ಈ ಇಡಿಯ ಪುಸ್ತಕ ಮುಕುಂದ ರಾವ್ ಅವರ ವೈಯಕ್ತಿಕ ಅನುಭವ ಮತ್ತು ಗ್ರಹಿಕೆಯನ್ನು ಆಧರಿಸಿದ್ದರೂ ಇದು ಪ್ರತಿಯೊಬ್ಬ ಸೀಕರ್ ನನ್ನದೂ ಹೌದು ಅಂದುಕೊಳ್ಳಬಹುದಾದ, ಮತ್ತು ತಾವು ಕಂಡಿದ್ದು ಹಾವನ್ನೋ ಹಗ್ಗವನ್ನೋ ಎಂದು ಒರೆಗೆ ಹಚ್ಚಿಕೊಳ್ಳುವಂತೆ ಮಾಡಬಹುದಾದ ಪುಸ್ತಕ. ಇದರ ಕನ್ನಡಾನುವಾದ, ಓದುತ್ತ ಓದುತ್ತ ಅನುವಾದ ಅನ್ನುವುದನ್ನೇ ಮರೆಸುವಷ್ಟು ಸರಾಗವಾಗಿದೆ, ಸೊಗಸಾಗಿದೆ. ಸಂತೋಷ್ ನಾಯಕ್ ಅವರು ಇದು ತಮ್ಮದೇ ಅನುಭವ ಅನ್ನುವಷ್ಟು ಸಹಜವಾಗಿ ಇದನ್ನು ಅನುವಾದಿಸಿದ್ದಾರೆ । ಚೇತನಾ ತೀರ್ಥಹಳ್ಳಿ
ಆಧ್ಯಾತ್ಮಿಕತೆಯೆನ್ನುವುದು ಒಂದು ಬಗೆಯ ಸೂಕ್ಷ್ಮ ವ್ಯವಹಾರವಾಗಿದ್ದು, ಅದರ ಹಾದಿಯು ಕ್ರಮಿಸಲು ಬಹು ಪ್ರಯಾಸಕರವಾದದ್ದು. ಕಠೋಪನಿಷತ್ ಎಚ್ಚರಿಸುವಂತೆ, ಅದು ಬರೀ ಕತ್ತಿಯಂಚಿನ ನಡಿಗೆಯಷ್ಟೇ ಆಗಿರದೆ ನೂರಾರು ಆತ್ಮವಂಚನೆಯ ಮೋಡಿಗಳಿಂದ ತುಂಬಿಹೋಗಿದೆ. ಇದರಲ್ಲಿ ನಡೆಯುವವರು ಎಚ್ಚರಿಕೆಯುಳ್ಳವರೂ ಅತ್ಯಂತ ಪ್ರಾಮಾಣಿಕರೂ ಆಗಿರಬೇಕು. ಪ್ರಾಮಾಣಿಕತೆ ಇರದ ಸತ್ಯವನ್ನು ಸಮೀಪಿಸಲು ಸಾಧ್ಯವಿಲ್ಲ. ಇದೇ ಅಧ್ಯಾತ್ಮದ ಹಾದಿಯ ಪ್ರಥಮ ಪಾಠವಾಗಿದೆ. ಹುಡುಕಾಟದಲ್ಲಿ ಪ್ರಾಮಾಣಿಕತೆ ಇಲ್ಲದೆ ಹೋದರೆ ನಾವು ಧಾರ್ಮಿಕ ವಂಚನೆ ಮತ್ತು ಮೋಸದ ಹಾದಿಗಳಲ್ಲಿ ಹಾಗೂ ಅಡ್ಡದಾರಿಗಳಲ್ಲಿ ಅತ್ತಿಂದಿತ್ತ ಗೊತ್ತುಗುರಿ ಇಲ್ಲದಂತೆ ಅಲೆಯುತ್ತಿರುತ್ತೇವೆ.
