ಕೆಲವೊಮ್ಮೆ ನಾವು ಬೈಯುವ ಕುಡುಕನ ಸ್ಥಾನದಲ್ಲಿರುತ್ತೇವೆ, ಕೆಲವೊಮ್ಮೆ ಬೈಗುಳ ತಿನ್ನುವ ಬಸ್ತಮಿಯ ಜಾಗದಲ್ಲಿ. ಬೈಯುವ ಜಾಗದಲ್ಲಿದ್ದಾಗ ನಾವು ಕಲಿಯಬೇಕಾದ್ದು ಬಹಳಷ್ಟು. ಮೊದಲನೆಯದಾಗಿ, ಎಚ್ಚರ ಕಳೆದುಕೊಳ್ಳುವಷ್ಟು ನಾವು ಯಾವುದಕ್ಕೂ ದಾಸರಾಗಬಾರದು ಅನ್ನೋದು… । ಚೇತನಾ ತೀರ್ಥಹಳ್ಳಿ
ಬಯಾಜಿದ್ ಬಸ್ತಮಿ ಬಹಳ ಪ್ರಸಿದ್ಧ ಸೂಫಿ ಕವಿ. ತನ್ನ ರುಬಾಯಿಗಳಿಗಿಂತ ಬದುಕಿನ ರೀತಿಗೇ ಹೆಚ್ಚು ಜನಪ್ರೀತಿ ಗಳಿಸಿದ್ದವನು.
ಒಂದಿನ ಹೀಗಾಯ್ತು.
ಅವತ್ತು ಬಸ್ತಮಿ ಒಬ್ಬನೇ ರಸ್ತೆಯಲ್ಲಿ ನಡೆದು ಬರ್ತಿದ್ದ. ಮುಸ್ಸಂಜೆ ಕಳೆದು ರಾತ್ರಿ ಆವರಿಸುವ ಹೊತ್ತು.
ಆ ಹೊತ್ತು, ಆ ರಸ್ತೆಯಲ್ಲೊಬ್ಬ ಕುಡುಕ ಏಕತಾರಿ ಮೀಟುತ್ತಾ ಅಪಸ್ವರದಲ್ಲಿ ಹಾಡುತ್ತ ಕುಳಿತಿದ್ದ. ರಸ್ತೆಯಲ್ಲಿ ಯಾರು ಕಂಡ್ರೂ ಹಾಡು ನಿಲ್ಲಿಸಿ ವಾಚಾಮಗೋಚರ ಬೈಯುತ್ತಿದ್ದ. ಕೆಲವರು ರೇಗಿ ಅವನಿಗೆ ಬೈಯುತ್ತಿದ್ದರು. ಇನ್ನು ಕೆಲವರು ನಾಲ್ಕು ಹೆಜ್ಜೆ ದೂರ ನಿಂತು ಕಲ್ಲೊಗೆದು ಓಡುತ್ತಿದ್ದರು.
ಇದನ್ನು ಕಂಡ ಬಸ್ತಮಿಗೆ ಅಯ್ಯೋ ಅನಿಸಿಬಿಡ್ತು. ಕುಡುಕನ ಬಳಿ ಹೋಗಿ ಸಮಾಧಾನದಿಂದ ಬುದ್ಧಿ ಹೇಳಿದ. “ನೋಡು, ನಡುರಸ್ತೆಯಲ್ಲಿ ಹೀಗೆಲ್ಲ ಮಾಡೋದು ಸರಿಯಲ್ಲ. ನಿನ್ನ ಮನೆ ಎಲ್ಲಿದೆ ಹೇಳು, ನಾನೇ ಬಿಟ್ಟುಬರ್ತೀನಿ” ಅಂದ. ಬಸ್ತಮಿಯ ಮಾತು ಕೇಳಿ ಕುಡುಕನಿಗೆ ಸಿಟ್ಟೇ ಬಂತು. ಅವನನ್ನು ಬಾಯಿಗೆ ಬಂದ ಹಾಗೆ ಬೈದು, ಕೈಲಿದ್ದ ಏಕತಾರಿ ಎತ್ತಿ ಬಸ್ತಮಿಯ ತಲೆ ಮೇಲೆ ಕುಕ್ಕಿದ. ಅದು ಒಡೆದು, ಬಸ್ತಮಿಯ ಹಣೆಗೆ ವಿಪರೀತ ಏಟಾಗಿ ರಕ್ತ ಚಿಲ್ಲೆಂದು ಹರಿಯತೊಡಗಿತು. ಅತ್ತ ಏಕತಾರಿಯೂ ಒಡೆದು ಚೂರಾಗಿ ನೆಲಕ್ಕೆ ಬಿತ್ತು.
