ಮತ್ತೊಬ್ಬರಿಗೆ ಬೆರಗಾಗಿ ಕಾಣುವ ಅಪ್ಪ – ಅಮ್ಮಂದಿರ ಕಾಳಜಿ ಇರಬಹುದು, ಪ್ರೇಮಿಯ ಡೆಡಿಕೇಶನ್ ಇರಬಹುದು, ಗುರುವಿನ ಕಮಿಟ್ಮೆಂಟ್ ಇರಬಹುದು, ಗೆಳೆಯರ ಸಹಾಯ ಇರಬಹುದು… ಅದು ರೂಢಿಯಾಗಿಬಿಟ್ರೆ ಫಲಾನುಭವಿಗಳ ಪಾಲಿಗೆ ಅಗ್ಗವಾಗಿಬಿಡುತ್ತೆ. ಬಹುತೇಕ ನಾವೆಲ್ರೂ ಒಂದಲ್ಲ ಒಂದು ಸಲ ಆ ಮಯಾಂತಿ ಮರದ ಕೆಳಗೆ ನಿಂತವರೇ. ನಿಂತು ಗೊಣಗಿದವರೇ… । ಚೇತನಾ ತೀರ್ಥಹಳ್ಳಿ
ಮೂರ್ನಾಲ್ಕು ಶತಮಾನಗಳ ಹಿಂದೆ ಮಾಯನ್ಮಾರಿನಲ್ಲೊಬ್ಬ ರಾಜ ಇದ್ದ. ಅವನ ಹೆಸರು ಮಿಂದಾನ್ ಮಿನ್ ಅಂತ. ಅವ್ನಿಗೆ ಬೌದ್ಧ ಧರ್ಮದಲ್ಲಿ ಸಿಕ್ಕಾಪಟ್ಟೆ ಆಸಕ್ತಿ. ಒಂದಷ್ಟು ವಿಹಾರ ಕಟ್ಸಿ ಬೌದ್ಧ ಬಿಕ್ಖುಗಳಿಗೆ ಆಶ್ರಯ ಕೊಟ್ಟಿದ್ದ.
ಒಂದಿನ ಸಂಜೆ ಬಿಕ್ಖುಗಳು ಉಪಹಾರ ಮುಗ್ಸಿ ವಿಹಾರದ ಹಜಾರದಲ್ಲಿ ಕೂತ್ಕೊಂಡಿದ್ದಾಗ ಮಿಂದಾನ್ ಬಂದ. ಬಂದವ್ನೇ ಸುತ್ತ ಕೂತು ಚರ್ಚೆ ನಡೆಸ್ತಿದ್ದ ಬಿಕ್ಖುಗಳ ಹತ್ರ, “ನಿಮ್ಮಲ್ಲಿ ಯಾರಾದ್ರೂ ಅರಹಂತ ಪಟ್ಟಕ್ಕೆ ಏರಿದೀರಾ?” ಅಂತ ಕೇಳ್ದ.
ಅವನ ಈ ಪ್ರಶ್ನೆ ಹೊಸತೇನಲ್ಲ. ಅವಾಗಿವಾಗ ಇದೇ ಪ್ರಶ್ನೆ ಕೇಳೋನು, ಅವರಿಂದ ಇಲ್ಲ ಅನ್ನೋ ಉತ್ತರ ಬರೋದು.
ಈ ಸಲವೂ ಅದೇ ಉತ್ತರ ಬಂತು. ಮಿಂದಾನ್ ಸುಮ್ಮನಿರದೆ, “ಅಲ್ಲಾ ತಪ್ ತಿಳ್ಕೋಬೇಡಿ… ನಾನ್ ನಿಮ್ಗೆ ಇರಕ್ಕೆ ವಿಹಾರ ಕಟ್ಟಿಸ್ಕೊಟ್ಟಿದೀನಿ, ಹೊತ್ತುಹೊತ್ತಿಗೆ ಊಟದ ವ್ಯವಸ್ಥೆ ಮಾಡಿದೀನಿ, ನಿಮ್ಮೆಲ್ಲ ಬೇಕು ಬೇಡ ನೋಡ್ಕೊತಿದೀನಿ… ಅಷ್ಟಾದ್ರೂ ನಿಮ್ಮಲ್ಲಿ ಒಬ್ರೂ ಅರ್ಹಂತ ಪಟ್ಟಕ್ಕೇರಿಲ್ವಲ್ಲ ಇನ್ನೂ…” ಅಂದುಬಿಟ್ಟ.
