ಯಾವುದೆಲ್ಲ ಸತ್ಯವೋ, ಸುಂದರವೋ ಅದೆಲ್ಲವೂ ನಮಗೆ ಆಶ್ಚರ್ಯಕರ. ಆದ್ದರಿಂದ ಬೆರಗು ಅನುಭವಿಸುವ ಸಾಮರ್ಥ್ಯವನ್ನು ಕಾಯ್ದುಕೊಳ್ಳಿ. ಇದು ಬದುಕು ನಮಗೆ ಕೊಡಮಾಡಿರುವ ಒಂದು ಮಹಾ ಅನುಗ್ರಹ ~ ಓಶೋ ರಜನೀಶ್; ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ನೀವು ಬೆರಗುಗೊಳ್ಳುವ ಸಾಮರ್ಥ್ಯವನ್ನು ಕಳೆದುಕೊಂಡರೆ ಬದುಕಿದ್ದೂ ಸತ್ತಂತೆ. ಸಂಗತಿಗಳು ನಿಮಗೆ ಆಶ್ಚರ್ಯವನ್ನು ಉಂಟು ಮಾಡುತ್ತಿವೆಯಾದರೆ ಅದು ನೀವು ಬದುಕಿರುವುದಕ್ಕೆ ಸಾಕ್ಷಿ. ನೀವು ಸಂಗತಿಗಳಿಂದ ಹೆಚ್ಚು ಹೆಚ್ಚು ಆಶ್ಚರ್ಯ ಅನುಭವಿಸುತ್ತಿರುವಿರಾದರೆ ಹೆಚ್ಚು ಹೆಚ್ಚು ಜೀವಂತಿಕೆಯಿಂದ ಕೂಡಿಕೊಂಡಿದ್ದೀರಿ ಎಂದು ಅರ್ಥ. ಮಕ್ಕಳಲ್ಲಿ ನೀವು ಈ ಜೀವಂತಿಕೆಯನ್ನು ಕಾಣಬಹುದು, ಅವರು ಸಣ್ಣ ಸಣ್ಣ ಸಂಗತಿಗಳಿಗೂ ಅಶ್ಚರ್ಯಪಡುತ್ತಾರೆ. ಸಾಧಾರಣ, ಗಿಡ, ಹಕ್ಕಿ, ನಾಯಿಮರಿ, ಬೆಕ್ಕು , ಅಥವಾ ನದಿಯ ದಂಡೆಯ ಮೇಲಿನ ಪುಟ್ಟ ಹರಳು ಕಲ್ಲು ಈ ಎಲ್ಲವೂ ಮಕ್ಕಳಿಗೆ ಬೆರಗು ನೀಡುತ್ತವೆ ಎನ್ನುವುದನ್ನು ನಮಗೆ ನಂಬುವುದೂ ಅಸಾಧ್ಯ, ಆದರೆ ಇದು ನಿಜ. ಅಪರೂಪದ ಕೋಹಿನೂರ ಕಂಡಾಗಲೂ ನಿಮಗೆ ಆಗದಷ್ಟು ಬೆರಗು ಮಕ್ಕಳಿಗೆ ಈ ಸಾಧಾರಣ ಸಂಗತಿಗಳನ್ನು ಕಂಡರೆ ಆಗುತ್ತದೆ. ಮಕ್ಕಳಿಗೆ ಬೆರಗುಗೊಳ್ಳು ಸಾಮರ್ಥ್ಯ ಇರುವುದರಿಂದ ಅವುಗಳಿಗೆ ಸಣ್ಣ ಸಾಧಾರಣ ಕಲ್ಲು ಕೂಡ ಕೋಹಿನೂರು ವಜ್ರ. ಬೆರಗಿನ ಸಾಮರ್ಥ್ಯ ನಿಮ್ಮೊಳಗಿಲ್ಲವಾದರೆ ಕೋಹಿನೂರು ಕೂಡ ನಿಮಗೆ ಸಾಧಾರಣ ಕಲ್ಲಿನ ತುಣುಕು.