ರಸ್ತೆಯಲ್ಲಿದ್ದವರು ಓಡೋಡಿ ಬಂದರು. ಬಸ್ತಮಿ ಅವರನ್ನು ಸನ್ನೆಯಲ್ಲೇ ಸುಮ್ಮನಾಗಿಸಿ ದೂರ ಕಳಿಸಿದ. ರಕ್ತ ಹರಿಯದಂತೆ ಒತ್ತಿ ಹಿಡಿದುಕೊಂಡು ಮನೆಗೆ ಬಂದ. ಅವನು ರಸ್ತೆ ತಿರುವಲ್ಲಿ ಮರೆಯಾಗುವವರೆಗೂ ಕುಡುಕ ಬೈಯುತ್ತಲೇ ನಿಂತಿದ್ದ.
ಬೆಳಗಾಯ್ತು. ಬಸ್ತಮಿ ತನ್ನೊಬ್ಬ ಸೇವಕನನ್ನು ಕರೆದು, ಒಂದು ಬುಟ್ಟಿ ಮಿಠಾಯಿಯನ್ನೂ ಒಂದಷ್ಟು ನಾಣ್ಯಗಳನ್ನೂ ಕೊಟ್ಟ. “ನೋಡು, ಆ ರಸ್ತೆಯಲ್ಲೊಬ್ಬ ಕುಡುಕ ಇದಾನೆ. ಅವನಿಗೆ ಇದನ್ನ ಕೊಟ್ಟು ಬಾ. ನೆನ್ನೆ ರಾತ್ರಿ ನಿನ್ನ ಏಕತಾರಿ ಬಸ್ತಮಿಯ ತಲೆಗೆ ತಗುಲಿ ಚೂರಾಯ್ತು ಅಂತಲೂ, ಈ ಹಣದಿಂದ ಹೊಸತನ್ನ ಕೊಂಡುಕೋ ಅಂತಲೂ ಹೇಳು. ಹಾಗೇ, ನೆನ್ನೆ ನನ್ನನ್ನ ವಾಚಾಮಗೋಚರ ನಿಂದಿಸಿದ್ರಿಂದ ಅವನ ನಾಲಿಗೆ ಕಹಿಯಾಗಿರಬಹುದು. ಈ ಮಿಠಾಯಿ ಕೊಟ್ಟು, ತಿಂದು ಬಾಯಿ ಸಿಹಿ ಮಾಡಿಕೋ ಅನ್ನು” ಅಂದ.
ಬಸ್ತಮಿಯ ಸೇವಕ ಕುಡುಕನ ಬಳಿ ಬಂದಾಗ ಅವನ ನಶೆ ಪೂರಾ ಇಳಿದಿತ್ತು. ರಾತ್ರಿ ನಡೆದಿದ್ದೆಲ್ಲ ಮರೆತೇಹೋಗಿತ್ತು. ತನ್ನ ಏಕತಾರಿಗೆ ಏನಾಯ್ತು ಅಂತ ಯೋಚಿಸ್ತಾ ತಲೆ ಕೆರೆದುಕೊಳ್ಳುತ್ತ ನಿಂತಿದ್ದವನಿಗೆ ಆ ಸೇವಕನ ಮಾತಿಂದ ಅರೆಬರೆ ನೆನಪಾಯ್ತು. ಬಸ್ತಮಿ ಕಳಿಸಿದ್ದ ಹಣ ಮತ್ತು ಮಿಠಾಯಿಗಳನ್ನ ಕಂಡು ತನ್ನ ಕೃತ್ಯಕ್ಕೆ ನಾಚಿ ಹಿಡಿಯಷ್ಟಾದ. ಆಮೇಲೆ ಅದೇ ಸೇವಕನೊಟ್ಟಿಗೆ ಬಸ್ತಮಿಯ ಮನೆಗೆ ಬಂದು ಮೈಬಗ್ಗಿಸಿ ಕ್ಷಮೆ ಕೇಳಿದ.
