ಯಾವುದಾದ್ರೂ ವಸ್ತು ಅಥವಾ ವ್ಯಕ್ತಿ ಯಾಕೆ ಮತ್ತೊಬ್ರಿಗೆ ಯೂಸ್’ಫುಲ್ ಆಗಿರ್ಲೇಬೇಕು? ಜಗತ್ತಲ್ಲಿರೋ ಪ್ರತಿಯೊಂದೂ ಮತ್ತೊಂದಕ್ಕೆ ಉಪಯೋಗವಾಗ್ಲಿಕ್ಕೇ ಹುಟ್ಕೊಂಡಿರೋದಾ? ನಮ್ಮ ಲೆಕ್ಕಕ್ಕೆ ಮರ ಹಣ್ಣು ಬಿಡೋದೇ ಬೇರೆಯವ್ರು ತಿನ್ಲಿ ಅಂತ. ನದಿ ಹರಿಯೋದೇ ಮತ್ತೊಬ್ರಿಗೆ ಉಪಕಾರ ಮಾಡೋಕೆ. ಹಸು ಹಾಲು ಕೊಡೋದೇ ಮನುಷ್ಯರಿಗೆ ಕುಡಿಸೋಕೆ! ~ ಚೇತನಾ ತೀರ್ಥಹಳ್ಳಿ
ನೂರಾರು ವರ್ಷಗಳ ಹಿಂದೆ ಚೀನಾ ದೇಶದಲ್ಲಿ ಜುವಾಂಗ್ ಜಿ ಅಂತ ಒಬ್ಬ ವಿಲಕ್ಷಣ ಗುರು ಇದ್ದ. ಊರಿಗೇ ಒಂದ್ ದಾರಿ ಆದ್ರೆ ಇವ್ನಿಗೇ ಒಂದ್ ದಾರಿ. ಏತಿ ಅಂದ್ರೆ ಪ್ರೇತಿ ಅನ್ನುತ್ತಿದ್ದ ಜುವಾಂಗ್ ಜಿ ರಾಜಂಗೂ ಒಂದೇ ಥರ ಸೇವಕಂಗೂ ಒಂದೇ ಥರ ಉತ್ರ ಕೊಡುವಷ್ಟು ಧೈರ್ಯವಂತ ಆಗಿದ್ದ. ಅವನ ಮಾತು ವಿಚಿತ್ರ ಅನಿಸಿದ್ರೂ ಅದರಲ್ಲಿ ಸತ್ಯ ಇರ್ತಿದ್ರಿಂದ ಜನ ಅವ್ನಿಗೆ ಗೌರವ ಕೊಡ್ತಿದ್ರು. ಅವನ ಮಾತು ಕೇಳೋಕೆ, ಅವನ ಶಿಷ್ಯರಾಗೋಕೆ ಹಂಬಲಿಸ್ತಿದ್ರು.
ಒಂದಿನ ಜುವಾಂಗ್ ಜಿ ಒಂದು ಮರದ ಕೆಳಗೆ ಕೂತಿದ್ದ. ಆ ಮರಕ್ಕೆ ಮೈತುಂಬಾ ಗಂಟು. ನೋಡಿದ್ರೇ ಹೆದ್ರಿಕೆ ಆಗೋ ಹಾಗೆ, ಜಿಗುಪ್ಸೆ ಬರೋ ಹಾಗಿತ್ತು ಆ ಮರ. ಆ ದಾರೀಲಿ ಹಾದು ಹೋಗ್ತಿದ್ದ ಮುದುಕಿಯೊಬ್ಳು ಅವನನ್ನ ನೋಡಿದ್ಳು. ಇವನ್ಯಾಕೆ ಇಲ್ಲಿ ಕೂತಿದಾನೆ ಅಂತ ಆಶ್ಚರ್ಯಪಟ್ಟು, ‘ಶಿಫು, ಈ ಮರ ನೋಡಿದ್ರೆ ಇಷ್ಟು ಭಯಾನಕವಾಗಿದೆ. ನೀವ್ಯಾಕೆ ಇದರ ಕೆಳಗೆ ಕೂತಿದೀರಿ?’ ಅಂತ ಕೇಳಿದ್ಲು.
