ಮಾರ್ಗದರ್ಶಿ ( The Guide ) : ಓಶೋ 365 #Day 289

ಪ್ರತಿ ನದಿಯೂ ಹರಿಯುತ್ತ ಹೋಗಿ ಸಮುದ್ರವನ್ನು ಸೇರುತ್ತದೆ ಯಾವ ಮಾರ್ಗದರ್ಶಿಯ, ಯಾವ ನಕಾಶೆಯ ಸಹಾಯವಿಲ್ಲದೆ. ನಾವೂ ಹಾಗೆ ಹೋಗಿ ಸಮುದ್ರವನ್ನು ತಲುಪಬಹುದು, ಆದರೆ ದಾರಿಯಲ್ಲಿ ಎದುರಾಗುವ ಸಂಗತಿಗಳಿಂದ ನಾವು ಸುತ್ತುವರೆಯಲ್ಪಡುತ್ತೇವೆ ~ ಓಶೋ ರಜನೀಶ್; ಕನ್ನಡಕ್ಕೆ:  ಚಿದಂಬರ ನರೇಂದ್ರ

ಬದುಕು
ನಮಗೆ ನೀಡಲಾಗಿರುವ
ತಾತ್ಕಾಲಿಕ ಸಾಲ ಮಾತ್ರ,
ಸತ್ಯದ ಒಂದು ಕಚ್ಚಾ ನಕಲು ಪ್ರತಿ.

ಮಕ್ಕಳಿಗೆ ಮಾತ್ರ
ನಿಜದಂತೆ ಕಾಣುತ್ತವೆ ಆಟಿಗೆಗಳು.
ಆದರೂ ಕೆಲವರಿಗೆ
ಆಟಿಗೆಗಳೆಂದರೆ ಮೋಹ,
ಇನ್ನೂ ಕೆಲವರಿಗೆ ತಾತ್ಸಾರ
ಹೊರಗೆ ಎಸೆದುಬಿಡುತ್ತಾರೆ,
ಮುರಿದು ಹಾಕಿಬಿಡುತ್ತಾರೆ.

ಈ ಬದುಕಿನಲ್ಲಿ
ಎಲ್ಲ ಅತಿಗಳಿಂದಲೂ ದೂರವಿರಿ,
ಇಲ್ಲವಾದರೆ
ಒಳಗಿನ ಸಮತೋಲನಕ್ಕೆ ಧಕ್ಕೆ.
ಕಣ್ಣು ಮುಚ್ಚಿ ತೆಗೆಯುವುದರಲ್ಲಿ
ಒಂದು ಅತಿ
ಇನ್ನೊಂದಾಗುತ್ತದೆ.

ಸೂಫಿಗಳು
ಸದಾ ಮಧ್ಯಮ ಸ್ಥಿತಿಯಲ್ಲಿ
ನಿರ್ಲಿಪ್ತರು, ಸಮಾಧಾನಿಗಳು
ಮತ್ತು
ಪ್ರೇಮದಲ್ಲಿ ನಿರತರು.

~ ಶಮ್ಸ್

ಮಾರ್ಗದರ್ಶಿ, ಮಾಸ್ಟರ್ ನ ಯಾವ ಅವಶ್ಯಕತೆ ಇಲ್ಲ ನಮಗೆ ಸಮುದ್ರವನ್ನು ತಲುಪಲು, ಇದು ತನ್ನಿಂದ ತಾನೇ ನಡೆಯುವ ಪ್ರಕ್ರಿಯೆ. ಮಾಸ್ಟರ್ ಅಥವಾ ಮಾರ್ಗದರ್ಶಿ ನಮಗೆ ಯಾಕೆ ಬೇಕೆಂದರೆ ದಾರಿಯಲ್ಲಿ ಎದುರಾಗುವ ಸಂಗತಿಗಳಿಂದ ನಾವು ಬಂಧಿತರಾಗದಿರಲೆಂದು, ಅವುಗಳಿಗೆ ಅಂಟಿಕೊಳ್ಳದಿರಲೆಂದು, ಏಕೆಂದರೆ ದಾರಿಯಲ್ಲಿ ನಮಗೆ ಇಂಥ ನೂರಾರು ಸಂಗತಿಗಳು ಎದುರಾಗುತ್ತವೆ.

