ಸಂತ – ಸಾಧಕರ ಕತೆ ಇರ್ಲಿ, ನಾವಾದ್ರೂ ನಮ್ಮ ಡೈಲಿ ಲೈಫಿನಲ್ಲಿ ಇರೋದು ಹೀಗೇ. ಈಗೀಗಂತೂ ನಮ್ಮ ಕ್ಷಣಕ್ಷಣದ ಮಾಹಿತಿ ಅಪ್ಡೇಟ್ ಮಾಡೋಕೆ ಪುಕ್ಕಟೆ ಮಾಧ್ಯಗಳಿವೆ. (ಇದನ್ನು ಬರೀತಿರೋ ನನ್ನನ್ನೂ ಸೇರಿ) ನಾವು ಮಾಡೋ ಪ್ರತಿಯೊಂದು ಕೆಲಸವನ್ನೂ ಜಗತ್ತಿಗೆ ಹೇಳಿಕೊಳ್ಳೋ ಹುಕಿ ನಮ್ಮದು. ನಾವು ನಮ್ಮ ಗುರುತನ್ನ ಗಟ್ಟಿ ಮಾಡ್ಕೊಳೋದಕ್ಕೆ, ನಮ್ಮ ಹೆಸರನ್ನ ಚರ್ಮದಂತೆ ಅಂಟಿಸಿಕೊಳ್ಳೋಕೆ ಹೊರಟಿದೀವಿ. ಸೋಶಿಯಲ್ ಮೀಡಿಯಾದಲ್ಲಿ ಬರುವ ಲೈಕ್ಸ್, ಕಮೆಂಟ್ಸ್ – ನಮ್ಮ ಗುರುತನ್ನು ಅಧಿಕೃತಗೊಳಿಸುವ, ನಮ್ಮ ಹೆಸರನ್ನು ಶಾಶ್ವತಗೊಳಿಸುವ ಸರಕುಗಳಂತೆ ಕಾಣಿಸ್ತವೆ ನಮಗೆ! ~ ಚೇತನಾ ತೀರ್ಥಹಳ್ಳಿ
ತುಂಬಾ ತುಂಬಾ ವರ್ಷಗಳ ಹಿಂದೆ ಒಂದಾನೊಂದು ಊರಿನಲ್ಲಿ ಒಬ್ಬಾನೊಬ್ಬ ಸಂತ ಇದ್ದ. ಅವ ಅದೆಷ್ಟು ಸಂತ ಅಂದ್ರೆ, ತಾನು ಯಾರಿಗಾದರೂ ಸಹಾಯ ಮಾಡಿದ್ರೆ ‘ತಾನು ಮಾಡಿದೆ’ ಅಂತ ತನಗೇ ಗೊತ್ತಾಗದಿರುವಷ್ಟು ಸಂತ! ಒಳಿತು ಮಾಡಿ ಮರೆತುಬಿಡುವಷ್ಟು ಸಂತ. ತಾನೊಬ್ಬ ಇದೀನಿ ಅಂತ ಗೊತ್ತೇ ಇಲ್ಲದ, ತನ್ನನ್ನು ತನ್ನ ದೇಹದ ಜೊತೆ ಗುರುತಿಸಿಕೊಳ್ಳೋದನ್ನ ಯಾವತ್ತೋ ಬಿಟ್ಟುಬಿಟ್ಟಿದ್ದ ಸಂಪೂರ್ಣ ಸಂತ.
ಇಂಥಾ ಸಂತನಿಗೆ ಏನಾದ್ರೂ ವರ ಕೊಡ್ಲೇಬೇಕೆಂದು ದೇವತೆಗಳು ಪರಮಾತ್ಮನಿಗೆ ದುಂಬಾಲು ಬಿದ್ವು. ಪರಮಾತ್ಮನೂ “ಸರಿ, ಅವನಿಗೇನು ಬೇಕೋ ಕೇಳ್ಕೊಂಡು ಬನ್ನಿ, ಕೊಡೋಣ” ಅಂದ.
ಭೂಮಿಗೆ ಬಂದ ದೇವತೆಗಳು ಸಂತನನ್ನ ಸುತ್ತುವರಿದು “ನೀನು ಮುಟ್ಟಿದ ಮಾತ್ರಕ್ಕೆ ಜನರ ಕಾಯಿಲೆ ವಾಸಿಯಾಗುವ ವರ ಬೇಕಾ?” ಅಂತ ಕೇಳಿದ್ರು. ಸಂತ ತಲೆಯಾಡಿಸಿ “ಅದು ಪರಮಾತ್ಮನ ಕೆಲಸ, ಅವನೇ ಮಾಡಿಕೊಳ್ತಾನೆ” ಅಂದ.