ಎಲ್ರೂ ಇದಕ್ಕೇನು ಹೇಳೋದು ಅಂತ ಮುಖ ಮುಖ ನೋಡ್ಕೊಳ್ವಾಗ ತಿಂಗಜಾ ಸಾಯ್ದಾ ಅಂತ ಕರೆಸಿಕೊಳ್ತಿದ್ದ ತಿಂಗಜಾ ಮೊನಾಸ್ಟರಿಯ ಗುರು ನಸುನಗುತ್ತಾ, “ಇದೊಳ್ಳೆ ಕಥೆ! ನಾವಿಲ್ಲಿ ಮಯಾಂತಿ ಮರ ಹತ್ಕೊಂಡು ಮುಳ್ಳು ಚುಚ್ಚಿಸ್ಕೊಂಡು ಒದ್ದಾಡ್ತಾ ಇದೀವಿ, ನೀನು ಕೆಳಗೆ ನಿಂತ್ಕೊಂಡು ನಮ್ಮನ್ನೇ ದೂಷಿಸ್ತಾ ಇದೀಯ!” ಅಂದುಬಿಟ್ಟ.
~
ಸಾಯ್ದಾ ಕೊಟ್ಟ ಉತ್ತರ, ಮಾಯನ್ಮಾರಿನ ಒಂದು ನಾಣ್ನುಡಿ. ಈ ನಾಣ್ನುಡಿಗೊಂದು ಕತೆ ಇದೆ.
ಒಂದ್ ಸಲ ಇಬ್ರು ಕಾಡು ಮೇಡು, ಬೆಟ್ಟ ಗುಡ್ಡ, ಮಂಜಿನಪರ್ವತ ಮರುಭೂಮಿ ಎಲ್ಲಾ ದಾಟ್ಕೊಂಡು ಪ್ರಯಾಣ ಮಾಡೋ ಸಂದರ್ಭ ಬಂದಿರತ್ತೆ. ಈ ಇಬ್ರಲ್ಲಿ ಒಬ್ಬ ಉದ್ದನೆಯವ್ನು, ಸ್ಟ್ರಾಂಗ್ ಆಗಿದ್ದೋನು. ಇನ್ನೊಬ್ಬ ತೆಳ್ಳಗೆ, ಕುಳ್ಳಗಿದ್ದು ವೀಕ್ ಆಗಿದ್ದೋನು.
ಉದ್ದನೆ ಬಲಶಾಲಿ ದಾರಿಗೆ ಎದುರಾದ ಎಲ್ಲ ಕಷ್ಟಕ್ಕೆ ಎದೆ ಕೊಡ್ತಾ, ಅವನ್ನ ನಿವಾರಿಸ್ತಾ ತನ್ನ ಜೊತೆಗಿದ್ದೋನನ್ನೂ ಕಾಪಾಡ್ಕೊಂಡು ಮುಂದೆ ಸಾಗ್ತಾ ಇರ್ತಾನೆ. ಪ್ರಾಣಿಗಳು ಅಡ್ಡ ಬಂದ್ರೆ ಫೈಟ್ ಮಾಡೋದು, ಹೊಳೆ ಸಿಕ್ರೆ ತೆಪ್ಪ ಕಟ್ಟಿ ದಾಟೋದು, ತಾನು ಮೊದಲು ಬೆಟ್ಟ ಹತ್ತಿ. ಇನ್ನೊಬ್ಬನ್ನ ಕೈಹಿಡಿದು ಎಳ್ಕೊಳೋದು ಎಲ್ಲಾ ಮಾಡ್ತಿರ್ತಾನೆ.
