ಇಲ್ಲಿ ತಪ್ಪು ಯಾರದ್ದು? ನಾಯಿ ಪಾಪ ತನ್ನ ನಾಯಿತನಕ್ಕೆ ತಕ್ಕಂತೆ ನಡೆದುಕೊಂಡಿತ್ತು. ಆದರೆ; ಕ್ಷಮೆ ಅನ್ನುವ ಸಂಗತಿಯೊಂದಿದೆ, ಸಹನೆ ಅನ್ನುವ ಸಂಗತಿಯೊಂದಿದೆ, ನಾಯಿಯ ನಡವಳಿಕೆ ಅರ್ಥ ಮಾಡಿಸುವ ತರ್ಕ ಒಂದಿದೆ ಅಂತೆಲ್ಲ ಗೊತ್ತಿರುವ ರಾಜ ಮಾತ್ರ ಮನುಷ್ಯತ್ವಕ್ಕೆ ತಕ್ಕಂತೆ ನಡೆದುಕೊಳ್ಳಲಾರದೆ ಹೋದ… । ಚೇತನಾ ತೀರ್ಥಹಳ್ಳಿ
ಒಂದೂರಲ್ಲಿ ಒಬ್ಬ ರಾಜ ಇದ್ನಂತೆ. ಅವ್ನಿಗೆ ಪ್ರಾಣಿಗಳು ಅಂದೆ ಭಾಳಾ ಪ್ರೀತಿ. ಒಂದಿನ ಅವ್ನ ಹುಟ್ದಬ್ಬಕ್ಕೆ, ದೂರ ದೇಶಕ್ಕೆ ಪ್ರವಾಸ ಹೋಗಿದ್ದ ಅವ್ನ ಸಂಬಂಧಿಯೊಬ್ಬ ಒಂದು ನಾಯಿ ಮರಿ ಉಡುಗೊರೆಯಾಗಿ ಕೊಟ್ನಂತೆ.
ಆ ರಾಜ ಹಗ್ಲೂ ಇರುಳೂ ಆ ನಾಯಿನ ಕಂಕಳಲ್ಲಿಟ್ಕೊಂಡು ಓಡಾಡ್ತಿದ್ನಂತೆ. ತಾನು ತಿನ್ನೋದೆಲ್ಲ ಅದಕ್ಕೂ ತಿನ್ಸೋದು, ತಾನು ಮಲಗೋ ಮಂಚದ ಪಕ್ದಲ್ಲೇ ಅದನ್ನ ಮಲಗಿಸ್ಕೊಳೋದು, ಅದಕ್ಕೊಂದು ರಾಜನ್ ಥರ ಡ್ರೆಸ್ಸು, ತಲೆ ಮೇಲೊಂದು ಪುಟ್ಟ ಕಿರೀಟ, ಎಲ್ಲಾ ವ್ಯವಸ್ಥೇನೂ ಮಾಡಿದ್ನಂತೆ.
ಆ ನಾಯಿಮರಿಗೆ ಕಾಂಪೌಂಡ್ ಜಿಗಿಯೋದು, ರಾಜನ ಕತ್ತಿ ಕಚ್ಕೊಂಡ್ ಬರೋದು, ಅವ್ನ ಜೊತೆ ಬೇಟೆಗೆ ಹೋಗೋದು ಎಲ್ಲಾ ತರಬೇತಿನೂ ಕೊಡಲಾಯ್ತು. ಆ ನಾಯಿ ಬೆಳೀತಾ ಬೆಳೀತಾ ರಾಜನ ಬೆಸ್ಟ್ ಫ್ರೆಂಡ್ ಆಗೋಯ್ತು.
ಇದೆಲ್ಲ ಎಷ್ಟು ವಿಪರೀತಕ್ಕೆ ಹೋಯ್ತು ಅಂದ್ರೆ, ಒಂದಿನ ರಾಜ ಆ ನಾಯಿನ ತನ್ನ ಸಿಂಹಾಸನದ ಮೇಲೆ ಕೂರಿಸ್ದ. ಆ ನಾಯಿ ಸಿಂಹಾಸನದ ಮೆತ್ತೆ ಮೇಲೆ ಒಂದು ಸುತ್ತು ಸುತ್ತಿ, ಕೆಳಗೆ ಜಿಗಿದು, ಸಿಂಹಾಸನದ ಪೀಠಸ್ತಂಭಕ್ಕೆ ಕಾಲೆತ್ತಿತು!
