ಕಲ್ಲು ಕುಟಿಗ, ಮುದುಕ, ಇರದುದರೆಡೆಗೆ ತುಡಿವುದೆ ಜೀವನ! : ಕತೆ ಜೊತೆ ಕಾಡುಹರಟೆ #8

ಅತ್ಲಗೆ ಕಲ್ಲು ಕುಟಿಗ, ಇತ್ಲಗೆ ಮರಕುಟಿಗ, ಇಬ್ರೂ ಇನ್ನೇನೋ ಬಯಸಿದ್ರು. ಬಯಸಿದ್ದು ಸಿಗ್ತು ಅಂದಾಗ ಅದನ್ನ ದೂರ ತಳ್ಳಿಬಿಟ್ರು. ನಾವೂ ಹೆಚ್ಚೂ ಕಮ್ಮಿ ಹಿಂಗಿಂಗೇ ಆಡೋದಲ್ವಾ? ಬಯಸಿದ್ದು ಸಿಕ್ಕೇಬಿಟ್ರೆ ಅದನ್ನ ನಿಭಾಯಿಸುವ ಹೊಸ ತಲೆಬಿಸಿ. ಅದರ ಬದಲು ಸುಮ್ಮನೆ ಕನವರಿಸೋದು ರಿಸ್ಕ್ ಲೆಸ್! ~ ಚೇತನಾ ತೀರ್ಥಹಳ್ಳಿ

ಇದೊಂದು ಜಪಾನಿ ಜನಪದ ಕತೆ.

ಒಂದೂರಲ್ಲಿ ಹಶ್ನು ಅನ್ನೋ ಒಬ್ಬ ಕಲ್ಲು ಕುಟಿಗ ಇದ್ದ. ಉಂಡುಟ್ಟು ಹೆಂಡತಿ ಮಕ್ಕಳ ಜೊತೆ ಅರಾಮಾಗೇ ಇದ್ದ. ಆದ್ರೂ  ಅವ್ನಿಗೆ ಜೀವನದಲ್ಲಿ ತೃಪ್ತಿ ಅನ್ನೋದೇ ಇರ್ಲಿಲ್ಲ. ಯಾವಾಗ್ಲೂ ಅವನು ನಾನು ಅದಾಗಿರ್ಬೇಕಿತ್ತು, ಇದಾಗಿರ್ಬೇಕಿತ್ತು ಅಂತ ಕನಸು ಕಾಣ್ತಾ ಇರ್ತಿದ್ದ.

ಒಂದಿನ ಹಶ್ನುವಿಗೆ “ನಾನು ರಾಜಕುಮಾರ ಆಗಿರ್ಬೇಕಿತ್ತು…” ಅನ್ಸೋಕೆ ಶುರುವಾಯ್ತು. ಅದೇನು ಘಳಿಗೇನೋ ಏನೋ, ಮರುಕ್ಷಣವೇ ಅವ ರಾಜಕುಮಾರನಾಗಿಬಿಟ್ಟ!

ಕಲ್ಲುಕುಟಿಗ ಹಶ್ನು, ರಾಜಕುಮಾರನಾಗಿ ತನ್ನ ಸಂಪತ್ತು – ಅಧಿಕಾರಗಳನ್ನ ಸಂಭ್ರಮಿಸ್ತಾ, ತನ್ನ ಅರಮನೆ ಮಾಳಿಗೆ ಮೇಲೆ ನಿಂತು ಚಹಾ ಕುಡೀತಿದ್ದ. ಇದ್ದಕ್ಕಿದ್ದ ಹಾಗೇ ಬಿಸಿಲು ಜೋರಾಗಿ ಅವನ ಕಣ್ಣು ಕುಕ್ಕೋಕೆ ಶುರುವಾಯ್ತು. ಆಗ ಹಶ್ನುಗೆ ಸೂರ್ಯನ ಶಕ್ತಿ ಮುಂದೆ ಈ ರಾಜಕುಮಾರನ ಶಕ್ತಿ ಲೆಕ್ಕಕ್ಕೇ ಇಲ್ಲ. ನಾನು ಸೂರ್ಯನೇ ಆಗಿರ್ಬೇಕಿತ್ತು ಅನಿಸ್ತು.