ಹೀಗೇ ಹೋಗ್ತಾ ಹೋಗ್ತಾ ಒಂದು ದೊಡ್ಡ ಮರುಭೂಮಿ ಸಿಗತ್ತೆ. ವೀಕ್ ಇದ್ದೋನಿಗೆ ಆ ಬಿಸಿಲು, ಸೆಖೆ, ಕಾದ ಮರಳಿನ ಶಾಖ – ಇವೆಲ್ಲ ತಡೀಲಾಗದೆ ಹಾಗೇ ಉರುಳಿಕೊಳ್ತಾನೆ. “ನಾನಿನ್ನು ಬರಲ್ಲ, ನೀನ್ ಹೋಗು. ಹೆಜ್ಜೆ ಎತ್ತಿಡಕ್ಕಾಗ್ತಿಲ್ಲ ನಂಗೆ” ಅಂತಾನೆ.
ಅದಕ್ಕೆ ಉದ್ದನೆ ಮನುಷ್ಯ, “ಅಲ್ನೋಡು ಮಯಾಂತಿ ಮರ ಕಾಣಿಸ್ತಿದೆ. ಇನ್ನೊಂದ್ ಸ್ವಲ್ಪ ದೂರ ಅಷ್ಟೇ. ನೀನೇನೂ ಚಿಂತೆ ಮಾಡ್ಬೇಡ, ನಾನ್ ಕರ್ಕೊಂಡ್ ಹೋಗ್ತೀನಿ” ಅಂತ ವೀಕ್ ಇದ್ದೋನನ್ನ ಎತ್ಕೊಂಡು ಕರ್ಕೊಂಡ್ ಹೋಗ್ತಾನೆ. ಮರದ ಬುಡ ತಲುಪಿಕೊಳ್ತಾರೆ. ಅಂದ್ಕೊಂಡಿದ್ ಹಾಗೇ ಅದರ ತುಂಬ ಹಣ್ಣು ತುಂಬಿರ್ತವೆ.
ಉದ್ದನೆ ಮನುಷ್ಯ ವೀಕ್ ಇದ್ದವನನ್ನ ಕೆಳಗಿಳ್ಸಿ, “ಚೂರು ಸುಸ್ತಾಗಿದೆ, ದಣಿವಾರಿಸ್ಕೊಂಡು ಮರ ಹತ್ತುತೀನಿ” ಅಂತಾನೆ. ವೀಕ್ ಇದ್ದೋನು ತನ್ನ ಬ್ಯಾಗಿಂದ ನೀರು ತೆಗೆದುಕೊಟ್ಟು, “ಬೇಗ ಕುಡಿದು ಹತ್ತು” ಅಂತಾನೆ.
ಅದರಂತೆ ಉದ್ದನೆಯವ ನೀರು ಕುಡಿದು ಮರ ಹತ್ತುತಾನೆ. ಆದ್ರೆ ಆ ಮರದ ತುಂಬಾ ಮುಳ್ಳು. ಹಣ್ಣಿನ ಗೊಂಚಲಿಗೆ ಕೈಹಾಕೋಕೆ ಪರದಾಡುವಂಥ ಪರಿಸ್ಥಿತಿ.
ಅಲ್ಲವನು ಮುಳ್ಳು ತರಚ್ಕೊಂಡು ಹಣ್ಣು ಕಿತ್ತೋಕೆ ಒದ್ದಾಡ್ತಾ ಇದ್ರೆ, ಇಲ್ಲಿ ವೀಕ್ ಇದ್ದ ವ್ಯಕ್ತಿ ಅಸಹನೆಯಿಂದ ಬೈಯೋಕೆ ಶುರು ಮಾಡ್ತಾನೆ. “ನಾನ್ ನಿನ್ ಜೊತೆ ಇಲ್ಲೀವರೆಗೂ ಬಂದೆ, ಕುಡಿಯಕ್ಕೆ ನೀರು ಕೊಟ್ಟೆ, ಮರ ಹತ್ತಕ್ಕೆ ಪ್ರೋತ್ಸಾಹ ಕೊಟ್ಟೆ. ಅಷ್ಟಾದ್ರೂ ನಿನ್ಗೆ ಎರಡ್ ಹಣ್ಣು ಕಿತ್ತೋ ಯೋಗ್ಯತೆ ಇಲ್ಲವಾಯ್ತಲ್ಲ!” ಅಂತ ಬಯ್ಲಿಕ್ಕೇ ಶುರು ಮಾಡ್ದ!