ಅಲ್ಲಿಗೆ ಮುಗೀತು ರಾಜನ ನಾಯಿಪ್ರೀತಿ. ಸಿಂಹಾಸನಕ್ಕೇ ಅವಮಾನ ಮಾಡಿಬಿಡ್ತು ಅಂತ ಆ ನಾಯಿನ ಎತ್ಕೊಂಡು ಹೋಗಿ ಕಾಡಿಗೆ ಬಿಟ್ಟುಬರೋಕೆ ಆಜ್ಞೆ ಮಾಡ್ದ. ಎಷ್ಟ್ ಚೆನಾಗಿ ನೋಡ್ಕೊಂಡ್ರೆ ಏನ್ ಬಂತು? ನಾಯಿ ನಾಯಿನೇ. ಎಲ್ ಹೋಗತ್ತೆ ನಾಯಿ ಬುದ್ಧಿ! ಅಂತ ಕೋಪದಿಂದ ಬೈದುಕೊಂಡ. ಅದನ್ನು ಕೇಳಿದ ಜನ, “ನಾಯಿನ ತಗೊಂಡ್ ಹೋಗಿ ಸಿಂಹಾಸನದ್ ಮೇಲೆ ಕೂರ್ಸಿದ್ರೆ ಇನ್ನೇನ್ ಆಗತ್ತೆ?” ಅಂತ ಮಾತಾಡಿಕೊಂಡ್ರು.
~
ಇಲ್ಲಿ ತಪ್ಪು ಯಾರದ್ದು? ನಾಯಿ ಪಾಪ ತನ್ನ ನಾಯಿತನಕ್ಕೆ ತಕ್ಕಂತೆ ನಡೆದುಕೊಂಡಿತ್ತು. ಆದರೆ; ಕ್ಷಮೆ ಅನ್ನುವ ಸಂಗತಿಯೊಂದಿದೆ, ಸಹನೆ ಅನ್ನುವ ಸಂಗತಿಯೊಂದಿದೆ, ನಾಯಿಯ ನಡವಳಿಕೆ ಅರ್ಥ ಮಾಡಿಸುವ ತರ್ಕ ಒಂದಿದೆ ಅಂತೆಲ್ಲ ಗೊತ್ತಿರುವ ರಾಜ ಮಾತ್ರ ಮನುಷ್ಯತ್ವಕ್ಕೆ ತಕ್ಕಂತೆ ನಡೆದುಕೊಳ್ಳಲಾರದೆ ಹೋದ.
ನಾಯಿ ತನ್ನ ಸ್ವಭಾವಕ್ಕೆ ತಕ್ಕಂತೆ ನಡೆದುಕೊಂಡಿತ್ತು. ರಾಜ ಮನುಷ್ಯರ ಸ್ವಭಾವಕ್ಕೆ ತಕ್ಕಂತೆ ನಡೆದುಕೊಳ್ಳುವಲ್ಲಿ ಸೋತಿದ್ದ.
ಆ ರಾಜ, ಪ್ರಾಣಿಯೊಂದನ್ನು ತನ್ನಂತೆ ಬಾಳಿಸುವುದೇ ಒಂದು ದೊಡ್ಡತನವೆಂದು ಭಾವಿಸಿದ್ದನೇನೋ. ಪ್ರಾಣಿಗಳನ್ನು ಪ್ರೀತಿಸುವುದು ಅಂದರೆ, ಅವುಗಳನ್ನು ತನ್ನಂತೇ ಇರಗೊಡುವುದು ಅನ್ನುವ ತಿಳುವಳಿಕೆ ಅವನದಾಗಿತ್ತೇನೋ. ಪ್ರಾಣಿಗಳನ್ನೇ ಆಗಲಿ, ಯಾರನ್ನೇ ಆಗಲಿ, ಪ್ರೀತಿಸುವುದು ಅಂದರೆ ಅವರ ಸ್ಪೇಸ್ ನಲ್ಲಿ ಅವರನ್ನು ಇರಗೊಡುವುದು. ಅವರನ್ನು ಬದಲಾಯಿಸದೆ, ತಮಗೆ ಬೇಕಾದಂತೆ ಒಗ್ಗಿಸಿಕೊಳ್ಳದೆ, ಅವರನ್ನು ಅವರಂತೇ ಇರಲು ಬಿಡುವುದು. ಮನುಷ್ಯರನ್ನು ಸಂಪೂರ್ಣ ಮನುಷ್ಯರನ್ನಾಗಿಸೋದು ಇಂಥಾ ಅರಿವುಗಳೇ.