ಮಜಾ ನೋಡಿ! ಮರು ಕ್ಷಣಾವೇ ಹಶ್ಬು ಸೂರ್ಯನಾಗಿ ಆಕಾಶದಲ್ಲಿ ಉರೀತಿದ್ದ!!

ಸೂರ್ಯನಾಗಿ ಆಕಾಶದಲ್ಲಿ ಉರೀತಾ ನಿಂತಿದ್ದ ಹಶ್ನು ಸುತ್ತ ಮುತ್ತ ಮೋಡ ಕವಿಯೋಕೆ ಶುರುವಾಯ್ತು. ಒಂದು ಹಂತದಲ್ಲಂತೂ ದೊಡ್ಡದೊಂದು ಮೋಡ ಬಂದು ಅವನ ಮುಖ ಪೂರ್ತಿ ಮುಚ್ಚೇಬಿಡ್ತು. ಸೂರ್ಯನಾಗಿದ್ದ ಹಶ್ನು, “ಈ ಮೋಡಕ್ಕೆ ಸೂರ್ಯನ್ನೇ ಮರೆಮಾಡೋ ಶಕ್ತಿ ಇದೆ. ನಾನು ಮೋಡ ಆಗಿದ್ರೆ ಚೆನಾಗಿತ್ತು” ಅಂದ್ಕೊಂಡ.

ತಗೊಳ್ಳಿ. ಆ ಕ್ಷಣವೇ ಅವ ಮೋಡ ಆಗ್ಬಿಟ್ಟ.

ಮೋಡವಾಗಿ ಆಕಾಶದಲ್ಲಿ ಖುಷಿಯಿಂದ ತೇಲಾಡ್ತಿದ್ದ ಹಶ್ನುಗೆ ಏನೋ ತಡೆದ ಹಾಗನಿಸ್ತು. ಏನಪ್ಪಾ ನೋಡಿದ್ರೆ, ಜೋರಾಗಿ ಗಾಳಿ ಮೀಸಿ ಮೋಡ ಎಲ್ಲಾ ಚದುರೋಹಾಗೆ ಮಾಡ್ತಿತ್ತು. “ಗಾಳಿಗೇ ಜಾಸ್ತಿ ಶಕ್ತಿ ಇರೋದು. ನಾನು ಗಾಳಿ…” ಹಶ್ನು ಸಾಲು ಪೂರ್ತಿ ಮಾಡೋ ಮೊದಲೇ ಬೀಸತೊಡಗಿದ್ದ, ಗಾಳಿಯಾಗಿದ್ದ!!

ಇಂಥಾ ಗಾಳಿಯಾದ ಹಶ್ನುಗೆ ಇನ್ನು ನನ್ನನ್ನ ತಡೆಯೋರು ಯಾರೂ ಇಲ್ಲ ಅನಿಸೋಕೆ ಶುರುವಾಯ್ತು. ಮನಸ್ಸಿಗೆ ಬಂದ್ ಹಾಗೆ ಆಕಾಶ್ದಲ್ಲಿ ಸುಳಿದಾಡ್ಕೊಂಡು ಖುಷಿಯಾಗಿದ್ದ. ಆದ್ರೆ ಈ ಖುಷಿ ಬಹಳ ಕಾಲ ಉಳೀಲಿಲ್ಲ. ಇದ್ದಕ್ಕಿದ್ದಂತೆ ಏನೋ ಅಡ್ದ ಬಂದು ತಡೆದಂತಾಯ್ತು. ಏನಂತ ನೋಡಿದ್ರೆ. ಒಂದ್ ದೊಡ್ದ ಬೆಟ್ಟ ತಲೆ ಎತ್ಕೊಂಡು ನಿಂತಿತ್ತು!

ಅದು ಗಾಳಿಯನ್ನ ತಡೆದು, ಅದು ಬೀಸೋ ದಿಕ್ಕನ್ನೇ ಬದಲಿಸ್ತಾ ಇತ್ತು.

