ಶ್ರೀ ನಾರಾಯಣ ಗುರು ಜೀವನ ಚರಿತ್ರೆ : ಅಧ್ಯಾಯ 2

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ ಎರಡನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್

ಚೆಂಬಳಂತಿ ಎಂಬ ಇತಿಹಾಸ ಪ್ರಸಿದ್ಧವಾದ ಗ್ರಾಮವೊಂದರಲ್ಲಿ ಪುರಾತನ ಈಳವ ಕುಟುಂಬವೊಂದರಲ್ಲಿ ಮಲಯಾಳ ವರ್ಷ 1032ರ ಸಿಂಹ ಮಾಸದ ಶತಭಿಷಾ ನಕ್ಷತ್ರದಲ್ಲಿ (20, ಆಗಸ್ಟ್ 1856) ನಾರಾಯಣ ಗುರುಗಳ ಜನನವಾಯಿತು. ಬಾಲ್ಯದಲ್ಲಿ  ಅತ್ಯಂತ ಉತ್ಸಾಹಿಯಾಗಿದ್ದ ಗುರುಗಳು, ಆಡುತ್ತಲೇ ತಾರತಮ್ಯ ನಿವಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದರು.

ಹಿಂದಿನ ಅಧ್ಯಾಯ ಇಲ್ಲಿದೆ: https://aralimara.com/2024/07/22/guru-33/ಮುಂದೆ ಓದಿ…


ಅಧ್ಯಾಯ ಎರಡು

ಸ್ವಾಮಿಗಳ ವಿದ್ಯಾರಂಭವನ್ನು ಮಾಡಿಸಿದ್ದು ಹೆಸರಾಂತ ಚೆಂಬಳಂತಿಪಿಳ್ಳೈಗಳ ತರವಾಡಿನ ಅಂದಿನ ಹಿರಿಯರು. ಅವರೊಬ್ಬ ಒಳ್ಳೆಯ ಜ್ಯೋತಿಷಿಯೂ ಸ್ಥಳೀಯ ಪ್ರಮುಖರೂ ಆಗಿದ್ದರು. ಅಕ್ಷರಾಭ್ಯಾಸವು ಅಂದು ಒಳನಾಡುಗಳಲ್ಲಿದ್ದ ರೀತಿಗನುಗುಣವಾಗಿತ್ತು. ಸಿದ್ಧರೂಪಂ, ಬಾಲಪ್ರಬೋಧನಂ, ಅಮರಕೋಶ ಮೊದಲಾದ ಬಾಲಪಾಠಗಳು ಅಭ್ಯಾಸ ಮುಕ್ತಾಯವಾದ ಬಳಿ ಉನ್ನತ ಶಿಕ್ಷಣಕ್ಕೆ ಬೇಕಾದ ಸೌಕರ್ಯಗಳಿಲ್ಲದೆ ಸ್ವಾಮಿಗಳ ಶಿಕ್ಷಣ ಸ್ಥಗಿತಗೊಂಡಿತು.

ಕುಟುಂಬದ ಬಹುಮುಖ್ಯ ಕಸುಬು ಬೇಸಾಯ. ಸ್ವಾಮಿಗಳು ತಮಗೆ ಸಾಧ್ಯವಿರುವ ಕೆಲಸಗಳನ್ನು ಮಾಡುವ ಮೂಲಕ ಬೇಸಾಯಕ್ಕೆ ಸಹಾಯ ಮಾಡುತ್ತಿದ್ದರಷ್ಟೇ ಅಲ್ಲದೆ ದನಕರುಗಳನ್ನು ಕಾಡಿಗೊಯ್ದು ಮೇಯಿಸುವ ಕೆಲಸವನ್ನೂ ಮಾಡುತ್ತಾ ಕೆಲ ಕಾಲ ಕಳೆದರು. ಮಧ್ಯಾಹ್ನಗಳಲ್ಲಿ ದನಗಳು ನೆರಳಲ್ಲಿ ಮೆಲುಕು ಹಾಕುತ್ತಿರುವಾಗ ಸ್ವಾಮಿಗಳು ಮರವೇರಿ ಕುಳಿತು ನೀಲಾಕಾಶವನ್ನು ನೋಡುತ್ತಾ ಕಲ್ಪನಾ ವಿಲಾಸದಲ್ಲಿ ಮುಳುಗುವುದು ಇಲ್ಲವೇ ಸಂಸ್ಕೃತ ಪದ್ಯಗಳನ್ನು ಉಚ್ಚಕಂಠದಲ್ಲಿ ಪಠಿಸುವುದು ಸಾಮಾನ್ಯವಾಗಿತ್ತು.