“ನಿನ್ನನ್ನು ನೋಡಿದ ಮಾತ್ರಕ್ಕೆ ಜನರಿಗೆ ಖುಷಿಯಾಗುವಂಥ ವರ ಬೇಕಾ?” ಅಂತ ಕೇಳಿದ್ರು.
“ನೋಡಿದ ಮಾತ್ರಕ್ಕೆ ಖುಷಿಯಾಗ್ಬೇಕು ಅಂದ್ರೆ ಆ ಪರಮಾತ್ಮನೇ ದರ್ಶನ ಕೊಡ್ಬೇಕು, ನಾನು ಹುಲುಮಾನವ” ಅಂದ ಸಂತ.
ದೇವತೆಗಳು ಪಟ್ಟುಬಿಡದೆ, “ನಿನ್ನ ನೀತಿ ನಿಜಾಯಿತಿಗೆ ಮಾರುಹೋಗಿ ಲಕ್ಷಾಂತರ ನಿನ್ನ ಅನುಯಾಯಿಗಳಾಗುವಂತೆ ಮಾಡೋದಾ?” ಅಂತ ಕೇಳಿದ್ರು.
ಸಂತ “ಬೇಡವೇ ಬೇಡ. ಹಾಗೇನಾದರೂ ಆದ್ರೆ ಜನ ದೇವರಿಂದ ವಿಮುಖರಾಗಿ ಪವಾಡಗಳಿಗೆ ಹಾತೊರೆಯತೊಡಗ್ತಾರೆ. ಜನರು ಪರಮಾತ್ಮನಿಂದ ವಿಮುಖವಾಗಬಾರದು” ಅಂದುಬಿಟ್ಟ.
ಈಗಂತೂ ದೇವತೆಗಳಿಗೆ ತೀರಾ ನಿರಾಸೆಯಾಯ್ತು. ಅವರು ಅವನನ್ನು ಸುತ್ತುವರಿದು, “ಏನಾದ್ರೊಂದು ವರ ಕೇಳಲೇಬೇಕು, ಇಲ್ಲದಿದ್ರೆ ನಾವಂತೂ ಇಲ್ಲಿಂದ ಹೋಗೋದಿಲ್ಲ” ಎಂದು ಹಠ ಹಿಡಿದ್ರು.
ಸಂತನಿಗೆ ಅವರ ಮೇಲೆ ಅನುಕಂಪ ಉಂಟಾಯ್ತು. ಕೊನೆಗೆ, “ಆಗಲಿ. ನನಗೇ ಅರಿವಿಲ್ಲದಂತೆ, ನನ್ನ ಗಮನಕ್ಕೆ ಬಾರದಂತೆ, ನಾನು ಮಾಡಿದೆ ಅಂದುಕೊಳ್ಳುವ ಪ್ರಮೇಯವೇ ಇಲ್ಲದಂತೆ ನನ್ನಿಂದ ಒಳಿತಾಗುವಂಥ ವರ ಕೊಡಿ” ಅಂದ.
ದೇವತೆಗಳಿಗೆ ಸಧ್ಯ ಇವನೇನೋ ಒಂದು ಕೇಳಿದ್ನಲ್ಲ ಅಂತ ಸಮಾಧಾನವಾಯ್ತು. ತಮ್ಮತಮ್ಮಲ್ಲೆ ಚರ್ಚೆ ಮಾಡಿ, ಅವನ ಇಕ್ಕೆಲಗಳಲ್ಲಿ ಮತ್ತು ಬೆನ್ನ ಹಿಂದೆ ನೆರಳು ಬಿದ್ದಾಗ, ಆ ನೆರಳು ಯಾವುದರ ಮೇಲೆ ಬೀಳುತ್ತೋ ಆ ಜಾಗ ಹಸನಾಗುವಂತೆ, ಜೀವಿಗಳ ಮೇಲೆ/ವ್ಯಕ್ತಿಗಳ ಮೇಲೆ ಬಿದ್ದರೆ ಅವರು ಎಲ್ಲ ಬಗೆಯಲ್ಲೂ ಉದ್ಧಾರವಾಗುವಂತೆ ವರ ಕೊಡೋಣವೆಂದು ನಿರ್ಧರಿಸಿದ್ರು. ಆದರೆ ಈ ಒಳ್ಲೆಯ ಕೆಲಸಗಳು ಸಂತನ ಅರಿವಿಗೆ ಬರದಂತೆ ಆಗಬೇಕಿದ್ರಿಂದ ನೆರಳಿನ ವಿಷಯ ಅವನಿಗೆ ಹೇಳೋ ಹಾಗಿರ್ಲಿಲ್ಲ. ಆದ್ರಿಂದ ಮೌನವಾಗಿ ಅವನ ಮುಂದೆ ನಿಂತು ಮನಸಲ್ಲೇ ವರ ಕೊಟ್ಟು ಹೊರಟುಹೋದ್ರು.