ನದಿ ಹರಿಯುತ್ತ ಮುಂದುವರೆಸುತ್ತದೆ, ಅದಕ್ಕೆ ಸುಂದರವಾದ ಮರ ಎದುರಾದಾಗ; ನದಿ ಆ ಮರವನ್ನು ಕಂಡು ಆನಂದ ಪಡುತ್ತದೆ ಮತ್ತು ಮುಂದುವರೆಯುತ್ತದೆ. ಅದು ಆ ಮರದ ಸೌಂದರ್ಯಕ್ಕೆ ಅಂಟಿಕೊಂಡು ಅಲ್ಲಿಯೇ ಕುಳಿತುಕೊಳ್ಳುವುದಿಲ್ಲ. ಆ ನದಿಗೆ ಬೆಟ್ಟ ಎದುರಾದಾಗ, ಅದು ಬೆಟ್ಟಕ್ಕೆ ತನ್ನ ಕೃತಜ್ಞತೆಗಳನ್ನು ಹೇಳುತ್ತ, ತನಗೆ ಸಂತೋಷ ಕೊಟ್ಟದ್ದಕ್ಕಾಗಿ ಮರವನ್ನು ಅಭಿನಂದಿಸುತ್ತ ಮುಂದುವರೆಯುತ್ತದೆ. ಖಂಡಿತ ನದಿಗೆ ಬೆಟ್ಟದ ಬಗ್ಗೆ ಗೌರವ ಇದೆ, ಕೃತಜ್ಞತೆ ಇದೆ ಆದರೆ ನದಿ ಬೆಟ್ಟಕ್ಕೆ ಅಟ್ಯಾಚ್ ಆಗಿ ಅಲ್ಲಿಯೇ ಇದ್ದು ಬಿಡುವುದಿಲ್ಲ. ಅದು ಮುಂದುವರೆಯುತ್ತ ಹೋಗುತ್ತದೆ, ಅದರ ಹರಿವು ನಿಲ್ಲುವುದಿಲ್ಲ.

ಆದರೆ ಮನುಷ್ಯರೊಂದಿಗೆ ಇರುವ ತೊಂದರೆ ಎಂದರೆ, ನಿಮಗೆ ಮರ ಎದುರಾದಾಗ ಅದರ ಚೆಲುವಿಗೆ ಮನಸೋತು ಮನುಷ್ಯ ಅಲ್ಲಿಯೇ ಮನೆ ಕಟ್ಟಿಕೊಳ್ಳಲು ಯೋಚಿಸುತ್ತಾನೆ. ಅವನಿಗೆ ದಾರಿಯಲ್ಲಿ ಸುಂದರವಾದ ಗಂಡು ಅಥವಾ ಹೆಣ್ಣು ಎದುರಾದಾಗ, ಅವನು ಅಂಟಿಕೊಂಡು ಬಿಟ್ಟು ಅವರ ಜೊತೆ ಸಂಬಂಧ ಬೆಳೆಸಿಬಿಡುತ್ತಾನೆ. ಇಂಥ ಸಂದರ್ಭದಲ್ಲಿ ಮನುಷ್ಯನಿಗೆ ಯಾವುದಕ್ಕೂ ಅಂಟಿಕೊಳ್ಳಬಾರದು ಎನ್ನುವುದನ್ನ ಎಚ್ಚರಿಸುತ್ತ ಹೇಳಲು ಮಾರ್ಗದರ್ಶಿಯ, ಮಾಸ್ಟರ್ ನ ಅವಶ್ಯಕತೆಯಿದೆ. ಯಾವುದನ್ನೂ ಎಂಜಾಯ್ ಮಾಡಬೇಡಿ ಎಂದು ನಾನು ಹೇಳುತ್ತಿಲ್ಲ. ಬದಲಾಗಿ ನೀವು ಅಂಟಿಕೊಳ್ಳದಿರುವಾಗಲೇ ಆ ಸಂಗತಿಯನ್ನು ಹೆಚ್ಚು ಎಂಜಾಯ್ ಮಾಡುತ್ತೀರಿ, ಅಂಟಿಕೊಂಡಾಗ ಎಲ್ಲ ಆನಂದವನ್ನು ಕಳೆದುಕೊಂಡು ಬಿಡುತ್ತೀರಿ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.