ಎಲ್ಲ ಪುರಾಣ ಕಥೆಯಲ್ಲಿ ಏನಾಗ್ತದೋ ಇಲ್ಲೂ ಅದೇ ಆಯ್ತು. ಯಕಃಶ್ಚಿತ್ ಒಂದು ಕಾಮಾ, ಒಂದು ಪಂಕ್ಚುಯೇಶನ್ ಮಾರ್ಕ್ ವೃತ್ರನ ಸೋಲಿಗೆ ಕಾರಣವಾಗಿಬಿಡ್ತು. ಇಂದ್ರಶತ್ರುವಿನ ಬಲ ಹೆಚ್ಚುವ ಬದಲು ಶತ್ರುವಾದ ಇಂದ್ರನ ಬಲ ಹೆಚ್ಚಿ ವೃತ್ರ ಸಾಯುವ ಹಾಗಾಯ್ತು...। ಚೇತನಾ ತೀರ್ಥಹಳ್ಳಿ
ಭಾಗವತ ಪುರಾಣದ ಪ್ರಕಾರ, ಒಂದು ಸಲ ಹೀಗಾಗುತ್ತೆ; ದೇವಶಿಲ್ಪಿ ತ್ವಷ್ಟ್ರನ ಮಗ ವಿಶ್ವರೂಪನ್ನ ದೇವೇಂದ್ರ ಅನುಮಾನ ಬಿದ್ದು ಕೊಲ್ತಾನೆ. ಅದ್ಯಾಕೆ ಅನ್ನೋದು ಮತ್ತೊಂದು ದೊಡ್ ಕತೆ.
ವಿಶ್ವರೂಪನ ಅಮ್ಮ ದೈತ್ಯ ಕುಲದವಳು. ಅವ್ನಿಗೆ ಮೂರು ತಲೆ ಇದ್ದಿದ್ರಿಂದ ತ್ರಿಶಿರ ಅಂತಾನೂ ಕರೀತಿರ್ತಾರೆ.
ಒಂದ್ಸಲ ದೇವಗುರು ಬೃಹಸ್ಪತಿ, ಇಂದ್ರ ಅವಮಾನ ಮಾಡ್ದ ಅಂತ ಮುನಿಸ್ಕೊಂಡು “ಇನ್ಮೇಲಿಂದ ನಾನು ನಿಮ್ಗೆ ಯಜ್ಞ ಯಾಗ ಮಾಡ್ಸಲ್ಲ, ಏನ್ ಮಾಡ್ಕೋತೀರೋ ಮಾಡ್ಕೊಳಿ” ಅಂದು ಹೊರಟೋಗಿಬೀಡ್ತಾನೆ. ಅದೇ ಟೈಮಿಗೆ ಅರ್ಜೆಂಟಾಗಿ ಒಂದು ಯಜ್ಞ ಮಾಡ್ಬೇಕಾಗಿರತ್ತೆ. ಏನ್ ಮಾಡೋದು ಅಂತ ಯೋಚನೆ ಮಾಡ್ತಿರುವಾಗ ಬ್ರಹ್ಮ ದೇವ “ನಮ್ಮ ತ್ವಷ್ಟ್ರನ ಮಗ ವಿಶ್ವರೂಪ ಎಲ್ಲಾ ಓದಿ ಮಾಡಿ ಚೆನ್ನಾಗ್ ತಿಳ್ಕೊಂಡಿದಾನೆ, ಸದ್ಯಕ್ಕೆ ಅವ್ನನ್ನೇ ಪುರೋಹಿತ ಮಾಡ್ಕೊಂಡಿರಿ” ಅಂತಾನೆ.
ದೇವತೆಗಳು ಯಜ್ಞಕ್ಕೆ ರೆಡಿ ಮಾಡ್ಕೊಳ್ವಾಗ ವಿಶ್ವರೂಪನ ಸೋದರ ಮಾವಂದಿರು ಅವ್ನನ್ನ ಗುಟ್ಟಾಗಿ ಭೇಟಿ ಮಾಡಿ, “ಯಜ್ಞದಲ್ಲಿ ಹವಿಸ್ಸು ಅರ್ಪಿಸುವಾಗ ದೈತ್ಯರಿಗೂ ಒಂದು ಪಾಲು ಸಲ್ಲೋ ಹಾಗೆ ಮಾಡು” ಅಂತ ಕೇಳ್ಕೋತಾರೆ. ಈ ಸೋದರ ಮಾವಂದಿರು ಅಮ್ಮನ ದೈತ್ಯಕುಲದವರು. ಅವ್ರಿಗೆ ಯಜ್ಞದ ಹವಿಸ್ಸಿನ ಮೇಲೆ ಅಧಿಕಾರ ಇರಲ್ಲ. ಈಗ ವಿಶ್ವರೂಪ ಇರೋದ್ರಿಂದ ಹೇಗಾದ್ರೂ ಒಂದ್ ಸಲ ಹವಿಸ್ಸಿನ ಶಕ್ತಿ ಪಡ್ಕೋಬೇಕು ಅಂತ ಅವನ ಹತ್ರ ಬಂದಿರ್ತಾರೆ. ವಿಶ್ವರೂಪನೂ ಅಳೆದೂಸುರಿದೂ ಅದಕ್ಕೆ ಒಪ್ಕೋತಾನೆ.