ಗಿಡ ಮರಗಳನ್ನು ಬೆಳೆಸುವುದರಲ್ಲಿ ಸ್ವಾಮಿಗಳಿಗೆ ಆ ದಿನಗಳಲ್ಲೇ ಬಹಳ ಆಸಕ್ತಿ ಇತ್ತು. ವೀಳ್ಯದ ಎಲೆಗಳ ಬಳ್ಳಿಗಳನ್ನು ನೆಟ್ಟು ಅವರೇ ಅದಕ್ಕೆ ನೀರೆರೆಯುತ್ತಿದ್ದರು. ಹೀಗೆ ತಾವು ನೆಟ್ಟು ಬೆಳೆಸುತ್ತಿದ್ದ ಗಿಡ-ಬಳ್ಳಿಗಳ ಬಗ್ಗೆ ಸ್ವಾಮಿಗಳೇ ಹಲವು ಸಾರಿ ಹೇಳಿ ಸಂತೋಷಪಟ್ಟಿದ್ದಾರೆ. ಬಾಲ್ಯಕಾಲ ಮುಗಿಯುವ ಮುನ್ನವೇ ಅವರೊಬ್ಬ ಸಾತ್ವಿಕನೂ ಭಕ್ತನೂ ಆದ ವ್ಯಕ್ತಿಯೆಂದು ಸುತ್ತಮುತ್ತಲಿನವರೂ ಅರಿತಿದ್ದಂತೂ ನಿಜ.

ತಮ್ಮ 21ನೇ ವಯಸ್ಸಿನಲ್ಲಿ ಅಂದರೆ ಮಲಯಾಳ ವರ್ಷ 1053ರಲ್ಲಿ ಸ್ವಾಮಿಗಳು ಸಂಸ್ಕೃತಾಧ್ಯಯನಕ್ಕಾಗಿ ಕರುನಾಗಪ್ಪಳ್ಳಿ ತಾಲೂಕಿನಲ್ಲಿರುವ ಪುದುಪ್ಪಳ್ಳಿ ಕುಮ್ಮಂಪಳ್ಳಿಲ್ ರಾಮನ್ ಪಿಳ್ಳೈ ಆಶಾನರಲ್ಲಿಗೆ ಹೋದರು. ಅಲ್ಲಿನ ವಾರಣಪ್ಪಳ್ಳಿ ಎಂಬ ಪ್ರಸಿದ್ಧ ಮನೆತನದಲ್ಲಿ ಸ್ವಾಮಿಗಳಿಗೆ ವಾಸದ ವ್ಯವಸ್ಥೆಯಾಯಿತು.

ತಿರುವನಂತಪುರಂ ಪೆರುನೆಲ್ಲಿ ಕೃಷ್ಣನ್ ವೈದ್ಯರ್, ವೆಳುತ್ತೇರಿ ಕೇಶವನ್ ವೈದ್ಯರ್ ಮೊದಲಾದ ಹಲವು ಗುಣವಂತರು ಸ್ವಾಮಿಗಳ ಸಹಪಾಠಿಗಳಾಗಿದ್ದರು. ಈ ಸಹಪಾಠಿಗಳು ಮತ್ತು ಅಲ್ಲಿದ್ದ ಮತ್ತಿತರ ಯುವಕರಿಗಿಂತಲೂ ಏಕಾದಶಿ ಮುಂತಾದ ವ್ರತಗಳಲ್ಲಿ ತೊಡಗಿ ಪುರಾಣಾದಿಗಳ ಪಠಣದಲ್ಲಿ ದಿನಗಳೆಯುತ್ತಿದ್ದ ವೃದ್ಧರ ಸಹವಾಸವೇ ಸ್ವಾಮಿಗಳಿಗೆ ಹೆಚ್ಚು ಇಷ್ಟವಾಗುತ್ತಿತ್ತು. ನಿದ್ರೆಯಲ್ಲೂ ಅವರ ಬಾಯಿಂದ ದೇವರನಾಮಗಳು ಮತ್ತು ಮಂತ್ರಗಳು ಹೊರಬೀಳುತ್ತಿದ್ದುದನ್ನು ಹಲವರು ಕೇಳಿಸಿಕೊಂಡಿದ್ದಾರೆ. ಸ್ವಾಮಿಗಳ ದೈವಭಕ್ತಿ ಮತ್ತು ಸಾತ್ವಿಕ ಸ್ವಭಾವದ ಕುರಿತ ಹಲವು ಘಟನೆಗಳನ್ನು ಪುದುಪ್ಪಳ್ಳಿಯವರು ಈಗಲೂ ಭಕ್ತಿಪೂರ್ವಕವಾಗಿ ಹೇಳಿಕೊಳ್ಳುವುದುಂಟು. ಗಜೇಂದ್ರ ಮೋಕ್ಷದ ಕತೆಯನ್ನು ವಾರಣಪಳ್ಳಿ ತರವಾಡಿನ ಹಿರಿಯರ ಅಪೇಕ್ಷೆಯಂತೆ ದೋಣಿ ಹಾಡಿನ ಮಟ್ಟಿನಲ್ಲಿ (‘ವಂಚಿ ಪಾಟ್ಟ್’ ಅಂದರೆ ದೋಣಿಯ ಹುಟ್ಟು ಹಾಕುತ್ತಾ ಹಾಡುವ ಗೀತೆ.  ಇದನ್ನು ಮಲಯಾಳಂಗೆ ವಿಶಿಷ್ಟವಾದ ‘ನತೋನ್ನತ’ ಎಂಬ ವೃತ್ತಕ್ಕೆ ಅನುಗುಣವಾಗಿ ರಚಿಸಲಾಗುತ್ತದೆ) ಅಲ್ಲೇ ಕುಳಿತು ಬರೆದುಕೊಟ್ಟಿದ್ದರು ಅದನ್ನು ಈಗಲೂ ಅಲ್ಲಿನವರು ಹಾಡಿಸುತ್ತಾರೆ
ಆ ದಿನಗಳಲ್ಲಿ ಸ್ವಾಮಿಗಳ ಇಷ್ಟ ದೇವತೆ ವಿಷ್ಣು. ಬಾಲಕೃಷ್ಣ ರೂಪದಲ್ಲಿ ಕಣ್ಣೆದುರೇ ಕುಣಿದಾಡುವ ಅನುಭವ ಸ್ವಾಮಿಗಳಿಗೆ ಉಂಟಾಗಿತ್ತು. ಆ ಕಾಲದಲ್ಲಿ ಹಲವು ಅವರು ವಿಷ್ಣುಸ್ತೋತ್ರಗಳನ್ನು ರಚಿಸಿದ್ದರು.

