ನಾವೂ ಇಂಥಾ ಮೂಢರೇ. ಜಗತ್ತಿನ ಕನ್ನಡಿ ನಮ್ಮ ಕೈಯಲ್ಲೇ ಇದೆ. ಅದರಲ್ಲಿ ನಮ್ಮ ಮುಖವೇ ಕಾಣುತ್ತಿದೆ. ನಾವು ಮಾತ್ರ ಅದು ನಮ್ಮದಲ್ಲ ಅಂದುಕೊಳ್ತೇವೆ. ಮತ್ಯಾರದೋ ಅಂದುಕೊಂಡು ಅದರ ಬಗ್ಗೆ ಪ್ರೀತಿಯನ್ನೋ ದ್ವೇಷವನ್ನೋ ಅನುಕಂಪವನ್ನೋ ಬೆಳೆಸಿಕೊಳ್ತೇವೆ. ಆ ಬಿಂಬ ನಮ್ಮದೇ ಅನ್ನುವ ಅರಿವಾದರೆ ನಮ್ಮ ಓರೆಕೋರೆಗಳನ್ನು ತಿದ್ದಿಕೊಳ್ಳೋದು ಸುಲಭ. ಅಥವಾ ನಮ್ಮನ್ನು ನಾವು ಇರುವಂತೆಯೇ ಸ್ವೀಕರಿಸೋದು ಸುಲಭ. ಆದರೆ ನಮಗದು ನಾವೇ ಅನ್ನುವ ಅರಿವಿಲ್ಲದೆ ಅದನ್ನು ಟೀಕಿಸುತ್ತಲೋ ಮೋಹಿಸುತ್ತಲೋ ಜೀವಮಾನ ಕಳೆಯುತ್ತೇವೆ… । ಚೇತನಾ ತೀರ್ಥಹಳ್ಳಿ
ಇದೊಂದು ಮಜವಾದ ಆಫ್ರಿಕನ್ ಜನಪದ ಕತೆ.
ಒಂದೂರಲ್ಲಿ… ಊರೇನು, ಹೆಚ್ಚೂಕಮ್ಮಿ ಕಾಡಿನ ಹಾಗೇ ಇದ್ದ ಹಳ್ಳೀಲಿ ಒಬ್ಬ ಇರ್ತಾನೆ. ಒಂದಿನ ಅವ್ನು ಕಟ್ಗೆ ತರೋಕೆ ಕಾಡಿಗೆ ಹೋಗ್ತಾನೆ. ಕಾಡಲ್ಲಿ ಯಾರೋ ಪೇಟೆ ಕಡೆಯೋರು ಒಂದು ಕನ್ನಡಿ ಬಿಟ್ಟು ಹೋಗಿರ್ತಾರೆ.
ಆ ಮನ್ಷ ಆಗ್ಲೀ ಅವನ ಮನೆಯೋರಾಗ್ಲೀ ಕೂಗಿದ್ರೂ ಕೇಳಿಸ್ದಿರೋ ಅಷ್ಟು ದೂರದಲ್ಲಿದ್ದ ನೆರೆಮನೆಯೋರಾಗ್ಲೀ ಯಾರೂ ಅಲ್ಲೀವರೆಗೆ ಕನ್ನಡಿ ಅನ್ನೋ ವಸ್ತೂನೇ ನೋಡಿರಲ್ಲ.
ಇದೇನೋ ವಿಶೇಷವಾಗಿದ್ಯಲ್ಲ ಅಂತ ಆ ಮನ್ಷ ಅದನ್ನ ಎತ್ಕೊಂಡು ನೋಡ್ತಾನೆ. ಅದ್ರಲ್ಲೊಂದು ಮುಖ ಕಾಣತ್ತೆ. ಅವ್ನು “ಓ! ಇದು ನಮ್ಮಪ್ಪ ಇರ್ಬೇಕು” ಅಂದ್ಕೊಂಡು ಅದರ ಜೊತೆ ಮಾತಾಡ್ತಾನೆ. ಖುಷಿ ಆಗತ್ತೆ. ಹಂಗೇ ಅಂಗಿಯೊಳಗೆ ಅಡಗಿಸ್ಕೋಂಡು ಮನೆಗೆ ತಗೊಂಡು ಹೋಗ್ತಾನೆ. ಅಲ್ಲೂ ಯಾರಿಗೂ ತೋರಿಸ್ದೇ ಬುಟ್ಟೀಲಿ ಮುಚ್ಚಿಡ್ತಾನೆ; ಆಗಾಗ, ಯಾರೂ ಇಲ್ದಾಗ ತೆಗ್ದು ಕಣ್ತುಂಬ ಕನ್ನಡಿ ನೋಡಿ ವಾಪಸ್ ಇಟ್ಟುಬಿಡ್ತಾ ಇರ್ತಾನೆ.