~
ರಾಜನ ನಡವಳಿಕೆ, ಕೆಳಗೆ ನಿಂತು ಬೈಯುತ್ತಿದ್ದ ದುರ್ಬಲ ಮನುಷ್ಯನ ಹಾಗೇ ಇತ್ತು. ಸಾಯ್ದಾ ಮತ್ತಿತರ ಬೌದ್ಧ ಬಿಕ್ಖುಗಳು ಅಧ್ಯಾತ್ಮ ಸಾಧನೆಯ ಹಾದಿಯಲ್ಲಿ ಸಾಕಷ್ಟು ಕಲ್ಲು – ಮುಳ್ಳು ತುಳಿದಿದ್ದರು. ಜ್ಞಾನೋದಯದ ಹಣ್ಣು ಅವರ ಕೈಯಳತೆಯಲ್ಲೇ ಇದ್ದರೂ ಅದನ್ನು ತಲುಪುವುದು ಸುಲಭವಾಗಿರಲಿಲ್ಲ. ಚೂರೂ ಕಷ್ಟ ಪಡದೇ ಮತ್ತೊಬ್ಬರ ಮೂಲಕ ಆ ಹಣ್ಣಿನ ರುಚಿ ನೋಡಲು ರಾಜ ಕಾಯುತ್ತಿದ್ದ. ಅದರ ಸ್ವಾದ ಅನುಭವಿಸಲು ಕಾತರನಾಗಿದ್ದ. ಅದಕ್ಕಾಗೇ ಅವರ ಸಾಧನೆಯ ಬಗ್ಗೆ ಅವನು ಆಕ್ಷೇಪ ಎತ್ತಿದ್ದು.
~
ಇದು ನಮಗೆ ಬಹಳ ಚೆನ್ನಾಗಿ ಗೊತ್ತಿರೊ ಚರ್ಯೆ ಅಲ್ವಾ? ಗೊತ್ತಿರೋದೇನು, ಬಹುತೇಕ ನಾವೂ ಒಂದಲ್ಲ ಒಂದು ಸಲ ಆ ಮಯಾಂತಿ ಮರದ ಕೆಳಗೆ ನಿಂತವರೇ. ನಿಂತು ಗೊಣಗಿದವರೇ.
ಯಾರಿಗೆ?
ಬಹುತೇಕ ಅಪ್ಪ – ಅಮ್ಮನಿಗೆ!
ಕೆಲವೊಮ್ಮೆ ನಮ್ಮ ಗುರುಗಳು, ಮೆಂಟರ್ಸ್ ಅಥವಾ ಇನ್ಯಾರಿಗಾದರೂ.
‘ಅಷ್ಟಾದ್ರೂ ನಮಪ್ಪ ಅಮ್ಮ ಒಂದು ಮನೆ ಕಟ್ಟಿಸಿಡ್ಲಿಲ್ಲ’ ಅಂತಲೋ, ‘ನಮಪ್ಪ ನಮ್ಗೇ ಅಂತ ನಾಲ್ಕ್ ಕಾಸು ಆಸ್ತಿ ಮಾಡ್ಲಿಲ್ಲ’ ಅಂತಲೋ, ‘ನಮಮ್ಮ ಒಂದು ಬೊಟ್ಟು ಬಂಗಾರ ಮಾಡಿಸ್ಲಿಲ್ಲ ನಂಗೆ’ ಅಂತಲೋ, ‘ನಮಮ್ಮ ನಂಗೆ ಅದೇನೋ ಒಂದು ಕಲಿಸ್ಲಿಲ್ಲ’ ಅಂತಲೋ, ಅಪ್ಪ – ಅಮ್ಮ ಪ್ರಮೋಶನ್ ತಗೊಳ್ಲಿಲ್ಲ, ಫಾರಿನ್ ಟೂರ್ ಕರ್ಕೊಂಡ್ ಹೋಗ್ಲಿಲ್ಲ, ಅದ್ ಮಾಡ್ಲಿಲ್ಲ, ಇದ್ ಮಾಡ್ಲಿಲ್ಲ, ಕೊನೆಗೆ ರಾಜ ಮನೆತನದಲ್ಲಿ ಹುಟ್ಲಿಲ್ಲ – ಅನ್ನೋವರೆಗೂ ನಮ್ಮ ಗೊಣಗಾಟದ ರೇಂಜ್ ಇರುತ್ತೆ. ಮತ್ತು ಇದೇ ಗೊಣಗಾಟದ ರೇಂಜಿನಲ್ಲಿ ನಮ್ಮ ಮಕ್ಕಳೂ ಇರುತ್ತಾರೆ!