ಸ್ವಾಮಿಗಳ ಬುದ್ಧಿಮತ್ತೆ ಮತ್ತು ನೆನಪಿನ ಶಕ್ತಿಗಳು ಆ ದಿನಗಳಲ್ಲೇ ಒಂದು ದಂತಕತೆಯಾಗಿತ್ತು. ಒಮ್ಮೆ ಓದಿದ ಪುಸ್ತಕ ಅಥವಾ ಕೇಳಿಸಿಕೊಂಡ ವಿಷಯವನ್ನು ಅವರು ಮರೆಯುತ್ತಿರಲಿಲ್ಲ. ಎರಡೇ ವರ್ಷಗಳ ಅವಧಿಯಲ್ಲಿ ಕಾವ್ಯ, ನಾಟಕ, ಅಲಂಕಾರಗಳಲ್ಲಿ ಪರಿಣಿತಿಯನ್ನು ಪಡೆದು ಗುರುದಕ್ಷಿಣೆಯನ್ನರ್ಪಿಸಿ ಅಲ್ಲಿನ ಕಲಿಕೆಯನ್ನು ಮುಗಿಸಿದರು. ಗುರುಗಳಾಗಿದ್ದ ರಾಮನ್ ಪಿಳ್ಳೆಯವರಿಗೆ ಉಳಿದೆಲ್ಲಾ ಶಿಷ್ಯರಿಗಿಂತ ಹೆಚ್ಚು ಪ್ರೀತಿ ಪಾತ್ರರಾಗಿದ್ದವರು ಸ್ವಾಮಿಗಳೇ. ವಾರಣಪ್ಪಳ್ಳಿಯಿಂದ ಹಿಂದಿರುಗುವ ಹೊತ್ತಿಗೆ ಸ್ವಾಮಿಗಳಿಗೆ ತೀವ್ರವಾದ ರಕ್ತಾತಿಸಾರದ ಬಾಧೆಯುಂಟಾಯಿತು. ಊರಿನಿಂದ ಜನರು ಬಂದು ಸ್ವಾಮಿಗಳನ್ನು ಹೊತ್ತೊಯ್ಯಬೇಕಾದ ಸ್ಥಿತಿ ಉದ್ಭವಿಸಿತು. ವಾರಣಪ್ಪಳ್ಳಿಯಿಂದ ಹೊರಡುವ ಹೊತ್ತಿನಲ್ಲಿ ಸ್ವಾಮಿಗಳಿಗೆ ಪ್ರಜ್ಞೆಯೇ ಇರಲಿಲ್ಲ. ಗುರುಕುಲದ ಪ್ರಿಯ ವಿದ್ಯಾರ್ಥಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮರಳುವುದನ್ನು ಕಂಡು ಕಣ್ಣೀರುಗರೆಯದವರಾರೂ ಅಂದು ಅಲ್ಲಿರಲಿಲ್ಲ.


(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