ಒಂದಿನ ಅವ್ನ ಹೆಂಡ್ತಿ ಇದನ್ನ ಗಮನಿಸ್ತಾಳೆ. ಎಲ್ಲೋ ಏನೋ ಮಿಸ್ ಹೋಡೋತಿದ್ಯಲ್ಲ ಅಂದ್ಕೊಂಡ ಹೆಂಡ್ತಿ, ಗಂಡ ಕಾಡಿಗೆ ಹೋಗ್ತಿದ್ದಂಗೇ ಬುಟ್ಟಿ ತೆಗ್ದು ನೋಡ್ತಾಳೆ. ಕನ್ನಡಿ ಕೈಗೆತ್ಕೋತಾಳೆ. ನೋಡಿದ್ರೆ, ಅದರ ಪರದೆ ಮೇಲೊಬ್ಳು ಚೆಂದುಳ್ಳಿ ಚೆಲುವೆ!
“ಎಲಾ ಇವ್ನಾ! ಕದ್ದೂಮುಚ್ಚಿ ಇಂಥಾ ವ್ಯಾವಾರ ಮಾಡ್ತಿದಾನಲ್ಲ ಇವ್ನು. ಅತ್ತೆ ಹತ್ರ ಈಗ್ಲೇ ಹೋಗಿ ಹೇಳ್ತೀನಿ” ಅಂತ ಕನ್ನಡಿ ಸಮೇತ ಅತ್ತೆ ಹತ್ರ ಓಡ್ತಾಳೆ. ಕನ್ನಡಿ ಅವಳ ಕೈಲಿಟ್ಟು, “ಇಲ್ನೋಡಿ ಅತ್ತೆ, ನಿಮ್ ಮಗ ಇದ್ಯಾವಳನ್ನೋ ನೋಡ್ತಾ ಇರ್ತಾರೆ” ಅಂತ ದೂರು ಹೇಳ್ತಾಳೆ.
ಅತ್ತೆ ಆ ಕನ್ನಡಿ ಹಿಡ್ಕೊಂಡು ನೋಡಿ ನಕ್ಕುಬಿಡ್ತಾಳೆ. “ಅಯ್ಯೋ ಹುಚ್ಚಿ! ಬಂಗಾರದಂಗಿದೀಯ ನೀನು. ಇದ್ಯಾವಳೋ ಇವತ್ತೋ ನಾಳೆನೋ ಸಾಯೋಹಾಗಿರೋಳ ಚಿತ್ರ ನೋಡ್ಕೊಂಡು ಅನುಮಾನ ಪಡ್ತಿದೀಯಾ? ಏನೂ ಯೋಚ್ನೆ ಮಾಡ್ಬೇಡ. ಇದ್ಯಾವಳೋ ಮುದುಕಿ, ಹುಲ್ಲುಕಡ್ಡಿ ಹಂಗಿದಾಳೆ” ಅಂತ ಸಮಾಧಾನ ಮಾಡ್ತಾಳೆ.
~
ನಾವೇನು ನೋಡ್ತೀವೋ ಅದೇ ಕಾಣೋದು ಅನ್ತಾರೆ. ಇದು ಯಾರು ಬೇಕಾದ್ರೂ ಅನುಭವದಿಂದ ತಿಳಿದುಕೊಳ್ಳಬಹುದಾದ ಸತ್ಯ. ಜೊತೆಗೇ ನಮಗೇನು ಕಾಣುತ್ತೋ ಅದರ ಹೊಣೆ ಸಂಪೂರ್ಣ ನಮ್ಮದಾಗಿರುತ್ತೆ ಹೊರತು, ನಮ್ಮೆದುರಿಗಿರೋ ವಸ್ತುವಿನದ್ದಲ್ಲ ಅನ್ನೋದೂ ಸತ್ಯವೇ.