ಯಜ್ಞ ಶುರುವಾಗತ್ತೆ. ವಿಶ್ವರೂಪ ಮುಂದೆ ಕಾಣೋ ಎರಡು ತಲೆಯ ಬಾಯಿಂದ ದೇವತೆಗಳಿಗೂ ಹಿಂದೆ ತಿರುಗಿಕೊಂಡಿದ್ದ ಮೂರನೇ ತಲೆಯ ಬಾಯಿಂದ ದೈತ್ಯರಿಗೂ ಹವಿಸ್ಸು ಸಮರ್ಪಿಸೋ ಮಂತ್ರ ಹೇಳೋಕೆ ಶುರು ಮಾಡ್ತಾನೆ.
ಇದು ಇಂದ್ರನಿಗೆ ಗೊತ್ತಾಗಿಬಿಡತ್ತೆ. ಕೂಡ್ಲೇ, ಅಲ್ಲೇ< ಯಜ್ಞ ನಡೀತಿರೋ ಸ್ಪಾಟಲ್ಲೇ ವಿಶ್ವರೂಪನ ತಲೆ ಕತ್ತರಿಸಿಬಿಡ್ತಾನೆ.
ಅಸಲಿ ಕತೆ ಇಲ್ಲಿಂದ ಶುರು.
ದೇವರಾಜ ಇಂದ್ರ ತನ್ನ ಮಗನ್ನ ಕೊಂದ ಅಂತ ಕೋಪಿಸ್ಕೊಂಡ ತ್ವಷ್ಟ್ರ, ತಪಸ್ಸು ಮಾಡಿ, ತನ್ನ ಕೌಶಲ್ಯವೆಲ್ಲಾ ಒಗ್ಗೂಡ್ಸಿ ಒಂದು ದೈತ್ಯಾಕಾರದ ಘಟಸರ್ಪದಂಥ ಜೀವಿಯನ್ನ ಸೃಷ್ಟಿ ಮಾಡ್ತಾನೆ. ಅದಕ್ಕೆ ವೃತ್ರ ಅಂತ ಹೆಸರಿಡ್ತಾನೆ. ದೇವರಾಜನ್ನ ಕೊಲ್ಲೋದಕ್ಕೆ ಅಂತಲೇ ಸೃಷ್ಟಿಸಲಾದ ಈ ದೈತ್ಯಜೀವಿಯನ್ನ ವೃತ್ರಾಸುರ ಅಂತ ಕರೀತಾನೆ.
ಅವನಿಗೆ ಬಲ ತುಂಬೋಕೆ ಅಂತಲೇ ಒಂದು ಯಜ್ಞ ಆಯೋಜಿಸ್ತಾನೆ ತ್ವಷ್ತ್ರ.
ತ್ವಷ್ಟ್ರ ತನ್ನನ್ನ ಕೊಲ್ಲೋಕೆ ಅಂತಲೇ ದೈತ್ಯನನ್ನ ಸೃಷ್ಟಿ ಮಾಡಿ ಯಜ್ಞಾನೂ ಮಾಡ್ತಿದಾನೆ ಅಂತ ಗೊತ್ತಾದ ಕೂಡ್ಲೇ ತ್ರಿಮೂರ್ತಿಗಳ ಹತ್ರ ಓಡ್ತಾನೆ ಇಂದ್ರ. “ನನ್ನನ್ನ ಕಾಪಾಡಿ” ಅಂದ ಬೇಡ್ಕೋತಾನೆ.