‘ಯಾಕೆ? ಏನಾಗಿದೆ ಈ ಮರಕ್ಕೆ?’
‘ಈ ಮರ ಕುರೂಪವಾಗಿರೋದು ಮಾತ್ರ ಅಲ್ಲ, ನಯಾ ಪೈಸೆ ಉಪಯೋಗಾನೂ ಇಲ್ಲ. ನಿಮ್ಗೆ ನೆರಳೂ ಕೊಡ್ತಿಲ್ಲ, ಹೂವೂ ಇಲ್ಲ, ಹಣ್ಣೂ ಇಲ್ಲ, ಕಡಿದ್ರೆ ನಾಲ್ಕು ಹಲಗೆ ಆಗುವಷ್ಟೂ ಸಪಾಟಿಲ್ಲ…’ ಮುದುಕಿ ಪಟ್ಟಿ ಕೊಟ್ಳು.
‘ಅದಕ್ಕೇ ಮತ್ತೆ!’ ಅಂದ ಜುವಾಂಗ್ ಜಿ. ‘ಅದಕ್ಕೇ ನಾನು ಇದ್ರ ಕೆಳಗೆ ಕೂತಿರೋದು! ಈ ಮರಾನ ನೋಡಿ ಪಾಠ ಕಲೀಬೇಕು ಅಂತ…’
ಮುದುಕಿಗೆ ಅವನ ವರಸೆ ಗೊತ್ತಿದ್ರಿಂದ ಆಶ್ಚರ್ಯ ಏನಾಗ್ಲಿಲ್ಲ. ‘ಅದೇನ್ ಪಾಠ ನಂಗೂ ಸ್ವಲ್ಪ ಹೇಳಿ ನೋಡೋಣ’ ಅಂದ್ಲು.
ಈ ಮರದಿಂದ ಏನೂ ಪ್ರಯೋಜನ ಇಲ್ದಿರೋದೇ ಈ ಮರದ ಬಹಳ ದೊಡ್ಡ ಪ್ರಯೋಜನ. ಉಪಯೋಗಕ್ಕೆ ಬರೋ ಮರಗಳನ್ನ ನೀವು ಕಟ್ಗೆಗೆ, ಹಲಗೆ ಮಾಡಕ್ಕೆ, ಹೂವಿಗೆ, ಹಣ್ಣಿಗೆ ಅಂತ ಹಾಳು ಮಾಡ್ತೀರ. ಅದ್ರಿಂದ ನಿಮ್ಗೆಲ್ಲ ಪ್ರಯೋಜ್ನ ಆದ್ರೂ ಮರಕ್ಕೆ ನಷ್ಟಾನೇ. ಅದೇ ನಿಮ್ಗೆ ನಯಾ ಪೈಸೆ ಉಪಯೋಗಕ್ಕೆ ಬರದಿರೋ ಮರಕ್ಕೆ ನಿಮ್ಮಿಂದ ಯಾವ ತೊಂದ್ರೇನೂ ಇಲ್ಲ. ಯಾವ ಹಿಂಸೇನೂ ಇಲ್ದೆ ತನ್ನ ಪಾಡಿಗೆ ನೆಮ್ಮದಿಯಾಗಿರಬೋದು. ಯಾರ ಪ್ರಯೋಜನಕ್ಕೂ ಬರ್ದೇ ಇರೋದೇ ಈ ಮರದ ಪಾಲಿಗೆ ದೊಡ್ಡ ಪ್ರಯೋಜನ’ ಅಂದ ಜುವಾಂಗ್ ಜಿ.
ಅರೆಬರೆ ಅರ್ಥವಾದ ಮುದುಕಿ, ‘ಹಾ… ಅದ್ರ ಪ್ರಯೋಜ್ನ ಕಟ್ಕೊಂಡು ನಂಗೇನಾಗ್ಬೇಕು. ಮೂರು ಕಾಸಿನ ಉಪಯೋಗ ಇಲ್ಲ…’ ಅಂತ ಗೊಣಗ್ತಾ ಅಲ್ಲಿಂದ ಹೊರಟುಹೋದ್ಲು.