ನಮ್ಮನ್ನು ಭೂಮಿಗೆ ತಂದ ತಪ್ಪಿಗೆ ಬಹುಪಾಲು ಅಪ್ಪ ಅಮ್ಮಂದಿರು ಎಷ್ಟೆಲ್ಲ ಮುಚ್ಚಟೆ ಮಾಡಿ ಬೆಳೆಸ್ತಾರೆ. ಸಾಲಸೋಲ ಮಾಡಿ ಓದಿಸ್ತಾರೆ. ಮತ್ತೊಬ್ಬರ ಮುಂದೆ ಹಲ್ಲುಗಿಂಜಿ ವಶೀಲಿ ಮಾಡಿಸ್ತಾರೆ. ತಮ್ಮ ಆಸೆಗಳನ್ನ ಬದಿಗೊತ್ತಿ ದುಡ್ಡು ಕೂಡಿಡ್ತಾರೆ ಮತ್ತೇನೋ ಮಾಡ್ತಾರೆ. ಅವರ ಸ್ಥಾನಕ್ಕೆ ನಾವು ಬಂದಾಗ್ಲೂ ನಮ್ಮ ಮಕ್ಕಳಿಗಾಗಿ ಇವನ್ನೆಲ್ಲ ಮಾಡ್ತೀವಿ. ಆದ್ರೆ, ಯಾವ್ದಾದ್ರೂ ಒಂದು ಕಾರಣಕ್ಕೆ ನಾವೂ ನಮ್ಮ ಅಪ್ಪ ಅಮ್ಮನ ಬಗ್ಗೆ ಅಸಮಾಧಾನ ಪಟ್ಕೊಂಡಿರ್ತೀವಿ, ನಮ್ಮ ಬಗ್ಗೆ ನಮ್ಮ ಮಕ್ಕಳು ಪಟ್ಕೊಳ್ತಾರೆ.
ಇದು ಸಹಜ, ಹೌದು. ಸಂಬಂಧ ಆಪ್ತವಾದಷ್ಟೂ ನಿರೀಕ್ಷೆ ಹೆಚ್ಚು, ನಿರಾಸೆಯೂ ಹೆಚ್ಚು. ಆ ಇಬ್ಬರು ವ್ಯಕ್ತಿಗಳು ಅಷ್ಟು ದೂರ ಪ್ರಯಾಣಿಸಿ ಬೆಳೆದ ಆಪ್ತತೆ, ಬಲಶಾಲಿ ವ್ಯಕ್ತಿಯ ಬಗ್ಗೆ ದುರ್ಬಲ ವ್ಯಕ್ತಿ ಸಾದರ ಬೆಳೆಸಿಕೊಳ್ಳುವಂತೆ ಮಾಡಿತ್ತು. ಟೇಕನ್ ಫಾರ್ ಗ್ರಾಂಟೆಡ್ ಅನ್ತಾರಲ್ಲ, ಅಂಥ ಪರಿಸ್ಥಿತಿ ಮೂಡಿಸಿತ್ತು.