ಹಶ್ನುಗೆ ತಾನೂ ಬೆಟ್ಟ ಆಗ್ಬೇಕು ಅನಿಸೋಕೆ ಶುರುವಾಯ್ತು. ಆಗೂಬಿಟ್ಟ. ಬೆಟ್ಟವಾಗಿ ಹೆಮ್ಮೆಯಿಂದ ತಲೆ ಎತ್ಕೊಂಡು ನಿಂತ. ಗಾಳೀನ, ಮೋಡಾನ. ಸೂರ್ಯನ್ನ, ಎಲ್ರನ್ನೂ ತಾನು ತಡೀಬಲ್ಲೆ ಅನ್ನೋ ಜಂಭ ಅವನ ಮುಖದಲ್ಲಿ ಕಾಣಿಸ್ತಿತ್ತು. ಆದ್ರೆ ಈ ಜಂಭಾನೂ ತುಂಬ ಕಾಲ ಉಳೀಲಿಲ್ಲ. ಯಾರೋ ಪಾದದ ಮೇಲೆ ದೊಡ್ಡ ಸುತ್ತಿಗೆಯಿಂದ ಬಡಿದಂತಾಯ್ತು. ಕಣ್ಣುತಗ್ಗಿಸಿ ನೋಡಿದ್ರೆ, ಒಬ್ಬ ಕಲ್ಲುಕುಟಿಗ ಬಂಡೆ ಕುಟ್ಟೋಕೆ ಶುರು ಮಾಡಿದ್ದ!

ಹಶ್ನುಗೆ ಜ್ಞಾನೋದಯವಾಯ್ತು. ಬೆಟ್ಟದಂಥ ಬೆಟ್ಟಾನೇ ಠಣ್ ಅನಿಸೋ ಶಕ್ತಿ ಇರೋದು ಕಲ್ಲುಕುಟಿಗಂಗೆ. ನಾನು ವಾಪಸ್ ಕಲ್ಲುಕುಟಿಗನೇ ಆಗಿಬಿಡ್ಬೇಕು ಅಂತ ಕಣ್ ಮುಚ್ಚಿ ಬೇಡ್ಕೊಂಡ.

ಮರುಕ್ಷಣವೇ ಅವ ಅದೇ ಬೆಟ್ಟದ ಕೆಳಗೆ ನಿಂತು ಕಲ್ಲು ಕುಟ್ಟುತ್ತಿದ್ದ.

~

ಅದು ಹಾಗೇ ಆಗೋದು. ನಾವು ಬೇಕು ಅಂದ್ಕೊಂಡಿದ್ದು ಸಿಕ್ಕ ಮೇಲೆ ಅದರಿಂದ ಕಳಚಿಕೊಳ್ಳೋವರೆಗೂ ಸಮಾಧಾನ ಇರೋದಿಲ್ಲ ನಮಗೆ.

ಬಹಳಷ್ಟು ವಿಷಯದಲ್ಲಿ ಹೀಗಾಗುತ್ತೆ. ಚಿಕ್ಕವರಿದ್ದಾಗ ಒಂದ್ ಸಲ ದೊಡ್ಡವರಾಗಿಬಿಡ್ಬೇಕು ಅನ್ನೋ ಆಸೆ. ದೊಡ್ಡವರಾದ್ಮೇಲೆ ಬಾಲ್ಯ ಎಷ್ಟು ಚೆನ್ನಾಗಿತ್ತು ಅನ್ನೋ ಹಳಹಳಿಕೆ. ಪ್ರೀತಿ ಮಾಡ್ವಾಗ ಮದುವೆ ಆಗ್ಬೇಕು ಅನ್ನೋ ಹಪಹಪಿ. ಮದುವೆ ಆದ್ಮೇಲೆ ಪ್ರೇಮಿಗಳಾಗೇ ಇರಬೇಕಿತ್ತು ಅನ್ನೋ ಪಶ್ಚಾತ್ತಾಪ. ಓದುವಾಗ ಕೆಲಸದ ಬಯಕೆ, ಕೆಲಸಕ್ಕೆ ಸೇರಿದ್ಮೇಲೆ ಓದ್ಕೊಂಡೇ ಇರಬೇಕಿತ್ತು ಅನ್ನೋ ಕನವರಿಕೆ.

ಎಲ್ಲಾವ್ದೂ ಅಷ್ಟೇ. ಸಿಗೋವರೆಗಷ್ಟೇ ನಮ್ಗೆ ಬೇಕಾಗೋದು. ಸಿಕ್ಕ ಮೇಲೆ ನಿಜವಾಗ್ಲೂ ಇದು ಬೇಕಿತ್ತಾ ಅನಿಸೋದು.

