‘ನಾಯಿ ಗುರು’, ಸೂಫಿ ಮತ್ತು ಝೆನ್ ಲಿವಿಂಗ್ : ಕತೆ ಜೊತೆ ಕಾಡುಹರಟೆ #9

ನಾಯಿನ ನೋಡಿ ಪಾಠ ಕಲಿತ ಸೂಫಿ ಕತೆಯಿಂದ ನಾವೇನು ಪಾಠ ಕಲೀಬಹುದು? ಓದಿ ನೋಡಿ… । ಚೇತನಾ ತೀರ್ಥಹಳ್ಳಿ

ಒಂದೂರಲ್ಲೊಬ್ಬ ಸೂಫಿ ಇದ್ದ. ತಾನಾಯ್ತು, ತನ್ನ ಪಾಡಾಯ್ತು ಅಂತ ಇದ್ದವನು. ಅವನು ತುಂಬಾ ಸಾಧನೆ ಮಾಡಿದ್ರೂ ಯಾರನ್ನೂ ತನ್ನ ಶಿಷ್ಯರಾಗಿ ಸ್ವೀಕರಿಸ್ತಿರಲಿಲ್ಲ. ಯಾರಾದ್ರೂ ಕೇಳಿದ್ರೆ, ‘ನಾನೇ ಇನ್ನೂ ಕಲಿಯೋದಿದೆ, ಯಾರಿಗೇನು ಕಲಿಸ್ಲಿ” ಅಂದುಬಿಡ್ತಿದ್ದ.

ಈ ಸೂಫಿಯಲ್ಲಿ ಒಂದು ವಿಶೇಷ ಗುಣ ಇತ್ತು. ಅದೇನಪ್ಪಾ ಅಂದ್ರೆ, ಪ್ರತಿಯೊಂದನ್ನೂ ಗಮನವಿಟ್ಟು ನೋಡೋದು, ಕುತೂಹಲದಿಂದ ನೋಡೋದು. ಅವನ ನೋಟದಲ್ಲಿ ಇದನ್ನ ಸುಮಾರು ಸಲ ನೋಡಾಗಿದೆ, ಇದ್ನೇನು ನೋಡೋದು ಅನ್ನೋ ಉಡಾಫೆಯಾಗ್ಲೀ, ಅದೇನು ಅಂತ ನಂಗ್ ಗೊತ್ತಿದೆ ಅದಕ್ಯಾಕೆ ಗಮನ ಕೊಡ್ಬೇಕು ಅನ್ನೋ ಧೋರಣೆಯಾಗ್ಲೀ ಕಂಡಿದ್ದೇ ಇಲ್ಲ.

ಆ ರಾಜ್ಯದ ರಾಜಂಗೆ ಈ ಸೂಫಿ ಬಗ್ಗೆ ಆಸಕ್ತಿ ಕೆರಳ್ತು. ರಾಜರಿಗೆ ಹಂಗೇ, ಯಾವ್ ಯಾವುದ್ರ ಮೇಲೋ ಆಸಕ್ತಿ ಕೆರಳ್ತಾ ಇರ್ತಿತ್ತು. ಹಂಗೇ ಅವ್ನಿಗೂ ಕೆರಳಿ ಆ ಸೂಫಿನ ಕರ್ಕೊಂಡ್ ಬನ್ನಿ ಅಂದ. ಆದ್ರೆ ಅವ ಬರ್ಲಿಲ್ಲ. (ಹೌದೌದು. ಈ ಥರದ್ ಕತೆ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣಗಳ ಸಾಕಷ್ಟು ಭಾಷೆಗಳಲ್ಲಿ, ಸಾಕಷ್ಟು ಜನರ ಬಗ್ಗೆ ಕೇಳಿದೀವಿ ನಾವು).