ಅತ್ತ ತ್ವಷ್ಟ್ರ ಮತ್ತು ಅವನ ಕಡೆಯ ಋಷಿಗಳು ಯಜ್ಞ ಮಾಡ್ತಾ ಹವಿಸ್ಸು ಸುರೀವಾಗ “ಇಂದ್ರಶತ್ರೋ ವಿವರ್ಧಸ್ವ” ಅನ್ತಿರ್ತಾರೆ. ಇದರ ಅರ್ಥ, “ಇಂದ್ರನ ಶತ್ರುವೇ, ಮತ್ತಷ್ಟು ಬಲಶಾಲಿಯಾಗು!” ಅಂತ. ಅವನ್ನ ಒಡಲುಗೊಳಿಸಿದ್ದೇ ಇಂದ್ರನ್ನ ಸೋಲಿಸಲಿಕ್ಕೆ ಆದ್ದರಿಂದ, ಯಾಗ ಮಾಡುವಾಗ್ಲೂ ಉದ್ದೇಶ ಬಿಟ್ಟು ಆಚೀಚೆ ಸರಿಯದ ಋಷಿಗಳು “ಇಂದ್ರಶತ್ರು” ಅನ್ತಲೇ ಅನ್ನುತ್ತಾ ಇರ್ತಾರೆ.
ಇತ್ತ ಇಂದ್ರನ ಪರದಾಟ ಕಂಡು ಸರಸ್ವತಿ ತ್ರಿಮೂರ್ತಿಗಳ ಬಳಿ, “ಸದ್ಯಕ್ಕೆ ನಾನೊಂದು ವ್ಯವಸ್ಥೆ ಮಾಡ್ತೀನಿ. ವಿಶ್ವರೂಪನ್ನ ಕೊಂದು ಇಷ್ಟು ಫಜೀತಿ ಮಾಡಿಕೊಂಡ ಇಂದ್ರನ್ನ ಆಮೇಲೆ ವಿಚಾರಿಸೋಣ” ಅಂತ ಹೋಮಕುಂಡಕ್ಕೆ ಹವಿಸ್ಸು ಸುರೀತಿದ್ದ ಋಷಿಗಳ ನಾಲಿಗೆ ಮೇಲೆ ಪ್ರಭಾವ ಬೀರ್ತಾಳೆ. ಅದರಿಂದಾಗಿ ಆ ಋಷಿಗಳ ನಾಲಗೆಗಳು, “ಇಂದ್ರಶತ್ರೋ ವಿವರ್ಧಸ್ವ” ಅನ್ನುವ ಬದಲಾಗಿ, “ಇಂದ್ರ, ಶತ್ರೋ ವಿವರ್ಧಸ್ವ” ಅನ್ನಲು ಶುರು ಮಾಡ್ತವೆ! ಇಲ್ಲಿ ಇಂದ್ರ ಮತ್ತು ಶತ್ರುವಿನ ಮಧ್ಯ ಒಂದು ಕಾಮಾ ಬಿದ್ದುಬಿಡತ್ತೆ!
“ಇಂದ್ರಶತ್ರುವೇ ಬಲಶಾಲಿಯಾಗು” ಅನ್ನುವ ಬದಲಿಗೆ, “ಇಂದ್ರ, ಶತ್ರುವೇ (ನೀನು) ಬಲಶಾಲಿಯಾಗು” ಅಂದ ಹಾಗಾಯ್ತು!!
ಕೊನೆಗೂ ಎಲ್ಲ ಪುರಾಣ ಕಥೆಯಲ್ಲಿ ಏನಾಗ್ತದೋ ಇಲ್ಲೂ ಅದೇ ಆಯ್ತು. ಯಕಃಶ್ಚಿತ್ ಒಂದು ಕಾಮಾ, ಒಂದು ಪಂಕ್ಚುಯೇಶನ್ ಮಾರ್ಕ್ ವೃತ್ರನ ಸೋಲಿಗೆ ಕಾರಣವಾಗಿಬಿಡ್ತು. ಇಂದ್ರಶತ್ರುವಿನ ಬಲ ಹೆಚ್ಚುವ ಬದಲು ಶತ್ರುವಾದ ಇಂದ್ರನ ಬಲ ಹೆಚ್ಚಿ ವೃತ್ರ ಸಾಯುವ ಹಾಗಾಯ್ತು.
~
ಈ ಕಥೆ ಕೇಳಿದ್ವೋ ಇಲ್ವೋ, ಆದ್ರೆ ಇಂಥಾ ಕಥೆ ನಾವು ಅದೆಷ್ಟು ಕೇಳಿಲ್ಲ! ಅದೇ, ಪಂಕ್ಚುಯೇಶನ್ ಮಾರ್ಕುಗಳ ವ್ಯತ್ಯಾಸದಿಂದ ಫಜೀತಿಗಳಾಗೋ ಕತೆಗಳನ್ನ?
ಇಂಗ್ಲೀಶು ಕಲಿಯೋ ಕಾಲಕ್ಕೇ “Let us eat Grandma” / “Let us eat, Grandma” ತಮಾಷೆಯನ್ನೂ ಓದಿದ್ವಿ ತಾನೆ?