ಅವತ್ತಿಂದ ಆ ಕುಡುಕ ತನ್ನ ಚಟ ಕಡಿಮೆ ಮಾಡಿಕೊಂಡ. ಬಸ್ತಮಿ, ಆ ಊರಿನ ಜನಕ್ಕೆ ಮತ್ತಷ್ಟು ಹತ್ತಿರದವನಾದ.
~
ಬಸ್ತಮಿ ಕಳಿಸಿದ್ದ ಮಿಠಾಯಿಯಷ್ಟೇ ಸಿಹಿಯಾದ ಈ ಕತೆ, ನಿಜಕ್ಕೂ ನಡೆದಿದ್ದಂತೆ. ನಂಬದಿರಲು ಕಾರಣವಿಲ್ಲ. ಯಾಕಂದ್ರೆ ಸೂಫಿಗಳು ಅಂದ್ರೇನೇ ಪ್ರೀತಿ ತುಂಬಿಕೊಂಡವರು, ಸಹನಶೀಲರು ಮತ್ತು ಕ್ಷಮಾಗುಣವನ್ನೇ ಹಾಸಿ ಹೊದ್ದವರು. ಬಸ್ತಮಿಯ ಸೂಫಿ ಪದ್ಯಗಳು ಬರೀ ನಿರ್ಜೀವ ಸಾಲುಗಳಾಗಿದ್ದಿದ್ರೆ ಅವು ಇಷ್ಟು ವರ್ಷ ಅಂದಿನಷ್ಟೇ ಮನಮುಟ್ಟುವಂತೆ ಹರಿದು ಬರ್ತಿದ್ವಾ? ಅವುಗಳಲ್ಲಿ ಸತ್ವ ಇದ್ದುದರಿಂದ, ಆತ್ಮ ಇದ್ದುದರಿಂದ, ಸೂಫೀತನ ಇದ್ದುದರಿಂದ ಮತ್ತು ಅವು ಬಸ್ತಮಿಯ ಪ್ರಾಮಾಣಿಕ ರಚನೆಗಳಾದ್ದರಿಂದ ತಮ್ಮ ಪರಿಣಾಮ ಉಳಿಸಿಕೊಂಡಿವೆ ತಾನೆ?
ಬಸ್ತಮಿ ಸಾಕಷ್ಟು ಪ್ರಭಾವ ಹೊಂದಿದ್ದ ಮನುಷ್ಯ. ಅವನು ಮನಸ್ಸು ಮಾಡಿದ್ದರೆ ಆ ಕುಡುಕನಿಗೆ ಶಿಕ್ಷೆ ಕೊಡಿಸಬಹುದಿತ್ತು. ಅಷ್ಟೆಲ್ಲ ಬೇಡ, ಆ ರಾತ್ರಿ ಆ ಘಟನೆ ನಡೆದಾಗ ಸುತ್ತ ನೆರೆದ ಜನರನ್ನು ಹಾಗೇ ಬಿಟ್ಟಿದ್ದರೂ ಸಾಕಿತ್ತು! ಆದರೆ ಬಸ್ತಮಿ ಹಾಗೆ ಮಾಡ್ಲಿಲ್ಲ. ಮೈಮೇಲೆ ಎಚ್ಚರವೇ ಇಲ್ಲದ ಒಬ್ಬ ಕುಡುಕನನ್ನು ಶಿಕ್ಷಿಸೋದ್ರಿಂದ ಸಿಗುವ ಲಾಭವಾದ್ರೂ ಏನು? ಅದರಿಂದ ಆ ಕುಡುಕನ ಮೈಗೆ ನೋವಾಗುತ್ತಿತ್ತಷ್ಟೇ, ಅವನ ಮನಸ್ಸಿಗದು ತಾಕುತ್ತಲೂ ಇರಲಿಲ್ಲ. ಅದೇ ಬಸ್ತಮಿ ಬೆಳಗಿನ ವೇಳೆ, ಆ ಕುಡುಕನ ನಶೆ ಇಳಿದಿದ್ದ ಹೊತ್ತಿನಲ್ಲಿ ಎಷ್ಟು ಸುಲಭವಾಗಿ, ಸರಳವಾಗಿ, ಪ್ರೀತಿಯಿಂದಲೇ ಪಾಠ ಕಲಿಸಿಬಿಟ್ಟ!