ಸರಿ ಇನ್ಮೇನ್ ಮಾಡೋದು ಅಂತ ರಾಜ ತಾನೇ ಸೂಫಿ ಹತ್ರ ಬಂದ. ಅವ್ನು ಬಂದಾಗ ಒಂದು ನಾಯಿ ಮುಂದೆ ಕೂತು ಏಕತಾರಿ ಮೀಟ್ತಾ ಹಾಡ್ತಿದ್ದ ಸೂಫಿ. ಅವ ಎದ್ದಿದ್ದು ಹಾಡು ಮುಗಿದ ಮೇಲೇನೇ.

ರಾಜನಿಗೆ ಸತ್ಕಾರ ಮಾಡಿ ಏನು ಬಂದಿದ್ದು ಅಂತ ವಿಚಾರಿಸ್ದ. ರಾಜನಿಗೋ, ಈ ಸೂಫಿಯ ಗುರು ಯಾರು, ಇವ್ನಿಗೆ ದಾರಿ ತೋರಿಸಿದ್ದು ಯಾರು ಅನ್ನೋ ಕುತೂಹಲ. ಅದನ್ನೇ ಕೇಳಿದ.

‘ಈ ನಾಯಿ…’ ಸೂಫಿ ತನ್ನೆದುರು ತೂಕಡಿಸುತ್ತ ಕೂತಿದ್ದ ನಾಯಿನ ತೋರಿಸ್ತಾ ಹೇಳಿದ.
ರಾಜನಿಗೆ ಇವ್ನೆಲ್ಲೋ ನನ್ಗೆ ತಮಾಷೆ ಮಾಡ್ತಿರಬೇಕು, ಈ ಸೂಫಿ ಗೀಫಿಗಳೆಲ್ಲ ವಿಚಿತ್ರ ಮನುಷ್ಯರಂತೆ. ಇವ್ನೂ ಹಂಗೇ ಇರ್ಬೇಕು ಅಂದುಕೊಳ್ತಾ ‘ಆ!?’ ಅಂದ.
‘ಈ ನಾಯಿನೇ ನನ್ನ ಗುರು’ ಖಾತ್ರಿಪಡಿಸಿದ ಸೂಫಿ.
‘ಅದು ಹೇಗೆ? ಈ ನಾಯಿ ಏನು ಕಲಿಸ್ತು ನಿಂಗೆ?’ ರಾಜನ ಪ್ರಶ್ನೆ.

‘ಅವತ್ತೊಂದಿನ ಈ ನಾಯಿ ಕೊಳದ ಅಂಚಲ್ಲಿ ನಿಂತ್ಕೊಂಡು ತನ್ನ ಬಿಂಬ ನೋಡ್ಕೊಂಡು ನೀರಿಗಿಳಿಯೋಕೆ ಹೆದರಿಕೊಳ್ತಾ ಇತ್ತು. ತನ್ನದೇ ಪ್ರತಿಬಿಂಬ ನೋಡಿ ಬೇರೆ ಯಾವ್ದೋ ನಾಯಿ ಅಂದ್ಕೊಂಡು ಭಯ ಪಡ್ತಾ ಇತ್ತು. ಆದ್ರೆ ಕೊಳದಲ್ಲಿ ಅದರದೊಂದು ಮರಿ ಬಿದ್ದೋಗಿತ್ತು. ಈ ನಾಯಿ ಕೊಳಕ್ಕಿಳಿದು ಅದನ್ನ ಕಚ್ಕೊಂಡು ಬರ್ಲೇಬೇಕಿತ್ತು. ಕೊನೆಗೂ ಇದು ಧೈರ್ಯ ಮಾಡಿ ಕೊಳಕ್ಕೆ ಜಿಗಿದೇ ಬಿಡ್ತು. ಅದು ಜಿಗಿದ ಕೂಡ್ಲೇ ಪ್ರತಿಬಿಂಬಾನೂ ಮಾಯ, ಭಯಾನೂ ಮಾಯ! ಇದ್ರಿಂದ ನಾನು ಪಾಠ ಕಲಿತ್ಕೊಂಡೆ. ನಮಗೆ ನಾವೇ ಅಡ್ಡಿ. ನಾವು ಹೆಚ್ಚು ಭಯ ಪಡೋದು ನಮಗೇನೇ. ಒಂದು ಸಲ ಆ ಭಯ ದಾಟಿಬಿಟ್ರೆ ನಮ್ಮನ್ನ ಯಾರೂ ತಡೆಯೋಕಾಗಲ್ಲ’ ಅಂದ ಸೂಫಿ.

