ಇಪ್ಪತ್ತು ಮಂದಿ ಖಲೀಫರೂ ಸೇರಿದಂತೆ ನೂರಾರು ಶಿಷ್ಯರನ್ನು ಹೊಂದಿದ್ದ ಹುಸೇನ, ತನ್ನೆಲ್ಲ ಸಾಧನೆಯನ್ನು ಪರಿಪೂರ್ಣವಾಗಿ ಧಾರೆ ಎರೆದಿದ್ದು ಮಾಧವನಿಗೆ ಮಾತ್ರ. ಅವನ ಮೇಲಿನ ಪ್ರೇಮದಿಂದ ತನ್ನ ಹೆಸರನ್ನೇ `ಮಾಧೋ ಲಾಲ್ ಷಾ ಹುಸೇನ್’ ಎಂದು ಬದಲಿಸಿಕೊಂಡಿದ್ದ… । ಚೇತನಾ ತೀರ್ಥಹಳ್ಳಿ
ನೇಕಾರರ ಮನೆಯಲ್ಲಿ ಹುಟ್ಟಿ ಬೆಳೆದ ಷಾ ಹುಸೇನ್, ಸೌಹಾರ್ದದ ಎಳೆಗಳನ್ನು ನೇಯ್ದು ಸಹಬಾಳ್ವೆಯ ಚಾದರ ಹಾಸಿದ ಸೂಫಿ ಅನುಭಾವಿ. ಪಂಜಾಬಿನ ಲಾಹೋರ್ ಇವನ ಲೀಲಾ ಭೂಮಿ.
ಹುಸೇನ್ ಬಾಲ್ಯದಿಂದಲೇ ತನ್ನೊಳಗಿನ ಬೆಳಕನ್ನು ಸೂಸುತ್ತ ಬೆಳೆದವನು. ಸದಾ ಹಾಡುತ್ತ ಕುಣಿಯುತ್ತ ಎಲ್ಲರಿಗೂ ಸಂತಸ ಹಂಚುತ್ತಿದ್ದ ಹುಡುಗನನ್ನು ಅವನ ತಂದೆ ಮದರಸಾಕ್ಕೆ ಸೇರಿಸಿದರು. ಬುದ್ಧಿವಂತನಾಗಿದ್ದ ಹುಸೇನ್ ಬಹಳ ಬೇಗ ಎಲ್ಲವನ್ನೂ ಕಲಿತ, ಆಮೇಲೆ ಇನ್ನೇನೂ ಉಳಿಯಲಿಲ್ಲವೆಂದು ಶಾಲೆಯನ್ನೂ ಬಿಟ್ಟ. ಅಲ್ಲಿಂದ ಮುಂದೆ ನಡು ಮೂವತ್ತರ ವರೆಗೂ ಹಗಲಿನಲ್ಲಿ ಒಂದಷ್ಟು ಹೊತ್ತು ಬಟ್ಟೆ ನೇಯುವುದು, ಆಮೇಲೆ ಕಾಡು ಹೊಕ್ಕು ಸಂಜೆವರಗೆ ಸುಮ್ಮನೆ ಕೂರುವುದು, ಸಂಜೆ ಹಾಡುತ್ತ ಕುಣಿಯುವುದು – ಇವಿಷ್ಟು ಅವನ ದಿನಚರಿಯಾಯ್ತು. ಸದಾ ಭಗವಂತನ ಚಿಂತನೆ, ಅರಿವಿನ ಹಪಾಹಪಿ ಅವನನ್ನು ಆವರಿಸಿಕೊಂಡಿರುತ್ತಿತ್ತು.
ಹುಸೇನನ ಅವಸ್ಥೆಯನ್ನು ಕಂಡವರೊಬ್ಬರು ಅವನಿಗೆ ಶೇಕ್ ಸಾದ್ ಉಲ್ಲಾರ ಮಾರ್ಗದರ್ಶನ ಪಡೆಯುವಂತೆ ಸೂಚಿಸಿದರು. ಅದರಂತೆ ಅವನು ಶೇಕ್ ಸಾಹೇಬರ ಬಳಿ ತನ್ನ ಕಲಿಕೆಯ ಯಾನ ಮುಂದುವರಿಸಿದ. ಹಾಗೆಂದು ಅವನು ಸಿದ್ಧ ದಾರಿಯಲ್ಲಿ ನಡೆಯುವ ಕುರಿಯಾಗಿರಲಿಲ್ಲ. ತನ್ನ ಗುರುವಿನ ಪ್ರತಿ ಪಾಠದಲ್ಲೂ ಅವನು ಹೊಸ ವ್ಯಾಖ್ಯಾನವನ್ನು ಕಂಡುಕೊಳ್ಳುತ್ತಿದ್ದ. ಪ್ರಶ್ನೆಗಳ ಮಳೆಗರೆದು ಸಾಹೇಬರನ್ನು ಹೈರಾಣು ಮಾಡುತ್ತಿದ್ದ.