ಆ ಕ್ಷಣದಿಂದ ಸಂತ ನಡೆದಾಡಿದ ಜಾಗವೆಲ್ಲ ಸಂಪನ್ನವಾಯ್ತು. ಆ ಸಂತನ ಕೃಪೆಗಾಗಿ ಜನ ಅವನ ಸುತ್ತ ನೆರೆಯುತ್ತಿದ್ರು. ಅವನಿಗಾಗಿ ಕಾದು ನಿಂತು, ನೆರಳು ಸೋಕಿಸ್ಕೊಂಡು, ಬೆನ್ನ ಹಿಂದೆ ಕೈಮುಗಿದು ಹೊರಟುಹೋಗುತ್ತಿದ್ರು.
ದಿನ ಕಳೆದಂತೆ ಜನರ ಪ್ರೀತಿ ಸಂತನ ಕಳೆ ಹೆಚ್ಚಿಸ್ತಾ ಹೋದ್ವು. ಜನ ಆ ಸಂತನ್ನ ‘ಪವಿತ್ರ ನೆರಳು’ ಅಂತಾನೇ ಕರೆಯೋಕೆ ಶುರು ಮಾಡಿದ್ರು. ಇದ್ರಿಂದಾಗಿ ತಾನೊಂದು ಅಸ್ತಿತ್ವದ ಗುರುತಾಗಬಾರ್ದು ಅಂದುಕೊಂಡಿದ್ದ ಸಂತನ ಬಯಕೇನೂ ಈಡೇರ್ತು. ಹಾಗೇ ಒಂದಿನ ಆ ಸಂತ ತನ್ನ ಇಹಲೋಕ ಯಾತ್ರೆ ಮುಗಿಸಿ ಹೊರಟುಹೋದ. ಜನ ಅವನಿಗೊಂದು ಸಮಾಧಿ ಕಟ್ಟಿ, ಅದರ ನೆರಳಲ್ಲಿ ಹರಕೆ ಹೊರೋಕೆ ಶುರು ಮಾಡಿದ್ರು.
~
ಇದು ನಿಜಕ್ಕೂ ಜ್ಞಾನೋದಯ ಹೊಂದಿದವರ ಲಕ್ಷಣ. ಇವರಲ್ಲಿ ನಾನು ಅನ್ನೋ ಆಲೋಚನೆಯೇ ಬರೋದಿಲ್ಲ. ನಾನೇ ಸರಿ, ನಾನು ಹೇಳಿದ್ದನ್ನು ಜನ ಕೇಳ್ಬೇಕು, ನೂರಾರು ಶಿಷ್ಯರು ನನ್ನನ್ನ ಹಿಂಬಾಲಿಸ್ಬೇಕು ಅನ್ನೋ ಬಯಕೆ ಇವರಿಗೆ ಇರೋದಿಲ್ಲ. ಇಂಥವರು ಯಾರಾದ್ರೆ ಸಿಕ್ರೆ, ಅವರು ಒಪ್ಪಿದ್ರೂ ಬಿಟ್ರೂ ಅವರನ್ನೇ ನಮ್ಮ ಗುರುವಾಗಿಸಿಕೊಳ್ಳೋದು ಒಳ್ಳೇದು. ತಮಗೆ ತಾವೇ ಬಿರುದು ಕೊಟ್ಟುಕೊಳ್ಳೋರನ್ನಲ್ಲ! ಸುತ್ತ ಒಮ್ಮೆ ಕಣ್ಣು ಹಾಯಿಸಿದ್ರೆ ಇಂಥವರು ಸಾಕಷ್ಟು ಸಿಗ್ತಾರೆ ನಮಗೆ.