ಸೂಫಿ ಮಾತು ಕೇಳಿ ರಾಜ ಅವಾಕ್ಕಾದ. ಇಷ್ಟು ಚಿಕ್ಕ ಚಿಕ್ಕ ಸಂಗತಿಗಳಲ್ಲಿ ದೊಡ್ಡ ದೊಡ್ಡ ಪಾಠ ಕಾಣುವ ಈ ಮಹಾತ್ಮನ್ನ ದರ್ಬಾರಿನ ಗೋಡೆಗಳಲ್ಲಿ ಬಂಧಿಸೋಕೆ ಆಗಲ್ಲ ಅನ್ನೋದು ಅವನಿಗೆ ಮನದಟ್ಟಾಯ್ತು. ಕಾಣಿಕೆ ಸಲ್ಲಿಸಿ ರಾಜಧಾನಿಗೆ ವಾಪಸ್ ಹೋದ.

~

ನಾಯಿಯಿಂದ ಸೂಫಿ ಕಲಿತ ಪಾಠ ಕಡಿಮೆ ತೂಕದ್ದೇನಲ್ಲ. ಅದು ಯಾವ್ದೇ ಕೆಲಸ ಇರ್ಲಿ, ನಮ್ಮದೇ ಅನುಮಾನದ ಬೇಲಿ ಧೈರ್ಯವಾಗಿ ದಾಟಿಬಿಟ್ರೆ ಮಿಕ್ಕಿದ್ದು ನಡೆದೇ ನಡೆಯುತ್ತೆ. ಕೆಲವೊಮ್ಮೆ ಪೂರ್ತಿ ಯಶಸ್ಸು ಕಾಣದಿದ್ರೂ ಪ್ರಯತ್ನ ಮಾಡಿದ ತೃಪ್ತಿಯಾದ್ರೂ ಇರುತ್ತೆ. ನಮ್ಮನ್ನು ಯಾರೂ ಕಟ್ಟಿ ಹಾಕಿರೋದಿಲ್ಲ. ನಮ್ಮ ಬಗ್ಗೆ ನಮಗಿರೋ ಅಪನಂಬಿಕೆ, ಆತ್ಮವಿಶ್ವಾಸದ ಕೊರತೆ, ನಮ್ಮ ಬಗ್ಗೆ ನಾವೇ ಕಟ್ಟಿಕೊಂಡಿರುವ ಹುಸಿ ಇಮೇಜ್ ಮತ್ತು ಮೇಲರಿಮೆಗಳು ಕೂಡಾ ನಮ್ಮನ್ನ ಹೆಜ್ಜೆ ಮುಂದಿಡದಂತೆ ಹೆದರಿಸ್ತವೆ, ತಡೆಯುತ್ತವೆ.

ನಮ್ಮ ಈ ಕೊರತೆ, ನಾಯಿಯ ಬಿಂಬವಷ್ಟೇ.
ಅದರ ಪ್ರತಾಪ, ಕೊಳಕ್ಕೆ ಜಿಗಿಯುವವರೆಗಷ್ಟೇ.
ಇದು ನಾಯಿಯಿಂದ ಸೂಫಿ ಕಲಿತ ಪಾಠವಾಯ್ತು. ಸೂಫಿ ಕತೆ ನಮಗೆ ಯಾವ ಪಾಠ ಕಲಿಸ್ತು?
ಕಲಿಯೋ ಮನಸ್ಸಿದ್ರೆ ಯಾವುದರಿಂದ ಬೇಕಾದ್ರೂ ಕಲೀಬಹುದು ಅನ್ನೋ ಪಾಠ!