ನಿಮ್ಮೊಳಗೆ ನೀವು ಎಷ್ಟು ಬೆರಗಿನ, ಅಚ್ಚರಿಯ ಸಾಮರ್ಥ್ಯವನ್ನು ಕ್ಯಾರಿ ಮಾಡುತ್ತೀರಿಯೋ ನಿನಗೆ ಬದುಕು ಅಷ್ಟು ಅರ್ಥಗಳನ್ನು ಹೊಳೆಯುವಂತೆ ಮಾಡುತ್ತದೆ. ಆದ್ದರಿಂದ ಯಾವತ್ತೂ ಮುಕ್ತ ಮನಸ್ಸಿನವರಾಗಿರಿ. ಬದುಕು ಅಗಣಿತ ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಿ. ಇದು ಯಾವಾಗಲೂ ನಿರಂತರವಾಗಿ ಚಾಲ್ತಿಯಲ್ಲಿರುವ ಪ್ರಕ್ರಿಯೆ; ಇದಕ್ಕೆ ಕೊನೆ ಎನ್ನುವುದೇ ಇಲ್ಲ. ಇದು ಒಂದು ಶಾಶ್ವತ ಪ್ರಯಾಣ, ಮತ್ತು ಪ್ರತಿ ಕ್ಷಣವೂ ಹೊಚ್ಚ ಹೊಸತು, ಪ್ರತಿ ಕ್ಷಣವೂ ಓರಿಜಿನಲ್. ಏಕೆಂದರೆ ಪ್ರತಿಕ್ಷಣವೂ ನಿಮ್ಮನ್ನು ಮತ್ತೆ ನಿಮ್ಮ ಮೂಲಕ್ಕೆ ಎಸೆಯುತ್ತದೆ, ಪ್ರತಿ ಕ್ಷಣವೂ ನಿಮ್ಮನ್ನು ಮತ್ತೆ ಮಗುವಾಗಿಸುತ್ತದೆ.
ಒಂದು ದಿನ ಒಬ್ಬ ಕಾಜಿಯೊಂದಿಗೆ ಮುಲ್ಲಾ ನಸ್ರುದ್ದೀನ ಬೇಟೆಗೆ ಹೋಗಿದ್ದ. ಕಾಡಿನಲ್ಲಿ ತುಂಬ ಸುತ್ತಾಡಿದ ಬಳಿಕ ಒಂದು ಜಿಂಕೆ ಅವರ ಕಣ್ಣಿಗೆ ಬಿತ್ತು. ಕೂಡಲೇ ಕಾಜಿ ತನ್ನ ಬಂದೂಕಿನಿಂದ ಗುರಿಯಿಟ್ಟು ಜಿಂಕೆಯ ಮೇಲೆ ಗುಂಡು ಹಾರಿಸಿದ. ಆದರೆ ಆ ಗುರಿ ತಪ್ಪಿ ಜಿಂಕೆ ಓಡಿ ಹೋಯಿತು. ಆಗ ಮುಲ್ಲಾ ನಸ್ರುದ್ದೀನ ವಾಹ್ ವಾಹ್ ಎಂದು ಉದ್ಗಾರ ಮಾಡಿದ. ಕಾಜಿಗೆ ಸಿಟ್ಟು ಬಂತು “ ನನ್ನ ತಮಾಷೆ ಮಾಡುತ್ತೀಯಾ? “ ಕಾಜಿ ಕೆಂಗಣ್ಣಿನಿಂದ ನಸ್ರುದ್ದೀನ್ ನನ್ನು ನೋಡಿದ. “ ಕ್ಷಮಿಸಿ ಸ್ವಾಮಿ ನಾನು ವಾಹ್ ವಾಹ್ ಅಂದದ್ದು ತಮಗಲ್ಲ , ಆ ಜಿಂಕೆಗೆ” ನಸ್ರುದ್ದೀನ ಉತ್ತರಿಸಿದ.