~

ಇನ್ನೊಂದು ಕತೆ ಕೇಳಿ.

ಒಂದೂರಲ್ಲಿ ಒಬ್ಬ ಮುದುಕ ಇದ್ದ. ದಿನಾ ಕಾಡಿಗೆ ಹೋಗೋದು, ಕಟ್ಗೆ ತರೋದು – ಇದೇ ಅವ್ನ ಕೆಲ್ಸ. ಅವ್ನು ತಂದಿದ್ ಕಟ್ಗೇನೆಲ್ಲ ಅವ್ನ ಹೆಂಡ್ತಿ ಮಾರಾಟ ಮಾಡಿ ನಾಲ್ಕ್ ಕಾಸು ದುಡ್ಕೊಂಡು ಬರ್ತಿದ್ಲು.

ಅವತ್ತೊಂದಿನ ಮುದುಕ ಕಾಡಲ್ಲಿ ಕಡಿದ ಕಟ್ಗೇನೆಲ್ಲ ಒಟ್ ಮಾಡಿ, ಬಳ್ಳಿಯಿಂದ ಬಿಗಿದು ತಲೆ ಮೇಲೆ ಹೊತ್ಕೊಳೋಕೆ ಬಗ್ಗಿದ. ಸೊಂಟ ಚಳಕ್ ಅಂತು.

ಮುದುಕಂಗೆ ರೇಜಿಗೆ ಬಿದ್ದೋಯ್ತು. “ಯಾವನಿಗ್ ಬೇಕು ಈ ಗೆಯ್ಮೆ. ಸಾವಾದ್ರೂ ಬರಬಾರ್ದಾ ಅತ್ಲಗಿ” ಅಂತ ಹೆಚ್ಚೂ ಕಮ್ಮಿ ಕೂಗೇಬಿಟ್ಟ.
ಇದ್ಕಿದ್ದಂಗೆ ಸುತ್ತಮುತ್ತ ಒಂದ್ ಸಲ ಲೈಟ್ ಹೋಗಿ ಬಂದಂಗೆ ಕತ್ಲು ಕತ್ಲಾಗಿ ಬೆಳಕಾಯ್ತು.
ಮುದುಕ ಕಣ್ಣುಜ್ಜಿಕೊಳ್ತಾ ನೋಡ್ತಾನೆ, ಒಂದು ಸ್ಕೆಲಿಟನ್ ಥರದ್ದೇನೋ ಅವನ ಕಡೆಗೇ ನಡ್ಕೊಂಡ್ ಬರ್ತಾ ಇದೆ!

ಹೆದ್ರಿಕೆ ಆಗ್ತಿದ್ರೂ ತೋರಿಸ್ಕೊಳ್ದೆ ಅವ, “ಯಾರು ನೀನು?” ಅಂದ.

“ನಾನು, ಸಾವು” ಅಂತು ಆ ಸ್ಕೆಲಿಟನ್.
“ಇಲ್ಲಿಗ್ಯಾಕೆ ಬಂದೆ?”
“ನೀನೇ ತಾನೆ ನನ್ನನ್ ಕರ್ದಿದ್ದು? ನಡಿ ಹೋಗಣ”
ಮುದುಕಂಗೆ ಕೈಕಾಲು ಬಿದ್ದೋದಂಗಾಯ್ತು. “ಅಯ್ಯೋ, ನಾನು ನಿನ್ಗೆ ಬಾ ಅಂದಿದ್ದಷ್ಟೆ, ಕರ್ಕೊಂಡ್ ಹೋಗು ಅನ್ಲಿಲ್ಲ!”
“ಬಾ ಅಂದಿದ್ಯಾಕೆ?” ಕೇಳ್ತು ಸ್ಕೆಲಿಟನ್.
“ಇದಕ್ಕೇನು ಹೇಳೋದಪ್ಪಾ… ಕರೆದ್ರೆ ಬಂದೇಬಿಡೋದಾ ಈ ಸಾವು!” ಅಂದುಕೊಳ್ತಾ ಮುದುಕ ಆಚೀಚೆ ನೋಡ್ದ.  ಕಟ್ಗೆ ಕಟ್ಟು ಕಾಣಿಸ್ತು. ಸಧ್ಯ ಅಂದ್ಕೊಳ್ತಾ, “ಕಟ್ಗೆ ಹೊರಕ್ಕೆ!” ಅಂದುಬಿಟ್ಟ. ಸ್ಕೆಲಿಟನ್ ಅಚ್ಚರಿಯಿಂದ ಅವ್ನನ್ನೇ ನೋಡ್ತು.
“ನಾನು ನಿನ್ನನ್ನ ಕರ್ದಿದ್ದು ಈ ಕಟ್ಗೆ ಹೊರಕ್ಕೆ. ಹೇಗಿದ್ರೂ ಬಂದಿದೀಯಲ್ಲ, ನಡಿ, ಈ ಹೊರೆ ನಮ್ಮನೆಗೆ ತಂದ್ ಹಾಕು” ಅನ್ನುತ್ತಾ ಬೀಸೋ ದೊಣ್ಣೆಯಿಂದ ಪಾರಾದ ಮುದುಕ.