~
ನಾವೂ ಆ ಮುದುಕಿ ಥರಾನೇ. ಯಾವ್ದೇ ವಸ್ತು ನಮಗೆ ಪ್ರಯೋಜನಕ್ಕೆ ಬಂದ್ರೆ ಮಾತ್ರ ಅದಕ್ಕೆ ವ್ಯಾಲ್ಯೂ. ಇಲ್ಲ ಅಂದ್ರೆ ಅದನ್ನ ಕೆಲಸಕ್ಕೆ ಬಾರದ್ದು ಅಂತ ಹೀಗಳೆಯೋಕೆ ಶುರು ಮಾಡ್ತೀವಿ. ಆ ವಸ್ತುಗೆ ತನ್ನದೇ ಆದ ಒಂದು ಅಸ್ತಿತ್ವ ಇದೆ, ಬೆಲೆ ಇದೆ, ಮಹತ್ವ ಇದೆ; ಕೊನೆಪಕ್ಷ ಅದರಿಂದ ಯಾರಿಗೂ ತೊಂದರೆಯಾಗ್ತಿಲ್ಲ ಅನ್ನೋ ಆಲೋಚನೆಗಳು ನಮಗೆ ಬರೋದೇ ಇಲ್ಲ.
ಇಷ್ಟಕ್ಕೂ ಯಾವುದಾದ್ರೂ ವಸ್ತು ಅಥವಾ ವ್ಯಕ್ತಿ ಯಾಕೆ ಮತ್ತೊಬ್ರಿಗೆ ಯೂಸ್’ಫುಲ್ ಆಗಿರ್ಲೇಬೇಕು? ಜಗತ್ತಲ್ಲಿರೋ ಪ್ರತಿಯೊಂದೂ ಮತ್ತೊಂದಕ್ಕೆ ಉಪಯೋಗವಾಗ್ಲಿಕ್ಕೇ ಹುಟ್ಕೊಂಡಿರೋದಾ? ಇದನ್ನ ನಾವು ಯೋಚ್ನೆ ಮಾಡೋದೇ ಇಲ್ಲ. ಒಂದು ವಸ್ತುವಿಂದ ಮತ್ತೊಂದಕ್ಕೆ ಪ್ರಯೋಜ್ನ ಆಗ್ಲೇಬೇಕು ಅನ್ನೋ ಹಟಕ್ಕೆ ಬಿದ್ದಿರೋ ನಾವು, ಅಂದ್ರೆ ಮನುಷ್ಯರು ಸುತ್ತಲಿನ ಪರಿಸರವನ್ನ ನಮ್ಮ ಜೀತಕ್ಕೆ ಇಟ್ಕೊಂಡುಬಿಟ್ಟಿದೀವಿ. ಹಾಗೇ ನಮ್ಮಿಂದ ಯಾರಿಗಾದ್ರೂ ಪ್ರಯೋಜನವಾದ್ರೆ ಮಾತ್ರ ನಮ್ಮ ಸಾರ್ಥಕತೆ ಅನ್ನೋದು ನಮ್ಮ ತಲೆಯಲ್ಲಿ ಕೂತುಬಿಟ್ಟಿದೆ. ಹಾಗೆ ಒದಗಲಿಕ್ಕೆ ಏನೇನೋ ಸರ್ಕಸ್ ಮಾಡ್ತೀವಿ. ನಮ್ಮ ಈ ಪ್ರಯತ್ನಗಳಿಂದ ಸಹಾಯದ ಬದಲು ಸಮಸ್ಯೆ ಆಗೋ ಚಾನ್ಸಸ್ಸೂ ಇರ್ತವೆ ಅಂತ ಯೋಚನೇನೇ ಮಾಡೋದಿಲ್ಲ. ಒಟ್ನಲ್ಲಿ ನಾನೂ ಏನೋ ಮಾಡ್ಬಿಟ್ಟೆ ಅನ್ನುವ ತೃಪ್ತಿ ನಮಗೆ ಮುಖ್ಯವಾಗುತ್ತೆ. ಹಾವಿನ ಹುತ್ತಕ್ಕೆ ಹಾಲು ಸುರಿದು ಅದಕ್ಕೆ ತೊಂದರೆ ಕೊಟ್ಟಂಗೆ ಇದು.