~
ನಾಯಿಯನ್ನು ನಾಯಿಯೇ ಆಗಿರೋಕೆ ಬಿಡ್ಬೇಕು. ಅದನ್ನ ತಂಗೊಂಡ್ ಬಂದು ಮನುಷ್ಯರ ವ್ಯವಹಾರ ಕಲಿಸಿ ಮನುಷ್ಯರ ಥರ ಆಗಿಸೋ ಪ್ರಯತ್ನ ಮಾಡಬಾರ್ದು. ನಾಯಿನ ಮನುಷ್ಯರ ಥರ ಮಾಡೋದು ಅಂದ್ರೆ ಅದಕ್ಕೊಂದಷ್ಟು ಸ್ಕಿಲ್ಸ್ ಕಲಿಸೋದು. ಅದರ ಗ್ರಹಣ ಸಾಮರ್ಥ್ಯಕ್ಕೆ ಹೊಳಪು ನೀಡೋದು. ಅದು ತನ್ನ ಕಾಲುಗಳನ್ನು, ಬಾಲವನ್ನು, ಕಣ್ಣನ್ನು ಕೇವಲ ಅದರ ಬದುಕುಳಿಯುವ ಅಗತ್ಯಗಳಿಗಲ್ಲದೆ ಮೋಜಿಗೆ ಬಳಸೋದು, ಸೃಜನಶೀಲವಾಗಿ ಬಳಸೋದು.
ಇಲ್ಲಿ ಹುಟ್ಟೋ ಪ್ರಶ್ನೆ, ನಾಯಿಗೆ ಕೇವಲ ಬದುಕುಳಿಯುವ ಹೊರತಾಗಿ ಬೇರೆ ಮೋಜು ಬೇಕಾಗಿದೆಯೇ ಅನ್ನೋದು.
ನಾಯಿಗೆ ಶೇಕ್ ಹ್ಯಾಂಡ್ ಕೊಡಲು ಕಲಿಸಲಾಗುತ್ತೆ. ಮನುಷ್ಯ ‘ಟಾಮಿ! ಶೇಕ್ ಹ್ಯಾಂಡ್’ ಅಂದಾಗ ಅದು ಕೆಲವೊಮ್ಮೆ ಎರಡು ಕಾಲಲ್ಲಿ ನಿಂತು, ಕೆಲವೊಮ್ಮೆ ಕೂತಲ್ಲೇ ಒಂದು ಕಾಲಿನ ಮುಂಭಾಗ ಮೇಲೆತ್ತಿ ನಮ್ಮ ಕೈಲಿಡುತ್ತೆ. ಇದರಿಂದ ಅದಕ್ಕೆ ತಾನು ಮನುಷ್ಯನ ನಿರೀಕ್ಷೆಯಂತೆ ನಡೆದು ಅವನನ್ನು ಮೆಚ್ಚಿಸಿದೆ ಅನ್ನುವ ತೃಪ್ತಿ ಮೂಡಬಹುದು. ಇದರಿಂದ ಸಂತೋಷವೂ ಆಗಬಹುದು. ಮನುಷ್ಯರ ಅಣತಿಗಳನ್ನು ನಡೆಸುವ ನಾಯಿ (ಅಥವಾ ಯಾವುದೇ ಪ್ರಾಣಿ) ತನ್ನ ಸಂತೋಷವನ್ನು ಬಾಲ ಅಲ್ಲಾಡಿಸುವ ಮೂಲಕ, ಕಣ್ಣುಗಳ ಮೂಲಕ, ಕಿವಿ ಹಿಂಚಾಚುವ ಮೂಲಕ – ಹೀಗೆ ಹಲವು ಬಗೆಯಲ್ಲಿ ತೋರಿಸಿಕೊಳ್ತವೆ. ಪ್ರಾಣಿಗಳಿಗೆ ಅಸಹಜವಾದ ಇಂಥಾ ಕ್ರಿಯೆಗಳನ್ನು ಕಲಿಸಿ ಮನುಷ್ಯರು ಅವಕ್ಕೆ ತಿಂದುಂಡು ಬೆದೆಯಲ್ಲಿ ಬೇಟವಾಡಿ ಸಾಯುವ ಹೊರತಾಗಿಯೂ ಒಂದು ಅನುಭವವನ್ನ ಕೊಟ್ಟಿರುತ್ತಾರೆ. ಆದರೆ, ಅವುಗಳ ಮನಸ್ಸನ್ನು ತಮ್ಮ ಅಡಿಯಾಳಾಗಿಸಿಕೊಳ್ಳುವ ಮೂಲಕ.