ಇದು ನಮಗೂ ಪಾಠವೇ. ಕೆಲವೊಮ್ಮೆ ನಾವು ಬೈಯುವ ಕುಡುಕನ ಸ್ಥಾನದಲ್ಲಿರುತ್ತೇವೆ, ಕೆಲವೊಮ್ಮೆ ಬೈಗುಳ ತಿನ್ನುವ ಬಸ್ತಮಿಯ ಜಾಗದಲ್ಲಿ. ಬೈಯುವ ಜಾಗದಲ್ಲಿದ್ದಾಗ ನಾವು ಕಲಿಯಬೇಕಾದ್ದು ಬಹಳಷ್ಟು. ಮೊದಲನೆಯದಾಗಿ, ಎಚ್ಚರ ಕಳೆದುಕೊಳ್ಳುವಷ್ಟು ನಾವು ಯಾವುದಕ್ಕೂ ದಾಸರಾಗಬಾರದು ಅನ್ನೋದು. ಅದು ಮದ್ಯವೇ ಆಗಬೇಕಿಲ್ಲ; ಯಾವುದೇ ವ್ಯಕ್ತಿ, ಹವ್ಯಾಸ, ಸಿದ್ಧಾಂತ, ಪಕ್ಷ… ಏನು ಬೇಕಾದರೂ ಆಗಿರಬಹುದು. ಅವಕ್ಕೆ ನಮ್ಮ ಮೆದುಳು ಅಡವಿಟ್ಟರೆ ನಾವು ಎಂಥಾ ಸಜ್ಜನರನ್ನೂ, ಅದ್ವಿಚಾರವನ್ನೂ ನಮಗೇ ಅರಿವಿಲ್ಲದಂತೆ ದೂಷಿಸತೊಡಗುತ್ತೇವೆ, ಹಾನಿ ಮಾಡಲು ಯತ್ನಿಸುತ್ತೇವೆ.
ಅದೇ ನಾವು ಬಸ್ತಮಿಯಂತೆ ಬೈಯಿಸಿಕೊಳ್ಳುವ ಜಾಗದಲ್ಲಿದ್ದರೆ? ಮರುಕ್ಷಣವೇ ಕುಡುಕ ಮೂಲೆಯಲ್ಲಿ ಬಿದ್ದಿರುತ್ತಿದ್ದ! ಅಥವಾ ನಾವು ಕಡಿಮೆ ಕೋಪಿಷ್ಟರಾಗಿದ್ದರೆ ಅವನಿಗೊಂದಷ್ಟು ಬೈಗುಳವಾದರೂ ನಮ್ಮಿಂದ ಸಲ್ಲುತ್ತಿತ್ತು. ಕೊನೆಪಕ್ಷ ಸುತ್ತ ನೆರದ ಜನರ ಸಹಾಯವನ್ನಾದರೂ ನಾವು ಪಡೆದುಕೊಳ್ತಿದ್ದೆವು. ಅದೂ ಇಲ್ಲವೆಂದರೆ, ಕೊಂಚ ಸಜ್ಜನರೇ ಆಗಿರುವ ನಾವು ಮನೆಗೆ ಹೋಗಿ ನಾಲ್ಕು ದಿನ ಬೈದುಕೊಂಡು ಸುಮ್ಮನಾಗುತ್ತಿದ್ದೆವು; ಬಸ್ತಮಿಯಂತೆ ಸಿಹಿಯನ್ನಂತೂ ಕಳಿಸುತ್ತಿರಲಿಲ್ಲ.
