‘ದಿಸ್ ಟೂ ಶಲ್ ಪಾಸ್’ ಅನ್ನುತ್ತೆ ಝೆನ್. ಇದೂ ಸರಿದುಹೋಗುತ್ತೆ. ಈಗೇನು ಕಷ್ಟ ಇದ್ಯೋ ಇದೂ ಸರಿದುಹೋಗುತ್ತೆ. – ಹಾಗಂದುಕೊಂಡಾಗ ಆಯಾ ಕಾಲದ ಕಷ್ಟಗಳು ಎದೆಗುಂದಿಸೋದಿಲ್ಲ. ಬರೀ ಕಷ್ಟ ಮಾತ್ರ ಅಲ್ಲ, ಈಗ ಇರುವ ಸುಖವೂ ಸರಿದುಹೋಗುತ್ತೆ ಅನ್ನೋದು ಪ್ರಜ್ಞಾವಂತರ ಅರಿವು. ಆದ್ರಿಂದ ಅವರೂ ಅಯ್ಯೂಬರ ಹಾಗೇ ಸಂಪತ್ತು ಕೊಳ್ಳೆಹೋದಾಗ ದುಃಖಿಸೋದಿಲ್ಲ. ಕಷ್ಟವೋ ಸುಖವೋ, ಈಗೇನಿದೆಯೋ ಅದೂ ಸರಿದುಹೋಗುವುದು. ಏನೇನು ಸವಾಲುಗಳು ಎದುರಾಗ್ತವೋ ಪರಿಹಾರಗಳು ಸಿಗ್ತವೋ, ಎಲ್ಲವನ್ನೂ ಭಗವಂತ ನೋಡಿಕೊಳ್ಳುವನು – ಅಷ್ಟೇ । ಚೇತನಾ ತೀರ್ಥಹಳ್ಳಿ
ಒಂದಷ್ಟು ಶತಮಾನಗಳ ಹಿಂದೆ ಓಮನ್ ಪಟ್ಟಣದಲ್ಲಿ ಅಯ್ಯೂಬ್ ಅಂತ ಒಬ್ಬ ಪ್ರವಾದಿ ಇದ್ರು. ಆ ಊರಲ್ಲಿ ಸಹನೆ ವಿಷ್ಯ ಬಂದಾಗೆಲ್ಲ ಅಯ್ಯೂಬ್ ಹೆಸರನ್ನೆ ಉದಾಹರಣೆ ಕೊಡ್ತಿದ್ರು ಜನ. ಅಷ್ಟು ಪೇಶೆನ್ಸ್ ಅವ್ರಿಗೆ. ಯಾರು ಏನು ಹೇಳಿದ್ರೂ, ಎಲ್ಲಿ ಏನಾದ್ರೂ ‘ಅಲ್ಲಾಹ್ ನೋಡ್ಕೋತಾನೆ” ಅಂತಿದ್ರು. ಇದನ್ನ ಕೇಳಿ ಕೇಳಿ ಜನ, ಬಹುಶಃ ಇವ್ರಿಗಿರೋ ಪೇಶೆನ್ಸ್ ನಮಗಿಲ್ಲ ಅನ್ನೋ ಬೇಜಾರಿಗೋ ಏನೋ, “ಬೇರೆಯೋರ ವಿಷ್ಯದಲ್ಲಿ ಅಲ್ಲಾನ ಮಧ್ಯ ತಂದಷ್ಟು ಸುಲಭ ಅಲ್ಲ. ಕಾಲ ಬುಡಕ್ಕೆ ನೀರು ಬಂದಾಗ ಗೊತ್ತಾಗತ್ತೆ” ಅಂತ ಕೊಂಕು ನುಡೀತಿದ್ರು.