ಆ ಕನ್ನಡಿಯನ್ನು ಹಿಡ್ಕೊಂಡ ಪ್ರತಿಯೊಬ್ರಿಗೂ ಅವರವರ ಮುಖ ಕಂಡಿತ್ತು. ಅವರದನ್ನ ಹೇಗೆ ನೋಡಿದ್ರು ಅನ್ನೋದರ ಮೇಲೆ ಕಂಡಿದ್ದೇನು ಅನ್ನೋದು ನಿರ್ಧಾರವಾಗ್ತಾ ಹೋಯ್ತು.
ನಾವೂ ಹಾಗೇನೇ. ನೋಡ್ತಾ ಇರ್ತೀವಿ, ನಮಗೆ ಸತ್ಯವೇ ಕಾಣ್ತಾ ಇರುತ್ತೆ. ಆದ್ರೆ ಆ ಸತ್ಯವನ್ನ ನಾವು ಹೇಗೆ ಭಾವಿಸ್ತೀವಿ ಅನ್ನೋದರ ಮೇಲೆ ಆ ಸತ್ಯ ಬರೀ ನಮ್ಮ ಪಾಲಿನ ಸತ್ಯವೋ ಎಲ್ಲರ ಪಾಲಿನ ಸತ್ಯವೋ ಅನ್ನೋದು ತೀರ್ಮಾನವಾಗುತ್ತೆ.
ಕನ್ನಡಿಯಲ್ಲಿ ಅವರವರ ಮುಖ ಕಂಡಿದ್ದು ನಿಜ. ಅಲ್ಲಿ ಕಂಡ ಬಿಂಬದ ಗುಣಲಕ್ಷಣಗಳನ್ನೂ ಅವರು ಸರಿಯಾಗೇ ವಿವರಿಸಿದ್ರು. ಆದ್ರೆ, ಆ ವಿವರಣೆ ಯಾವುದರದ್ದು / ಯಾರದ್ದು ಅನ್ನೋದೇ ಅವರಿಗೆ ಗೊತ್ತಿಲ್ಲದ್ದರಿಂದ, ಅವರು ಅರಿತ ಸತ್ಯ ಸಂಪೂರ್ಣ ಸತ್ಯವಾಗದೇಹೋಯ್ತು! ಅವರಿಗೆ ಕಂಡಿದ್ದು ಸತ್ಯವೇ ಆಗಿದ್ದರೂ ಆ ಸತ್ಯವನ್ನು ಅವರು ಸರಿಯಾಗಿ ಗುರುತಿಸಲಾಗದೆ ಹೋದ್ರು. ತಮ್ಮದೇ ಬಿಂಬವನ್ನು ಮತ್ಯಾರದ್ದೋ ಬಿಂಬ ಅಂದುಕೊಂಡ್ರು. ಮಗ ತನ್ನದೇ ಬಿಂಬವನ್ನ ತನ್ನ ಅಪ್ಪ ಅಂದುಕೊಂಡ್ರೆ, ಅವನ ಹೆಂಡತಿ ತನ್ನ ಬಿಂಬವನ್ನು ಗಂಡನ ಗುಟ್ಟಿನ ಪ್ರೇಯಸಿ ಅಂದುಕೊಂಡ್ಳು. ಅವಳ ಅತ್ತೆ ತನ್ನ ಬಿಂಬ ಕಂಡು ಯಾರೋ ಸಾಯಲಿರುವ ಮುದುಕಿ ಅಂತ ಭಾವಿಸಿದ್ಲು.
ಅದೊಂದು ಕನ್ನಡಿ, ಅಲ್ಲಿ ಅವರವರ ಬಿಂಬ ಕಾಣುತ್ತೆ ಅನ್ನೋ ವಾಸ್ತವ ಗೊತ್ತಿಲ್ಲದಿದ್ರೂ ಅಡ್ಡಿ ಇರಲಿಲ್ಲ. ಕಣ್ಣಿಗೆ ಕಂಡ ಸತ್ಯವನ್ನೂ ಗುರುತಿಸಲಾಗದೆ ಹೋಗುವುದು ಎಂಥಾ ಮೂಢತನ!