ನಾವು ಮನುಷ್ಯರು ಎಷ್ಟು ಮಜಾ ಅಂದ್ರೆ, ನಮ್ಮ ಲೆಕ್ಕಕ್ಕೆ ಮರ ಹಣ್ಣು ಬಿಡೋದೇ ಬೇರೆಯವ್ರು ತಿನ್ಲಿ ಅಂತ. ನದಿ ಹರಿಯೋದೇ ಮತ್ತೊಬ್ರಿಗೆ ಉಪಕಾರ ಮಾಡೋಕೆ. ಹಸು ಹಾಲು ಕೊಡೋದೇ ಮನುಷ್ಯರಿಗೆ ಕುಡಿಸೋಕೆ! ಹರಿಯೋ ನದೀನ ಅಡ್ಡಗಟ್ಟಿ, ಅದನ್ನ ತಿರುಗ್ಸಿ, ಮುರುಗ್ಸಿ, ಏನೇನೋ ಮಾಡೋ ನಾವು ಒಂದು ಸಲಾನೂ ಅದರ ಮರ್ಜಿ ಏನಿರಬಹುದು ಅನ್ನೋ ಯೋಚನೇನೇ ಮಾಡೋದಿಲ್ಲ. ಎಲ್ಲೋ ಬೆಟ್ದಲ್ಲಿ ಹುಟ್ಟಿದ ನದಿ ಹರ್ಕೊಂಡು ಸಮುದ್ರ ಸೇರೋದು ಅದರ ಭೌತಿಕ ನಿಯಮ ಅನ್ನೋದನ್ನ ಅರ್ಥ ಮಾಡ್ಕೊಳೋದಿಲ್ಲ. ಅದು ಬೆಟ್ಟದ ಸಂದೀಲಿ ಹುಟ್ದಾಗ ಹಿಂಗಿಂಗೆ… ನಾನು ಹರಿಯೋ ಕಡೆ ಎಲ್ಲಾ ಪ್ರಾಣಿಗಳು ನೀರು ಕುಡೀಲೇಬೇಕು, ಮನುಷ್ಯರು ಮನೆ ಕಟ್ಲೇಬೇಕು, ಗಿಡ ಮರ ಹಸಿರಾಗಿರ್ಲೇಬೇಕು, ಇಲ್ದಿದ್ರೆ ನಾನು ಹರಿಯೋದೇ ಇಲ್ಲ – ಅಂತ ಅಂದ್ಕೊಂಡೇನೂ ಹುಟ್ಟಿರೋದಿಲ್ಲ! ಹರಿಯೋದು, ದ್ರವವಾಗಿ ಅದರ ಧರ್ಮ ಮತ್ತು ಕರ್ಮ. ಅದನ್ನ ಬೇಕಾಬಿಟ್ಟಿ ಬಳಸ್ಕೊಳೋ ನಾವು ನಮ್ಮ ಗಿಲ್ಟ್ ಕಡಿಮೆ ಮಾಡ್ಕೊಳೋಕೆ ಪರೋಪಕಾರದ ಪಟ್ಟಿ ಕಟ್ಟಿ ಕೈತೊಳೆದುಕೊಂಡ್ವಿ.