ಜನ ಮಾತಾಡೋದ್ ನೋಡಿ ಅಲ್ಲಾ ದೇವ್ರಿಗೂ ಒಂದ್ ಸಲ ನೋಡ್ ಬಿಡಣ ಅನ್ನೋ ಹುಕಿ ಬಂತು. ಅಯ್ಯೂಬ್ ಪರೀಕ್ಷೆಗೆ ವೇದಿಕೆ ಸಜ್ಜಾಯ್ತು. ಪ್ರವಾದಿ, ಅದ್ರಲ್ಲೂ ಸಜ್ಜನ ವ್ಯಕ್ತಿ ಅಂದ್ಮೇಲೆ ಅಯ್ಯೂಬ್ ಹತ್ರ ಹಣಕಾಸು ಎಲ್ಲಿರ್ಬೇಕು? ಅದಕ್ಕೇ ಅಲ್ಲಾ ಮೊದ್ಲು ಸಂಪತ್ತಿನ ಮೇಲೆ ಸಂಪತ್ತು ಕೊಟ್ಟು ಅವ್ರನ್ನ ಮಾಲಾಮಾಲ್ ಮಾಡಿದ. ಅಯ್ಯೂಬ್’ಗೆ ಆಗ ತಾನೆ ಮದ್ವೆ ಆಗಿತ್ತು. ಹೆಂಡ್ತಿ ಹೆಸ್ರು ರಹ್ಮಾ. ಈ ದಂಪತಿಗೆ ಹತ್ತಾರು ಮಕ್ಳನ್ನ ಕರುಣಿಸಿದ ಅಲ್ಲಾ, ಅವ್ರ ಮನೆ ನಂದಗೋಕುಲ ಮಾಡ್ಬಿಟ್ಟ. ಸಂಪತ್ತು, ಕೀರ್ತಿ, ಸಂತಾನ ಎಲ್ಲ ಭಾಗ್ಯನೂ ಅಯ್ಯೂಬ್ ಪಾಲಿಗೆ ಬಂದುಸೇರಿದ್ವು.
ಆಮೇಲೆ ಅಲ್ಲಾ ಒಂದೊಂದೇ ಭಾಗ್ಯ ಕಿತ್ಕೊತಾ ಹೋದ. ಮೊದ್ಲು ಸಾಲು ಸಾಲಾಗಿ ಮಕ್ಳನ್ನ ಕಿತ್ಕೊಂಡ. ಸಂತಾಪ ಸೂಚಿಸೋಕೆ ಬಂದ ಮಂದಿ “ಅಯ್ಯೋ ಹಿಂಗಾಗೋಯ್ತಲ್ಲ, ಅಲ್ಲಾಗೆ ಕರುಣೆನೇ ಇಲ್ಲ. ಈಗೇನ್ ಮಾಡ್ತೀಯ…” ಅಂದ್ರು. ಅಯ್ಯೂಬ್ ಕೈಅಗಲಿಸಿ ಆಕಾಶ ನೋಡ್ತಾ, “ಕರುಣಾಮಯಿ ಅಲ್ಲಾ ನೋಡ್ಕೋತಾನೆ” ಅಂತ ಉತ್ತರಿಸಿದ್ರು.
ಸ್ವಲ್ಪ ದಿನಕ್ಕೆ ಅಯ್ಯೂಬನ ಮನೆಗೆ ಡಕಾಯಿತರು ನುಗ್ಗಿದ್ರು. ಇರೋಬರೋದೆಲ್ಲ ಕೊಳ್ಳೆ ಹೊಡ್ಕೊಂಡು ಹೋದ್ರು. ಆಗ್ಲೂ ಜನ ಸಂತಾಪ ಸೂಚಿಸೋಕೆ ಬಂದ್ರು. “ಅಯ್ಯೋ ಹಿಂಗಾಗೋಯ್ತಲ್ಲ, ಅಲ್ಲಾಗೆ ಕರುಣೆನೇ ಇಲ್ಲ. ಈಗೇನ್ ಮಾಡ್ತೀಯ…” ಅಂದ್ರು. ಹಿಂದಿನಂತೇ ಅಯ್ಯೂಬ್ ಕೈಅಗಲಿಸಿ ಆಕಾಶ ನೋಡ್ತಾ, “ಕರುಣಾಮಯಿ ಅಲ್ಲಾ ನೋಡ್ಕೋತಾನೆ” ಅಂದುಬಿಟ್ರು.