ನಾವೂ ಇಂಥಾ ಮೂಢರೇ. ಜಗತ್ತಿನ ಕನ್ನಡಿ ನಮ್ಮ ಕೈಯಲ್ಲೇ ಇದೆ. ಅದರಲ್ಲಿ ನಮ್ಮ ಮುಖವೇ ಕಾಣುತ್ತಿದೆ. ನಾವು ಮಾತ್ರ ಅದು ನಮ್ಮದಲ್ಲ ಅಂದುಕೊಳ್ತೇವೆ. ಮತ್ಯಾರದೋ ಅಂದುಕೊಂಡು ಅದರ ಬಗ್ಗೆ ಪ್ರೀತಿಯನ್ನೋ ದ್ವೇಷವನ್ನೋ ಅನುಕಂಪವನ್ನೋ ಬೆಳೆಸಿಕೊಳ್ತೇವೆ. ಆ ಬಿಂಬ ನಮ್ಮದೇ ಅನ್ನುವ ಅರಿವಾದರೆ ನಮ್ಮ ಓರೆಕೋರೆಗಳನ್ನು ತಿದ್ದಿಕೊಳ್ಳೋದು ಸುಲಭ. ಅಥವಾ ನಮ್ಮನ್ನು ನಾವು ಇರುವಂತೆಯೇ ಸ್ವೀಕರಿಸೋದು ಸುಲಭ. ಆದರೆ ನಮಗದು ನಾವೇ ಅನ್ನುವ ಅರಿವಿಲ್ಲದೆ ಅದನ್ನು ಟೀಕಿಸುತ್ತಲೋ ಮೋಹಿಸುತ್ತಲೋ ಜೀವಮಾನ ಕಳೆಯುತ್ತೇವೆ.
~
ಸತ್ಯ ನಮ್ಮ ಕೈಯಲ್ಲೇ ಇದೆ. ಸ್ಪಷ್ಟವಾಗಿ ಕಾಣುತ್ತಿದೆ. ಅದನ್ನು ಅದು ಇರುವ ಹಾಗೇ ಗುರುತಿಸುವ ಜ್ಞಾನ ನಮಗಿಲ್ಲ. ಅಧ್ಯಾತ್ಮ ಮುಖ್ಯವಾಗೋದು ಇಲ್ಲಿ.
ಅಧ್ಯಾತ್ಮ ನಮ್ಮ ಕಣ್ಣಿಗೆ ಕಂಡಿದ್ದನ್ನು ಒಳಗಣ್ಣಿಂದ ಅರಿತು ಅದು ಸಾಪೇಕ್ಷ ಸತ್ಯವೋ ಸಾರ್ವಕಾಲಿಕ ಸತ್ಯವೋ ಅಂತ ಒರೆಹಚ್ಚಿ ನೋಡುವ ತಿಳುವಳಿಕೆ ನೀಡುತ್ತೆ. ಹೊರಗಣ್ಣಿಗೆ ಕಂಡ ಸತ್ಯವನ್ನ ಒಳಗಣ್ಣಿಂದಲೂ ಕಂಡು ಆ ಸತ್ಯ ಎಷ್ಟರ ಮಟ್ಟಿಗೆ ಸತ್ಯ, ಯಾರ ಮಟ್ಟಿಗೆ ಸತ್ಯ ಅನ್ನೋದನ್ನೂ ವಿವೇಚಿಸುವ ತಾಳ್ಮೆ ನೀಡುತ್ತೆ.