ದುರದೃಷ್ಟವಶಾತ್, ಅಧ್ಯಾತ್ಮದ ಹೆಸರಿನಲ್ಲಿ ಇಂದು ನಡೆಯುತ್ತಿರುವ ಚಟುವಟಿಕೆಗಳಲ್ಲಿ ಅನೇಕವು ಕಪಟತನದಿಂದ ಕೂಡಿರುವಂಥವು ಮತ್ತು ಈಗಿನ ಗುರುಗಳನೇಕರು ವಿವಿಧೋದ್ದೇಶ ಸಂಸ್ಥೆಗಳಂತಾಗಿದ್ದಾರೆ. (ಮುಕುಂದ ರಾವ್ Between the Serpent and the rope । ಲೇಖಕರ ಮಾತುಗಳ ಕನ್ನಡಾನುವಾದ : ಸಂತೋಷ್ ನಾಯಕ್ ಆರ್)
ಭಾರತೀಯ ದರ್ಶನ ಪರಂಪರೆಗೆ ದೀರ್ಘವಾದ ಇತಿಹಾಸವಿದ್ದು, ಚಿಂತನೆ ಹಾಗೂ ಪ್ರಶ್ನೆಯೇ ಇಲ್ಲಿನ ತಾತ್ವಿಕತೆಯ ತಳಹದಿಯಾಗಿದೆ. ಆದರೀಗ ಪ್ರಶ್ನೆ, ವಿಮರ್ಶೆಗಳಿಗೆ ಅವಕಾಶ ಕೊಡದೆ, ತಾತ್ವಿಕ ಚರ್ಚೆ ಅಥವಾ ಆಧ್ಯಾತ್ಮಿಕ ಸ್ಪಷ್ಟತೆಗಳೂ ಇಲಲ್ದ, ಕೇವಲ ಹಿಂಬಾಲಕರನ್ನು ಹುಟ್ಟುಹಾಕಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಬ್ರಾಂಡ್ ಆಗುವ ಸಲುವಾಗಿ ಮಾರುಕಟ್ಟೆಯಲ್ಲಿ ಜನಪ್ರಿಯತೆಯ ಸ್ಪರ್ಧೆ ನಡೆಸುತ್ತಿರುವ ಗುರುಗಳ, ಸಂಸ್ಥೆಗಳ ನಡುವೆ ನಿಜವಾದ ದಾರ್ಶನಿಕ ಪಥಗಳು ಮುಚ್ಚಿ ಹೋಗುತ್ತಿವೆ. ಭಾರತೀಯ ಸಮಾಜದ ಇಂದಿನ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಪರಿಸ್ಥಿತಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾದ ಧಾರ್ಮಿಕ ಪರಂಪರೆಗಳನ್ನೂ, ಹಾಗೇಯೇ ಸಾಕಷ್ಟು ಸಂಕಷ್ಟಗಳ ನಡುವೆ ಜೀವನ ದೂಡುತ್ತಿರುವ ಸಾಮಾನ್ಯರ ಬದುಕನ್ನು ಸಹನೀಯಗೊಳಿಸುವ ಜೀವಪರ ದರ್ಶನಗಳನ್ನೂ ಸಮಾಜಶಾಸ್ತ್ರೀಯವಾಗಿ ಅಧ್ಯಯನ ಮಾಡುವ, ಸಂಶೋಧಿಸುವ, ವಿಮರ್ಶಿಸುವ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ. (ಭ್ರಮೆ ಮತ್ತು ವಾಸ್ತವಗಳ ನಡುವೆ । ಅನುವಾದಕರ ಮಾತು – ಸಂತೋಷ್ ನಾಯಕ್ ಆರ್)
ಮೂಲ ಕೃತಿಯ ಲೇಖಕರ ಮತ್ತು ಅದನ್ನು ಕನ್ನಡಕ್ಕೆ ತಂದ ಅನುವಾದಕರ ಮಾತುಗಳೇ ‘ಭ್ರಮೆ ಮತ್ತು ವಾಸ್ತವಗಳ ನಡುವೆ’ ಕೃತಿಯ ಆಶಯವನ್ನು ಸ್ಪಷ್ಟಪಡಿಸುತ್ತವೆ. ಈ ಕೃತಿಯ ಶೀರ್ಷಿಕೆಯ ಜೊತೆಗೇ ಇರುವಂತೆ, ಇದು ಆಶ್ರಮಗಳು, ಅವತಾರಗಳು, ಸಂಪ್ರದಾಯಗಳು, ಜ್ಞಾನಿಗಳು ಮತ್ತು ಕಪಟಿಗಳ ಬಗ್ಗೆ ಚರ್ಚೆ ಹುಟ್ಟುಹಾಕುವ ಪುಸ್ತಕ. ಈ ಅಂಶಗಳನ್ನು ಸಂಪೂರ್ಣ ಚರ್ಚಿಸುವ ಪುಸ್ತಕವಲ್ಲ, ಈ ವಿಷಯಗಳ ಬಗ್ಗೆ ಚರ್ಚೆ ಹುಟ್ಟು ಹಾಕುವ ಪುಸ್ತಕ ಖಂಡಿತವಾಗಿಯೂ ಹೌದು.