ನಾವೇನಾದ್ರೂ ಆ ನಾಯಿ ಕೊಳಕ್ಕೆ ಜಿಗಿಯೋಕೆ ಭಯಪಡೋದನ್ನ, ಆಮೇಲೆ ಭಯವನ್ನೂ ಮೀರಿ ಜಿಗಿಯೋದನ್ನ ನೋಡಿದ್ರೆ ಏನು ಮಾಡ್ತಿದ್ವಿ?
ಮೊದಲು ಪಾಪ ಅಂತಿದ್ವಿ. ಆಮೇಲೆ ಭೇಷ್ ಅಂತಿದ್ವಿ; ನಿಂತು ನೋಡುವ ವ್ಯವಧಾನ ಇದ್ದರೆ. ಇಲ್ಲದಿದ್ರೆ ಅದೂ ಇಲ್ಲ.

ನಮ್ಮ ಪಂಚೇಂದ್ರಿಯಗಳು ಸದಾ ಎಚ್ಚರದಲ್ಲಿದ್ರೆ ನಾವು ಪ್ರತಿಯೊಂದರಿಂದ್ಲೂ ಏನಾದ್ರೊಂದು ಪಾಠ ಕಲೀತಾನೇ ಇರ್ಬೋದು. ಬದುಕನ್ನ ಇಂಪ್ರೊವೈಸ್ ಮಾಡ್ಕೋತಾನೇ ಇರ್ಬೋದು. ಆದ್ರೆ ನಮ್ಗೆ, ನಮಗೆಲ್ಲ ಗೊತ್ತಿದೆ ಅನ್ನೋ ಅಹಂಕಾರ. ಆ ನಾಯಿ ಏನೋ ಜೀವ್ನ ಮಾಡ್ಕೊತಿದೆ, ಅದನ್ನೇನು ನೋಡೋದು ಅನ್ನೋ ಉಡಾಫೆ. ನಾವು ನಮ್ಮ ಸುತ್ತಲಿನ ಜಗತ್ತನ್ನು ಒಳಗಣ್ಣಿರಲಿ, ಹೊರಗಣ್ಣಿಂದಲೂ ಸರಿಯಾಗಿ ನೋಡಿರೋದಿಲ್ಲ.

ಗಮನಿಸಿ ಬೇಕಿದ್ರೆ. ಯಾವತ್ತೋ ಒಂದಿನ ಇದ್ದಕ್ಕಿದ್ದಂಗೆ ನಮ್ಗೆ ನಮ್ಮ ಮನೆ ಮುಂದೆ ಕಣ್ಣಳತೆ ದೂರದಲ್ಲಿ ಒಂದು ಮರ ಕಾಣಿಸುತ್ತೆ. ನಾವು ಆ ಮನೆಯಲ್ಲಿ ಮೂರ್ನಾಲ್ಕು ವರ್ಷದಿಂದ ಇರ್ತೀವಿ. ದಿನಾ ಪೋರ್ಟಿಕೋದಲ್ಲಿ ನಿಂತಿರ್ತಿದ್ವಿ. ಆದ್ರೂ ನಮಗೆ ಆ ಮರ ಕಾಣ್ಲಿಕ್ಕೆ ಅಷ್ಟು ಸಮಯ ಬೇಕಾಯ್ತು. ಯಾಕೆ ಹೀಗಾಯ್ತು? ಆ ಮರ ನಮ್ಮ ಕಣ್ಣ ಪರದೆಯ ಮೇಲೆ ಪ್ರತಿಬಿಂಬಿಸ್ತಾ ಇದ್ರೂ ಅದನ್ನ ಗಮನಿಸೋ ಆಸಕ್ತಿಯಾಗಲೀ ತಾಳ್ಮೆಯಾಗಲೀ ನಮಗೆ ಇಲ್ಲದೇ ಇದ್ದಿದ್ರಿಂದ. ಮನೆ ಮುಂದೆ ಇನ್ನೇನಿರುತ್ತೆ? – ಅನ್ನುವ ನಮಗೆಲ್ಲಾ ಗೊತ್ತು ಅನ್ನುವ ಭಾವನೆಯಿಂದ.

