~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಆವರಿಸಿಕೊಳ್ಳುತ್ತಿರುವ
ಬದಲಾವಣೆಯ ಹೊಸ ಗಾಳಿಯನ್ನು
ತಡೆದು ನಿಲ್ಲಿಸಬಯಸುವ
ನಿಮ್ಮ ಉತ್ಸಾಹವನ್ನ
ಸ್ವಲ್ಪ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ.
ಬದಲಾಗಿ ಬದುಕಿಗೆ,
ನಿಮ್ಮ ಮೂಲಕ
ಬಾಳುವ ಅವಕಾಶ ಮಾಡಿಕೊಡಿ.
ಬದಲಾವಣೆ ಎಂದರೆ
ಚಿಮ್ಮಲಾಗಿರುವ ಬದುಕಿನ ನಾಣ್ಯ.
ನಿಮ್ಮ ಬದುಕು
ತಲೆಕೆಳಗಾಗಿ ಬಿಡಬಹುದೆಂದು
ಗಾಬರಿಯಾಗಬೇಡಿ.
ಯಾರಿಗೆ ಗೊತ್ತು,
ಈಗ ನಿಮ್ಮೆಡೆ ಮುಖ ಮಾಡಿರುವ
ಬದುಕಿನ ಭಾಗ
ನೀವು ಬದುಕುತ್ತಿರುವ ಬದುಕಿನ ಭಾಗಕ್ಕಿಂತ
ಅದ್ಭುತವಾಗಿರಬಹುದು.
~ ಶಮ್ಸ್
ಬದುಕನ್ನ ಸಾಧಿಸಿಕೊಳ್ಳುವುದಲ್ಲ ಇದು ತಾನೇ ತಾನಾಗಿ ಸಂಭವಿಸುತ್ತದೆ. ಅದಕ್ಕಾಗಿ ಹಂಬಲಿಸಿದಷ್ಟು ಅದು ನಮ್ಮಿಂದ ದೂರ ಹೋಗುತ್ತದೆ. ನಾವು ಅದರ ಬಳಿ ಹೋಗುವುದಲ್ಲ, ಅದು ನಮ್ಮ ಹತ್ತಿರ ಬರುತ್ತದೆ. ನಮ್ಮೊಳಗೆ ಇರಬೇಕಾದದ್ದು ಸಂಪೂರ್ಣ ಸ್ವೀಕಾರದ ಮತ್ತು ಮುಕ್ತ ಮನಸ್ಸಿನ ಸ್ಥಿತಿ. ಬದುಕು ನಮ್ಮ ಅತಿಥಿ, ನಾವು ಅತಿಥೇಯರು. ಬದುಕನ್ನ ಬೆಂಬತ್ತಬಾರದು; ಈ ಬೆಂಬತ್ತುವಿಕೆಯಲ್ಲಿ ದುಃಖವಿದೆ, ಹೆಚ್ಚು ಬೆನ್ನು ಹತ್ತಿದಷ್ಟು ಅದು ಹೆಚ್ಚು ನಮ್ಮಿಂದ ದೂರವಾಗುತ್ತದೆ.
ಬದುಕು ಎಲ್ಲವನ್ನೂ ತನ್ನೊಳಗೆ ಒಳಗೊಂಡಿದೆ. ಅದು ದೇವರನ್ನು ಒಳಗೊಂಡಿದೆ, ಆನಂದವನ್ನು ಒಳಗೊಂಡಿದೆ, ಅದು ಅನುಗ್ರಹವನ್ನು ಒಳಗೊಂಡಿದೆ , ಅದು ಚೆಲುವನ್ನ, ಸತ್ಯವನ್ನ, ಋಜುತ್ವವನ್ನ, ಏನೆಲ್ಲ ಇದೆಯೋ ಎಲ್ಲವನ್ನೂ ಒಳಗೊಂಡಿದೆ; ಬದುಕನ್ನು ಬಿಟ್ಟು ಬೇರೇನೂ ಇಲ್ಲ. ಅಸ್ತಿತ್ವದ ಸಂಪೂರ್ಣತೆಯ ಹೆಸರೇ, ಬದುಕು.
ಸಮಾಧಾನದಿಂದ ಪ್ರಶಾಂತತೆಯಲ್ಲಿ ನೆಲೆಯಾಗುವುದನ್ನ ಕಲಿಯುವುದು ಅತ್ಯವಶ್ಯ, ಆಗ ಪವಾಡಗಳ ಪವಾಡ ಸಂಭವಿಸುವುದು : ಒಂದು ದಿನ ನೀವು ಸಂಪೂರ್ಣ ಪ್ರಶಾಂತತೆಯಲ್ಲಿ ನೆಲೆಯಾಗಿರುವಾಗ ಏನೋ ಒಂದು ಥಟ್ಟನೇ ಸಾಧ್ಯವಾಗುವುದು. ಪರದೆ ಮಾಯವಾಗಿ, ಇರುವುದೆಲ್ಲ ನಿಮಗೆ ಇದ್ದಹಾಗೆ ಕಾಣಿಸಲು ಶುರು ಆಗುವುದು. ನಿಮ್ಮ ಕಣ್ಣುಗಳು ಬಯಕೆಗಳಿಂದ, ನಿರೀಕ್ಷೆಗಳಿಂದ, ತುಡಿತಗಳಿಂದ ತುಂಬಿಕೊಂಡಿರುವಾಗ ನಿಮಗೆ ಸತ್ಯ ಕಾಣುವುದಿಲ್ಲ. ಎಲ್ಲ ಹುಡುಕಾಟವೂ ವ್ಯರ್ಥ. ಹುಡುಕಾಟ ಎನ್ನುವುದು ಮೈಂಡ್ ನ ಕಾರ್ಯಾಚರಣೆಯ ಉಪ ಉತ್ಪನ್ನ. ಹುಡುಕಾಟ ರಹಿತ ಸ್ಥಿತಿಯಲ್ಲಿರುವುದು transformation ನ ಮಹಾ ಕ್ಷಣ.
ಎಲ್ಲ ಧ್ಯಾನಗಳು ಇಂಥ ಕ್ಷಣವೊಂದನ್ನು ಎದುರುಗೊಳ್ಳುವ ಸಿದ್ಧತೆಗಳು. ಅವು ನಿಜದ ಧ್ಯಾನಗಳಲ್ಲ, ಕೇವಲ ಸಿದ್ಧತೆಗಳು ಮಾತ್ರ. ಮುಂದೊಮ್ಮೆ ನಿಮಗೆ ಏನೂ ಬಯಸದಂತೆ, ಏನೂ ಮಾಡದಂತೆ ಪ್ರಶಾಂತತೆಯಿಂದ ಕುಳಿತುಕೊಳ್ಳಲು ಸಾಧ್ಯ ಮಾಡುವ ಸಿದ್ಧತೆಗಳು.