ಮನುಷ್ಯರ ಸಹವಾಸವಿಲ್ಲದ ಯಾವುದೋ ಒಂದು ಪ್ರಾಣಿ ಹೂದೋಟದಲ್ಲಿರುವ ಚಿಟ್ಟೆಯ ಜೊತೆ ಚಿನ್ನಾಟವಾಡೋದು, ಆ ಕ್ರಿಯೆಯಲ್ಲಿ ತನ್ನ ಅಂಗಾಂಗಗಳ ಮೂಲಕ ತನ್ನ ಖುಷಿ ತೋರ್ಪಡಿಸೋದು ಸಹಜ. ಮನುಷ್ಯ ಒತ್ತಾಯವಾಗಿ ಅವಕ್ಕೆ ಕೌಶಲ್ಯಗಳನ್ನು ರೂಢಿ ಮಾಡಿಸೋದು, ಅಸಹಜ ಕೌಶಲ್ಯಗಳ ಮೂಲಕ ಅವುಗಳಲ್ಲಿ ಖುಷಿಯ ಅನುಭವ ಮೂಡಿಸೋದು – ಪ್ರಾಣಿಗಳ ಸಹಜ ಖುಷಿ ಮೇಲ್ಮಟ್ಟದಲ್ಲ ಅನ್ನುವ ಅಹಂಕಾರವನ್ನು ಸೂಚಿಸುತ್ತದೆಯಷ್ಟೆ.
ನಾಯಿಯನ್ನು ನಾಯಿಯಾಗಿ ಬಿಡಬೇಕು ಅನ್ನೋದು ನಾಯಿ ಒಂದು ಹಂತ ಮೇಲಕ್ಕೇರಬಹುದಾದ ಸಾಧ್ಯತೆಯನ್ನು ಕಸಿಯುವ ಹುನ್ನಾರ ಅಂತ ಯಾರಾದರೂ ಅನ್ನಬಹುದು. ಹೀಗೆ ಅನ್ನುವವರು, ನಾಯಿಯ ಹಂತ ಕೆಳಮಟ್ಟದ್ದು ಅಂತ ಭಾವಿಸುವವರು ಮಾತ್ರ.
ಸೃಷ್ಟಿಯಲ್ಲಿ ಪ್ರತಿಯೊಂದು ಜೀವಕ್ಕೂ ಅದರದ್ದೇ ಸ್ಥಾನಮಾನ ಇದೆ. ಅದರದ್ದೇ ತೂಕ ಇದೆ. ಅದರದ್ದೇ ಕೊಡುಗೆ ಇದೆ. ಕುವೆಂಪು ಈ ಗಹನ ಸತ್ಯವನ್ನು ‘ಯಾವುದೂ ಅಮುಖ್ಯವಲ್ಲ’ ಅಂತ ಎಷ್ಟು ಸರಳವಾಗಿ ಹೇಳಿಬಿಟ್ಟಿದ್ದಾರೆ! ಸೃಷ್ಟಿಯ ಸಮತೋಲನ ಇರುವುದು ನಾಯಿ, ನಾಯಿಯಾಗಿರುವುದರಲ್ಲಿ. ಮನುಷ್ಯ ಮನುಷ್ಯರಾಗಿರುವುದರಲ್ಲಿ. ದನ, ಕೇವಲ ದನವೇ ಆಗಿರುವಲ್ಲಿ. ಮತ್ತು ಹಕ್ಕಿಗಳು ಹಾರಾಡಿಕೊಂಡಿರುವಲ್ಲಿ.
ನಾವು ಬೇರೆಲ್ಲ ಪ್ರಾಣಿಗಳನ್ನು ತಂದು, ಕೂಡಿಟ್ಟುಕೊಂಡು ಅವಕ್ಕೆ ಮಾತು ಕಲಿಸಿ, ಅವುಗಳಿಂದ ಸರ್ಕಸ್ ಮಾಡಿಸಿ, ಅವುಗಳಿಂದ ನಟನೆ ಮಾಡಿಸಿ, ಅವುಗಳಿಂದ ರೀಲ್ಸ್ ಮಾಡಿಸಿ ಅವನ್ನು ಮನುಷ್ಯರಂತೆ ಮಾಡಲು ಪ್ರಯತ್ನಿಸ್ತೇವೆ. ಆದರೆ ಸ್ವತಃ ಮನುಷ್ಯರಾದ ನಾವೇ ಮನುಷ್ಯರಾಗಿ ಉಳಿಯುವ ಪ್ರಯತ್ನ ಮಾಡುವುದಿಲ್ಲ.
