ಶ್ರೀ ನಾರಾಯಣ ಗುರು ಜೀವನಚರಿತ್ರೆ : ಅಧ್ಯಾಯ 9

ಕುಮಾರನ್ ಆಶಾನ್ ಅವರು ರಚಿಸಿದ ಗುರುಗಳ ಜೀವನ ಚರಿತ್ರೆಯನ್ನು ಅನುವಾದಿಸುವ ಪ್ರಯತ್ನ ಇಲ್ಲಿದೆ. ಹದಿನೈದು ಪುಟ್ಟ ಅಧ್ಯಾಯಗಳ ಈ ಕೃತಿ ನಾರಾಯಣ ಗುರುಗಳ ಬದುಕಿನ ಸಂಕ್ಷಿಪ್ತ ಪರಿಚಯ ಮಾಡಿಕೊಡುತ್ತದೆ. ಈ ಸರಣಿಯ 9ನೇ ಅಧ್ಯಾಯ ಇಲ್ಲಿದೆ…। ಎನ್.ಎ.ಎಂ.ಇಸ್ಮಾಯಿಲ್

 ಆಚರಣೆಗಳಿಗೆ ಸಂಬಂಧಿಸಿದ ತಮ್ಮ ಚಿಂತನೆಗಳನ್ನು ಶ್ರೀನಾರಾಯಣ ಧರ್ಮ ಪರಿಪಾಲದ ಯೋಗಂ ಹಾಗೂ ಮತ್ತಿತರ ಮಾರ್ಗಗಳ ಮೂಲಕ  ಜನರಿಗೆ ತಲುಪಿಸಿ, ಸಮಾಜ ಸುಧಾರಣೆಗೆ ಮುಂದಾದ ಗುರುಗಳ ಪ್ರಯತ್ನಗಳು ಅಪಾರ ಮೆಚ್ಚುಗೆಗೆ ಪಾತ್ರವಾದವು.

ಹಿಂದಿನ ಅಧ್ಯಾಯ ಇಲ್ಲಿದೆ : https://aralimara.com/2024/07/29/guru-40/ ಮುಂದೆ ಓದಿ…


ಅಧ್ಯಾಯ ಒಂಬತ್ತು

ಅಂದಿನ ದಿನಗಳಲ್ಲಿ  ಸ್ವಾಮಿಗಳು ಪದೇಪದೇ ಕುಟ್ಟಾಲಂ, ಪಾಪನಾಶಂ ಮುಂತಾದ ಪುಣ್ಯಸ್ಥಳಗಳಿಗೆ ಹೋಗಿ ವಿಶ್ರಾಂತಿ ಪಡೆಯುತ್ತಿದ್ದರು. ಮಲಯಾಳ ವರ್ಷ 1079ರಲ್ಲಿ (ಕ್ರಿ.ಶ. 1904) ವರ್ಕಲದಲ್ಲಿ ಈಗ ಶಿವಗಿರಿ ಮಠವಿರುವ ದಿಣ್ಣೆಯ ಸಮೀಪವೇ ಒಂದೆಡೆ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಇರುತ್ತಿದ್ದರು. ಸುತ್ತಲೂ ಇದ್ದ ಜಮೀನಿನಲ್ಲಿ ಬದನೆ, ಹೆಸರು, ಬೆಂಡೆಕಾಯಿ ಇತ್ಯಾದಿ ತರಕಾರಿಗಳನ್ನು ಬೆಳೆಯುತ್ತಿದ್ದರು. ಈ ಜಾಗದಿಂದ ದಕ್ಷಿಣಕ್ಕೆ ಒಂದು ದಿಣ್ಣೆಯಿತ್ತು. ಅದು ಯಾರ ಮಾಲೀಕತ್ವದಲ್ಲಿಯೂ ಇಲ್ಲವೆಂದು ಅರಿತ ಸ್ವಾಮಿಗಳು ತಮ್ಮ ವಾಸವನ್ನು ಆ ದಿಣ್ಣೆಗೆ ವರ್ಗಾಯಿಸಿದರು. ಅಲ್ಲೊಂದು ಪರ್ಣಕುಟಿಯನ್ನು ನಿರ್ಮಿಸಿಕೊಂಡ ಮೇಲೆ ಅವರ ವಾಸ ಬಹುತೇಕ ಅಲ್ಲಿಯೇ ಎಂಬಂತಾಯಿತು.

