣುಗಳನ್ನು ಹತ್ತಿರದಲ್ಲೇ ಇದ್ದ ಮೌಲ್ವಿಯ ಬಳಿ ತೆಗೆದುಕೊಂಡು ಹೋದ. ಮೌಲ್ವಿ ಆ ಹಣ್ಣುಗಳನ್ನು ನೋಡಿದ ತಕ್ಷಣ, “ಇದು ಸೈತಾನನ ಸೃಷ್ಟಿ, ದುಷ್ಟ ಶಕ್ತಿಯ ಫಲ!” ಎಂದು ಹೇಳಿ, ಅವನ್ನು ಬೆಂಕಿಗೆ ಎಸೆದುಬಿಟ್ಟ.
ಆದರೆ, ಆಗ ಒಂದು ಅದ್ಭುತ ನಡೆಯಿತು. ಬೆಂಕಿಯ ಉರಿಯಲ್ಲಿ ಆ ಹಣ್ಣುಗಳು ಬೇಯುತ್ತಿದ್ದಂತೆ ಅದರಿಂದ ಅದ್ಭುತವಾದ ಮಾದಕ ಪರಿಮಳ (ಸುವಾಸನೆ) ಹರಡಿತು. ಆ ಪರಿಮಳ ಎಷ್ಟೊಂದು ಮನಮೋಹಕವಾಗಿತ್ತೆಂದರೆ, ಬೆಂಕಿಗೆ ಎಸೆದಿದ್ದು ಸೈತಾನನ ಸೃಷ್ಟಿಯಲ್ಲ, ಜನ್ನತಿನ ಹಣ್ಣು ಅನ್ನಿಸಿಬಿಟ್ಟಿತು ಮೌಲ್ವಿಗೆ!
ತಕ್ಷಣವೇ ಆ ಸುಟ್ಟ ಹಣ್ಣುಗಳನ್ನು ಹೊರತೆಗೆದು, ಪುಡಿ ಮಾಡಿ, ಬಿಸಿ ನೀರಿಗೆ ಬೆರೆಸಿದ. ಈ ಮಿಶ್ರಣವೇ ಜಗತ್ತಿನ ಮೊದಲ ಕಾಫಿ ಪಾನೀಯವಾಯಿತು. ಈ ಪಾನೀಯದಿಂದ ಜಾಗರಣೆಗೆ ಅನುಕೂಲವಾಗುವುದೆಂದು ಮೌಲ್ವಿ ಕಂಡುಕೊಂಡ. ಅಂದಿನಿಂದ ಪ್ರಾರ್ಥನಾ ಸಭೆಗಳಲ್ಲಿ ಈ ಪಾನೀಯ ಕಡ್ಡಾಯವಾಯಿತು. ಕಾಫಾ ಪ್ರದೇಶದಲ್ಲಿ ಮೊದಲು ಸಿಕ್ಕಿದ್ದರಿಂದ ಜನ ಅದನ್ನು ಕಾಫಿ ಎಂದು ಕರೆದರು.
ಹೀಗೆ ಕುಣಿಯುವ ಮೇಕೆಗಳಿಂದ ಪ್ರಾರಂಭವಾದ ಕಾಫಿಯ ಕಥೆ, ಅಬಿಸೀನಿಯಾದ ಮೌಲ್ವಿಯ ಕೈಯಲ್ಲಿ ಬೆಳೆದು ಪ್ರಪಂಚದಾದ್ಯಂತ ಹರಡಿತು.