ಸಂತ – ಸಾಧಕರ ಕತೆ ಇರ್ಲಿ, ನಾವಾದ್ರೂ ನಮ್ಮ ಡೈಲಿ ಲೈಫಿನಲ್ಲಿ ಇರೋದು ಹೀಗೇ. ಈಗೀಗಂತೂ ನಮ್ಮ ಕ್ಷಣಕ್ಷಣದ ಮಾಹಿತಿ ಅಪ್ಡೇಟ್ ಮಾಡೋಕೆ ಪುಕ್ಕಟೆ ಮಾಧ್ಯಗಳಿವೆ. (ಇದನ್ನು ಬರೀತಿರೋ ನನ್ನನ್ನೂ ಸೇರಿ) ನಾವು ಮಾಡೋ ಪ್ರತಿಯೊಂದು ಕೆಲಸವನ್ನೂ ಜಗತ್ತಿಗೆ ಹೇಳಿಕೊಳ್ಳೋ ಹುಕಿ ನಮ್ಮದು. ನಾವು ನಮ್ಮ ಗುರುತನ್ನ ಗಟ್ಟಿ ಮಾಡ್ಕೊಳೋದಕ್ಕೆ, ನಮ್ಮ ಹೆಸರನ್ನ ಚರ್ಮದಂತೆ ಅಂಟಿಸಿಕೊಳ್ಳೋಕೆ ಹೊರಟಿದೀವಿ. ಸೋಶಿಯಲ್ ಮೀಡಿಯಾದಲ್ಲಿ ಬರುವ ಲೈಕ್ಸ್, ಕಮೆಂಟ್ಸ್ – ನಮ್ಮ ಗುರುತನ್ನು ಅಧಿಕೃತಗೊಳಿಸುವ, ನಮ್ಮ ಹೆಸರನ್ನು ಶಾಶ್ವತಗೊಳಿಸುವ ಸರಕುಗಳಂತೆ ಕಾಣಿಸ್ತವೆ ನಮಗೆ.
ಗುರು ಅನಿಸಿಕೊಳ್ಳಲು ಹಪಹಪಿಸೋರೂ ಹೀಗೇನೇ. ಕೂತಾಗ ಕಣ್ಣೆದುರು ಜನರ ರಾಶಿ ಇರ್ಬೇಕು, ನಡೀವಾಗ ಬೆನ್ನ ಹಿಂದೆ ಜನರ ರಾಶಿ ಇರ್ಬೇಕು. ರಾಶಿ ಜನ ಇಲ್ಲ ಅಂದ್ರೆ ತನ್ನ ಗುರುತನಕ್ಕೆ ಬೆಲೆಯೇ ಇಲ್ಲ ಅನ್ನೋದು ಅವರ ಯೋಚನೆ. ಜನಕ್ಕೂ ಇಂಥವರೇ ಬೇಕಾಗೋದು ಮತ್ತೊಂದು ಮಜಾ. ನಮ್ಮ ಜನ, ಕಡಿಮೆ ಮಾತಿನ, ಸರಳ ಉಡುಗೆಯ, ತೋರಿಕೆ ಇಲ್ಲದ ಸಾಧಕರ ತಂಟೆಗೇ ಹೋಗೋದಿಲ್ಲ ಈಗೀಗ. ಯಾವುದು ಹೆಚ್ಚು ಸದ್ದು ಮಾಡುತ್ತೋ ಆ ಕೊಡಪಾನಕ್ಕೇ ಹೆಚ್ಚು ಬೆಲೆ, ತುಂಬಿರುವುದಕ್ಕಲ್ಲ!
~
ಒಂದು ಜೆನ್ ಕತೆಯಿದೆ.
ಒಂದೂರಲ್ಲಿ ಒಬ್ಬ ಸಾಧಕ ಇದ್ದ. ಅವ್ನು ದಿನಾ ಕಾಡಿಗೆ ಹೋಗಿ ಕಟ್ಟಿಗೆ ತರ್ತಿದ್ದ. ಬಂದವರಿಗೆ ಮಾರಿ ಏನಾದ್ರೂ ಆಹಾರ ಕೊಳ್ತಿದ್ದ. ಮನೆ ಸುತ್ತಮುತ್ತ ಕಳೆ ಕೀಳ್ತಾ ದಿನ ಕಳೀತಿದ್ದ. ರಾತ್ರಿ ಮಲಗಿ ಮತ್ತೆ ಮಾರನೆ ದಿನ ಕಾಡಿಗೆ ಹೋಗ್ತಿದ್ದ.