ಇನ್ನೂ ಸ್ವಲ್ಪ ದಿನ ಕಳೀತು. ಅಯ್ಯೂಬ್ ಮೈತುಂಬ ಗುಳ್ಳೆ ಆಗಿ, ಕೀವಾಗಿ ರೂಪ ಎಲ್ಲ ವಿಕಾರ ಆಗ್ಲಿಕ್ಕೆ ಶುರುವಾಯ್ತು. ಕೀವು ಸೋರಿ ಇಳೀತಾ ಇರ್ತಿತ್ತು. ಅದರ ಸುತ್ತ ನೊಣಗಳು ಹಾರ್ತಾ ಇರ್ತಿದ್ವು. ಇದೆಲ್ಲೋ ಸಾಂಕ್ರಾಮಿಕ ರೋಗ. ಇವ್ರು ಇಲ್ಲೇ ಇದ್ರೆ ನಮ್ಗೂ ತಗುಲತ್ತೆ ಅಂತ ಗಾಬರಿ ಬಿದ್ದ ಊರಮಂದಿ ಅವರನ್ನ ಊರಿಂದ ಹೊರಗೆ ಕಳಿಸಿದ್ರು. ಜೊತೆಗೆ ಅವರ ಹೆಂಡ್ತೀನ್ನೂ ಆಚೆ ಹಾಕಿದ್ರು.
ಗಡಿಯಿಂದಾಚೆ ನಿಂತ ಅಯ್ಯೂಬರನ್ನ ನೋಡಿ ಸಂತಾಪ ಸೂಚಿಸೋಕೆ ಬಂದ ಮಂದಿ “ಅಯ್ಯೋ ಹಿಂಗಾಗೋಯ್ತಲ್ಲ, ಅಲ್ಲಾಗೆ ಕರುಣೆನೇ ಇಲ್ಲ. ಈಗೇನ್ ಮಾಡ್ತೀಯ…” ಅಂದ್ರು. ಕೈಅಗಲಿಸಿ ಆಕಾಶ ನೋಡ್ತಾ, “ಕರುಣಾಮಯಿ ಅಲ್ಲಾ ನೋಡ್ಕೋತಾನೆ” ಅಂತ ಉತ್ತರಿಸಿದ್ರು ಅಯ್ಯೂಬ್.
ಗಂಡ ಹೆಂಡ್ತಿ ಇಬ್ರೇ ಮರಳುಗಾಡಲ್ಲಿ ಅಲೀತಾ, ಕಷ್ಟ ಪಡ್ತಾ, ಸಿಕ್ಕಿದ್ದು ತಿಂದ್ಕೊಂಡು, ನೆರಳು ಸಿಕ್ಕಲ್ಲಿ ವಿಶ್ರಾಂತಿ ಪಡೀತಾ ದಿನ ದೂಡ್ತಿದ್ರು. ಈ ನಡುವೆ ಅಯ್ಯೂಬ್ ಮೈಮೇಲಿನ ಗಾಯಕ್ಕೆ ಮುಲಾಮು ಹಚ್ಚೋಕೆ ರಹ್ಮಾ ಕೈಲಿ ನಯಾ ಪೈಸೆ ಇರ್ಲಿಲ್ಲ. ಎಲ್ಲಾದ್ರೂ ಕೆಲ್ಸ ಹುಡ್ಕೊಂಡು ನಾಲ್ಕ್ ಕಾಸು ತರ್ತೀನಿ ಅಂತ ಗಂಡನ್ನ ಒಂದ್ ಕಡೆ ಕೂರಿಸಿ ಹೋದ್ರು ರಹ್ಮಾ.
ದುಡ್ಕೊಂಡು ಬಂದ ಚೂರುಪಾರು ದುಡ್ಡಲ್ಲೇ ಸಣ್ಣದೊಂದು ಜೋಪಡಿ ಕಟ್ಟಿದ ರಹ್ಮಾ, ದಿನಗೂಲಿಗೆ ಹೋಗಿ ಗಂಡನಿಗೆ ಮದ್ದು ತರ್ತಿದ್ರು. ಸಿಕ್ಕಿದ್ದನ್ನ ಬೇಯಿಸ್ಕೊಂಡು ಇಬ್ರೂ ತಿಂತಿದ್ರು.