ಶಂಕರರಿಂದ ಮೊದಲುಗೊಂಡು, ನಮ್ಮ ಶರಣ ಕ್ರಾಂತಿಯ ಮೂರು ಮುಖ್ಯ ಸ್ತಂಭಗಳಾದ ಅಣ್ಣ, ಅಕ್ಕ, ಅಲ್ಲಮರನ್ನು ಒಳಗೊಂಡು; ನಂತರ ನೇರವಾಗಿ ಆಧುನಿಕವೆಂದು ಗುರುತಿಸಬಹುದಾದ ಕಾಲಮಾನಕ್ಕೆ ಬರುವ ಲೇಖಕರು ರಮಣರು, ಅರವಿಂದರು – ಶ್ರೀಮಾತೆ, ಜೆಕೆ, ಯುಜಿ, ಮೂಜಿ ಮೊದಲಾದ ನೈಜ ಸಾಧಕರ ಬಗ್ಗೆ ಚರ್ಚಿಸುತ್ತಾ ಸೋಕಾಲ್ಡ್ ಅವತಾರಿಗಳ ವಿಷಯಕ್ಕೆ ಬರುತ್ತಾರೆ. ಈ ಉದ್ದಕ್ಕೂ ಅವರ ಜೀವನ – ಸಾಧನೆಯ ಪರಿಚಯ ಮತ್ತು ಅವರು ಒದಗುವ – ಅವರನ್ನು ಒದಗಿಸಿಕೊಳ್ಳಬೇಕಾದ ಪರಿಯನ್ನು ಹೇಳುತ್ತಾ ಹೋಗಿದ್ದಾರೆ. ಈ ಸಾಧಕರ ಬಗ್ಗೆ ಸಾಮಾನ್ಯವಾಗಿ ಪ್ರಚಲಿತದಲ್ಲಿರುವ ಕತೆಗಳ ಹೊರತಾಗಿ ಕೆಲವು ಅಪರೂಪದ ಅಂಶಗಳಿರುವುದು ಒಂದು ಹೆಚ್ಚುಗಾರಿಕೆಯಾದರೆ, ಇವರನ್ನು ಲೇಖಕರು ಕಂಡ ಬಗೆ ಆಸಕ್ತಿಕರವಾಗಿದೆ. ಎಲ್ಲಿಯೂ ಮೌಲ್ಯಮಾಪಕರಂತೆ ಭಾಸವಾಗದ, ತೀರ್ಪುಗಾರರಂತೆ ಹೇಳಿಕೆ ನೀಡದ, ಅತಿಯಾದ ವಿಜೃಂಭಣೆಗೆ ಅವಕಾಶವಿಲ್ಲದ ಅತ್ಯಂತ ನೇರ ಮತ್ತು ಪ್ರಾಮಾಣಿಕ ನಿರೂಪಣೆಯನ್ನು ಈ ಕೃತಿಯ ಉದ್ದಕ್ಕೂ ಕಾಣಬಹುದಾಗಿದೆ.
ನಮ್ಮ ಕಾಲದ ಕಪಟಿ ಸೋಕಾಲ್ಡ್ ಸಾಧುಗಳ ಕುರಿತಾದ ಅಧ್ಯಾಯವೂ ಈ ಪುಸ್ತಕದಲ್ಲಿದೆ. ನಿಮ್ಮದೊಂದು ಪಟ್ಟಿ ಮನಸ್ಸಿನಲ್ಲೇ ತಯಾರಿಟ್ಟುಕೊಂಡು, ಪುಸ್ತಕದಲ್ಲಿ ಅವರು ಸಿಗುತ್ತಾರಾ ಅಂತ ತಾಳೆ ಹಾಕಿ ನೋಡಿಕೊಳ್ಳಬಹುದು!