ಒಂದಿನ ಅವ್ನಿಗೆ ಜ್ಞಾನೋದಯ ಆಯ್ತು.
ಮಾರನೆ ದಿನ ಕಾಡಿಗೆ ಹೋದ, ಕಟ್ಟಿಗೆ ತಂದ, ಮಾರಿದ, ಆಹಾರ ಕೊಂಡ, ಕಳೆ ಕಿತ್ತ, ಮಲಗಿದ, ಮಾರನೆ ದಿನ ಎದ್ದು ಮತ್ತೆ ಕಾಡಿಗೆ ಹೋದ!
ಅವನ ದಿನಚರಿಯಲ್ಲೇನೂ ವ್ಯತ್ಯಾಸ ಆಗ್ಲಿಲ್ಲ. ಆದ್ರೆ ತಾನು ಮಾಡೋ ಪ್ರತಿಯೊಂದು ಕೆಲಸವನ್ನೂ ಅವನು ಪ್ರಜ್ಞಾಪೂರ್ವಕವಾಗಿ ಮಾಡತೊಡಗಿದ್ದ.
ನೋ ಶೋ ಆಫ್, ನಥಿಂಗ್.
ಸಿಕ್ಕಾಪಟ್ಟೆ ಓದಿಕೊಂಡೋರು, ಒಂದೇನೋ ದೊಡ್ಡ ಪ್ರಶಸ್ತಿ ಪಡ್ಕೊಂಡೋರು, ಏನೋ ದಾಖಲೆ ಬರೆದವರು, ಒಂದಷ್ಟು ಪುಸ್ತಕ ಬರೆದವರು, ಭಾಷಣ ಮಾಡಿ ಜನರಿಗೆ ಸ್ಫೂರ್ತಿ ತುಂಬೋರು – ಇವರೆಲ್ಲ ಇರಬೇಕಿರೋದು ಹೀಗೇ. ನಮ್ಮ ಸಾಧನೆಗಳು ನಮ್ಮನ್ನು ಹರಟೆಮಲ್ಲ ಆಮೆಯಂತೆ ಆಗಿಸಬಾರ್ದು. ಸಿಕ್ಕಸಿಕ್ಕಲ್ಲೆಲ್ಲ ನಮ್ಮ ಕೌಶಲ್ಯಪ್ರದರ್ಶನ ಮಾಡಲು ಹೋಗಿ ಕೆಳಕ್ಕೆ ಉರುಳ್ತೀವಷ್ಟೇ. ನಮ್ಮ ಓದು, ನಮಗೆ ಬಂದ ಪ್ರಶಸ್ತಿ, ನಮ್ಮ ದಾಖಲೆ, ನಮ್ಮ ಮಾತು – ಇವೆಲ್ಲ ನಮ್ಮನ್ನು ಮತ್ತಷ್ಟು ಸಹಜವಾಗಿರುವಂತೆ ಮಾಡಬೇಕೇ ಹೊರತು ನಮ್ಮನ್ನು Beauty appನಿಂದ ತಿದ್ದಿದ ಚಿತ್ರದಂತೆ ಆಗಿಸಬಾರ್ದು. ಆ ಕ್ಷಣಕ್ಕೆ ಅದು ಚೆಂದ ಅನಿಸಿದ್ರೂ ದಿಟ್ಟಿಸಿ ನೋಡ್ದಾಗ ಅದು ನಮಗೇ ಸಿಲ್ಲಿ ಅನಿಸಿಬಿಡುತ್ತೆ.
ತೀರಾ ಆ ಪವಿತ್ರ ನೆರಳಿನ ಸಂತನಂತೆ ಅಲ್ಲದಿದ್ರೂ, ರಿಯಲ್ ಲೈಫಿನಲ್ಲಿ ಸೋಶಿಯಲ್ ಮೀಡಿಯಾಗಳ ವರ್ಚುಯಲ್ ಬಿಹೇವಿಯರ್’ನಿಂದ ಹೊರಬಂದು ವರ್ತಿಸೋ ಅವಕಾಶ ನಮಗುಂಟು. ಟ್ರೈ ಮಾಡಬಹುದಲ್ವಾ?