ಮರವಾದ್ರೂ ಹಣ್ಣು ಬಿಡೋದು ಅದರ ಸಂತಾನ ಬೆಳೆಸೋಕೆ. ಹಣ್ಣು ಬಿರಿದು, ಬೀಜ ಬಿದ್ದು, ಗಿಡ ಚಿಗುರಿ, ಮರವಾಗೋದು ಪ್ರಕೃತಿ ನಿಯಮ. ಅದರ ಹಣ್ಣು ಬೇಕಿದ್ರೆ ನಾವು ಕಿತ್ಕೊಳೋಣ. ಸೆಮೆಟಿಕ್ ಧರ್ಮಗಳ ಪ್ರಕಾರ ಭೂಮಿಗೆ ಮನುಷ್ಯರು ಬಂದಿದ್ದೇ ಸ್ವರ್ಗದ ಮರದಿಂದ ಹಣ್ಣು ಕಿತ್ಕೊಂಡು ತಿಂದಿದ್ದಕ್ಕೆ! ಆದ್ರಿಂದ ಹಣ್ಣು ಕಿತ್ತೋದು ಮನುಷ್ಯರ ಮೂಲಭೂತ ಚಟ. ನಮ್ಮ ಈ ಚಟಕ್ಕೆ ಮರವನ್ನ ಪರೋಪಕಾರಿ ಮಾಡೋದು ಯಾವ ನ್ಯಾಯ!?
ಇನ್ನು, ಕರುವಿಗೂ ಹಾಲುಳಿಸ್ದೆ ಕೆಚ್ಚಲು ಖಾಲಿ ಮಾಡಿ ಬಸಿಯೋ ನಮ್ಮ ದುರಾಸೆ ಬಗ್ಗೆ ಮಾತೇ ಬೇಡ.
ಇಂಥಾ ನಾವು… ಇಂಥಾ ನಾವೇ ಗಂಟಿನ ಮರವನ್ನ ಕುರೂಪ ಅನ್ನೋದು, ಅಪ್ರಯೋಜಕ ಅನ್ನೋದು. ನಮ್ಮ ಉಪಯೋಗಕ್ಕೆ ಒದಗುವಂಥದೇನಾದ್ರೂ ಇದ್ರೆ, ಅದನ್ನ ಕೊಂಡಾಡಿ ಎತ್ತರದ ಸ್ಥಾನದಲ್ಲಿ ಇಟ್ಟುಬಿಡೋದು. ಆಮೇಲೆ ಅದರ ಸ್ವಭಾವಾನೇ ಹೀಗೆ ಕೊಡ್ತಾ ಇರೋದು ಅಂದುಬಿಡೋದು. ಬರೀ ಪ್ರಾಣಿಗಳು, ಜಡಚೇತನಗಳು ಮಾತ್ರ ಅಲ್ಲ, ಮನುಷ್ಯರಿಗೂ ನಾವು ಮಾಡೋದು ಇದನ್ನೇ.
ಇನ್ಮೇಲೆ ಯಾರಾದ್ರೂ ನಿಮ್ಮನ್ನ ಕೊಡುಗೈ ಕರ್ಣ ಅಂತನೋ ಕೊಡಗಿನ ಕಾವೇರಿ ಅಂತನೋ ಹೊಗಳಿದ್ರೆ ಹುಷಾರಾಗಿರಿ!


ಕಥೆ ತುಂಬಾ ಇಷ್ಟವಾಯ್ತು.
ತನ್ನ ಸುತ್ತಲೇ ಸುತ್ತುವ ಮನುಷ್ಯನ ಪ್ರಜ್ಞೆಯ ಸ್ತರಗಳನ್ನು ರಿಪೇರಿ ಮಾಡಿಕೊಳ್ಳುವ ಸಮಯ ಮಿತಿ ದಾಟಿದೆ.
ನನ್ನ ಬ್ಲಾಗ್ ಮೂಲಕ ದೊಡ್ಡ ಮರ: ಅದರಡಿಯ ಮುಷ್ಟಿ ಮಣ್ಣು ಎನ್ನುವ ಸರಣಿ ಬರೆಯುತ್ತಿದ್ದೇನೆ. ಓದಿ 🙏
LikeLike
ಧನ್ಯವಾದ. ಖಂಡಿತಾ ನೋಡುತ್ತೇನೆ.
LikeLike