ಒಮ್ಮೆ ಶೇಕ್ ಸಾಹೇಬರು ಕುರಾನ್ ಅನ್ನು ವಿವರಿಸುತ್ತಾ, ಅದರಲ್ಲಿರುವ `ಈ ಜಗತ್ತು ಒಂದು ಆಟದ ಮೈದಾನ’ ಎನ್ನುವ ಮಾತನ್ನು ಹೇಳಿದರು. ಅದನ್ನು ಕೇಳುತ್ತಲೇ ಹುಸೇನ್ ಕೋಣೆಯಿಂದ ಎದ್ದು ಹೊರಕ್ಕೋಡಿದ. ಅಲ್ಲಿಂದ ಮುಂದೆ ಆತ ಕಾಣಿಸಿಕೊಂಡಿದ್ದು ಕೆಂಪು ಗೌನು, ಮದಿರೆಯ ಸುರಾಹಿ ಮತ್ತು ಬಟ್ಟಲಿನೊಂದಿಗೆ. ಹಾಡುತ್ತ, ಕುಣಿಯುತ್ತ ನಿತ್ಯ ಉನ್ಮಾದದೊಂದಿಗೆ!
ಹುಸೇನನ ಕಾಂತಿಗೆ ಮರುಳಾದ ಜನ ಅವನ ಸುತ್ತ ಪತಂಗಗಳಂತೆ ಮುತ್ತಿಕೊಂಡರು. `ಇನ್ನೆಷ್ಟು ದಿನ ಹೀಗೆ ಪವಿತ್ರ ಜೀವಿಗಳಂತೆ ಕಾಣಿಸ್ಕೊಳ್ಳಬೇಕು? ನಾಳೆ ನಾವೆಲ್ಲರೂ ಮನೆಗೆ ಮರಳುವುದಿದೆ. ಹಾಡುತ್ತ, ನಲಿಯುತ್ತ ಜೀವಿಸುವುದಿದೆ. ಬೇಡಿಕೊಂಡು ಬದುಕುವುದಂತೂ ಇದ್ದೇ ಇದೆ. ನಾವು ಜೀವಿಸಲಿಕ್ಕಿರುವುದು ಇದೇ ಬದುಕನ್ನಷ್ಟೇ…’ ಅನ್ನುತ್ತ ಅವರೆಲ್ಲರಿಗೂ ಅರಿವಿನ ಮದಿರೆ ಹಂಚುತ್ತಿದ್ದ ಹುಸೇನ.
ಇಂಥಾ ಬುದ್ಧಿವಂತ ಶಿಷ್ಯ ಹಾದಿಬೀದಿಯಲ್ಲಿ ಕುಣಿಯುತ್ತ ಹಾಳಾಗುತ್ತಿದ್ದಾನಲ್ಲ ಎಂದು ನೊಂದುಕೊಂಡರು ಶೇಕ್ ಸಾಹೇಬ್. ಹಾಗೂ ಹೀಗೂ ಅವನ ಮನವೊಲಿಸಿ ಕರೆತಂದು ಕೂರಿಸಿಕೊಂಡರು. ಮತ್ತೆ ಮೊದಲಿನಂತೆ ಕುರಾನಿನ ವ್ಯಾಖ್ಯಾನ ಪಾಠ ಶುರುವಾಯಿತು.
ಅದೊಂದು ದಿನ ಶೇಕ್ ಸಾಹೇಬರು `ಆಲಮ್ ನಶ್ರಾಹ್ ಲಾಕಾ ಸದ್ರ್‍ಕ್’ – `ನಾವು ನಿನ್ನ ಹೃದಯವನ್ನು ತೆರೆದು ಹೊರೆಯನ್ನು ಹರಿಬಿಟ್ಟು ಭಾರಮುಕ್ತಗೊಳಿಸಿಲ್ಲವೇನು?’ ಎನ್ನುವ ಸಾಲುಗಳನ್ನು ಓದಿ ಅರ್ಥ ವಿವರಿಸುತ್ತಿದ್ದರು. ಆ ಸಾಲು ಹೊಳೆಯಿಸಿದ ದಿವ್ಯಸತ್ಯ ಕಂಡುಕೊಂಡ ಹುಸೇನ್ ಮತ್ತೊಮ್ಮೆ ಓಡಿ ಹೋದ. ಅಂದು ಮತ್ತೊಮ್ಮೆ ಬಯಲಾದ ಹುಸೇನ ಮತ್ತೆಂದೂ ಸಂಕುಚಿತಗೊಳಿಸುವ ಗೋಡೆಗಳ ನಡುವೆ ಬಂಧಿಯಾಗಲೇ ಇಲ್ಲ.