ಆಲೋಚಿಸಬಲ್ಲ, ಅನುಕಂಪ ತೋರಬಲ್ಲ, ಕೇವಲ ತಿಂದುಂಡು ಸಾಯುವುದರ ಆಚೆಗೂ ಬದುಕಿದೆ ಅನ್ನುವ ಅರಿವುಳ್ಳ ಮನುಷ್ಯತ್ವವನ್ನು ನಾವು ಸಂಪೂರ್ಣ ರೂಢಿಸಿಕೊಳ್ಳುವ ಗೋಜಿಗೇ ಹೋಗುವುದಿಲ್ಲ. ನಾವು ಪ್ರಾಣಿಗಳಂತೆ ನಮ್ಮ ನಮ್ಮ ಸೀಮೆ ಗುರುತು ಮಾಡಿಕೊಳ್ತೇವೆ. ನಾವೂ ಪ್ರಾಣಿಗಳಂತೆ ನನ್ನ ಮುಂದಿನ ಬೇಟೆ ಕಸಿಯಲು ಬಂದರೆ ಹಲ್ಲು ತೋರಿ ಹೆದರಿಸುತ್ತೇವೆ. ಮೇಲೇರಿ ಹೋಗುತ್ತೇವೆ. ಯಾರೋ ದಾಸ್ತಾನು ಮಾಡಿಟ್ಟ ಪದಾರ್ಥ ಹೊತ್ಕೊಂಡು ಬರುತ್ತೇವೆ. ಅವೆಲ್ಲ ಪ್ರಾಣಿಸಹಜ ಸ್ವಭಾವ. ನಾವು ಮನುಷ್ಯರು ಅವುಗಳಂತೆ ಆಡತೊಡಗಿದ್ದೇವೆ.
ಪ್ರಾಣಿಗಳಲ್ಲಿ ಇಂಟೆಲಿಜೆನ್ಸ್ ಕೋಶೆಂಟ್ ತಕ್ಕಮಟ್ಟಿಗೆ ಕಂಡರೂ ಎಮೋಶನಲ್ ಕೋಶೆಂಟ್ ಅತ್ಯಂತ ಕಡಿಮೆ. ಸ್ಪಿರಿಚುವಲ್ ಕೋಶೆಂಟ್ ಇಲ್ಲವೇ ಇಲ್ಲ. ಮನುಷ್ಯರಾದ ನಾವು ಇತ್ತೀಚೆಗೆ ಇ.ಕ್ಯೂ ಕಳೆದುಕೊಳ್ಳುತ್ತಿದ್ದೇವೆ. ಇನ್ನು ಎಸ್.ಕ್ಯೂ ಅಂತೊಂದು ಇದೆ ಅನ್ನುವ ನೆನಪೂ ನಮಗಿರೋದಿಲ್ಲ!
ಪ್ರಾಣಿಗಳ ತಂಟೆಗೆ ಹೋಗುವ ಮೊದಲು, ನಾವು ಮನುಷ್ಯತ್ವ ಉಳಿಸಿಕೊಳ್ಳಬೇಕು. ತಪಿಸುವ, ಧ್ಯಾನಿಸುವ, ತರ್ಕಿಸುವ, ಅನುಕಂಪ ತೋರುವ, ತ್ಯಾಗ ಮಾಡುವ, ಬಲ ಇಲ್ಲದವರೂ ಬದುಕುವಂತಾಗಬೇಕೆಂದು ಯೋಚಿಸುವ, ಸಾವು ಬದುಕಿನ ನಿತ್ಯ ಸವಾಲಿನಲ್ಲಿ ಮತ್ತೊಬ್ಬರ ಜೀವ ಉಳಿಸುವುದೇ ಮುಖ್ಯವಾಗುವ ಮನುಷ್ಯ ಸಹಜ ಚಿಂತನೆಯನ್ನು ಬಲಪಡಿಸಿಕೊಳ್ಳಬೇಕು. ನಮ್ಮ ಸ್ಪಿರಿಚುವಲ್ ಕೋಶೆಂಟ್ ಅನ್ನು ಹೊರಗೆಳೆದು ಹೊಳಪು ಕೊಟ್ಟುಕೊಳ್ಳಬೇಕು. ಇಷ್ಟಾದರೆ – ನಾವು ಮನುಷ್ಯರಾಗಿ ಉಳಿಯುವೆವು, ಪ್ರಾಣಿಗಳನ್ನು ಮನುಷ್ಯರಾಗಿಸುವ ನಮ್ಮ ಹುಚ್ಚೂ ಬಿಟ್ಟುಹೋಗುವುದು.