~

ಇದೊಂದು ಈಸೋಪನ ಕತೆ. ಇದನ್ನ ಓದಿದ ಕೂಡ್ಲೇ ಮೊದಲು ಅನಿಸೋದು, “ಅಲ್ಲಾ… ಸಾವು ಬರಬಾರ್ದಾ ಅಂತ ತಾನೇ ಕರೆದ್ಬಿಟ್ಟು, ಅದು ಬಂದ ಕೂಡ್ಲೇ ಪ್ಲೇಟು ಬದಲಿಸಿಬಿಟ್ನಲ್ಲ ಘಾಟಿ ಮುದುಕ!” ಅಂತ. ತಾನೆ?

ಅದೇ ಈ ಕಥೆಯ ನೀತಿ ಕೂಡಾ. ನಮ್ಗೆ ಬೇಡೋದ್ರಲ್ಲಿರೋ ಆಸಕ್ತಿ ಅದನ್ನ ಪಡ್ಕೊಳೋದ್ರಲ್ಲಿ ಇರೋದಿಲ್ಲ ಅನ್ನೋದು. ಬೇಡಿದ್ದು ಸಿಕ್ಕೇಬಿಟ್ಟಾಗ ಅದು ಬೇಕಾಗೋದಿಲ್ಲ ಅನ್ನೋದು. ಮತ್ತೊಂದು ಕಿಟಕಿಯಿಂದ ನೋಡ್ದಾಗ, ಎಂಥಾ ಪರಿಸ್ಥಿತಿಯಲ್ಲೂ ಜೀವಿಗಳಿಗೆ ಬದುಕೋ ಹುಕಿ ಉಳ್ಕೊಂಡಿರುತ್ತೆ ಅನ್ನೋ ಸಂಗತೀನೂ ಇಲ್ಲಿ ಕಾಣುತ್ತೆ. ಅದನ್ನ ಇನ್ಯಾವಾಗಲಾದ್ರೂ ಹಣಕೋಣ.

ಬಯಸಿದ್ದು ಸಿಕ್ಕೇಬಿಟ್ಟಾಗ ಅದರ ಬಗ್ಗೆ ಆಸಕ್ತಿ ಕಳೆದುಕೊಳ್ಳೋ ವಿಷಯ ಬರೀ ಸಾವಿಗೆ ಸಂಬಂಧಪಟ್ಟಿದ್ದಲ್ಲ. ಈಸೋಪ ಈ ಕತೆ ಬರ್ದಿದ್ದು ಸಾವಿಗೆ ಸೀಮಿತವಾಗೂ ಅಲ್ಲ. ಅದು ಏನೇ ಆಗಿರಬಹುದು, ನಮ್ಮ ಬಳಿ ಇಲ್ಲದಾಗ ಮಾತ್ರ ನಮಗೆ ತೀವ್ರವಾಗಿ ಬೇಕು ಅನಿಸೋದು. ಸಿಕ್ಕಾಗ ಆ ತೀವ್ರತೆ ನಮ್ಮಲ್ಲಿ ಉಳ್ಕೊಳೋದಿಲ್ಲ.