ನಮ್ಮ ಪಂಚೇದ್ರಿಯಗಳಿಗೆ ನಿಲುಕುವ ಪ್ರತಿಯೊಂದೂ ನಮ್ಮ ಪಾಲಿಗೆ ಸತ್ಯವೇ. ಗಿಡ ಹಸಿರಾಗಿರುವುದು ನಮ್ಮ ಕಣ್ಣಿಗೆ ತೋರುತ್ತಲೇ ಇದೆ. ಆದರೆ ಬೆಕ್ಕಿನ ಪಾಲಿಗೆ ಗಿಡ ಹಸಿರಲ್ಲ. ಗಿಡ ಹಸಿರಾಗಿದೆ ಅನ್ನೋದು ಬೆಕ್ಕಿನ ಪಾಲಿನ ಸತ್ಯವಲ್ಲ. ಇನ್ಯಾವುದೋ ಪ್ರಾಣಿಯ ಪಾಲಿಗೆ ಗಿಡವೇ ಸತ್ಯವಲ್ಲ. ಮನುಷ್ಯರಲ್ಲೇ ಮತ್ತೊಬ್ಬರಿಗೆ ಹಸಿರು ಸತ್ಯವಲ್ಲ! ಅವರು ಅದನ್ನು ನೀಲಿ ಅನ್ನುತ್ತಾರೆ. ಆ ಗಿಡ ಬೆಳಕಿನ ಬಣ್ಣಗಳಲ್ಲಿ ಒಂದನ್ನು ಪ್ರತಿಫಲಿಸಿ ಅದನ್ನೇ ಮೈಗೂಡಿಸಿಕೊಂಡಿದೆ, ಮತ್ತು ಅದನ್ನು ಯಾವ ಯಾವ ಜೀವಿಯ ಕಣ್ಣು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಎಷ್ಟು ಗ್ರಹಿಸುತ್ತೇ ಆ ಬಣ್ಣವಾಗಿ ತೋರುತ್ತೆ – ಅನ್ನೋದು ಸಾರ್ವತ್ರಿಕ ಸತ್ಯ. ಇದನ್ನು ಮನದಟ್ಟು ಮಾಡಿಕೊಳ್ಳುವ ವ್ಯವಧಾನ ದೊರೆಯುವುದು ಜ್ಞಾನದಿಂದ. ವಿಜ್ಞಾನ ಈ ಜ್ಞಾನವನ್ನು ನೀಡುತ್ತದೆಯಾದರೂ ಮನುಷ್ಯರ ಮೆದುಳಿನ ಆಯುಧವಾಗಿ ಅದು ಬಳಕೆಯಾದಾಗ ತಾವು ಕಂಡುಕೊಂಡದ್ದೇ ಅಂತಿಮ, ತಮ್ಮ ವ್ಯಾಖ್ಯಾನವೇ ನಿರ್ಣಾಯಕ ಅನ್ನುವ ಅಹಂಕಾರಕ್ಕೆ ಮನುಷ್ಯರು ಒಳಗಾಗುವುದರಿಂದ ಅದೂ ಅಧಿಕೃತವಲ್ಲ.
ವೈಜ್ಞಾನಿಕ ಚಿಂತನೆಗೆ ತನ್ನ ಈ ಗ್ರಹಿಕೆಯೂ ಆತ್ಯಂತಿಕ ಅಲ್ಲದಿರಬಹುದು ಅನ್ನುವ ವಿನಯವಂತಿಕೆ ಸೇರಿದಾಗಷ್ಟೆ ಅದು ಪರಿಪೂರ್ಣ. ಇಂಥಾ ವಿನಯವಂತಿಕೆ ಸ್ಪಿರಿಚುವಲ್ ಕೋಶೆಂಟ್ ಹೆಚ್ಚಿದ್ದರೆ ಮಾತ್ರ ಹೊಮ್ಮುವಂಥದ್ದು.
ಕೊನೆಗೂ ಇಷ್ಟೇ;
ನೋಡಿದ್ದೆಲ್ಲಾ ನಿಜವಲ್ಲ, ಕಂಡಿದ್ದೆಲ್ಲವೂ ನಿಜವಲ್ಲ. ಸತ್ಯ ಯಾವತ್ತೂ ನೋಟ ಮತ್ತು ಕಾಣ್ಕೆಗಳನ್ನು ಮೀರಿದ್ದು. ಅರಿವಿನ ಬೆಳಕಿದ್ದಲ್ಲಿ, ಒಳಗಣ್ಣಿಗೆ ನಿಲುಕುವಂಥದ್ದು.