ನಾವೇ ನಮ್ಮ ಕಣ್ಣಿಗೆ ಕಟ್ಟಿಕೊಂಡ ಈ ಹುಸಿ ಕಟ್ಟುಗಳನ್ನ ಕಳಚಿಕೊಂಡ್ರೆ ನಮಗೆ ಮೊದಲ ನೋಟದಲ್ಲೇ ಎಲ್ಲವೂ ಸ್ಪಷ್ಟವಾಗಿಬಿಡ್ತವೆ. ಎಲ್ಲವೂ ಸ್ಮೃತಿಯಲ್ಲಿ ದಾಖಲಾಗ್ತವೆ.

ಹೀಗೆ ಪ್ರತಿಯೊಂದು ವಿವರವನ್ನೂ ಎಚ್ಚರದಿಂದ ಗ್ರಹಿಸುತ್ತ ಬಾಳುವುದೇ ಪರಿಪೂರ್ಣ ಬದುಕು. ಝೆನ್ ಲಿವಿಂಗ್ ಅಂದ್ರೆ ಇದೇನೇ.

ಊಟ ಮಾಡುವಾಗ ಬರೀ ಊಟವಷ್ಟೇ ಮಾಡು, ಪ್ರೀತಿ ಮಾಡುವಾಗ ಪ್ರೀತಿಯನ್ನಷ್ಟೆ ಮಾಡು – ಅನ್ನುತ್ತೆ ಝೆನ್. ಮೊಬೈಲ್ ನೋಡುತ್ತ ಊಟ ಮಾಡಿದರೆ ನಾವು ತಿನ್ನುವ ಆಹಾರದ ಜೊತೆ ಕನೆಕ್ಟ್ ಆಗಲು ಸಾಧ್ಯವಾಗೋದಿಲ್ಲ. ತಟ್ಟೆಯಲ್ಲಿರೋ ಪದಾರ್ಥಗಳ ಬಣ್ಣ, ರುಚಿ, ಘಮ, ಅದನ್ನು ಅಟ್ಟುಣಿಸಿದವರ ಪ್ರೀತಿ ಯಾವುದೂ ಎದೆಗಿಳಿಯೋದಿಲ್ಲ. ನಾಲಗೆಗೆ ಸೋಕುತ್ತದೆ, ಹೌದು. ಮೊಬೈಲಿನ ಗ್ಯಾಲರಿಯಲ್ಲಿ ದಾಖಲಾಗ್ತವೆ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಆಗ್ತವೆ, ಹೌದು. ಆದರೆ ನಮ್ಮ ಎದೆಯೊಳಗೆ ಎಷ್ಟರಮಟ್ಟಿಗೆ ಇಳೀತವೆ? ಎದೆಗಿಳಿಯದೆ ಹೊಟ್ಟೆ ಸೇರಿದ ಆಹಾರಗಳು  ಎಷ್ಟರಮಟ್ಟಿಗೆ ಸಮಗ್ರ ವಿಕಾಸಕ್ಕೆ ಪುಷ್ಟಿ ನೀಡ್ತವೆ?

ಬೆರಳಲ್ಲಿ ಅನ್ನದಗುಳು ಹಿಡಿದು ದಿಟ್ಟಿಸಿದಾಗ – ಅದರ ಉರುಟು, ಹದ, ಅದು ನಮ್ಮ ಕೈಸೇರಿದ್ದರ ಹಿಂದಿನ ಶ್ರಮ, ಬೆಳೆದವರ ಕಾಳಜಿ, ಇಂಥದೊಂದು ಅದ್ಭುತವನ್ನು ಸೃಷ್ಟಿಸಿದ ಅಸ್ತಿತ್ವದ ಶಕ್ತಿ ಎಲ್ಲವೂ ಅಲ್ಲಿ ಕೃಷ್ಣನ ಬಾಯೊಳಗಿನ ಬ್ರಹ್ಮಾಂಡದಂತೆ ಹಾದು ಹೋಗ್ತವೆ. ನಾವು ತಿನ್ನುವ ಆಹಾರದ ಬಗ್ಗೆ ಗೌರವ ಮೂಡೋ ಹಾಗೆ ಮಾಡ್ತವೆ. ಇಂಥ ಭಾವನೆಗಳು ಮೊಳೆತಾಗ ಸಹಜವಾಗೇ ಸಂತಸದ ಹಾರ್ಮೋನುಗಳು ಮೈತುಂಬ ಹರಿದು ಜೀರ್ಣಶಕ್ತಿಗೆ, ಮನಸ್ಸಿನ ಉಲ್ಲಾಸಕ್ಕೆ ಕಾರಣವಾಗ್ತವೆ. ಮತ್ತು ಇಂಥಾ ಆನಂದಕ್ಕೆ ಕಾರಣವಾದ ಎಲ್ಲರನ್ನೂ / ಎಲ್ಲವನ್ನೂ ಪ್ರೀತಿಸುವಂತೆ ಮಾಡ್ತವೆ.

‘ಹಾಗಾದ್ರೆ ನಾವು ಪ್ರತಿಯೊಂದರಿಂದ್ಲೂ ಏನಾದ್ರೂ ಕಲೀತಾನೇ ಇರ್ಬೇಕಾ? ಜೀವ್ನ ಅಂದ್ರೇನು ಸ್ಕೂಲು ಕೆಟ್ಟೋಯ್ತಾ?’ ಅನ್ನೋ ಪ್ರಶ್ನೆ ಬರಬಹುದು.

ಅದು ಹಾಗಲ್ಲ. ನಾವು ಕಲಿಯೋಕೆ ಅಂತಾನೇ ಯಾವ್ದನ್ನೂ ಗಮನಿಸಬೇಕಿಲ್ಲ. ಗಮನಿಸಿ ನೋಡಿದಾಗ ಕಲಿಕೆ ತಾನಾಗೇ ಒದಗುತ್ತೆ. ಯಾವ ಥರದಲ್ಲಾದರೂ. ಆ ಕ್ಷಣಕ್ಕೆ ಅಲ್ಲದಿದ್ದರೂ ಇನ್ಯಾವುದೋ ತುರ್ತಿನಲ್ಲಾದರೂ. ಮುಖ್ಯ, ನಾವು ನೋಡುತ್ತ ಇರುವುದಷ್ಟೆ.

‘ನೋಡು, ಅದು ಕಾಣುತ್ತದೆ’ ಅನ್ನುತ್ತಾನೆ ಸಫೋಕ್ಲೀಸ್. ನೋಡ್ತಾ ಇರ್ಬೇಕು. ಕಂಡಿದ್ದು ಯಾವಾಗ ಕೈಹಿಡಿಯಬೇಕೋ ಆಗ ಹಿಡಿಯುತ್ತೆ. ನಮ್ಮನ್ನು ಭಯದ ಬೇಲಿ ದಾಟಿಸುತ್ತೆ. ಗುರಿ ಮುಟ್ಟುವ ದಾರಿ ನಡೆಸುತ್ತೆ.

ಕತೆಯ ಸೂಫಿ ಸಾಧಕನಾಗಿದ್ದು ಹೀಗೇ.

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

Leave a Reply

This site uses Akismet to reduce spam. Learn how your comment data is processed.