ಹೀಗೇ ಒಂದಿನ ರಹ್ಮಾ ದಿನಗೂಲಿಗೆ ಹೋದಾಗ ಅಯ್ಯೂಬರಿಗೆ ಹೆಂಡತಿ ಕಷ್ಟ ಕಂಡು ಕಣ್ಣೀರು ತಡ್ಕೊಳಕ್ಕಾಗ್ಲಿಲ್ಲ. ಆಕಾಶದ ಕಡೆ ಮುಖವೆತ್ತಿ ನೋಡ್ತಾ, “ಕರುಣಾಮಯಿ ಅಲ್ಲಾ ನೋಡ್ಕೋತಾನೆ” ಅಂತ ದುವಾ ಮಾಡಿದ್ರು. ಮನಸಲ್ಲೂ ಅಲ್ಲಾನ ಬೈದುಕೊಳ್ಲಿಲ್ಲ. ಪ್ರಶ್ನೆ ಮಾಡ್ಲಿಲ್ಲ. ಗೊಣಗ್ಲಿಲ್ಲ, ಬೇಜಾರು ಮಾಡ್ಕೊಳ್ಲಿಲ್ಲ.
ಅಲ್ಲಾಹನ ಪರೀಕ್ಷೆ ಮುಗೀತು. ಅಯ್ಯೂಬ್ ಸಹನೆ ಅವರನ್ನ ಗೆಲ್ಲಿಸಿತ್ತು. ಅವರು ಅಲ್ಲಾನ ಮೇಲಿಟ್ಟಿದ್ದ ಶ್ರದ್ಧೆಯೂ ಗೆದ್ದಿತ್ತು. ಅಶರೀರವಾಣಿ ಮೊಳಗಿ “ಅಯ್ಯೂಬ್, ನಿನ್ನ ಸಹನೆಗೆ ಫಲ ಸಿಗೋ ಸಮಯ ಬಂದಿದೆ. ನಿನ್ನ ಕಾಲಿಂದ ನೆಲವನ್ನ ಒಮ್ಮೆ ಝಾಡಿಸು” ಅಂತು. ಅಯ್ಯೂಬ್ ಹಾಗೇ ಮಾಡಿದ್ರು. ನೀರ ಝರಿ ಛಿಲ್ಲನೆ ಚಿಮ್ಮಿ ಹರಿಯೋಕೆ ಶುರುವಾಯ್ತು. ಅದು ಅಯ್ಯೂಬರ ಮೈ ಸೋಕುತ್ತಲೇ ಅವರ ಕಾಯಿಲೆ ವಾಸಿಯಾಗಿ ಮೊದಲಿನಂತಾದ್ರು. ಮೊದಲಿಗಿಂತ ಇನ್ನೂ ಹೆಚ್ಚು ಸುಂದರ ಮತ್ತು ಗಟ್ಟಿಮುಟ್ಟಾದ್ರು. ಮೈಮೇಲೆ ಒಳ್ಳೆ ಬಟ್ಟೆ ಕಾಣಿಸಿಕೊಂಡ್ವು. ಝರಿಯ ಬದಿಯಲ್ಲೆ ದುಡ್ಡಿನ ಗಂಟಿತ್ತು. ರಹ್ಮಾ ಕೆಲಸ ಮುಗಿಸ್ಕೊಂಡು ಬರೋವೇಳೆಗೆ ಅಯ್ಯೂಬ್ ಮೊದಲಿನಂತಾಗಿಬಿಟ್ಟಿದ್ರು!
ಆಮೇಲೆ ಅವರಿಬ್ರೂ ಊರಿಗೆ ಮರಳಿ, ಸಂಸಾರ ಶುರು ಮಾಡಿದ್ರು. ಮೊದಲಿಗಿಂತ ಹೆಚ್ಚು ಮಕ್ಳನ್ನ ಪಡ್ಕೊಂಡು ಸುಖವಾಗಿದ್ರು.