ಹಶ್ನುಗೆ ಆಗಿದ್ದೂ ಅದೇ, ಮುದುಕನಿಗೆ ಆಗಿದ್ದೂ ಅದೇ. ಕಲ್ಲುಕುಟಿಗನಿಗೆ ತಾನು ಮತ್ತೇನೋ ಆದ್ರೆ ಸುಖವಾಗಿರ್ತೀನಿ ಅನಿಸಿದ್ರೂ ಆ ಸುಖ ಸಿಕ್ಕ ಕೂಡ್ಲೇ ಅದರ ಕಷ್ಟವೂ ಗೊತ್ತಾಗಿ ಮತ್ತೊಂದರ ಕಡೆ ಕೈಚಾಚೋಕೆ ಶುರು ಮಾಡ್ದ. ಕೊನೆಗೂ ಅವ್ನು ನೆಮ್ಮದಿ ಕಂಡುಕೊಂಡಿದ್ದು, ಮೊದಲೇನಿತ್ತೋ ಅದರಲ್ಲೇ. ಆ ಮುದುಕನೂ ಅಷ್ಟೇ. ಸತ್ತರೆ ಸಾಕಪ್ಪಾ ಅನ್ನುವ ಅವಸ್ಥೆಯಲ್ಲೂ ಆಯಸ್ಸು ಇದ್ದಷ್ಟು ಬದುಕಿಬಿಡೋಣ ಅನ್ನುವ ಹುಕಿ ಅವನಿಗೆ. ಸಾಯಬೇಕು ಅನಿಸ್ತಾ ಇದ್ರೂ ಸಾವು ಬಂದಾಗ, ಯಾಕಾದ್ರೂ ಬಂತೋ ಅನ್ನುವ ಯೋಚನೆ! ಅತ್ಲಗೆ ಕಲ್ಲು ಕುಟಿಗ, ಇತ್ಲಗೆ ಮರಕುಟಿಗ, ಇಬ್ರೂ ಇನ್ನೇನೋ ಬಯಸಿದ್ರು. ಬಯಸಿದ್ದು ಸಿಗ್ತು ಅಂದಾಗ ಅದನ್ನ ದೂರ ತಳ್ಳಿಬಿಟ್ರು. ನಾವೂ ಹೆಚ್ಚೂ ಕಮ್ಮಿ ಹಿಂಗಿಂಗೇ ಆಡೋದಲ್ವಾ? ಬಯಸಿದ್ದು ಸಿಕ್ಕೇಬಿಟ್ರೆ ಅದನ್ನ ನಿಭಾಯಿಸುವ ಹೊಸ ತಲೆಬಿಸಿ. ಅದರ ಬದಲು ಸುಮ್ಮನೆ ಕನವರಿಸೋದು ರಿಸ್ಕ್ ಲೆಸ್. ಅರಸನಾಗೋ ಕನಸು ಚೆಂದ. ಅರಸೊತ್ತಿಗೆ ಜೊತೆ ಹೆಗಲೇರೋ ಜವಾಬ್ದಾರಿ ಯಾರಿಗೆ ಬೇಕು!? ಸತ್ತರೆ ಎಲ್ಲಾ ನೋವಿಂದಲೂ ಬಿಡುಗಡೆ, ನಿಜ. ನಾವೇ ಬಿಡುಗಡೆ ಹೊಂದೋ ಉಸಾಬರಿ ತಡವಾದಷ್ಟೂ ಒಳ್ಳೇದು ತಾನೆ? ಸತ್ರೆ ಸಾಕು, ಸತ್ರೆ ಸಾಕು ಅಂತ ನೋವಿಂದ ಬಿಡುಗಡೆ ಹೊಂದೋ ಕನವರಿಕೆಯಲ್ಲೆ ದಿನ ದೂಡಿದರಾಯ್ತು.

ಅಡಿಗರು ಇರದುದರೆಡೆಗೆ ತುಡಿವುದೆ ಜೀವನ ಅಂತ ಎಷ್ಟು ಸುಂದರವಾಗಿ ಹೇಳಿಬಿಟ್ಟಿದಾರೆ ಇದನ್ನ! ಈ ತುಡಿತದಲ್ಲಿ ಕ್ಷಣಕ್ಷಣದ ಸುಖವನ್ನ ಕೆಡಿಸಿಕೊಳ್ಳದ ಹಾಗೆ ನೋಡಿಕೊಳ್ಳೋದು ಮುಖ್ಯವಷ್ಟೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.