ಈ ಇಡೀ ಕೃತಿಯ ಕೊನೆಯಲ್ಲಿ ಬರುವುದು ಯು ಜಿ ಕೃಷ್ಣಮೂರ್ತಿಯವರ ಬಗೆಗಿನ ಅಧ್ಯಾಯ. ಯುಜಿ ಬದುಕು ಮತ್ತು ಸಾವು, ಅವರ ನಿಲುವು ಮತ್ತು ಕಟ್ಟಕಡೆಯಲ್ಲಿ ಅವರ ಶಿಷ್ಯ(ರಲ್ಲದವ)ರು ತಮ್ಮ ಸಹಪಾಠಿಗಳಿಗೆ ಕಳಿಸಿದ ಇ ಮೇಲ್ ಮೂಲಕ ಮುಗಿಯುತ್ತದೆ. ಮತ್ತು ಈ ಒಟ್ಟು ಅಧ್ಯಾಯ, ಆಧ್ಯಾತ್ಮಿಕ ಗುರುವೊಬ್ಬ ಇರಬೇಕಾದ ಬಗೆಗೆ ಮಾದರಿಯಾಗಿ ತೋರುತ್ತದೆ. ಬಹುಶಃ ಈ ಕಾರಣದಿಂದಲೇ ಲೇಖಕರು ಯೂಜಿ ಅಧ್ಯಾಯವನ್ನು ಕೊನೆಯಲ್ಲಿ ಇಟ್ಟಿರುವರೇನೋ. ಈ ಕಾಲಮಾನಕ್ಕಂತೂ ತಮ್ಮನ್ನು ಗುರುವೆಂದು ಕರೆದುಕೊಳ್ಳದವರು, ತಮ್ಮ ಹೆಸರಿನಲ್ಲಿ ಶಿಷ್ಯರ ಪಡೆ ಕಟ್ಟದವರು, ಸಂಸ್ಥೆಗಳನ್ನು ಹುಟ್ಟುಹಾಕದವರೇ ನಿಜವಾದ ಗುರುಗಳು, ಮತ್ತು ಅವರನ್ನು ಮಾತ್ರವೇ ನಂಬಬಹುದು ಅನ್ನುವಂಥ ಪರಿಸ್ಥಿತಿ. ಈ ನಿಟ್ಟಿನಲ್ಲಿ ಲೇಖಕರು ಯೂಜಿ ಜೀವನದಿಂದ ಆಯ್ದು ನೀಡಿದ ಸಂಗತಿಗಳು ದಿಕ್ಸೂಚಿಯಂತಿವೆ.
ಈ ಒಟ್ಟು ಕೃತಿಯಲ್ಲಿ ವೈಯಕ್ತಿಕವಾಗಿ ನನಗೆ ಮಹತ್ವದ್ದಾಗಿ ಕಂಡಿದ್ದು, ಅಧ್ಯಾತ್ಮದ ಭಾರೀ ತೂಕದ ಚರ್ಚೆಗಳಿಂದ ಹೊರತಾದ ಒಂದು ಪುಟ್ಟ ಪ್ಯಾರಾಗ್ರಾಫ್. ಅದು, ಮಾತಾ ಅಮೃತಾನಂದಮಯಿ ಕುರಿತದ್ದು. ಲೇಖಕರು 2010 – 11ರ ಅವಧಿಯಲ್ಲಿ ಬರೆದದ್ದು ಬಹುಶಃ. ಅದು ಹೀಗಿದೆ:
ಅಮ್ಮ ಇದುವರೆಗೂ ದೇಶ ವಿದೇಶಗಳ ಸುಮಾರು 30 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ತಬ್ಬಿದ್ದಾರೆಂದು ಹೇಳಲಾಗುತ್ತದೆ. ವಿಶೇಷವೇನೆಂದರೆ, ಭಾರತದಲ್ಲಿ ಶೂದ್ರರು ಮತ್ತು ಅತಿಶೂದ್ರರು ಸಮಾಜದ ಅಂಚಿನಲ್ಲಿರುವವರ ಸ್ಪರ್ಶ ಮೈಲಿಗೆಯುಂಟು ಮಾಡುವುದೆಂದೂ, ಮುಟ್ಟಿದರೆ ಸ್ನಾನ ಮಾಡಬೇಕೆಂದೂ ಭಾವಿಸುವ ಸಂದರ್ಭ ಮೊದಲಿಂದಲೂ ಇರುವಾಗ, ಹಾಗೆಯೇ ಯುಎಸ್ ಮತ್ತು ಯುರೋಪಿಯನ್ ದೇಶಗಳಲ್ಲಿ ಕೂಡ ಆಫ್ರಿಕದ ಕರಿಯರನ್ನು ಮನುಷ್ಯರಿಗಿಂತ ಕಡೆಯಾಗಿ ಕಂಡ ಇತಿಹಾಸಕ್ಕೆ ನಾವು ಸಾಕ್ಷಿಯಾಗಿರುವಾಗ ಈ ಸಂದರ್ಭದಲ್ಲಿ, ಸುಧಾಮಣಿಯು ಅಮ್ಮಾ ಆಗಿ – ಜನರನ್ನು, ಜಗತ್ತಿನ ಎಲ್ಲ ಜಾತಿ, ಜನಾಂಗದ, ವರ್ಗದ ಜನರನ್ನು ತಬ್ಬುವುದು ಒಂದು ರೀತಿಯಲ್ಲಿ ಐತಿಹಾಸಿಕ ರಾಜಕೀಯ ನ್ಯಾಯದ ಹಾಗೆ ಕಂಡುಬರುತ್ತದೆ. ಈ ಪ್ರೇಮಪೂರ್ವಕ ನಡೆಯನ್ನು ಈಗ ಜಗತ್ತು ಸಂಭ್ರಮಿಸಲಿ.
ಈ ನಡೆ, ಈ ಆಶಯ, ಈ ಸಾಧ್ಯತೆಯೇ ನಿಜವಾದ ಆಧ್ಯಾತ್ಮಿಕ ಪಥ. ಇದು ಬುದ್ಧನ ದಾರಿ. ಇದು ಬಸವಣ್ಣನ ಸಮತೆಯ ದಾರಿ. ಈ ಪುಸ್ತಕದಲ್ಲಿನ ಎಲ್ಲ ಅಂಶಗಳೂ ಈ ದಾರಿಯತ್ತ ನಿರುಕಿಸಿ ನೋಡುವ ಉತ್ತೇಜನ ನೀಡುವಂಥವೇ. ಈ ಇಡಿಯ ಪುಸ್ತಕ ಮುಕುಂದ ರಾವ್ ಅವರ ವೈಯಕ್ತಿಕ ಅನುಭವ ಮತ್ತು ಗ್ರಹಿಕೆಯನ್ನು ಆಧರಿಸಿದ್ದರೂ ಇದು ಪ್ರತಿಯೊಬ್ಬ ಸೀಕರ್ ನನ್ನದೂ ಹೌದು ಅಂದುಕೊಳ್ಳಬಹುದಾದ, ಮತ್ತು ತಾವು ಕಂಡಿದ್ದು ಹಾವನ್ನೋ ಹಗ್ಗವನ್ನೋ ಎಂದು ಒರೆಗೆ ಹಚ್ಚಿಕೊಳ್ಳುವಂತೆ ಮಾಡಬಹುದಾದ ಪುಸ್ತಕ. ಇದರ ಕನ್ನಡಾನುವಾದ, ಓದುತ್ತ ಓದುತ್ತ ಅನುವಾದ ಅನ್ನುವುದನ್ನೇ ಮರೆಸುವಷ್ಟು ಸರಾಗವಾಗಿದೆ, ಸೊಗಸಾಗಿದೆ. ಸಂತೋಷ್ ನಾಯಕ್ ಅವರು ಇದು ತಮ್ಮದೇ ಅನುಭವ ಅನ್ನುವಷ್ಟು ಸಹಜವಾಗಿ ಇದನ್ನು ಅನುವಾದಿಸಿದ್ದಾರೆ.
ಪ್ರತಿಗಳಿಗಾಗಿ ಆಕೃತಿ ಮಳಿಗೆಗೆ ಭೇಟಿ ಕೊಡಬಹುದು ಅಥವಾ ಬೀಟಲ್ಸ್ ಆನ್ಲೈನ್ ಸ್ಟೋರ್‌ನಲ್ಲಿ ಕೊಳ್ಳಬಹುದು : https://beetlebookshop.com/collections/printed-books/products/bramhe-mathu-vastavagala-naduve-between-the-serpent-and-the-rope-ashrams-traditions-avataras-sages-and-con-artists?_pos=1&_sid=b06e891b7&_ss=r