~
ಪ್ರವಾದಿ ಅಯ್ಯೂಬ್’ರ ಈ ಕತೆ ಕುರಾನ್’ನಲ್ಲಿದೆ. ಏನೇ ಆದ್ರೂ ಎಷ್ಟೇ ಕಷ್ಟ ಬಂದ್ರೂ ಸಮಚಿತ್ತತೆ ಕಾಪಾಡ್ಕೊಳೋದು ತುಂಬಾ ಕಷ್ಟ. ಎಂಥಾ ಸಜ್ಜನರಾದ್ರೂ ಒಂದು ಹಂತದಲ್ಲಿ ತಮ್ಮ ಅದೃಷ್ಟವನ್ನೋ ಅದನ್ನ ಬರೆದ ದೈವವನ್ನೋ ನೆನೆದು ನಿಟ್ಟುಸಿರು ಬಿಡ್ತಾರೆ. ಆದ್ರೆ ನಿಜವಾಗ್ಲೂ ಶ್ರದ್ಧೆ ಇರೋರು, ಸಹನೆ ಇರೋರು ಹಾಗೆ ಮಾಡೋದಿಲ್ಲ. ಅವ್ರು ಪ್ರತಿಯೊಂದು ಕಷ್ಟವನ್ನೂ ‘ದೇವ್ರಿದಾನೆ, ನೋಡ್ಕೋತಾನೆ’ ಅಂದ್ಕೊಂಡೇ ಸಹಿಸಿಬಿಡ್ತಾರೆ.
‘ದಿಸ್ ಟೂ ಶಲ್ ಪಾಸ್’ ಅನ್ನುತ್ತೆ ಝೆನ್. ಇದೂ ಸರಿದುಹೋಗುತ್ತೆ. ಈಗೇನು ಕಷ್ಟ ಇದ್ಯೋ ಇದೂ ಸರಿದುಹೋಗುತ್ತೆ. – ಹಾಗಂದುಕೊಂಡಾಗ ಆಯಾ ಕಾಲದ ಕಷ್ಟಗಳು ಎದೆಗುಂದಿಸೋದಿಲ್ಲ. ಬರೀ ಕಷ್ಟ ಮಾತ್ರ ಅಲ್ಲ, ಈಗ ಇರುವ ಸುಖವೂ ಸರಿದುಹೋಗುತ್ತೆ ಅನ್ನೋದು ಪ್ರಜ್ಞಾವಂತರ ಅರಿವು. ಆದ್ರಿಂದ ಅವರೂ ಅಯ್ಯೂಬರ ಹಾಗೇ ಸಂಪತ್ತು ಕೊಳ್ಳೆಹೋದಾಗ ದುಃಖಿಸೋದಿಲ್ಲ. ಕಷ್ಟವೋ ಸುಖವೋ, ಈಗೇನಿದೆಯೋ ಅದೂ ಸರಿದುಹೋಗುವುದು. ಏನೇನು ಸವಾಲುಗಳು ಎದುರಾಗ್ತವೋ ಪರಿಹಾರಗಳು ಸಿಗ್ತವೋ, ಎಲ್ಲವನ್ನೂ ಭಗವಂತ ನೋಡಿಕೊಳ್ಳುವನು – ಅಷ್ಟೇ.