ಬಸ್ತಮಿ ನಡತೆ, ನಮಗೆ ಕೇಡು ಮಾಡಿದವರನ್ನು ಸುಮ್ಮನೆ ಬಿಡುವ ಹುಸಿ ಔದಾರ್ಯವಲ್ಲ. ಬಸ್ತಮಿಯ ನಡತೆ ಅಂಥವರನ್ನು ಕ್ಷಮಿಸುವ ಮತ್ತು ಸರಿಪಡಿಸಿಕೊಳ್ಳಲು ದಾರಿ ತೋರುವ ಸಹಜೀವಿಯ ಜವಾಬ್ದಾರಿ. ಇಂಥ ನಡೆಗಳೇ ನಮ್ಮನ್ನು ಸಂಪೂರ್ಣ ಮನುಷ್ಯರಾಗಿಸೋದು. ಈ ಕ್ಷಮಾಗುಣ ನಮ್ಮ ಮನಸ್ಸನ್ನು ನಾಲ್ಕನೇ ದಿನದವರೆಗೂ ಕಹಿ ಕಾಯ್ದುಕೊಳ್ಳುವ ರಗಳೆ ತಪ್ಪಿಸುತ್ತೆ. ಕ್ಷಮಿಸಬೇಕು, ಅಷ್ಟೇ. ಟಾಪಿಕ್ ಕ್ಲೋಸ್. ಸುಮ್ಮನೆ ಬಿಡುವುದಲ್ಲ. “ಮನಸ್ಸು ಮಾಡಿದ್ರೆ ಏನ್ ಬೇಕಾದ್ರೂ ಮಾಡ್ಬೋದಿತ್ತು, ಹೋಗ್ಲಿ ಅಂತ ಬಿಟ್ಟೆ” ಅನ್ನುವ ಅಹಂತೃಪ್ತಿಯ ಔದಾರ್ಯ ಇಲ್ಲಿ ವರ್ಕ್ ಔಟ್ ಆಗೋದಿಲ್ಲ. ಈ ಅಹಂಕಾರ ನಮಗೆ ಬಹಳ ಹೊತ್ತು ನೆಮ್ಮದಿ ನೀಡಲಾರದು. ಕ್ಷಮೆ ಮಾತ್ರವೇ ನಮ್ಮ ಶಾಂತಿಯನ್ನು ಕಾಯ್ದಿಡಬಲ್ಲದು.
~
ಬುದ್ಧನ ಕತೆಯೊಂದಿದೆ.
ಬುದ್ಧ ಎಂದಿನಂತೆ ಮರದ ಕೆಳಗೆ ಕುಳಿತುಕೊಂಡು ಶಿಷ್ಯರೊಡನೆ ಮೌನ ಸಂವಾದ ನಡೆಸಿದ್ದ. ಅಲ್ಲಿ ನಿಶ್ಶಬ್ದದ ವಿನಾ ಬೇರೇನೂ ಇರಲಿಲ್ಲ.ಇದ್ದಕ್ಕಿದ್ದ ಹಾಗೆ ಅಲ್ಲಿಗೆ ಯಾರೋ ದಾಪುಗಾಲಿಟ್ಟುಕೊಂಡು ಬರುತ್ತಿರುವ ಸಪ್ಪಳವಾಯ್ತು. ಬುದ್ಧನ ನಿಮೀಲಿತ ಕಣ್ಣುಗಳು ತೆರೆದುಕೊಂಡವು. ಭಂತೇಗಣ ಕತ್ತು ತಿರುಗಿಸಿ ನೋಡಿತು. ಒಬ್ಬ ಉರಿಮುಖದ ಮನುಷ್ಯ ಮುಷ್ಟಿ ಬಿಗಿದುಕೊಂಡು ಬಂದ. ಬಿಕ್ಖುಗಳ ನಡುವೆ ನುಗ್ಗಿ ಬುದ್ಧನೆದುರು ನಿಂತ.
ಬುದ್ಧನ ಮುಖದಲ್ಲಿ ಚೂರೂ ಬದಲಾವಣೆಯಾಗ್ಲಿಲ್ಲ.
ಬಂದ ಉರಿಮುಖದ ವ್ಯಕ್ತಿ ಅವನನ್ನು ಬಾಯಿಗೆ ಬಂದ ಹಾಗೆ ಬೈಯತೊಡಗಿದ. ಅಶ್ಲೀಲವಾಗಿ ನಿಂದಿಸಿದ. ನೀನು ಸತ್ತೇಹೋಗು ಅಂತ ಶಾಪ ಹಾಕಿದ. ಅಲ್ಲಿ ಕುಳಿತಿದ್ದ ಮಹಾಸಂಯಮಿ ಬಿಕ್ಖುಗಣಕ್ಕೂ ಒಂದು ಕ್ಷಣ ಕೋಪ ಬರುವಂತಿತ್ತು ಆತನ ವರ್ತನೆ.
ಬುದ್ಧ ಕುಳಿತೇ ಇದ್ದ. ಶಾಂತನಾಗೇ ಇದ್ದ. ಅವನ ಕಣ್ಣು ಕೂಡ ಹೊರಳಲಿಲ್ಲ. ಹಾಗೇ ಸ್ವಲ್ಪ ಹೊತ್ತು ಬೈದು ಸುಸ್ತಾದ ಆ ಉರಿಮುಖದ ಮನುಷ್ಯ ಅಲ್ಲಿಂದ ಅದೇ ಸಪ್ಪಳಗಾಲಿನೊಂದಿಗೆ ವಾಪಸಾದ.