ಇಲ್ಲೂ ಒಂದು ‘ಕಾಮಾ’, “ಅಜ್ಜಿ, ತಿನ್ನೋಣ” ಅನ್ನೋದಕ್ಕೆ “ಅಜ್ಜೀನ ತಿನ್ನೋಣ” ಅನ್ನುವ ಅರ್ಥ ವ್ಯತ್ಯಾಸ ಮಾಡಿಬಿಡತ್ತೆ!
ಚಂದ್ರಹಾಸನ ಕತೆಯಲ್ಲಿ ವಿಷ ಕೊಡು ಅಂತ ಬರೆದಿದ್ದನ್ನು, ವಿಷಯೆಯನ್ನು ಕೊಡು ಅಂತ ತಿದ್ದಿದ್ದಕ್ಕೆ ಅವರಿಬ್ಬರ ಮದುವೆಯೇ ನಡೆದುಹೋಗುತ್ತೆ!
ಪಾಂಡವರು, ‘ಅದ್ವಿತೀಯ ಬಹುಮಾನ ಗೆದ್ಕೊಂಡು ಬಂದ್ವಿ’ ಅಂತ ಕುಂತಿಯೆದುರು ಉಪಮಾಲಂಕಾರದ ಪಾಂಡಿತ್ಯ ಪ್ರದರ್ಶನ ಮಾಡಲು ಹೋಗಿ ಏನಾಯ್ತು ಹೇಳಿ? ಅರ್ಜುನನಿಗೆ ನಿಕ್ಕಿ ಮಾಡಿ ಕರ್ಕೊಂಡು ಬಂದಿದ್ದ ದ್ರೌಪದೀನ ಐದೂ ಜನ ಮದುವೆಯಾಗಬೇಕಾಯ್ತು. ಅವರಮ್ಮ “ಸರಿ ಹಾಗಾದ್ರೆ, ಆ ಬಹುಮಾನಾನ ಐದೂ ಜನ ಹಂಚ್ಕೊಳಿ” ಅಂದುಬಿಟ್ಟಿದ್ಲಲ್ಲ?
ಇನ್ಯಾವ್ದೋ ಒಂದು ಸಂಸ್ಕೃತ ಕತೇಲಿ, ಸ್ವ್ಮಿಮ್ಮಿಂಗ್ ಪೂಲಲ್ಲಿ ಅಂತಃಪುರದ ರಾಣಿಯರ ಜೊತೆ ಆಟ ಆಡುವಾಗ ಪಟ್ಟದ ರಾಣಿ ಮೋದಕೈಸ್ತಾಡಯ (ಮಾ ಉದಕೈಃ ತಾಡಯ) ನೀರಲ್ಲಿ ಹೊಡೀಬೇಡ ಅಂದ್ಲಂತೆ, ರಾಜ ಅದನ್ನ ಮೋದಕೈಃ ತಾಡಯ (ಮೋದಕದಿಂದ ಹೊಡಿ) ಅಂದ್ಕೊಂಡು ಮೋದಕ ತರ್ಸಿ ಅದನ್ನ ಅವಳ ಮೇಲೆ ಸುರಿದ್ನಂತೆ!
~
ಭಾಷೆಯಿಂದಾಗೋ ಫಜೀತಿಗಳ ಕತೆ ಹೇಳಿದಷ್ಟೂ ಸಾಲದು. ಒಂದು ಮಾರ್ಕು, ಒಂದು ಸಂಧಿ, ಒಂದು ಸಮಾಸ, ಒಂದು ಅಲಂಕಾರ ಚೂರು ಆಚೀಚೆ ಆದರೂ ಸಾಕು; ಅವುಗಳ ಬಳಕೆಯ ಸಂದರ್ಭ ತಪ್ಪಾದರೂ ಸಾಕು, ಪರಿಣಾಮದ ದಿಕ್ಕೇ ಬದಲಾಗಿಬಿಡುತ್ತೆ.
ಈ ಗೂಗಲ್ ಟ್ರಾನ್ಸ್ಲೇಶನ್ ಕಾಲದಲ್ಲಿ ಪ್ರತಿದಿನ ಇಂಥಾ ಫಜೀತಿಕರ ತಪ್ಪುಗಳನ್ನ ನೋಡೋ ನಮಗೆ ಈ ಕತೆಗಳು ವಿಶೇಷ ಅನಿಸ್ದೇ ಹೋದ್ರೂ, ಓದುವಾಗ ಮಜಾ ಅನಿಸೋದು ಪಕ್ಕಾ!