ಬಿಕ್ಖುಗಳನ್ನು ನೋಡಿಕೊಳ್ತಿದ್ದ ರಾಜನ ಕತೆಯೂ ಅಷ್ಟೇ. ಅವನೇನು ಅಹಂಕಾರಿಯಲ್ಲ. ಬೌದ್ಧ ಧರ್ಮಾನುಯಾಯಿ. ಧಾರ್ಮಿಕ ಅರಿವನ್ನು ಹೆಚ್ಚಿಸಿಕೊಳ್ಳಲು ಕಾತರನಾಗಿದ್ದವನು. ಆದರೆ, ಅತಿ ಪರಿಚಯದ ಸಾದರ ಅವನನ್ನು ಅವರಿಂದ ಹೆಚ್ಚಿನ ನಿರೀಕ್ಷೆ ತಾಳುವಂತೆ ಮಾಡಿತ್ತು. ಅವರ ಕಷ್ಟಕ್ಕೆ ಕುರುಡಾಗಿ ತನ್ನ ಗುರಿಯತ್ತಲೇ ಫೋಕಸ್ಡ್ ಆಗಿರುವಂತೆ ಮಾಡಿತ್ತು.
~
ಅತಿಪರಿಚಯಾದವಜ್ಞಾ ಅನ್ನುತ್ತೆ ಒಂದು ಸುಭಾಷಿತ.
ಅತಿಪರಿಚಯಾದವಜ್ಞಾ ಸಂತತಗಮನಾದನಾದರೋ ಭವತಿ ।
ಮಲಯೇ ಭಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನಂ ಕುರುತೇ
-ಇದು ಅದರ ಪೂರ್ಣ ಪಾಠ.
ಯಾವುದಾದ್ರೂ ಒಂದು ಸಂಗತಿ ಹೆಚ್ಚು ಪರಿಚಿತವಾದ್ರೆ, ಹೆಚ್ಚು ಹತ್ತಿರವಾದ್ರೆ ಅದರ ಬಗ್ಗೆ ವಿಶೇಷ ಗೌರವ ಉಳಿಯೋದಿಲ್ಲ. ಮಲಯ ಬೆಟ್ಟದಲ್ಲಿ ಗಂಧದ ಮರಗಳ ಸಂಖ್ಯೆ ಅತಿ ಅನಿಸುವಷ್ಟು ಜಾಸ್ತಿ. ಆದ್ದರಿಂದ ಅಲ್ಲಿ ನೆಲೆಸಿರುವ ಜನಕ್ಕೆ ಗಂಧದ ಮರ ವಿಶೇಷವೇನಲ್ಲ, ಅವರ ಪಾಲಿಗೆ ಅದು ಹೆಚ್ಚು ಬೆಲೆಯುಳ್ಳದ್ದೂ ಅಲ್ಲ. ಆ ಭಾಗದ ಜನರು ಗಂಧದ ಮರಗಳನ್ನು ಸೌದೆಯಾಗಿ ಬಳಸುವಷ್ಟು ಅಗ್ಗ – ಅನ್ನೋದು ಈ ಸುಭಾಷಿತದ ತಾತ್ಪರ್ಯ.
ಮತ್ತೊಬ್ಬರಿಗೆ ಬೆರಗಾಗಿ ಕಾಣುವ ಅಪ್ಪ – ಅಮ್ಮಂದಿರ ಕಾಳಜಿ ಇರಬಹುದು, ಪ್ರೇಮಿಯ ಡೆಡಿಕೇಶನ್ ಇರಬಹುದು, ಗುರುವಿನ ಕಮಿಟ್ಮೆಂಟ್ ಇರಬಹುದು, ಗೆಳೆಯರ ಸಹಾಯ ಇರಬಹುದು… ಅದು ರೂಢಿಯಾಗಿಬಿಟ್ರೆ ಫಲಾನುಭವಿಗಳ ಪಾಲಿಗೆ ಅಗ್ಗವಾಗಿಬಿಡುತ್ತೆ.
ಬಿಕ್ಖುಗಳ ಬಗ್ಗೆ ಮಿಂದಾನನಿಗೆ ಆಗಿದ್ದೂ ಅದೇ. ಉದ್ದನೆಯ ಬಲಶಾಲಿ ಗೆಳೆಯನ ಬಗ್ಗೆ ದುರ್ಬಲನಿಗೆ ಆಗಿದ್ದೂ ಅದೇ. ಅವರಂತೆ ನಡೆದುಕೊಂಡ ಪಕ್ಷದಲ್ಲಿ, ನಮಗೆ ಆಗಿರಬಹುದಾದ್ದೂ ಅದೇ!