ಹೊಸ ಶಿಷ್ಯನೊಬ್ಬನಿಗೆ ಅಚ್ಚರಿ “ಭಗವನ್! ನೀವ್ಯಾಕೆ ಅವನು ಅಷ್ಟು ಕೆಟ್ಟದಾಗಿ ಬೈದರೂ ಪ್ರತಿಕ್ರಿಯಿಸಲಿಲ್ಲ?”
ಬುದ್ಧ ಕೇಳಿದ, “ನೀನು ನನಗೆ ಒಂದು ಹೂವನ್ನು ಕೊಡುತ್ತೀಯ ಎಂದಿಟ್ಟುಕೋ. ಅದನ್ನು ನಾನು ಸ್ವೀಕರಿಸಿದೆ ಇದ್ದರೆ ಏನಾಗುತ್ತೆ?”
“ಅದು ನನ್ನಲ್ಲೇ ಉಳಿಯುತ್ತೆ” ಅಂದ ಶಿಷ್ಯ.
“ನಾನು ಆ ಮನುಷ್ಯನ ಬೈಗುಳವನ್ನು ಸ್ವೀಕರಿಸಲಿಲ್ಲ. ಆಗ?” ಬುದ್ಧನ ಮತ್ತೊಂದು ಪ್ರಶ್ನೆ.
ಶಿಷ್ಯರಿಗೆ ಉತ್ತರ ದೊರಕಿತ್ತು.
~
ಇದು ಮಹಾತ್ಮರ ಇನ್ನೊಂದು ರೀತಿ.
ಬುದ್ಧ ಪ್ರತಿಕ್ರಿಯೆ ನೀಡಿದ್ದರೆ ಡಿಫೆನ್ಸ್ ಮೋಡ್’ಗೆ ಹೋಗುತ್ತಿದ್ದ ಆ ಉರಿಮುಖದ ವ್ಯಕ್ತಿ ಮತ್ತಷ್ಟು ಕೆರಳುತ್ತಿದ್ದ. ಅವನ ಅಹಂಕಾರದ ಗೋಡೆ ಮತ್ತಷ್ಟು ಗಟ್ಟಿಯಾಗುತ್ತಿತ್ತು. ಅವನು ಅಸೂಯೆಯ ದಾಸನಾಗಿದ್ದ. ಆ ದಾಸ್ಯದಿಂದ ಮೈಮರೆತು ಬುದ್ಧನನ್ನು ನಿಂದಿಸಲು ಬಂದಿದ್ದ. ಅವನ ಅಸೂಯೆಗೆ, ಅವನ ಅಹಂಕಾರಕ್ಕೆ ನಿರ್ಲಕ್ಷ್ಯವೇ ಬಲವಾದ ಉತ್ತರವಾಗಿತ್ತು.
ಬುದ್ಧನ ಈ ನಡೆ, ನಮ್ಮ “ಹೋಗ್ಲಿ ಪಾಪ ಅಂತ ಬಿಟ್ಟೆ” ಥರದ್ದಲ್ಲ. ಇದು, ಅವನ ಅಹಂಕಾರಕ್ಕೆ ತುಪ್ಪ ಸುರಿಯದೆ ಇರುವ ಸಂಯಮ. ಬಸ್ತಮಿಯದು ಸಂಪೂರ್ಣ ಸ್ವೀಕೃತಿಯಾದರೆ, ಬುದ್ಧನದು ಸಂಪೂರ್ಣ ನಿರಾಕರಣೆ. ಪ್ರಜ್ಞಾವಂತಿಕೆಯಿಂದ ಈ ದಾರಿ ನಡೆದರೆ, ಮುಟ್ಟುವ ಗುರಿ ಶಾಂತಿಧಾಮವೇ ಆಗಿರುವುದು.


ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ….
ಈ ಅರಳಿ ಮರ, ತುಂಬಾ ರೋಮಾಂಚನ.
ಬದುಕಿನ ಸಾಂದ್ರತೆ ತೆರೆದು ತೋರಿಸುವ ಪಯಣ…
ಬಳಗದ ಎಲ್ಲರಿಗೂ ಶರಣು..
LikeLike
ಧನ್ಯವಾದ
LikeLike