ನಮ್ಮ ಅರಿವನ್ನೂ ಮೀರಿದ ಆತ್ಯಂತಿಕೆ ಶಕ್ತಿಯೊಂದಿದೆ ಅನ್ನೋದು ಆಸ್ತಿಕರ ನಂಬಿಕೆ. ಈ ಶಕ್ತಿಯನ್ನು ಒಂದೊಂದು ಧರ್ಮದ ಚೌಕಟ್ಟಿನಲ್ಲಿಟ್ಟು, ಒಂದೊಂದು ಹೆಸರು ಕೊಟ್ಟು, ರೂಪ ಕಲ್ಪಿಸಿಕೊಂಡು, ಕಟ್ಟಡ ಕಟ್ಟಿ ಅದರೊಳಗಿಟ್ಟು ಆರಾಧಿಸೋದು ಅವರ ರೀತಿ. ನಾಸ್ತಿಕರಿಗೆ ಇದು ಅರ್ಥವಾಗೋದಿಲ್ಲ. ನಾಸ್ತಿಕರು ಆಸ್ತಿಕರನ್ನು ವೈಜ್ಞಾನಿಕ ತಿಳುವಳಿಕೆ ಇಲ್ಲದವರು ಅಂತ ಮೂದಲಿಸ್ತಾರೆ. ಆಕ್ಚುಲಿ, ನಾಸ್ತಿಕರೂ ವಿಜ್ಞಾನದ ತಿಳುವಳಿಕೆ ಇಲ್ಲದವರೇ! ಯಾಕಂದ್ರೆ ಅವ್ರಿಗೆ ‘ಕಣ್ಣಿಗೆ ಕಂಡಷ್ಟೇ, ಪಂಚೇಂದ್ರಿಯಕ್ಕೆ ನಿಲುಕಿದಷ್ಟೇ, ಅರಿವಿಗೆ ಬಂದಷ್ಟೇ ಸತ್ಯವಲ್ಲ’ ಅನ್ನುವ ಬೇಸಿಕ್ ಸೈನ್ಸ್ ಗೊತ್ತಿಲ್ಲ! ಬಣ್ಣಗಳು ಕೂಡಾ ನೋಡುಗರ ಸಾಮರ್ಥ್ಯಕ್ಕೆ ತಕ್ಕಂತೆ ಕಾಣಿಸಿಕೊಳ್ಳುವಾಗ ದೇವರು ಅನ್ನುವೊಂದು ಶಕ್ತಿ, ಅಥವಾ ಶಕ್ತಿಯೆಂಬ ದೇವರು ಸ್ಟೆಪ್ ಬೈ ಸ್ಟೆಪ್ ಪ್ರೊಸೀಜರ್ ಅನುಸರಿಸದೆ ನಿಲುಕೋದು ಹೇಗೆ?
ಲ್ಯಾಬಲ್ಲಿ ನೀರಿದೆ ಅಂತ ಉಪನ್ಯಾಸಕರು ಹೇಳಿದ್ರು, ಆದ್ರೆ ಕಣ್ಣಿಗೆ ಕಾಣಿಸ್ತಿಲ್ಲ… ಹೈಡ್ರೋಜನ್ ಮತ್ತು ಆಕ್ಸಿಜನ್ ಬೆರೆಸದ ಹೊರತು ಕಾಣೋದಾದ್ರೂ ಹೇಗೆ? ಅವೆರಡೂ ಬೆರೆತರೆ ನೀರು ಸಿಗುತ್ತೆ ಅನ್ನುವ ಜ್ಞಾನ ಮೊದಲು ಬೇಕು. ಅವನ್ನು ಬೆರೆಸುವ ವಿಧಾನ ತಿಳಿದಿರಬೇಕು. ಬೆರೆಸುವ ಪ್ರಮಾಣ ಅಭ್ಯಾಸ ಮಾಡಬೇಕು. ಕೊಳವೆ ಹೇಗೆ ಹಿಡಿಯಬೇಕು, ಯಾವುದನ್ನ ಯಾವುದರ ಮೇಲೆ ಸುರಿಯಬೇಕು ಎಂಬುದೆಲ್ಲ ಗೊತ್ತಿರಬೇಕು.
ಹಾಗೇ ದೇವರೂ!
ಹಾಗೆಂದ ಮಾತ್ರಕ್ಕೆ ದೇವರು ಹತ್ತಾರು ಕೈಕಾಲು ಹೊತ್ತು ಅಲ್ಲೆಲ್ಲೋ ಬಾಹ್ಯಾಕಾಶದಲ್ಲಿ ಅರಮನೆ ಕಟ್ಟಿಕೊಂಡು ಇರ್ತಾನೆ ಅಥವಾ ಇರ್ತಾಳೆ ಎಂದಲ್ಲ. ಅಕಸ್ಮಾತ್ ಇದ್ದರೆ, ಇದ್ದರೂ ಇರಬಹುದು ಎಂದು! ನಮಗೆ ನೀರು ಪಡೆಯುವ ಬಗೆ ಗೊತ್ತಿಲ್ಲ ಅಂದಮಾತ್ರಕ್ಕೆ ನೀರು ಇಲ್ಲವೇ ಇಲ್ಲ ಎಂದಲ್ಲ.