ಆಧ್ಯಾತ್ಮಿಕ ತರಬೇತಿಗೆ ತಿಲಾಂಜಲಿಯಿತ್ತು ತನ್ನೂರಿಗೆ ಮರಳಿದ ಹುಸೇನ್, ಪೂರ್ವಜರ ನೇಕಾರ ವೃತ್ತಿಯನ್ನು ಮುಂದುವರೆಸಿದ. ಗ್ರಾಮೀಣ ಪಂಜಾಬಿ ಭಾಷೆಯಲ್ಲಿ ಅತ್ಯದ್ಭುತವಾದ ಪದ್ಯಗಳನ್ನು ರಚಿಸಿದ. ಕೆಲಸದ ಜೊತೆಜೊತೆಯಲ್ಲೇ ಅವನ ಅನುಭಾವದ ಮಾತುಗಳು, ನಡವಳಿಕೆ, ಹೊಸೆಯುತ್ತಿದ್ದ ಗೀತೆಗಳು ಜನಮನ ಸೆಳೆದವು. ಹುಸೇನನನ್ನು ಸುಮ್ಮನೆ ನೋಡಲೆಂದೇ ಒಂದು ಚಿಕ್ಕ ಗುಂಪು ಸದಾ ಅವನ ಮನೆ ಮುಂದೆ ಜಮಾಯಿಸಿರುತ್ತಿತ್ತು. ಆದರೆ ಅದ್ಯಾವುದರ ಪರಿವೆಯೂ ಇಲ್ಲದೆ ಹುಸೇನ ತನ್ನ ಕಾಯಕದಲ್ಲಿ ಮುಳುಗಿ, ಅದರಲ್ಲೆ ಅಧ್ಯಾತ್ಮ ಸಾಧನೆಯ ಮೆಟ್ಟಿಲುಗಳನ್ನು ಕಟ್ಟಿಕೊಳ್ಳುತ್ತಿದ್ದ. ಈತನ ಖ್ಯಾತಿ ಅದೆಷ್ಟು ಹಬ್ಬಿತೆಂದರೆ, ಬಾದಷಾಹ್ ಜಹಾಂಗೀರ್ `ಈ ಷಾಹ್ ಹುಸೇನನ ದಿನಚರಿಯನ್ನು ಯಾವ ವಿವರವೂ ತಪ್ಪದಂತೆ ದಾಖಲಿಸಿ. ಆತನ ಯಾವ ನಡೆಯಲ್ಲಿ ಯಾವ ನಿಗೂಢ ತಿಳಿವು ಹೊಮ್ಮುವುದೋ, ಯಾವ ನುಡಿಯಲ್ಲಿ ಯಾವ ಸಂದೇಶ ಸಿಗುವುದೋ! ಅವನು ಕಳೆದುಕೊಳ್ಳಬಾರದ ರತ್ನ’ ಎಂದು ಆದೇಶ ಹೊರಡಿಸಿದ್ದ!
ಈ ನಡುವೆ ಹುಸೇನನಿಗೆ ಮಾಧವ ಲಾಲ ಎನ್ನುವ ಬ್ರಾಹ್ಮಣ ತರುಣ ಮಿತ್ರ ದೊರಕಿದ. ಅವನ ಅಂತರಂಗದ ಬೆಳಕು ಹುಸೇನನನ್ನು ಸೋಕಿತು. ಮಾಧವನ ಜೊತೆ ಸಖ್ಯ ಬೆಳೆಸಿದ. ಬಹಳ ಭೇಗ ಅದು ಆತ್ಮಸಂಗಾತಕ್ಕೆ ತಿರುಗಿತು. ಸಾಧನೆಗೆ ಜೊತೆಯಾಗುತ್ತಿದ್ದ ಅವರಿಬ್ಬರೂ ಒಟ್ಟಿಗೆ ಜೀವಿಸಿದರು. ಮಾಧೋ ಎಂದು ಕರೆಸಿಕೊಳ್ತಿದ್ದ ಮಾಧವನನ್ನು ಹುಸೇನ ಗಾಢವಾಗಿ ಪ್ರೀತಿಸಿದ. ಇಪ್ಪತ್ತು ಮಂದಿ ಖಲೀಫರೂ ಸೇರಿದಂತೆ ನೂರಾರು ಶಿಷ್ಯರನ್ನು ಹೊಂದಿದ್ದ ಹುಸೇನ, ತನ್ನೆಲ್ಲ ಸಾಧನೆಯನ್ನು ಪರಿಪೂರ್ಣವಾಗಿ ಧಾರೆ ಎರೆದಿದ್ದು ಮಾಧವನಿಗೆ ಮಾತ್ರ. ಅವನ ಮೇಲಿನ ಪ್ರೇಮದಿಂದ ತನ್ನ ಹೆಸರನ್ನೇ `ಮಾಧೋ ಲಾಲ್ ಷಾ ಹುಸೇನ್’ ಎಂದು ಬದಲಿಸಿಕೊಂಡಿದ್ದ. ತನ್ನ `ಕಫೀ’ (ಅನುಭಾವ ಗೀತೆ)ಗಳನ್ನೆಲ್ಲ `ಮಾಧೋ’ನನ್ನೇ ಸಂಬೋಧಿಸಿ ರಚಿಸಿದ. ಅವನ ಪ್ರಕಾರ, ಮಾಧೋ ಅವನ ಆತ್ಮವಾಗಿದ್ದ. ಮಾಧವ ತೀರಿಕೊಂಡ ಮೇಲೆ ಬದುಕಿನ ನಶ್ವರತೆ ಅವನನ್ನು ಮತ್ತಷ್ಟು ಕಲುಕಿ ಹಣ್ಣಾಗಿಸಿತು. ಅದರ ಅರಿವು ಅವನನ್ನು ಜ್ಞಾನದ ತುತ್ತ ತುದಿಗೆ ಕರೆದೊಯ್ದಿತು. ಅಲ್ಲಿಂದ ಮುಂದೆ ಅವನನ್ನು ಮಾಧೋನನ್ನು ತನ್ನ ಗುರುವೆಂದೇ ಹೇಳತೊಡಗಿದ.
ಹುಸೇನನ ಶಿಷ್ಯತ್ವ ಬಯಸಿ ದೂರದೂರದಿಂದ ಜನರು ಬರುತ್ತಿದ್ದರು. ಅವರಿಗೆಲ್ಲ ಆತ ಹೇಳುತ್ತಿದ್ದುದು ಒಂದೇ ಮಾತು, `ತಲೆ ಬೋಳಿಸಿಕೊಂಡು ನನ್ನೊಡನೆ ಮದ್ಯ ಕುಡಿಯಲು ಬಾ’ ಎಂದು. ಆತನ ಈ ಕರಾರನ್ನು ಯಾರು ನಡೆಸುತ್ತಿದ್ದರೋ ಅವರನ್ನು ಮಾತ್ರ ಶಿಷ್ಯರನ್ನಾಗಿ ಸ್ವೀಕರಿಸುತ್ತಿದ್ದ.
ಒಮ್ಮೆ ಹುಸೇನನ ಬಳಿ ಒಬ್ಬ ಮುಲ್ಲಾ ಬಂದ. ಆದರೆ ಆತನನ್ನು ಬಳಿಗೆ ಬಿಟ್ಟುಕೊಳ್ಳದ ಹುಸೇನ, `ನಿನಗೆ ಬೋಧಿಸಬಹುದಾದದ್ದು ನನ್ನಲ್ಲಿ ಏನೂ ಇಲ್ಲ. ಸುಮ್ಮನೆ ನನ್ನ ಹಿರಿಮೆ ಹಾಳುಗೆಡವಬೇಡ ನಡಿ!’ ಅಂದುಬಿಟ್ಟ. ಅದೆಷ್ಟೇ ಗೌರವ ಮನ್ನಣೆಗಳಿದ್ದರೂ ಹುಸೇನನಿಗೆ ಅವೆಲ್ಲ ಬೇಕಿರಲಿಲ್ಲ. ಆತನ ಮತೀಯ ಮೇಲು ಕೀಳುಗಳನ್ನು ವಿರೋಧಿಸಿದ. ಶ್ರೀಮಂತಿಕೆಯ ತಾರತಮ್ಯವನ್ನು ಕಡೆಗಣಿಸಿದ. ಕಂದಾಚಾರವನ್ನು ದೂರವಿಟ್ಟ. ಪೊಳ್ಳು ಜನರನ್ನು ಹೊಡೆದಟ್ಟಿದ. ಯಾರಾದರೂ ಆತನನ್ನು `ಪೀರ್’ (ಗುರು) ಎಂದು ಕರೆದರೆ ಅದನ್ನು ನಿರಾಕರಿಸುತ್ತಾ, `ಫಕೀರನನ್ನು ಪೀರನೆನ್ನುವೆ ಏಕೆ?’ ಎಂದು ಗದರುತ್ತಿದ್ದ.
ಅನುಭಾವದ ತುಂಬುಜೀವನ ನಡೆಸಿದ ಹುಸೇನ ಕಾಲವಾದ ಬಳಿಕ ಆತನ ಕೊನೆಯ ಬಯಕೆಯಂತೆ ಮಾಧವನ ಸಮಾಧಿಯ ಪಕ್ಕದಲ್ಲಿಯೇ ಹೂಳಲಾಯ್ತು.