ಈ ಹಿಂದೆ ಅರುವಿಪ್ಪುರದಲ್ಲಿ ಬಂದಂತೆಯೇ ಇಲ್ಲಿಗೂ ಸ್ವಾಮಿಗಳ ದರ್ಶನಕ್ಕಾಗಿ ಜನರು ಬರಲಾರಂಭಿಸಿದರು. ಆ ದಿನಗಳಲ್ಲಿ ಸ್ವಾಮಿಗಳ ಪರ್ಣಕುಟಿಯಿದ್ದ ಸ್ಥಳದಲ್ಲಿ ಈಗ ಶಿವ ದೇಗುಲವಿದೆ. ಜನರ ಆಗಮನ ಹೆಚ್ಚಿದಂತೆ ಸ್ವಾಮಿಗಳು ಇಲ್ಲೊಂದು ದೇಗುಲ ಮತ್ತು ಮಠದ ನಿರ್ಮಾಣಕ್ಕೆ ಮುಂದಾದರು. ದಿಣ್ಣೆಯನ್ನು ಅಧಿಕೃತವಾಗಿ ಪಡೆದುಕೊಂಡ ಅವರು ದಾನವಾಗಿ ದೊರೆತ ಸುತ್ತಲಿನ ಜಮೀನನ್ನೂ ಸೇರಿಸಿಕೊಂಡು ಆ ಸ್ಥಳಕ್ಕೆ ಶಿವಗಿರಿ ಎಂಬ ಹೆಸರಿಟ್ಟರು. ಇದೇ ವರ್ಷ ತಿರುವಿದಾಂಕೂರು ಸರ್ಕಾರ ಸ್ವಾಮಿಗಳನ್ನು ಶ್ರೀ ನಾರಾಯಣ ಧರ್ಮಪರಿಪಾಲನ ಯೋಗಂನ (ಎಸ್ಎನ್‌ಡಿಪಿ ಯೋಗಂ) ಅಧ್ಯಕ್ಷರು ಹಾಗೂ ಸಮುದಾಯದ ಗುರುವೆಂದು ಪರಿಗಣಿಸಿ ಯಾವುದೇ ಸಿವಿಲ್ ನ್ಯಾಯಾಲಯಗಳಿಗೆ ಕಡ್ಡಾಯವಾಗಿ ಹಾಜರಾಗುವುದರಿಂದ ವಿನಾಯಿತಿ ನೀಡಿತು.

ಮಲಯಾಳ ವರ್ಷ 1080ರ ಧನುರ್ಮಾಸದಲ್ಲಿ (ಕ್ರಿ. ಶ. 1905 ಜನವರಿ-ಫೆಬ್ರವರಿಯ ಅವಧಿ) ಎಸ್ಎನ್‌ಡಿಪಿ ಯೋಗಂನ ಎರಡನೇ ವಾರ್ಷಿಕೋತ್ಸವವು ಒಂದು ಕೈಗಾರಿಕಾ ಪ್ರದರ್ಶನದ ಜೊತೆಗೆ ಕೊಲ್ಲಂನಲ್ಲಿ ನಡೆಯಿತು. ಯೋಗಂನ ಶಾಶ್ವತ ಅಧ್ಯಕ್ಷರೆಂಬ ಗೌರವಕ್ಕೆ ಪಾತ್ರರಾಗಿದ್ದ ಸ್ವಾಮಿಗಳನ್ನು ಶಿವಗಿರಿಯಿಂದ ಕೊಲ್ಲಂ ತನಕ ಮೆರವಣಿಗೆಯೋಪಾದಿಯಲ್ಲಿ ಕ್ಯಾಬಿನ್ ಬೋಟ್‌ನಲ್ಲಿ ಕರೆದೊಯ್ಯಲು ಜನರು ಮುಂದಾದರು. ಆದರೆ ಎಲ್ಲಾ ಆಡಂಬರಗಳಿಂದಲೂ ವಿಮುಖರಾಗಿದ್ದ ಸ್ವಾಮಿಗಳು ಕ್ಯಾಬಿನ್ ಬೋಟ್‌ಗೆ ಕಾಲಿಡಲೂ ಒಪ್ಪದೆ ಜನರನ್ನು ನಿರಾಶೆಗೊಳಿಸಿದರು. ಆದರೆ ಕೊಲ್ಲಂನಲ್ಲಿ ನಡೆಯುತ್ತಿದ್ದ ಮಹಾ ಸಮಾವೇಶಕ್ಕೆ ಅನಿರೀಕ್ಷಿತವಾಗಿ ಭೇಟಿಯಿತ್ತು ಸಭೆಯನ್ನು ಅಲಂಕರಿಸುವ ಮೂಲಕ ಜನರನ್ನು ಸಂತೋಷಗೊಳಿಸಿದರು.


(ಮುಂದುವರಿಯುವುದು…)

Unknown's avatar

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