ಕೆಲವರು ಹೇಳ್ತಾರೆ, ದೇವರು ಇದ್ದಿದ್ರೆ ಆಕ್ಸಿಡೆಂತ್ ಆಗ್ತಿತ್ತಾ, ಅವ್ರು ಸಾಯ್ತಿದ್ರಾ, ಇವ್ರು ಸಾಯ್ತಿದ್ರಾ ಅಂತೆಲ್ಲ. ದೇವರನ್ನು ನಂಬುವವರಿಗೆ ಸೃಷ್ಟಿಯ ಬ್ಯಾಲೆನ್ಸ್ ಕಾಪಾಡೋ ಅವನ ತಲೆಬಿಸಿ ಅರ್ಥವಾಗುತ್ತೆ. ಆ ಕ್ಷಣ ‘ನಿಂಗೆ ಕರುಣೇನೇ ಇಲ್ಲ’ ಅಂತ ಬೈಕೊಂಡ್ರೂ ಸ್ವಲ್ಪ ದಿನ ಬಿಟ್ಟು ಕೆನ್ನೆ ಬಡ್ಕೊಂಡು ದೀಪ ಹಚ್ತಾರೆ. ಹುಟ್ಟಿದ ಎಲ್ಲಾ ಜೀವಿಗಳೂ ಪೂರ್ಣಾಯಸ್ಸು ಬದುಕಿ ಸಾಯೋಹಾಗಿದ್ದಿದ್ರೆ ಒಂದು ಭೂಮಿ ಸಾಕಾಗ್ತಿತ್ತಾ? ಈ ಬ್ಯಾಲೆನ್ಸ್ ಕಾಪಾಡೋಕೆ ನಮ್ಮದೇ ಪ್ರೀತಿಯ ಜೀವಿಗಳನ್ನ ಹೊತ್ತೊಯ್ದರೂ ಅದು ದೇವರ ಕರ್ಮ! ಇದು ಭಕ್ತರಿಗೆ ಗೊತ್ತಿದೆ.
ಮತ್ತೆ ನೀರು… ನದಿ ಇಲ್ಲದಿದ್ರೆ, ನೀರಿಲ್ಲದಿದ್ರೆ ಊರುಗಳು ಇರುತ್ತಿದ್ವಾ? ನೀರಿಲ್ಲದಿದ್ರೆ ಜನ ಬದುಕ್ತಿದ್ರಾ? ಅದೇ ನದಿಯ ನೀರು ಆಗಾಗ ಉಕ್ಕೇರಿ ಊರುಗಳನ್ನೂ ಜನಗಳನ್ನೂ ನುಂಗಿಹಾಕೋದಿಲ್ವಾ? ನುಂಗಿ ನೊಣೆದ ನದಿಯನ್ನ ಜನ ಹಾಡಿಹೊಗಳ್ತಾರೆ, ಮೂರ್ಖರು ಅಂತ ದೂರುವ ಜನ ವಾಸ್ತವದಲ್ಲಿ ಏನು?
ನಾಸ್ತಿಕತೆ ಅನ್ನೋದು ಮನುಷ್ಯರ ವೈಚಾರಿಕತೆಯ ತುತ್ತತುದಿ. ಇದು ಖಂಡಿತಾ ಬೇಕು. ಆದ್ರೆ ಅದು ತಮ್ಮ ಸಹಜೀವಿಗಳನ್ನ ಮೂರ್ಖರಂತೆ, ಅಯೋಗ್ಯರಂತೆ, ತಮಗಿಂತ ಕೀಳು ಅನ್ನುವಂತೆ ಕಾಣಬಾರದು. ಆಸ್ತಿಕರನ್ನ ಲೇವಡಿ ಮಾಡದೆಯೂ ನಾಸ್ತಿಕತೆಯನ್ನ ಎತ್ತಿ ಹಿಡಿಯಬಹುದು. ಅಷ್ಟು ಘನತೆ, ಅಷ್ಟು ಯೋಗ್ಯತೆ ಖಂಡಿತಾ ಅದಕ್ಕಿದೆ.

